ಪ್ರಭಾವಿಗಳ ಪಟ್ಟಿಯಲ್ಲಿ ಮುಕೇಶ್

7
2018ರ ವಿಶ್ವದ ಪ್ರಮುಖ ಮುಖಂಡರು: ಫಾರ್ಚೂನ್‌ ಮಾಹಿತಿ

ಪ್ರಭಾವಿಗಳ ಪಟ್ಟಿಯಲ್ಲಿ ಮುಕೇಶ್

Published:
Updated:
ಪ್ರಭಾವಿಗಳ ಪಟ್ಟಿಯಲ್ಲಿ ಮುಕೇಶ್

ನವದೆಹಲಿ: ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಅವರು, ಫಾರ್ಚೂನ್‌ ನಿಯತಕಾಲಿಕೆ ಪ್ರಕಟಿಸಿರುವ 2018ರ ವಿಶ್ವದ ಪ್ರಭಾವಿ ಮುಖಂಡರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ವಿಶ್ವದ 50 ಪ್ರಭಾವಿ ಮುಖಂಡರ ಪಟ್ಟಿಯಲ್ಲಿ ಮಾನವ ಹಕ್ಕುಗಳ ಹೋರಾಟಗಾರ್ತಿ ಇಂದಿರಾ ಜೈಸಿಂಗ್‌, ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಅವರೂ ಅವಕಾಶ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಆ್ಯಪಲ್‌ ಸಿಇಒ ಟಿಮ್‌ ಕುಕ್‌, ನ್ಯೂಜಿಲೆಂಡ್‌ ಪ್ರಧಾನಿ ಜಸಿಂಡಾ ಆರ್ಡರ್ನ್‌ ಮತ್ತು ಫುಟಬಾಲ್‌ ಕೋಚ್‌ ನಿಕ್‌ ಸಬನ್‌ ಸೇರಿದ್ದಾರೆ.

ಮುಕೇಶ್‌ ಅಂಬಾನಿ ಅವರು ಅಗ್ಗದ ದರದಲ್ಲಿ ಮೊಬೈಲ್‌ ಡೇಟಾ ಒದಗಿಸಿ ಎರಡು ವರ್ಷಗಳ ಅಲ್ಪಾವಧಿಯಲ್ಲಿ ದೇಶದ ದೂರಸಂಪರ್ಕ ಮಾರುಕಟ್ಟೆಯಲ್ಲಿ ಗಣನೀಯ ಬದಲಾವಣೆ ತಂದಿದ್ದಾರೆ ಎಂದು ನಿಯತಕಾಲಿಕೆಯು ಬಣ್ಣಿಸಿದೆ. ಪಟ್ಟಿಯಲ್ಲಿ ಇವರು 24ನೆ ಸ್ಥಾನದಲ್ಲಿ ಇದ್ದಾರೆ.

‘ಲಾಯರ್ಸ್‌ ಕಲೆಕ್ಟಿವ್‌’ ವೇದಿಕೆ ಸ್ಥಾಪಿಸಿರುವ ಇಂದಿರಾ ಜೈಸಿಂಗ್‌ ಅವರು ಬಡವರಿಗೆ ದನಿಯಾಗಿದ್ದಾರೆ. ಅನ್ಯಾಯದ ವಿರುದ್ಧದ ಹೋರಾಟಕ್ಕೆ ಅವರು ತಮ್ಮ ಜೀವನ ಮುಡಿಪಾಗಿ ಇಟ್ಟಿದ್ದಾರೆ ಎಂದು ತಿಳಿಸಲಾಗಿದೆ. ಇವರು 20ನೇ ಸ್ಥಾನದಲ್ಲಿ ಇದ್ದಾರೆ.

ಭೋಪಾಲ್‌ ಅನಿಲ ದುರಂತದ ಸಂತ್ರಸ್ಥರ ಪರವಾಗಿ ಹೋರಾಟ ನಡೆಸಿದ್ದ ಇಂದಿರಾ, ಕೌಟುಂಬಿಕ ಹಿಂಸೆ ತಡೆ ಕಾಯ್ದೆಯ ಕರಡು ರೂಪಿಸುವಲ್ಲಿಯೂ ಭಾಗವಹಿಸಿದ್ದರು.

43ನೇ ಸ್ಥಾನದಲ್ಲಿ ಇರುವ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಅವರು, ವಾಸ್ತುಶಿಲ್ಪದ ಅತ್ಯುನ್ನತ ಗೌರವವಾಗಿರುವ ಪ್ರಿಟ್ಜಕರ್‌ ಪ್ರಶಸ್ತಿಗೆ ಈ ವರ್ಷ ಪಾತ್ರರಾಗಿದ್ದಾರೆ. ಬಡವರ ವಾಸ್ತುಶಿಲ್ಪಿ ಎಂದೂ ಖ್ಯಾತರಾಗಿದ್ದಾರೆ.

ವಿಶ್ವದ ಪ್ರಭಾವಿ ಮುಖಂಡರನ್ನು ಗುರುತಿಸುವ ಕಾರ್ಯ 2015ರಲ್ಲಿ ಚಾಲನೆಗೆ ಬಂದಿತ್ತು. ಇದುವರೆಗೆ ಪೋಪ್‌ ಫ್ರಾನ್ಸಿಸ್‌, ಏಂಜೆಲಾ ಮರ್ಕೆಲ್‌, ಅಂಗ್‌ ಸಾನ್‌ ಸೂ ಕಿ, ಮಿಲಿಂಡಾ ಗೇಟ್ಸ್‌ ಮತ್ತಿತರರು ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ.

ಸ್ಥಾನ ಪಡೆದ ಭಾರತೀಯರು

* 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ

* 2016ರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌

* 2017ರಲ್ಲಿ ಎಸ್‌ಬಿಐನ ಅಧ್ಯಕ್ಷೆಯಾಗಿದ್ದ ಅರುಂಧತಿ ಭಟ್ಟಾಚಾರ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry