ಮಂಗಳವಾರ, ಡಿಸೆಂಬರ್ 10, 2019
26 °C

‘ಅಣ್ಣಾವ್ರ ಮೆಚ್ಚುಗೆಯೇ ದೊಡ್ಡ ಬಹುಮಾನ’

Published:
Updated:
‘ಅಣ್ಣಾವ್ರ ಮೆಚ್ಚುಗೆಯೇ ದೊಡ್ಡ ಬಹುಮಾನ’

ರಾಜಣ್ಣ ಅವರು ತಮ್ಮ ಚಿತ್ರದ ಯಶಸ್ಸಿಗೆ ದುಡಿದ ಸಣ್ಣಪುಟ್ಟ ಕಲಾವಿದರನ್ನೂ ಗೌರವದಿಂದ ನಡೆಸಿಕೊಳ್ಳುತ್ತಿದ್ದರು. ನಾನು ಅವರನ್ನು ಖುದ್ದಾಗಿ ಕಂಡು ಮಾತನಾಡಿದ್ದು ಕೆಲವೇ ಸಲ. ಅದು ‘ನಾ ನಿನ್ನ ಮರೆಯಲಾರೆ’ ಸಿನಿಮಾ ನೂರು ದಿನ ಓಡಿದಾಗ ದೊಡ್ಡ ಸಮಾರಂಭ ಮಾಡಿದ್ರಲ್ಲಾ ಆಗ...

ನನಗೆ ರಾಜಣ್ಣ ಅವರೇ ಕೈಯ್ಯಾರೆ ಟ್ರೋಫಿ ಕೊಟ್ಟು, ‘ನಿನ್ನ ಹೆಸರೇನು?’ ಅಂದ್ರು. ‘ಚಿನ್ನಪ್ಪ’ ಅಂದೆ. ‘ನೀನು ಬರೆದ ಪೋಸ್ಟರ್‌ ನೋಡಿದ್ರೆ ನಾನು ಕನ್ನಡಿ ಮುಂದೆ ನಿಂತಂಗೆ ಅನ್ಸುತ್ತೆ. ಇಷ್ಟೆಲ್ಲಾ ಚೆನ್ನಾಗಿ ಪೇಂಟಿಂಗ್ ಮಾಡ್ತೀಯಾ ಹೆಸರು ಮಾತ್ರ ಚಿನ್ನಪ್ಪ ಅಂತಾನಾ? ನೀನು ದೊಡ್ಡ ಕಲಾವಿದ ಕಣಪ್ಪಾ ನಿನ್ನ ಹೆಸರು ದೊಡ್ಡಪ್ಪ ಅಂತ ಇರಬೇಕಾಗಿತ್ತು. ನೀನು ಬರೆಯೋ ಪೋಸ್ಟರ್‌ಗಳನ್ನು ನೋಡಿಯೇ ಜನ ಥಿಯೇಟರ್‌ಗೆ ಬರೋದು ಕಣಪ್ಪಾ’ ಅಂತ ಒಂದೇ ಸಮನೆ ಹೊಗಳಿದರು. ನನಗಂತೂ ಮಾತೇ ಹೊರಡಲಿಲ್ಲ. ಅವತ್ತು ಫಂಕ್ಷನ್‌ನಲ್ಲಿ ನಂಗೆ ಕೊಟ್ಟ ಟ್ರೋಫಿಗಿಂತಲೂ ಅವರ ಮೆಚ್ಚುಗೆಯ ಮಾತುಗಳೇ ನನಗೆ ದೊಡ್ಡ ಬಹುಮಾನ.

ನನ್ನ ಗುರುಗಳೊಂದಿಗೆ 1948–49ರಿಂದಲೇ ಕೆಲಸ ಮಾಡುತ್ತಿದ್ದ ಕಾರಣ ರಾಜ್‌ಕುಮಾರ್‌ ಅವರ ಪೋಸ್ಟರ್‌ಗಳನ್ನು ಬರೆಯುತ್ತಿದ್ದೆನೇ ವಿನಾ ನೋಡಿರಲಿಲ್ಲ. ’ಬಂಗಾರದ ಮನುಷ್ಯ’ ಸಿಲ್ವರ್‌ ಜ್ಯುಬಿಲಿ ಆಚರಿಸಿಕೊಂಡಾಗ ಸ್ಟೇಟ್‌ ಚಿತ್ರಮಂದಿರದಲ್ಲಿ ಒಂದೂವರೆ ವರ್ಷ ಓಡಿತ್ತು. ಆಮೇಲೆ ‘ಕೆಂಪೇಗೌಡ’ದಲ್ಲಿ ಹಾಕಿದ್ರು. ಸಿಲ್ವರ್‌ ಜ್ಯುಬಿಲಿ ಆಚರಿಸಿಕೊಂಡಾಗ ’ಸ್ಟೇಟ್‌’ನಲ್ಲಿ ರಾಜಣ್ಣ ಅವರ ದೊಡ್ಡ ಕಟೌಟ್‌ ಹಾಕಿದ್ರು. ಆಮೇಲೆ ಕೆಂಪೇಗೌಡದಲ್ಲಿ ಹಾಕಿದ ಕಟೌಟ್ ಕೂಡಾ ನಾನೇ ಮಾಡಿದ್ದು. ಆ ಕಟೌಟ್‌ಗಳು 40–45 ಅಡಿ ಇದ್ದ ಹಾಗೆ ನೆನಪು. ಆಗಿನ ಕಾಲಕ್ಕೆ ಅದೇ ದೊಡ್ಡ ಕಟೌಟ್‌. ಈಗಿನಂತೆ 60–70 ಅಡಿ, 100 ಅಡಿಯ ಕಟೌಟ್‌ಗಳು ಆಗ ಇರಲಿಲ್ಲ. ಯಾಕಂದ್ರೆ ಮೇಲೆ ಕಟ್ಬೇಕಲ್ವಾ? ಗಾಳಿಗೆ ಬಿದ್ದೋಗುತ್ತೆ ಅಂತ ಭಯ.

‘ಬೇಡರ ಕಣ್ಣಪ್ಪ’ ಚಿತ್ರ ಬಿಡುಗಡೆಯಾದಾಗ ನಾನಿನ್ನೂ ಸಣ್ಣ ಹುಡುಗ. 1953 ಅನಿಸುತ್ತೆ ಅದು. ಆಗ ನಂಗೆ ರಾಜ್‌ಕುಮಾರ್‌ ಅವರ ಪರಿಚಯ ಇರಲಿಲ್ಲ. ಆದರೆ ಗುರುಗಳ ಜೊತೆಗೆ ನಾನೂ ಅಣ್ಣಾವ್ರ ಪೇಂಟಿಂಗ್‌ ಮಾಡಿದ್ದೆ. ಆಗ ರಾಜ್‌ಕುಮಾರ್‌ ಅವರ ಕಟೌಟ್‌ಗೆ ಮಾತ್ರ ಬೇಡಿಕೆ ಇದ್ದಿದ್ದು. ಹೀರೋಯಿನ್‌ ಅಥವಾ ಬೇರೆ ಯಾರೇ ನಟರು ಇದ್ದರೂ ಕಟೌಟ್‌ನಲ್ಲಿ ರಾಜಣ್ಣನ ಚಿತ್ರ ಮಾತ್ರ ಹಾಕ್ತಿದ್ದಿದ್ದು. ಪೋಸ್ಟರ್‌ನಲ್ಲಿ ಬೇರೆ ನಟ ನಟಿಯರ ಚಿತ್ರಗಳನ್ನೂ ಬರೀತಿದ್ವಿ. ಬಂಗಾರದ ಮನುಷ್ಯ ಆದ್ಮೇಲೆ ಬಂದ ರಾಜಣ್ಣನ ಎಲ್ಲಾ ಚಿತ್ರಗಳ ಪೋಸ್ಟರ್‌ ಮತ್ತು ಕಟೌಟ್‌ಗಳನ್ನು ನಾನೇ ಮಾಡಿದ್ದು. ’ಸನಾದಿ ಅಪ್ಪಣ್ಣ’ ಚಿತ್ರ ಬಿಡುಗಡೆಯಾದ ನಂತರವೂ ‘ಬಂಗಾರದ ಮನುಷ್ಯ’ದ ಕಟೌಟ್‌ಗಳನ್ನು ಕರ್ನಾಟಕಕ್ಕೆಲ್ಲ ವಿತರಿಸ್ತಿದ್ವಿ. ನಾವೇ ಬರೆದು ನಾವೇ ಕಟ್ಟಬೇಕಿತ್ತು. ಕಟೌಟ್‌ ಆಗಲಿ ಪೋಸ್ಟರ್‌ ಆಗಲಿ ಎಷ್ಟು ಚೆನ್ನಾಗಿ ಬರೀತೀವೋ ಅದನ್ನು ನೋಡ್ಕೊಂಡು ಜನ ಥಿಯೇಟರ್‌ಗೆ ಹೋಗೋರು. ಹಾಗಾಗಿ ಒಂದಕ್ಕಿಂತ ಮತ್ತೊಂದನ್ನು ಚೆನ್ನಾಗಿ ಮಾಡೋ ಚಾಲೆಂಜ್‌ ನಮಗೆ.ರಾಜಣ್ಣದ ಪೋಟೊದ ಸ್ಕೆಚ್‌ ತೆಗೆದು ಅದರಂತೆ ಪೇಂಟಿಂಗ್‌ ಮಾಡಬೇಕಿತ್ತು. ಶುರುವಿನಲ್ಲಿ ಕಲಾವಿದರನ್ನು ನಿರ್ದೇಶಕರು ಹೇಳಿದ ಪೋಸ್‌ನಲ್ಲಿ ಕೂರಿಸಿಕೊಂಡು ಸ್ಕೆಚ್‌ ಹಾಕ್ಕೋತಿದ್ವಿ. ಈಗಿನಂತೆ ಪೇಪರ್‌ನಲ್ಲಿ ಟಿ.ವಿಯಲ್ಲಿ ಜಾಹೀರಾತು ಇರ್ತಿರ್ಲಿಲ್ಲ. ನಮ್ಮ ಪೋಸ್ಟರ್‌, ಬ್ಯಾನರ್ ಮತ್ತು ಕಟೌಟ್‌ಗಳೇ ಜಾಹೀರಾತುಗಳು ಆಗ. ನಮಗೆ ಭಾರೀ ಡಿಮ್ಯಾಂಡ್‌ ಇತ್ತು ಅನ್ನಿ. ‘ಭಲೇ ಜೋಡಿ’ಗೆ 60 ಅಡಿ ಕಟೌಟ್‌ ಮಾಡಿದ್ವಿ ನೋಡಿ. ಅಣ್ಣಾವ್ರ ದೊಡ್ಡ ಕಟೌಟ್‌ ಅಂದ್ರೆ ಅದುವೇ. ಒಮ್ಮೊಮ್ಮೆ 40–50 ಕಟೌಟ್‌ಗಳನ್ನು ಮಾಡ್ತಿದ್ವಿ. ‘ಬಬ್ರುವಾಹನ’ ಮತ್ತು ‘ಬಂಗಾರದ ಮನುಷ್ಯ’ದ ಕಟೌಟ್‌ಗಳು ನನಗೆ ಒಳ್ಳೆಯ ಹೆಸರು ತಂದುಕೊಟ್ಟವು.

‘ಅಣ್ಣಾವ್ರು ಆ್ಯಕ್ಟಿಂಗ್‌ ಮಾತ್ರ ಅಲ್ಲ ಸಿನಿಮಾದ ಎಲ್ಲಾ ವಿಷಯಗಳನ್ಣೂ ತಿಳ್ಕೊಂಡಿರ್ತಿದ್ರು. ಹಾಗಾಗಿ ನಮ್ಮಂತಹ ಬಡ ಕಲಾವಿದರು ಮಾಡೋ ಕೆಲಸವನ್ನೂ ಗೌರವಿಸುತ್ತಿದ್ರು. ಅವರನ್ನು ಪ್ರತಿ ಬಾರಿ ಕಾಣಲು, ಮಾತನಾಡಲು ಆಗದೇ ಇದ್ದರೂ ಅವರ ಸಿನಿಮಾಗಳ ಗೆಲುವಿನಲ್ಲಿ ನನ್ನದೂ ಸಣ್ಣ ಪಾತ್ರ ಇರ್ತಿತ್ತು ಅನ್ನೋದೇ ನನಗೆ ಹೆಮ್ಮೆ’. 

ಪ್ರತಿಕ್ರಿಯಿಸಿ (+)