ಬುಧವಾರ, ಜುಲೈ 15, 2020
22 °C

ಸಂಬಂಧಗಳ ಮುದ್ದು– ರಾಜ್ ಮನೆಮದ್ದು

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

ಸಂಬಂಧಗಳ ಮುದ್ದು– ರಾಜ್ ಮನೆಮದ್ದು

‘ಷೇಕ್ಸ್‌ಪಿಯರ್‌ ಫಾರ್‌ ಆಲ್‌ ಅಕೇಷನ್ಸ್‌’ ಎನ್ನುವುದು ಇಂಗ್ಲಿಷ್‌ನಲ್ಲಿನ ಒಂದು ಜನಪ್ರಿಯ ಮಾತು. ಬದುಕಿನ ಯಾವುದೇ ಸಂದರ್ಭಕ್ಕೂ ಷೇಕ್ಸ್‌ಪಿಯರ್‌ ಒದಗಿಬರುತ್ತಾನೆ ಎನ್ನುವುದು ಈ ಮಾತಿನ ಅರ್ಥ. ಇದನ್ನು ಕರ್ನಾಟಕದ ಸಂದರ್ಭದಲ್ಲಿ ‘ರಾಜ್‌ಕುಮಾರ್‌ ಫಾರ್‌ ಆಲ್ ಅಕೇಷನ್ಸ್‌’ ಎನ್ನಬಹುದು. ಬದುಕಿನ ಎಲ್ಲ ಸಂದರ್ಭಕ್ಕೂ ರಾಜ್‌ ಅವರಂತೆ ಒದಗಿಬರುವ ಮತ್ತೊಂದು ರೂಪಕವನ್ನು ಕನ್ನಡ ಸಂದರ್ಭದಲ್ಲಿ ಕಾಣುವುದು ಕಷ್ಟ.

ಕೌಟುಂಬಿಕ ಪರಿಕಲ್ಪನೆಯನ್ನೇ ನೋಡಿ: ಒಂದು ಕುಟುಂಬ ಹೇಗಿರಬೇಕು, ಮನೆ ಹೇಗಿರಬೇಕು, ಮನಸ್ಸುಗಳು ಹೇಗಿರಬೇಕು ಎನ್ನುವುದಕ್ಕೆ ಉದಾಹರಣೆಗಳನ್ನು ರಾಜ್‌ ಚಿತ್ರಗಳಲ್ಲಿ ಮಾತ್ರವಲ್ಲದೆ, ಅವರ ಬದುಕಿನಲ್ಲೂ ನೋಡಬಹುದು.

ಕನ್ನಡದ ಮನಸ್ಸುಗಳಿಗೆ ರಾಜ್‌ ಯಾಕಿಷ್ಟು ಹತ್ತಿರ ಎನ್ನುವುದಕ್ಕೆ ಅವರು ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಕಟ್ಟಿಕೊಟ್ಟ ಕೌಟುಂಬಿಕ ಮಾದರಿಗಳೂ ಮುಖ್ಯ ಕಾರಣವಾಗಿವೆ. ಈ ಮಾದರಿಗಳನ್ನು ಮೂರು ಬಗೆಗಳಲ್ಲಿ ನೋಡಬಹುದು. ಮೊದಲನೆಯದು, ಸಿನಿಮಾಗಳ ಮೂಲಕ ಕಟ್ಟಿಕೊಟ್ಟ ಮಾದರಿ. ಎರಡನೆಯದು, ವೈಯಕ್ತಿಕ ಕುಟುಂಬದ ಆದರ್ಶ. ಮೂರನೆಯದು, ಚಿತ್ರರಂಗವನ್ನು ಒಂದು ಕುಟುಂಬ ಎಂದು ಭಾವಿಸಿದ ಮನೋಧರ್ಮ.

ಕುಟುಂಬ ವಾತ್ಸಲ್ಯದ ಅತ್ಯುತ್ತಮ ಚಿತ್ರಣಗಳಲ್ಲೊಂದು ಚಿ. ದತ್ತರಾಜ್‌ ನಿರ್ದೇಶನದ ‘ಕಾಮನಬಿಲ್ಲು’. ಈ ಸಿನಿಮಾದ ಸೂರ್ಯನಾರಾಯಣನ ಪಾಲಿಗೆ ಇಡೀ ಊರೇ ಕುಟುಂಬವಾಗಿದೆ. ಅಂಗಡಿಯ ಶೆಟ್ಟರು, ಊರಿನ ಗೌಡರು, ರೈತಾಪಿ ಮಂದಿ, ಪೋಲಿಯೊ ಪೀಡಿತ ಹುಡುಗಿ – ಎಲ್ಲರಿಗೂ ಸೂರ್ಯನಾರಾಯಣನೇ ಬೇಕು. ಮನೆಮಗ ಊರಮಗನೂ ಆಗಿರುವ ಚಿತ್ರದಲ್ಲಿ, ನಾಯಕನನ್ನು ದ್ವೇಷಿಸುವವರು ಕೂಡ ಅವನ ಸಾತ್ವಿಕತೆಯ ಎದುರು ಶರಣಾಗಿಬಿಡುತ್ತಾರೆ. ಮನುಷ್ಯನ ಸಣ್ಣತನಗಳು ಹಾಗೂ ಅವುಗಳನ್ನು ಮೀರುವ ಉದಾತ್ತ ಪ್ರಯತ್ನಗಳ ಜೊತೆಗೆ ಭಾರತೀಯ ಸಮಾಜದಲ್ಲಿನ ಜಾತೀಯತೆ, ರೈತರ ತವಕತಲ್ಲಣಗಳು, ಗ್ರಾಮೀಣ ಬದುಕಿನ ಸರಸ ವಿರಸಗಳೆಲ್ಲವನ್ನೂ ’ಕಾಮನಬಿಲ್ಲು’ ಅದ್ಭುತವಾಗಿ ಕಟ್ಟಿಕೊಡುತ್ತದೆ. ಇಡೀ ಊರನ್ನೇ ಒಂದು ಕುಟುಂಬವನ್ನಾಗಿ ಕಾಣಿಸುತ್ತದೆ.

‘ಬಂಗಾರದ ಮನುಷ್ಯ’ ರಾಜ್‌ ನಟನೆಯ ಮತ್ತೊಂದು ಅಪೂರ್ವ ಚಿತ್ರ. ‘ಕಾಮನಬಿಲ್ಲು’ವಿನ ಸೂರ್ಯನಾರಾಯಣನ ಇನ್ನೊಂದು ರೂಪವೇ ನಿರ್ದೇಶಕ ಸಿದ್ದಲಿಂಗಯ್ಯನವರ ಸೃಜನಶೀಲತೆಯಲ್ಲಿ ರಾಜೀವನಾಗಿ ಅರಳಿದಂತಿದೆ. ದುಡಿಯುತ್ತಿದ್ದ ಗಂಡಿನ ಆಸರೆ ಕಳೆದುಕೊಂಡ ಅಕ್ಕನ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವ ನಾಯಕ, ಊರ ಜನರ ಪಾಲಿಗೂ ಭರವಸೆಯಾಗುತ್ತಾನೆ. ಹೀಗೆ ಮನೆ ಗೆದ್ದು, ಮಾರು ಗೆಲ್ಲುವ ಚಿತ್ರಣಗಳನ್ನು ರಾಜ್‌ ಸಿನಿಮಾಗಳು ಕಟ್ಟಿಕೊಡುವ ಕಾರಣದಿಂದಲೇ ರಾಜಕುಮಾರನೆಂಬ ಕಲಾವಿದ ನಮ್ಮ ಭಾವಕೋಶದ ಭಾಗವಾಗುವುದು, ನಿಜವೆನ್ನಿಸುವುದು.

ಪತ್ನಿಯನ್ನು ಉಳಿಸಿಕೊಳ್ಳಲಿಕ್ಕಾಗಿ ಏನೆಲ್ಲ ವೇಷ ಹಾಕುವ ಗಂಡನಾಗಿ (‘ಹಾಲು ಜೇನು’), ಮಕ್ಕಳಿಗೆ ಬದುಕು ಕಟ್ಟಿಕೊಡುವ ಅಪ್ಪನಾಗಿ ಹಾಗೂ ಅಮ್ಮನ ಪಾಲಿನ ಹೆಮ್ಮೆಯ ಮಗನಾಗಿ (‘ಜೀವನಚೈತ್ರ’), ದಾರಿಯಲ್ಲಿ ಸಿಕ್ಕ ಮಗುವಿನ ಪೋಷಣೆಯಲ್ಲಿ ತನಗೆ ಕೇಡು ಬಗೆದವರನ್ನೂ ಕ್ಷಮಿಸುವ ವ್ಯಕ್ತಿಯಾಗಿ (‘ದೇವತಾ ಮನುಷ್ಯ’), ‘ಬಡವರ ಬಂಧು’ವಾಗಿ, ಮನುಷ್ಯ ಸಂಬಂಧಗಳನ್ನು ನೇಯುವ ‘ಮಹಾತ್ಮ ಕಬೀರ’ನಾಗಿ – ಹೀಗೆ ರಾಜ್‌ ನಟನೆಯ ಬಹುತೇಕ ಚಿತ್ರಗಳು ಕೌಟುಂಬಿಕ ಮೌಲ್ಯಗಳನ್ನು ಅನಾವರಣಗೊಳಿಸುವ ಮತ್ತು ಸಮಾಜವನ್ನು ಸಹನೀಯಗೊಳಿಸುವ ಪ್ರಯತ್ನಗಳೇ ಆಗಿವೆ.

ಅಭಿನಯ ಮಾತ್ರವಲ್ಲದೆ ನಿಜದ ಬದುಕಿನಲ್ಲಿ ಕೂಡ ರಾಜ್‌ ಅಪ್ಪಟ ಕೌಟುಂಬಿಕ ವ್ಯಕ್ತಿಯಾಗಿದ್ದರು. ಈ ಹೊತ್ತಿನ ಅನೇಕ ಜನಪ್ರಿಯ ನಟರ ಖಾಸಗಿ ಬದುಕುಗಳು ಕಿರುತೆರೆಯ ಬ್ರೇಕಿಂಗ್‌ ನ್ಯೂಸ್‌ಗಳಾಗುತ್ತಿರುವ ಸಂದರ್ಭದಲ್ಲಿ ರಾಜ್‌ ಉಳಿಸಿಕೊಂಡು ಬಂದ ಕೌಟುಂಬಿಕ ಪ್ರಭಾವಳಿಯನ್ನು ಒಂದು ಸಾಧನೆಯಾಗಿಯೇ ನೋಡಬೇಕು. ರಾಜ್‌–ಪಾರ್ವತಮ್ಮ ಜೋಡಿ ಆದರ್ಶ ದಂಪತಿಗಳಾಗಿ, ಅವರ ಕುಟುಂಬ ಉಳಿದವರಿಗೆ ಮಾದರಿಯಾಗಿ ಜನಸಾಮಾನ್ಯರ ಪಾಲಿಗೆ ಕಾಣಿಸಿದೆ.

ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಮತ್ತು ಮೊಮ್ಮಗಳೊಂದಿಗೆ ರಾಜ್‌ಕುಮಾರ್   (ಚಿತ್ರ: ಪ್ರಜಾವಾಣಿ ಸಂಗ್ರಹ)

ವೃತ್ತಿಜೀವನದ ಒಂದು ಹಂತದ ನಂತರ ನೆಗೆಟಿವ್‌ ಶೇಡ್‌ನ ಪಾತ್ರಗಳಲ್ಲಿ ನಟಿಸುವುದರಿಂದ ರಾಜ್‌ ದೂರವುಳಿದರು. ‘ರಾಜ್‌ ಸಿನಿಮಾ’ ಎಂದರೆ ಅದರಲ್ಲೊಂದು ಮೌಲ್ಯದ ಪ್ರತಿಪಾದನೆ ಇರಲೇಬೇಕು ಎನ್ನುವಂತಾಯಿತು. ಪುಟಕ್ಕಿಟ್ಟಷ್ಟೂ ಚಿನ್ನ ಹೊಳೆಯುವಂತೆ, ನಟಿಸುತ್ತಾ ನಟಿಸುತ್ತಾ ಸಣ್ಣತನಗಳನ್ನು ಕಳೆದುಕೊಳ್ಳುತ್ತಾ ತಮ್ಮ ಪಾತ್ರದ ಆದರ್ಶಗಳನ್ನವರು ಮೈಗೂಡಿಸಿಕೊಂಡಂತೆ ಕಾಣಿಸುತ್ತದೆ. ಆ ಕಾರಣದಿಂದಲೇ ರಾಜ್‌ ಸಿನಿಮಾಗಳು ಸಹೃದಯರ ಪಾಲಿಗೆ ಕಟ್ಟುಕಥೆಗಳಾಗದೆ ಉಳಿಯದೆ, ಅಂತರಂಗದ ಸಂವಾದವಾದವು.

ವಿದ್ಯಾವಂತ ತರುಣರು ಊರಿಗೆ ಮರಳಿ ನೇಗಿಲು ಹಿಡಿದುದು, ಗ್ರಾಮೀಣ ಹೆಣ್ಣುಮಕ್ಕಳು ಹೆಂಡದ ಅಂಗಡಿಗಳನ್ನು ಮುಚ್ಚಿಸಿದ್ದು, ಮುನಿಸಿಕೊಂಡ ಮಗ ಮನೆಗೆ ಮರಳಿದ್ದು, ದಾಯಾದಿ ಕಲಹ ಬಗೆಹರಿದಿದ್ದು, ದಾಂಪತ್ಯದಲ್ಲಿನ ಬಿರುಕು ಸರಿಯಾದುದು – ಇಂಥ ನೂರು ನೂರು ಘಟನೆಗಳಿಗೆ ಪ್ರೇರಣೆಯಾಗುವುದೆಂದರೆ, ಆ ಪಾತ್ರಗಳನ್ನು ’ಕಾಲ್ಪನಿಕ’ ಎನ್ನುವುದು ಹೇಗೆ?

ನೇತ್ರದಾನದ ಮೂಲಕ ಸಾವು ಕೂಡ ರಾಜ್‌ ಪಾಲಿಗೆ ಸಮಾಜದ ಋಣ ತೀರಿಸಿಕೊಳ್ಳುವ ಮಾರ್ಗವೇ ಆದುದು ವಿಶೇಷ. ಕರ್ನಾಟಕದಲ್ಲೀಗ ನೇತ್ರದಾನದ ಬಗ್ಗೆ ಜಾಗೃತಿ ಮೂಡಿದೆಯೆಂದರೆ, ಅದರ ಯಶಸ್ಸು ರಾಜ್‌ಗೆ ಸಲ್ಲಬೇಕು.

ಇಡೀ ಚಿತ್ರರಂಗ ಒಂದು ಅವಿಭಕ್ತ ಕುಟುಂಬ ಎನ್ನುವುದು ಅವರ ನಂಬಿಕೆಯಾಗಿತ್ತು. ಉದ್ಯಮದ ಹಿತಾಸಕ್ತಿಗೆ ಆತಂಕ ಒದಗಿದಾಗಲೆಲ್ಲ ಮನೆಯ ಹಿರಿಮಗನಂತೆ ಕಷ್ಟಕ್ಕೆ ಹೆಗಲುಕೊಡುತ್ತಿದ್ದರು. ಅಭಿಮಾನಿಗಳನ್ನು ದೇವರು ಎಂದು ಕರೆದುದು ಕೂಡ ಸಮಾಜದೊಂದಿಗೆ ಚಿತ್ರೋದ್ಯಮದ ನಂಟನ್ನು ಬಲಪಡಿಸುವ ಪ್ರಯತ್ನವೇ ಆಗಿತ್ತು.

‘ಬಂಗಾರದ ಮನುಷ್ಯ’ ಚಿತ್ರದ ಕೊನೆಯಲ್ಲಿ ಕಥಾನಾಯಕ ಮನೆಯಿಂದ, ಊರವರಿಂದ ದೂರವಾಗುತ್ತಾನೆ. ನಾಯಕನ ಗೈರುಹಾಜರಿಯಲ್ಲಿನ ಅವನ ವ್ಯಕ್ತಿತ್ವದ ಉದಾತ್ತತೆ ಎದ್ದುಕಾಣುತ್ತದೆ, ಎಲ್ಲರಿಗೂ ಅರ್ಥವಾಗುತ್ತದೆ. ಆ ಸಿನಿಮಾ ಇಂದಿನ ಪರಿಸ್ಥಿತಿಯಲ್ಲಿ ನಿಜವಾದಂತಿದೆ. ರಾಜ್ ಅನುಪಸ್ಥಿತಿಯಲ್ಲಿ ಅವರು ಪ್ರತಿಪಾದಿಸಿದ ಮೌಲ್ಯಗಳ ಮಹತ್ವ ದೊಡ್ಡದಾಗಿ ಕಾಣಿಸುತ್ತಿದೆ.

ನಟ–ನಟಿಯರು ಪ್ರೇಕ್ಷಕರ ಪಾಲಿಗೀಗ ರಂಜನೆಯ ಸರಕುಗಳಾಗಿದ್ದಾರೆಯೇ ಹೊರತು ಆದರ್ಶವಾಗಿ ಅಲ್ಲ. ಸಿನಿಮಾ ಮಾಡುವ ಬಹುತೇಕರಿಗೆ, ಚಲನಚಿತ್ರ ಮಾಧ್ಯಮಕ್ಕೆ ಜನಮಾನಸದ ಮೇಲೆ ಪ್ರಭಾವ ಬೀರಬಹುದು ಎನ್ನುವ ನಂಬಿಕೆ ಉಳಿದಿಲ್ಲ. ಇನ್ನು, ಕೌಟುಂಬಿಕ ಚಹರೆಯನ್ನು ಹೊಂದಿದ್ದ ಚಿತ್ರೋದ್ಯಮ ಈಗ ಪೇಟೆಯ ಸ್ವರೂಪ ಪಡೆದುಕೊಂಡಿದೆ. ತಕ್ಕಡಿ ಹಿಡಿದವರೇ ಎಲ್ಲೆಡೆಯೂ ಕಾಣಿಸುತ್ತಿರುವ ಸಂದರ್ಭದಲ್ಲಿ ಕೌಟುಂಬಿಕ–ಮಾನವೀಯ ಮೌಲ್ಯಗಳನ್ನು ಚಿತ್ರಗಳಲ್ಲಿ, ಚಿತ್ರೋದ್ಯಮದಲ್ಲಿ ಕಾಣಲು ಬಯಸುವವರು ಬೆಪ್ಪುತಕ್ಕಡಿಗಳೇ ಸರಿ ಎನ್ನುವ ಪರಿಸ್ಥಿತಿ ಇಂದಿನದು. ಇಂಥ ಸಂಕ್ರಮಣ ಸಂದರ್ಭದಲ್ಲಿ ರಾಜ್‌ ನೆನಪು, ಮನೆಯ ಹಿರೀಕನೊಬ್ಬನ ಆಪ್ತ–ಆರ್ದ್ರ ನೆನಪಿನಂತೆ ಹಾಗೂ ನಾವೆಲ್ಲ ಹಂಬಲಿಸುವ ಹುಡುಕುತ್ತಿರುವ ಮೌಲ್ಯದಂತೆ ಕಾಣಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.