ಸೋಮವಾರ, ಡಿಸೆಂಬರ್ 9, 2019
22 °C

‘ಹಲೋ ಮಾಮ’ನ ಅವತಾರ

Published:
Updated:
‘ಹಲೋ ಮಾಮ’ನ ಅವತಾರ

‘ಮುಂದಿನ ತಿಂಗಳು ತೆರೆಗೆ ಬರಲು ನಿರ್ಧರಿಸಿದ್ದೇನೆ. ದಯವಿಟ್ಟು ನನಗೊಂದು ವೋಟು ಹಾಕಿ. ಬಳಿಕ ನಿಮಗೆ ಇಷ್ಟವಾಗುವ ಅಭ್ಯರ್ಥಿಗೂ ಒಂದು ವೋಟು ಚಲಾಯಿಸಿ’

ಹೀಗೆಂದು ನಟ ಎಸ್‌. ಮೋಹನ್ ಪ್ರೇಕ್ಷಕರ ಮುಂದೆ ಬೇಡಿಕೆ ಇಟ್ಟರು. ಅವರು ಈ ಬೇಡಿಕೆ ಮಂಡಿಸಲು ಕಾರಣವೂ ಇತ್ತು. ‘ತಾವು ಈ ಹಿಂದೆ ನಿರ್ಮಿಸಿದ ಸಿನಿಮಾದ ಬಗ್ಗೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, ಹಣ ಮಾಡಲಿಲ್ಲ’ ಎಂದರು. ಬಿಗ್‌ಬಾಸ್‌ ಮನೆಯಿಂದ ಹೊರಬಂದ ಮೇಲೆ ಜನರ ಒತ್ತಾಯದ ಮೇರೆಗೆ ‘ಹಲೋ ಮಾಮ’ ಸಿನಿಮಾ ಮಾಡಿದ್ದಾರಂತೆ. ‘ಥೂ ಹಂಗ್‌ ಕರೀಬೇಡ್ರೋ’ ಎಂಬ ಅಡಿಬರಹ ಚಿತ್ರಕ್ಕಿದೆ.

ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ‘ಇದು ಕಾಮಿಡಿ ಚಿತ್ರ. ಈಗಿನ ಜಮಾನಕ್ಕೆ ಒಗ್ಗುವ ಸಿನಿಮಾ. ಚಿತ್ರದುದ್ದಕ್ಕೂ ನಗುವಿಗೆ ಕೊರತೆ ಇಲ್ಲ. ಕ್ಲೈಮ್ಯಾಕ್ಸ್‌ ಅದ್ಭುತವಾಗಿ ಮೂಡಿಬಂದಿದೆ. ನಾನು ಚಿತ್ರದಲ್ಲಿ ಮಾಮ. ಮಾಮಗಿರಿ ಮಾಡುವುದೇ ಅರವಿಂದ್‌ ಅವರ ಕೆಲಸ’ ಎಂದು ನಕ್ಕರು ಮೋಹನ್.

ವಕೀಲ, ಪೊಲೀಸ್‌ ಪಾತ್ರ ಮಾಡುತ್ತಿದ್ದ ಅರವಿಂದ ರಾವ್‌ ಮೊದಲ ಬಾರಿಗೆ ಕಾಮಿಡಿ ಇಮೇಜ್‌ಗೆ ಹೊರಳಿದ್ದಾರೆ. ಈ ಬಗೆಯ ಭಿನ್ನ ಪಾತ್ರ ಮಾಡಿರುವ ಖುಷಿ ಅವರ ಮೊಗದಲ್ಲಿತ್ತು. ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ ಮೋಹನ್‌ ಅವರ ಸೂಚನೆ ಮೇರೆಗೆ ಮೂರು ತಿಂಗಳು ಜಿಮ್‌ನಲ್ಲಿ ಕಸರತ್ತು ಮಾಡುವುದನ್ನೇ ಬಿಟ್ಟದ್ದರಂತೆ. ಇದನ್ನು ಅವರೇ ಹೇಳಿಕೊಂಡರು. ‘ಚಿತ್ರದಲ್ಲಿ ಭರಪೂರ ಹಾಸ್ಯವಿದೆ. ಜನರಿಗೆ ಸಿನಿಮಾ ಇಷ್ಟವಾಗಲಿದೆ’ ಎಂದರು.

ಸಾಂಪ್ರತಾ ಈ ಚಿತ್ರದ ನಾಯಕಿ. ಅವರು ಮೂಲತಃ ಗಾಯಕಿ. ‘ಇದು ನನ್ನ ಮೊದಲ ಚಿತ್ರ. ಚಿತ್ರೀಕರಣದ ವೇಳೆ ಸಾಕಷ್ಟು ಕಲಿತಿದ್ದೇನೆ’ ಎಂದಷ್ಟೇ ಹೇಳಿದರು.

ಬಿ.ಕೆ. ಚಂದ್ರಶೇಖರ್‌ ಚಿತ್ರಕ್ಕೆ ಆರ್ಥಿಕ ಇಂಧನ ಒದಗಿಸಿದ್ದಾರೆ. ಡಿ. ಪ್ರಸಾದ್‌ಬಾಬು ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ಧರಮ್‌ ದೀಪ್ ಸಂಗೀತ ನೀಡಿದ್ದಾರೆ. ಪೃಥ್ವಿ ಬನವಾಸಿ, ಅಕ್ರಂ, ಸೌಜನ್ಯಾ, ಭೂಮಿಕಾ, ದಿಲೀಪ್, ಕೆಂಪೇಗೌಡ ತಾರಾಗಣದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)