ಬುಧವಾರ, ಡಿಸೆಂಬರ್ 11, 2019
20 °C

ಕಿರುತೆರೆ ಅನುಬಂಧವೇ ಚೆಂದ

Published:
Updated:
ಕಿರುತೆರೆ ಅನುಬಂಧವೇ ಚೆಂದ

‘ಊರು ಮಂಗಳೂರಾದರೂ ಕಾಲೇಜಿನ ದಿನಗಳು ಕಳೆದಿದ್ದು ಮಡಿಕೇರಿಯಲ್ಲಿ. ಈಗಲೂ ಅಲ್ಲಿನ ಬೀದಿಗಳಲ್ಲಿ ಬುಲೆಟ್ ಏರಿ ಹೊರಟರೆ ನನ್ನ ಖದರೇ ಬೇರೆ. ತಗ್ಗು–ದಿನ್ನೆಗಳನ್ನು ಏರಿ ಇಳಿದು ಸವಾರಿ ಹೊರಟರೆ ಪಡ್ಡೆ ಹುಡುಗರು ಕಣ್ಸನ್ನೆಯಲ್ಲೇ ಕುಡಿನೋಟ ಬೀರುತ್ತಾರೆ. ಬೆಂಗಳೂರಿನಲ್ಲಿ ಮಿಸ್ ಮಾಡಿಕೊಳ್ಳುವ ಕ್ಷಣಗಳನ್ನು ಅಲ್ಲಿ ಎಂಜಾಯ್ ಮಾಡುತ್ತೇನೆ...’ ಹೀಗೆ ‌‌ಕಿರುತೆರೆ ನಟಿ ದಿವ್ಯಾ ಅವರ ಬಿಗುಮಾನ ಇಲ್ಲದ ಮಾತಿನ ಲಹರಿ ಸಾಗಿತ್ತು.

ಆರು ವರ್ಷದಿಂದ ನಟನಾ ಕ್ಷೇತ್ರದಲ್ಲಿರುವ ಅವರಿಗೆ ಧಾರಾವಾಹಿ ಕ್ಷೇತ್ರವೇ ಅಚ್ಚುಮೆಚ್ಚು. ನಟ ಕಾಶೀನಾಥ್ ಅವರ ಪುತ್ರ ಅಭಿಮನ್ಯು ನಾಯಕನಾಗಿ ನಟಿಸಿದ ‘12AM' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರೂ ತಮಗೆ ಧಾರಾವಾಹಿ ಕೊಡುವ ಖುಷಿಯೇ ಬೇರೆ ಎಂದು ಅವರು ಮಾತು ಪೋಣಿಸಿದರು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ‘ಆಕಾಶ ದೀಪ’, ‘ಅಮ್ಮ’ ಧಾರಾವಾಹಿಗಳು ಅವರ ನಟನಾ ಬದುಕಿಗೆ ಮುನ್ನುಡಿ ಬರೆದವು. ಯಾವುದೇ ಹಿನ್ನೆಲೆ ಇಲ್ಲದೆ ಅಭಿನಯ ಅಂಗಳಕ್ಕೆ ಕಾಲಿಟ್ಟಾಗ ಎದುರಾದ ತೊಡರುಗಳನ್ನು ಸಮರ್ಥವಾಗಿ ನಿಭಾಯಿಸಿದ ಗಟ್ಟಿಗಿತ್ತಿ ಅವರು. ಈಗಾಗಲೇ, ಸನ್ ಟಿವಿಯ ‘ಕೇಳಡಿ ಕಣ್ಮಣಿ’ ತಮಿಳು ಧಾರಾವಾಹಿಯಲ್ಲೂ ನಟಿಸಿ ಅಲ್ಲಿನ ಪ್ರೇಕ್ಷಕರ ಅಭಿಮಾನಗಳಿಸಿದ್ದಾರೆ. ಸದ್ಯ ಉದಯ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿರುವ ‘ಕಣ್ಮಣಿ’ ಧಾರಾವಾಹಿಯಲ್ಲಿ ಬಿಜಿಯಾಗಿದ್ದಾರೆ.

‘ಧಾರಾವಾಹಿಯಲ್ಲಿ ಅಭಿನಯಿಸುವುದರಿಂದ ಜನರ ಮನದಲ್ಲಿ ಸದಾ ಉಳಿಯುತ್ತೇವೆ. ನೆಂಟರಿಷ್ಟರ ಮದುವೆ, ಗೆಳೆಯರ ಭೇಟಿ ವೇಳೆ ಕಂಡು ಮಾತನಾಡಿಸುವ ವೀಕ್ಷಕರು ಅಭಿಮಾನದ ಹೊಳೆಯನ್ನೇ ಹರಿಸುತ್ತಾರೆ. ಇದರಿಂದ ದಕ್ಕಿದ ಪ್ರೀತಿ, ವಿಶ್ವಾಸಕ್ಕೆ ಬೆರಗಾಗಿದ್ದೇನೆ’ ಎನ್ನುತ್ತಾರೆ ದಿವ್ಯಾ.ದಿವ್ಯಾ

ಧಾರಾವಾಹಿಗೆ ಇರುವ ಸಮ್ಮೋಹನ ಶಕ್ತಿ ಕಂಡು ಇಲ್ಲಿಯೇ ಗಟ್ಟಿಯಾಗಿ ನಿಲ್ಲುವ ಉಮೇದಿನಲ್ಲಿದ್ದಾರೆ. ನಿಜಜೀವನದ ಪಾತ್ರಗಳನ್ನೇ ಧಾರಾವಾಹಿಯಲ್ಲೂ ಅಭಿನಯಿಸಬೇಕಾಗಿರುವುದರಿಂದ ಪಾತ್ರಧಾರಿಗಳ ನಡುವೆ ಕ್ರಮೇಣ ಹೊಂದಾಣಿಕೆ ಬೆಳೆಯುತ್ತದೆ.

ನಂತರ ಕುಟುಂಬದ ಸದಸ್ಯರಂತೆಯೇ ಸಂಬಂಧಗಳ ನಡುವೆ ಅನುಬಂಧ ಬೆಸೆದುಕೊಳ್ಳುತ್ತದೆ. ಸಿನಿಮಾ ಸಂಬಂಧವೇ ಬೇರೆ ಎನ್ನುವ ಒಕ್ಕಣೆ ಅವರ‌ದ್ದು.

ಪುನೀತ್, ತಮಿಳು ನಟ ವಿಜಯ್, ನಟಿ ನಯನತಾರಾ ಅಭಿನಯ ಇಷ್ಟಪಡುವ ದಿವ್ಯಾ, ಅವರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕರೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಕುಣಿಯೋದಾಗಿ ಹೇಳಿದರು.

‘ನಟನೆಗೆ ಸಂಬಂಧಿಸಿದಂತೆ ಯಾವ ತರಬೇತಿಗೂ ಹೋಗಲಿಲ್ಲ. ಸ್ಕೂಲ್‌ನಲ್ಲಿ ಕಲಿತ ಡಾನ್ಸ್ ಅಭಿನಯದವರೆಗೂ ಕರೆ ತಂದಿದೆ. ಸೀರಿಯಲ್ ಪ್ರಮೋಶನ್ ವೇದಿಕೆಗಳಲ್ಲಿ ಭರಪೂರ ಡಾನ್ಸ್ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದೇನೆ’ ಎನ್ನುತ್ತಾರೆ ಅವರು.

ಪ್ರತಿಕ್ರಿಯಿಸಿ (+)