ಮರುವಿಚಾರಣೆಗೆ ಒವೈಸಿ ಆಗ್ರಹ

7

ಮರುವಿಚಾರಣೆಗೆ ಒವೈಸಿ ಆಗ್ರಹ

Published:
Updated:
ಮರುವಿಚಾರಣೆಗೆ ಒವೈಸಿ ಆಗ್ರಹ

ಹೈದರಾಬಾದ್: ಮೆಕ್ಕಾ ಮಸೀದಿ ಬಾಂಬ್ ಸ್ಫೋಟ ಪ್ರಕರಣದ ಮರುವಿಚಾರಣೆ ಆಗಬೇಕು ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಒವೈಸಿ ಆಗ್ರಹಿಸಿದ್ದಾರೆ.

‘ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಪಾಲರಾದ ಇ.ಎಸ್.ಎಲ್. ನರಸಿಂಹನ್ ಅವರನ್ನು ಭೇಟಿ ಮಾಡಿ, ‍ಪ್ರಕರಣದ ವಾಸ್ತವಾಂಶಗಳನ್ನು ಅವರಿಗೆ ತಿಳಿಸುತ್ತೇನೆ’ ಎಂದು ಒವೈಸಿ ಹೇಳಿದ್ದಾರೆ.

‘ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯಲ್ಲಿ ಪ್ರಕರಣದ ಮರುವಿಚಾರಣೆ ನಡೆಸಬಹುದು ಅಥವಾ ಎಲ್ಲಾ ಐದು ಆರೋಪಿಗಳನ್ನು ಖುಲಾಸೆಗೊಳಿಸಿರುವ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು. ಈ ಕುರಿತು ಕೇಂದ್ರ ಸರ್ಕಾರದ ಬಳಿ ಚರ್ಚೆ ನಡೆಸಬೇಕು’ ಎಂದು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಹಾಗೂ ಉಪಮುಖ್ಯಮಂತ್ರಿ ಬಳಿ ಕೇಳಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಎನ್‌ಐಎ ಕುರುಡು, ಕಿವುಡು’: ‘ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ವಕೀಲರನ್ನು ಬದಲಿಸಿತು. ಒಂದೇ ಒಂದು ಹತ್ಯೆ ಪ್ರಕರಣವನ್ನೂ ನಿರ್ವಹಿಸದ ವಕೀಲರಿಗೆ ಈ ಪ್ರಕರಣ ಒಪ್ಪಿಸಲಾಯಿತು. ಎನ್‌ಐಎ ಪಂಜರದ ಗಿಳಿ ಎಂದು ಜನರು ಹೇಳುತ್ತಾರೆ. ಆದರೆ ಈ ಗಿಳಿ ಕುರುಡು ಮತ್ತು ಕಿವುಡು ಸಹ ಹೌದು’ ಎಂದು ಅವರು ಆರೋಪಿಸಿದ್ದಾರೆ.

2007ರ ಮೆಕ್ಕಾ ಮಸೀದಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಾಗಿದ್ದ ದೇವೇಂದ್ರ ಗುಪ್ತಾ, ಲೋಕೇಶ್ ಶರ್ಮಾ, ಸ್ವಾಮಿ ಅಸೀಮಾನಂದ ಅಲಿಯಾಸ್ ನಬಾ ಕುಮಾರ್ ಸರ್ಕಾರ್, ಭರತ್ ಮೋಹನ್‌ಲಾಲ್‌ ರಾತೇಶ್ವರ್ ಅಲಿಯಾಸ್ ಭರತ್ ಭಾಯಿ ಮತ್ತು ರಾಜೇಂದ್ರ ಚೌಧರಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ಕಳೆದ ವಾರ ಖುಲಾಸೆಗೊಳಿಸಿದೆ. ಆರೋಪಿಗಳ ವಿರುದ್ಧದ ಒಂದೇ ಒಂದು ಆರೋಪವೂ ಸಾಬೀತಾಗಿಲ್ಲ.

‘ಆರೋಪಿಗಳ ಪರ ಸರ್ಕಾರ’

‘ಭಯೋತ್ಪಾದಕ ದಾಳಿಯ ಸಂತ್ರಸ್ತರ ಪರವಾಗಿಲ್ಲದೆ ಆರೋಪಿಗಳ ಪರವಾಗಿ ಇರುವ ಮೊದಲ ಸರ್ಕಾರ ಇದು. ಇದು ಬಿಜೆಪಿಯ ಆಡಳಿತ. ಭಯೋತ್ಪಾದನೆ ನಿರ್ಮೂಲನೆ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ನಿಮ್ಮ ಸರ್ಕಾರ ಎಂತಹ ಇಬ್ಬಂದಿ ಧೋರಣೆ ಅನುಸರಿಸುತ್ತಿದೆ? ಕೇಂದ್ರದ ಒಬ್ಬ ಸಚಿವರೂ ತೀರ್ಪಿಗೆ ಪ್ರತಿಕ್ರಿಯಿಸಿಲ್ಲ’ ಎಂದು ಒವೈಸಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry