ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೋಡಿಹಕ್ಕಿ’ಗೆ ತ್ರಿಶತಕದ ಸಂಭ್ರಮ

Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ನಂಗೆ ಜಾನಕಿ ಟೀಚರ್‌ ಕೈಯಾರೆ ಕೈತುತ್ತು ತಿನ್ನುವಾಸೆ. ತಿನ್ನಿಸುತ್ತೀರಾ ಟೀಚರ್...’ ಎಂದು ಚಾಮರಾಜಪೇಟೆಯ ಟ್ರೆಂಡಿ ಗುರು ಬೇಡಿಕೆ ಇಟ್ಟಾಗ, ‘ಜೋಡಿಹಕ್ಕಿ’ ತಂಡ ಸೇರಿದಂತೆ ಸಭಾಂಗಣದಲ್ಲಿ ನೆರೆದಿದ್ದ ಎಲ್ಲರೂ ನಗುವಿನಲ್ಲಿ ತೇಲಿದರು. ‘ನಾನು ರಾಮು ಅವರಿಗೆ ಬಿಟ್ಟರೆ ಯಾರಿಗೂ ತಿನ್ನಿಸುವುದಿಲ್ಲ’ ಎಂದು ಮೆಲ್ಲನೆ ನುಡಿದರು ಜಾನಕಿ ಟೀಚರ್. ಮತ್ತೆ ಸಭಾಂಗಣದಲ್ಲಿ ನಗುವಿನ ಅಲೆ ಎದ್ದಿತು.

‘ತಾಯಿಯಾಗಿ ಕೈತುತ್ತು ತಿನ್ನಿಸಿ ಟೀಚರ್’ ಎಂದರು ಪೈಲ್ವಾನ್‌ ರಾಮಣ್ಣ. ಈ ಮಾತು ಕೇಳಿ ಟ್ರೆಂಡಿ ಗುರು ಸುಮ್ಮನಾಗಲಿಲ್ಲ. ‘ರಾಮಣ್ಣ ನಿಮ್ಮಂತೆಯೇ ನನಗೂ ಕೈತುತ್ತು ತಿನ್ನುವಾಸೆ’ ಎಂದೇಬಿಟ್ಟರು. ಆಗ ರಾಮಣ್ಣ, ‘ಪುಲಾವ್ ತಯಾರಾಗುತ್ತಿದೆ. ಇಬ್ಬರು ಸೇರಿ ತಿನ್ನೋಣ ಬಿಡಪ್ಪ’ ಎಂದು ಉತ್ತರಿಸಿದಾಗ ನಗುವ ಸರದಿ ಅಭಿಮಾನಿಗಳದ್ದಾಗಿತ್ತು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೋಡಿಹಕ್ಕಿ’ ಹಾರಲು ಶುರುಮಾಡಿ 300 ಸಂಚಿಕೆಯಾಗಿದೆ. ಹಾಗಾಗಿಯೇ, ಧಾರಾವಾಹಿ ತಂಡ ಪ್ರೀತಿಹಕ್ಕಿಗಳನ್ನು ಪ್ರೀತಿಸೋ ಅಭಿಮಾನಿಗಳೊಟ್ಟಿಗೆ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ದಾಂಗುಡಿ ಇಟ್ಟಿದ್ದರು.

ಕಿರುತೆರೆ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಧಾರಾವಾಹಿ ತಂಡವೊಂದು ತನ್ನ ಅಭಿಮಾನಿಗಳಿಗಾಗಿ ಒಂದು ದಿನವನ್ನು ಮೀಸಲಿಟ್ಟು ಅವರಿಗಾಗಿ ವೇದಿಕೆ ಕಲ್ಪಿಸಿದ್ದು ವಿಶೇಷವಾಗಿತ್ತು. 300ರ ಸಂಭ್ರಮವನ್ನು ಅಭಿಮಾನಿಗಳೊಟ್ಟಿಗೆ ಆಚರಿಸಿತು. ಧಾರಾವಾಹಿಯ ತಾರಾಬಳಗ ಫ್ಯಾನ್ ಕ್ಲಬ್‍ಗಳೊಟ್ಟಿಗೆ ನೇರ ಸಂವಾದ ನಡೆಸಿ ರಂಜಿಸಿತು.

ಮಂಡ್ಯದ ಭಾಷಾ ಸೊಗಡಿರುವ ಆರೂರು ಜಗದೀಶ್‌ ನಿರ್ದೇಶನದ ಈ ಧಾರಾವಾಹಿಯಲ್ಲಿ ರಾಮಣ್ಣ ಮತ್ತು ಜಾನಕಿಯ ಪಾತ್ರ ಪ್ರೇಕ್ಷಕರ ಮನಸೆಳೆದಿವೆ. ಹಾಗಾಗಿಯೇ, ಚಿತ್ರೀಕರಣದ ಸ್ಥಳಕ್ಕೆ ಅಭಿಮಾನಿಗಳು ಬಂದು ಹರಸಿ ಹೋಗುತ್ತಿದ್ದಾರಂತೆ. ಒಮ್ಮೆಯಾದರೂ ನೆಚ್ಚಿನ ಧಾರಾವಾಹಿಯ ಬಳಗವನ್ನು ಭೇಟಿಯಾಗುವ ಹಂಬಲ ಅಭಿಮಾನಿಗಳಲ್ಲಿತ್ತು. ಇದಕ್ಕೆ ವಾಹಿನಿಯೂ ವೇದಿಕೆ ಒದಗಿಸಿತ್ತು.

ಅಭಿಮಾನಿಗಳು ಕೇಕ್ ಕತ್ತರಿಸಿ, ಸಿನಿಪ್ರಿಯರಂತೆ ಹಚ್ಚೆ ಹಾಕಿಸಿಕೊಂಡು ಸಂಭ್ರಮಿಸುತ್ತಿದ್ದರು. ಸಿನಿ ಸಂಭ್ರಮದಂತೆಯೇ ಧಾರಾವಾಹಿಯ ನಟ, ನಟಿಯರ ಕಟೌಟ್‍ಗಳು ಕಾರ್ಯಕ್ರಮದಲ್ಲಿ ರಾರಾಜಿಸುತ್ತಿದ್ದವು. ಇಡೀ ದಿನವನ್ನು ಅಭಿಮಾನಿಗಳಿಗಾಗಿ ಧಾರಾವಾಹಿ ತಂಡ ಮೀಸಲಿಟ್ಟಿತು. ಅವರ ಪ್ರಶ್ನೆಗಳಿಗೆ ಉತ್ತರಿಸಿ ಖುಷಿಪಡಿಸಿತು. ಧಾರಾವಾಹಿಯಲ್ಲಿ ಪಾತ್ರ ನಿರ್ವಹಿಸುತ್ತಿದ್ದ ದಿ.ಭೂಪಾ ಅವರ ಕುಟುಂಬಕ್ಕೆ ₹ 1 ಲಕ್ಷ ಪರಿಹಾರ ನೀಡಲಾಯಿತು.

ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, ‘ಇದೊಂದು ವಿಶಿಷ್ಟ ಕಥಾಹಂದರವುಳ್ಳ ಧಾರಾವಾಹಿ. ನಾವು ಪ್ರೀತಿಯಿಂದ ಇದನ್ನು ನಿರ್ಮಿಸಿದ್ದೇವೆ. ಫೇಸ್‌ಬುಕ್‌ನಲ್ಲಿ ಈ ಧಾರಾವಾಹಿಗೆ ಎರಡು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳಿದ್ದಾರೆ. ಈ ಸಂಭ್ರಮಕ್ಕೆ ಸಾಕ್ಷಿಯಾಗಿರುವವರಲ್ಲಿ ಯುವಜನರೇ ಹೆಚ್ಚಿದ್ದಾರೆ. ಇದು ಸಂತಸ ತಂದಿದೆ. ನಿಮ್ಮ ಅಭಿಮಾನಕ್ಕೆ ನಾವು ಆಭಾರಿ. ಈ ಅದ್ದೂರಿ ಕಾರ್ಯಕ್ರಮ ಶೀಘ್ರವೇ ಪ್ರಸಾರವಾಗಲಿದೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT