ಶುಕ್ರವಾರ, ಡಿಸೆಂಬರ್ 6, 2019
25 °C

ಚಹಾ ಮಾರಾಟಗಾರ: ₹300 ಕೋಟಿ ಸರದಾರ ಓದಿದ್ದು ಮೂರನೇ ಕ್ಲಾಸ್‌!

Published:
Updated:
ಚಹಾ ಮಾರಾಟಗಾರ: ₹300 ಕೋಟಿ ಸರದಾರ ಓದಿದ್ದು ಮೂರನೇ ಕ್ಲಾಸ್‌!

ಬೆಂಗಳೂರು: ಮೂರನೇ ತರಗತಿವರೆಗೂ ಓದಿ ಬರೋಬ್ಬರಿ ₹300 ಕೋಟಿ ಆಸ್ತಿ ಘೋಷಿಸಿಕೊಂಡಿರುವ ಪಿ.ಅನಿಲ್‌ಕುಮಾರ್‌ (43 ವರ್ಷ) ಅವರು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಸದ್ಯ ಸಿಂಗಸಂದ್ರದ ವೆಲ್ಲಿಂಗ್‌ಟೌನ್‌ನಲ್ಲಿ ವಾಸಿಸುತ್ತಿರುವ ಇವರು ಮೂಲತಃ ಕೇರಳದವರು. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಇವರ ಆಸ್ತಿಯ ಮೌಲ್ಯ ಕಂಡು ಜನ ಬೆರಗಾಗಿದ್ದಾರೆ.

ಪತ್ನಿ ಸಂಧ್ಯಾ ಮತ್ತು ಮಕ್ಕಳ ಹೆಸರಿನಲ್ಲಿ ಸುಮಾರು ₹300 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. 48.5 ಎಕರೆ ಜಮೀನು, 12,95,848 ಚ.ಅಡಿ ವಿಸ್ತೀರ್ಣದ ಭೂಮಿ ಸೇರಿ ಒಟ್ಟು ₹333 ಕೋಟಿ ಮಾರುಕಟ್ಟೆ ಮೌಲ್ಯದ ಆಸ್ತಿಯ ಮಾಲೀಕರು ಇವರು. ಸಿಂಗಸಂದ್ರದಲ್ಲಿ ವಾಣಿಜ್ಯ ಸಮುಚ್ಚಯ, ಅಪಾರ್ಟ್‌ಮೆಂಟ್‌ ಸಮುಚ್ಚಯ ಸಹ ಹೊಂದಿದ್ದಾರೆ.

38 ವಾಹನಗಳು ಒಡೆಯ: ಅನಿಲ್‌ಕುಮಾರ್‌ ಹಾಗೂ ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ಒಟ್ಟು 23 ಬ್ಯಾಂಕ್‌ ಖಾತೆಗಳಿವೆ. ಇದಲ್ಲದೆ, 16 ಕಾರುಗಳೂ, 17 ಬೈಕ್‌ಗಳು, ಟ್ರ್ಯಾಕ್ಟರ್, ಜೆಸಿಬಿ, ಟ್ಯಾಂಕರ್ ಹಾಗೂ ಲಾರಿಯನ್ನೂ ಇಟ್ಟುಕೊಂಡಿದ್ದಾರೆ. ಇವುಗಳ ಮೌಲ್ಯವೇ 6.73 ಕೋಟಿ ರೂಪಾಯಿಗಳಾಗಿವೆ. ಅಲ್ಲದೆ ₹40.59 ಲಕ್ಷ ಮೌಲ್ಯದ ಚಿನ್ನಾಭರಣ, ₹5.2 ಲಕ್ಷ ನಗದು ಕೂಡ ಅನಿಲ್ ಕುಮಾರ್ ಹೊಂದಿದ್ದಾರೆ.

ಚಹಾ ಮಾರಾಟಗಾರ: ಕುಟುಂಬದಲ್ಲಿ ಬಡತನ ಇದ್ದಿದ್ದರಿಂದ ಅನಿಲ್‌ಕುಮಾರ್‌, 3ನೇ ತರಗತಿಗೆ ವಿದ್ಯಾಭ್ಯಾಸ ಬಿಟ್ಟು, ವ್ಯಾಪಾರ ಪ್ರಾರಂಭಿಸಿದರು. ಬಹಳಷ್ಟು ದಿನಗಳ ಕಾಲ ಚಹ ಮಾರಿ ಜೀವನ ಸಾಗಿದ್ದಾರೆ. ಇದರಿಂದಲೇ ಅವರು ಮಾಸಿಕ ₹3 ಲಕ್ಷ ಸಂಪಾದಿಸುತ್ತಿದ್ದರು. ನಂತರ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡು ಕೋಟ್ಯಧಿಪತಿ ಆಗಿದ್ದಾರೆ.

ಪ್ರತಿಕ್ರಿಯಿಸಿ (+)