ಶುಕ್ರವಾರ, ಡಿಸೆಂಬರ್ 6, 2019
25 °C

ನಿಡಗುಂದಿ: ಸಾಮೂಹಿಕ ವಿವಾಹ: ಧರ್ಮ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಡಗುಂದಿ: ಸಾಮೂಹಿಕ ವಿವಾಹ: ಧರ್ಮ ಸಭೆ

ನಿಡಗುಂದಿ: ‘ಕಂಬಳಿ, ಬಂಡಾರ, ಡೊಳ್ಳು ಇವು ಮೂರು ಹಾಲುಮತ ಸಂಸ್ಕೃತಿಯ ಆಸ್ತಿ. ಇವುಗಳನ್ನು ಚುನಾವಣಾ ಸಮಯದಲ್ಲಿ ಹಣ ಮತ್ತು ಹೆಂಡಕ್ಕಾಗಿ ಮಾರಿಕೊಳ್ಳಬಾರದು’ ಎಂದು ಕಾಗಿನೆಲೆ ಕನಕಗುರುಪೀಠದ ಸಿದ್ಧರಾಮಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ನಡೆದ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆಯ ನೇತೃತ್ವ ವಹಿಸಿ ಮಾತನಾಡಿದರು.

‘ಬೇಟೆಯಾಡಿ ಮಾಂಸ ತಿನ್ನುವ ಸಂಸ್ಕೃತಿ ನಮ್ಮದಲ್ಲ. ಅಲ್ಲದೇ ಮೂರ್ತಿ ಪೂಜೆಯ ಸಂಸ್ಕೃತಿಯೂ ನಮ್ಮದಲ್ಲ. ನಮಗೆ ಡೊಳ್ಳು ಹಾಗೂ ಭಂಡಾರವೇ ಆಧಾರ’ ಎಂದರು.

‘ಹಾಲುಮತ ಸಮಾಜದ ಜನರ ಮನಸ್ಸು ಹಾಲಿನಷ್ಟೇ ಶುದ್ಧವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ದುಶ್ಚಟಕ್ಕೆ, ಒಣ ರಾಜಕೀಯಕ್ಕಾಗಿ  ತಮ್ಮ ಬದುಕನ್ನೇ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕುಡಿತ, ದುಶ್ಚಟಗಳನ್ನು ವಾರಕ್ಕೆ ಒಂದು ದಿನವಾದರೂ ಬೀರಲಿಂಗೇಶ್ವರನ ಹೆಸರಿನಲ್ಲಿ ಬಿಡಬೇಕು’ ಎಂದು ಸಮಾಜದ ಜನರಿಗೆ ಅವರು ಸಲಹೆ ನೀಡಿದರು.

‘ಹಾಲುಮತ ಸಮಾಜದ ಜನರು ರಾಜಕೀಯ ದಾಳಕ್ಕೆ ಬಲಿಯಾಗಬಾರದು. ಶಿಕ್ಷಣ ಶ್ರೇಷ್ಟವಾಗಿದ್ದು, ಸಮಾಜದ ಪ್ರತಿ ಮಗು ಶಿಕ್ಷಣದಿಂದ ವಂಚಿತಗೊಳ್ಳದಂತೆ ಆಯಾ ಗ್ರಾಮದ ಹಾಲುಮತ ಸಮಾಜದ ಮುಖಂಡರು ಗಮನಹರಿಸಬೇಕು. ಆರ್ಥಿಕವಾಗಿ ಹಿಂದುಳಿದ ಕುಟುಂಬದವರನ್ನು ಮೇಲೆತ್ತುವ ಪ್ರಯತ್ನ ನಡೆಸಬೇಕು’ ಎಂದರು.

ಮೊದಲೆಲ್ಲಾ ಹಳ್ಳಿಗಳಲ್ಲಿ ಹಾಲುಮತ ಸಮಾಜದವರು ಹೆಚ್ಚಾಗಿ ಬೀರಲಿಂಗೇಶ್ವರನ ಜಾತ್ರೆಯಂದೇ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳುತ್ತಿದ್ದರೂ, ಅದಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ, ಈಗ ಎಲ್ಲೆಡೆ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಮುತ್ತಗಿಯ ವೀರರುದ್ರಮುನಿ ಸ್ವಾಮೀಜಿ, ಅರಳಿಚಂಡಿಯ ಪರಮಾನಂದ ಸ್ವಾಮೀಜಿ, ಶಿರೂರಿನ ಬಸವಲಿಂಗ ಸ್ವಾಮೀಜಿ, ಸಿದ್ದಯ್ಯ ಒಡೆಯರ, ಸರೂರಿನ ಮೃತ್ಯುಂಜಯ ಪೂಜಾರಿ ಸಾನ್ನಿಧ್ಯ ವಹಿಸಿದ್ದರು.

ವೇದಿಕೆಯ ಮೇಲೆ ಹಾಲುಮತ ಸಮಾಜದ ತಾಲ್ಲೂಕು ಅಧ್ಯಕ್ಷ ಸಂಗಮೇಶ ಓಲೇಕಾರ, ಕರವೀರಪ್ಪ ಕುಪ್ಪಸ್ತ, ಪ್ರಕಾಶ ರೇಶ್ಮಿ, ಶಿವಾನಂದ ಮುಚ್ಚಂಡಿ, ಮೋತಿಸಾಬ್ ಬಾಣಕಾರ, ಬಸಯ್ಯ ಸಾಲಿಮಠ, ಎಸ್‌.ಜಿ. ನಾಗಠಾಣ, ಹೊನ್ನಪ್ಪ ದೊಡಮನಿ, ಶೇಖರ ರೂಡಗಿ, ಗಂಗಾಧರ ವಾರದ, ಪರಶುರಾಮ ಕಾರಿ ಇತರರು ಇದ್ದರು.

ಹಾಲುಮತ ಸಮಾಜದ ಮುಖಂಡ ಬಿ.ಟಿ. ಗೌಡರ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಹೇಶ ಗಾಳಪ್ಪಗೋಳ ನಿರೂಪಿಸಿದರು. ಪರಶುರಾಮ ಕಾರಿ ವಂದಿಸಿದರು.

ಪ್ರತಿಕ್ರಿಯಿಸಿ (+)