ಶನಿವಾರ, ಡಿಸೆಂಬರ್ 7, 2019
25 °C

ಎನಿ ಟೈಂ ಮನಿ ಅಲ್ಲ; ಅಟೆಂಪ್ಟ್‌ ಟು ಮರ್ಡರ್

Published:
Updated:
ಎನಿ ಟೈಂ ಮನಿ ಅಲ್ಲ; ಅಟೆಂಪ್ಟ್‌ ಟು ಮರ್ಡರ್

ಎಟಿಎಂ ಅಂದರೆ ‘ಎನಿ ಟೈಮ್‌ ಮನಿ’ ಅಲ್ಲ. ಅಮರ್‌ ನಿರ್ದೇಶಿಸಿರುವ ಚಿತ್ರದಲ್ಲಿ ಈ ಪದದ ಅರ್ಥ ‘ಅಟೆಂಪ್ಟ್‌ ಟು ಮರ್ಡರ್‌’! ಈ ಚಿತ್ರ ಶುಕ್ರವಾರ (ಏಪ್ರಿಲ್ 20) ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಲು ನಿರ್ಮಾಪಕ ಎಸ್.ವಿ. ನಾರಾಯಣ್ ಮತ್ತು ಅಮರ್‌ ಪತ್ರಿಕಾಗೋಷ್ಠಿ ಕರೆದಿದ್ದರು.

ಸಿನಿಮಾ ಬಿಡುಗಡೆ ಆಗುತ್ತಿದೆ ಎನ್ನುವ ಮಾಹಿತಿ ನೀಡಿದ ನಂತರ ನಾರಾಯಣ್ ಅವರು ಸಿನಿಮಾ ಆರಂಭದ ದಿನಗಳ ನೆನಪಿಗೆ ಜಾರಿದರು. ‘ಸಿನಿಮಾ ನಿರ್ಮಾಣಕ್ಕೆ ಬರುವವರೆಗೆ ನನಗೆ ಅಮರ್‌ ಯಾರು ಎಂಬುದೇ ಗೊತ್ತಿರಲಿಲ್ಲ. ಅವರು ಸಿದ್ಧಪಡಿಸಿದ ಒಂದು ಕಿರುಚಿತ್ರ ನೋಡಿದ್ದೆ, ಅಷ್ಟೇ. ನಾನು ನಿರ್ಮಿಸುತ್ತಿರುವ ಮೊದಲ ಸಿನಿಮಾ ಇದು. ಇದರ ಎಲ್ಲ ಕೆಲಸಗಳಲ್ಲೂ ಅಮರ್‌ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆ. ಚಿತ್ರ ನನ್ನ ನಿರೀಕ್ಷೆಗೂ ಮೀರಿ ಮೂಡಿಬಂದಿದೆ’ ಎಂದರು ನಾರಾಯಣ್.

‘ಇಷ್ಟಪಟ್ಟು, ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ನನ್ನಂತಹ ಹೊಸಬನಿಗೆ ನಾರಾಯಣ್ ಅವರಂತಹ ನಿರ್ಮಾಪಕರು ಸಿಗುವುದು ಅದೃಷ್ಟ’ ಎನ್ನುತ್ತ ಮಾತು ಆರಂಭಿಸಿದರು ಅಮರ್. ‘ಬೆಂಗಳೂರಿನ ಎಟಿಎಂನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಹಲ್ಲೆಯನ್ನೇ ಕಥೆಯ ಎಳೆಯನ್ನಾಗಿ ಇರಿಸಿಕೊಂಡು ಸಿನಿಮಾ ಮಾಡಿದ್ದೇವೆ. ಒಬ್ಬ ಸೈಕೋ ಅಪರಾಧಿಯನ್ನು ಹೇಗೆ ಹುಡುಕುತ್ತಾರೆ ಎನ್ನುವುದು ಕಥೆಯ ತಿರುಳು. ಕ್ಲೈಮ್ಯಾಕ್ಸ್‌ ಈ ಚಿತ್ರದ ಪ್ರಮುಖ ಅಂಶ’ ಎಂದರು.

ವಿನಯ್ ಗೌಡ ಅವರ ಪಾತ್ರ ಕಂಡು ಸುದೀಪ್‌ ಅವರು ಒಂದು ಮಾತು ಆಡಿದ್ದಾರೆ: ‘ಕನ್ನಡಕ್ಕೆ ಒಬ್ಬ ಒಳ್ಳೆಯ ನಟ ಸಿಕ್ಕಿದ್ದಾರೆ’ ಎನ್ನುವುದು ಆ ಮಾತು. ಈ ಚಿತ್ರದ ಹಂಚಿಕೆಯ ಹೊಣೆಯನ್ನು ಜಾಕ್ ಮಂಜು ವಹಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)