ವಿನೂತನ ರೀತಿಯ ಉದ್ಘಾಟನೆ!

7

ವಿನೂತನ ರೀತಿಯ ಉದ್ಘಾಟನೆ!

Published:
Updated:
ವಿನೂತನ ರೀತಿಯ ಉದ್ಘಾಟನೆ!

ದೇವರಾಜ ಅರಸು ಅವರನ್ನು ಆರ್‌. ಗುಂಡೂರಾಯರು ದ್ರೋಣಾಚಾರ್ಯರೆಂದೇ ವರ್ಣಿಸಿದ್ದರು. ಅವರ ಮೇಲೆ ಗೌರವವೂ ಬಹಳ. ಅರಸು ಸಹ ಹಾಗೇ ಇದ್ದರು. ಅವರಲ್ಲಿದ್ದ ಮಾನವೀಯತೆ, ಧಾರಾಳತನ, ಹೃದಯವಂತಿಕೆ, ಬೆಂಬಲಿಗರ ಬಗ್ಗೆ ಕಾಳಜಿ ಇವೆಲ್ಲವೂ ರಕ್ತಗತವಾಗಿ ಎಂಬಂತೆ ಗುಂಡೂರಾಯರಲ್ಲಿ ತುಸು ಹೆಚ್ಚೇ ಎನ್ನಿಸುವಂತಿದ್ದವು. ಇಂಥ ಗುಣಗಳನ್ನು ಪಡೆದ ಇನ್ನೊಬ್ಬರೆಂದರೆ ಎಸ್‌. ಬಂಗಾರಪ್ಪ.

ಅರಸು ಸಂಯಮಿಗಳಾಗಿದ್ದರು. ಬಹುಶಃ ಉಳಿದವರಿಬ್ಬರೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸಲಿಲ್ಲವೇನೋ! ಮೂವರೂ ವ್ಯಾಯಾಮ, ದೇಹದಾರ್ಢ್ಯದ ಬಗ್ಗೆ ಬದ್ಧತೆ ಉಳ್ಳವರಾಗಿದ್ದರು. ಅರಸು ಕುಸ್ತಿ ಪ್ರಿಯರು. ಪೈಲ್ವಾನರು ಸಹ. ಗುಂಡೂರಾಯರಂತೂ ಕಂಗಳು ಬಿಟ್ಟೂ ಬಿಡದೇ ನೋಡುವಂತಹ ಶಾರೀರ–ಚೆಲುವು ಉಳ್ಳವರು. ಕಾವೇರಿ ನದಿ ತೀರದಲ್ಲಿ ಹುಟ್ಟಿ ಬೆಳೆದ ಅವರಿಗೆ ಈಜಾಟ ಪಂಚಪ್ರಾಣವಾಗಿತ್ತು. ಜೊತೆಗೆ ಫುಟ್‌ಬಾಲ್‌ ಮತ್ತೊಂದು ಪ್ರಿಯವಾದ ಹವ್ಯಾಸವಾಗಿತ್ತು. ಹಲವು ಬಾರಿ ಅವರು ಕಿಕ್‌ ಮಾಡಿದ್ದ ಚೆಂಡು ‘ಬರ್ಸ್ಟ್’ ಆಗಿತ್ತು ಎಂದು ಕೊಡಗಿನವರೇ ಆದ ಅವರ ಸಮೀಪವರ್ತಿ ಮಾಜಿ ಸಚಿವ, ಜನತಾ ದಳದ ಎಂ.ಸಿ. ನಾಣಯ್ಯ ನೆನಪಿಸಿಕೊಳ್ಳುತ್ತಾರೆ. ಇದರ ಜೊತೆಗೆ ಬಾಲ್‌ ಬ್ಯಾಡ್ಮಿಂಟನ್‌ನಲ್ಲಿ ಗುಂಡೂರಾಯರು ಪ್ರಶಸ್ತಿ ಸಹ ಗಳಿಸಿದ್ದರು. ಬಂಗಾರಪ್ಪನವರ ಟೆನಿಸ್‌ ಪ್ರಸಿದ್ಧವಾದದ್ದು.

ಗುಂಡೂರಾಯರು ತಂಗಿದ್ದಲ್ಲಿ ಈಜುಗೊಳ ಇದ್ದರೆ ತೀರಿತು. ಮನದಣಿಯೆ ಈಜತ್ತಿದ್ದರು. ಅವರು ಈಜಿನಲ್ಲಿ ಯಾವುದೇ ಕ್ರೀಡಾಪಟುವಿಗೂ ಕಡಿಮೆ ಇರಲಿಲ್ಲ. ಕುಸ್ತಿಯ ಬಗ್ಗೆ ವ್ಯಾಮೋಹ ಇತ್ತು. ಮುಖ್ಯಮಂತ್ರಿಯಾದಾಗ ಬೆಳಗಾವಿಯಲ್ಲಿ ಒಮ್ಮೆ ಕುಸ್ತಿಯ ಅಖಾಡ ಇತ್ತು. ಅಲ್ಲಿ ಅವರಿಗೆ ಉತ್ತರ ಕರ್ನಾಟಕದ ಪರಂಪರೆಯಂತೆ ತಲೆಗೆ ರುಮಾಲು ಸುತ್ತಿಸಲಾಗಿತ್ತು. ನೆರೆದ ಹೆಚ್ಚಿನ ಜನ ಇವರನ್ನು ನೋಡುತ್ತಲೇ ಪೈಲ್ವಾನರೆಂದೇ ಬಗೆದು ಹರ್ಷೋದ್ಗಾರ ಮಾಡುತ್ತಿದ್ದರು. ‘ಹಿಂದ್‌ ಕೇಸರಿ’ ಪ್ರಶಸ್ತಿ ಪಡೆದಿದ್ದ ಬೆಳಗಾವಿಯ ಚಂಬಾ ಪೈಲ್ವಾನ್‌ ಮುತ್ನಾಳರ ಕುಸ್ತಿಯನ್ನು ಗುಂಡೂರಾಯರೇ ನೋಡಿ ಆನಂದಿಸಿದ್ದರು.

1980ರ ಉತ್ತರಾರ್ಧದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯು ₹22 ಲಕ್ಷ ವೆಚ್ಚದಲ್ಲಿ ಬಸವನಗುಡಿ ಪ್ರದೇಶದಲ್ಲಿ ಈಜುಗೊಳ ನಿರ್ಮಿಸಿತ್ತು. ಆಗ ಲಕ್ಷ್ಮಣರಾಯರು ಆಡಳಿತಾಧಿಕಾರಿಯಾಗಿದ್ದರು. ಅದರ ಉದ್ಘಾಟನೆಗೆ ಬಸವನಗುಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಡ್ಡ ಬಂದಿದ್ದರಿಂದ ಮುಂದಕ್ಕೆ ಹೋಗಿತ್ತು. 1981ರ ಮೇ ತಿಂಗಳಲ್ಲಿ ನಡೆಯಲಿದ್ದ ಏಷ್ಯಾ ಈಜು ಚಾಂಪಿಯನ್‌ಶಿ‍‍ಪ್‌  ಇದೇ ಈಜುಗೊಳದಲ್ಲಿ ನಡೆಯಬೇಕಿತ್ತು. ಶ್ರೇಷ್ಠ ಈಜುಗಾರರಾದ ಗುಂಡೂರಾಯರು ರಿಬ್ಬನ್‌ ಕಟ್‌ ಮಾಡಿ ಸಾಂಪ್ರದಾಯಿಕ ಶೈಲಿಯಲ್ಲಿ ಉದ್ಘಾಟನೆ ಮಾಡುವ ಬದಲು, ಸ್ವತಃ ಈಜಿ ಉದ್ಘಾಟಿಸಬೇಕು ಎಂಬ ಒತ್ತಾಸೆಯನ್ನೂ ಸಂಘಟಕರು ಮಾಡಿದ್ದರು.

20.01.1981ರಂದು ಈಜುಗೊಳದ ಉದ್ಘಾಟನೆಯನ್ನು ಸಂಪ್ರದಾಯದಂತೆ ನೆರವೇರಿಸಿದ ಗುಂಡೂರಾವ್‌ ನಂತರ ಡ್ರೆಸ್ಸಿಂಗ್‌ ರೂಮಿಗೆ ತೆರಳಿ ಬಟ್ಟೆ ಬದಲಾಯಿಸಿಕೊಂಡು ಬಂದರು. ಅವರ ಜೊತೆಗೆ ಜನತಾ ಪಕ್ಷದ ಶಾಸಕ ಹಾಗೂ ಅಖಿಲ ಭಾರತ ಈಜು ಮಹಾಮಂಡಲದ ಕಾರ್ಯದರ್ಶಿ, ಬ್ರಹ್ಮಚಾರಿಗಳಾಗಿದ್ದ ಪಿ.ರಾಮದೇವ ಸಹ ಇದ್ದರು. ಇಬ್ಬರೂ ಈಜುಗೊಳದಲ್ಲಿ ಐದು ನಿಮಿಷಗಳ ಕಾಲ ಈಜಿದರು.

ಆಗ ಬೆಂಗಳೂರು (ದಕ್ಷಿಣ) ಭಾಗದ ಲೋಕಸಭಾ ಸದಸ್ಯ ಜನತಾ ಪಕ್ಷದ ಟಿ.ಆರ್‌. ಶಾಮಣ್ಣ ಸಹ ಇದ್ದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಗುಂಡೂರಾಯರು, ಶ್ರೇಷ್ಠ ಈಜುಗಾರರಿಗೆ ತಮ್ಮ ತಂದೆ ದಿವಂಗತ ಕೆ. ರಾಮರಾಯರ ಹೆಸರಿನಿಂದ ₹10 ಸಾವಿರ ಬೆಲೆಯ ಶೀಲ್ಡು ಕೊಡುವುದಾಗಿ ಪ್ರಕಟಿಸಿದರು.

ನಡೆದ ವಿಷಯ ಇಷ್ಟು. ಆದರೆ, ಕೆಲ ಪತ್ರಿಕೆಗಳು ಸಂಪೂರ್ಣ ವರದಿ ಹಾಗೂ ಹಿನ್ನೆಲೆಯ ಸಂದರ್ಭ ನೀಡುವ ಬದಲು, ಮುಖ್ಯಮಂತ್ರಿ ಗುಂಡೂರಾಯರು ಈಜುಗೊಳದಲ್ಲಿ ‘ಧಡಕ್ಕನೆ ಡೈ ಹೊಡೆದು’ ಉದ್ಘಾಟನೆ ನೆರವೇರಿಸಿದರು ಎಂದು ವಿಕೃತಗೊಳಿಸಿ ಪ್ರಕಟಿಸಿದ್ದವು.

ಸಾಂಪ್ರದಾಯಿಕ ಮನೋಭಾವದ ಜನರಿಗೆ ಇದರಿಂದ ಕಸಿವಿಸಿ ಉಂಟಾಯಿತು. ಆದರೆ, ರಾಜಕೀಯ ರಹಿತರಾಗಿದ್ದ ಹಲವರು ಇಂಥ ಹೊಸ ಪರಂಪರೆಯನ್ನು ಮೆಚ್ಚಿಕೊಂಡರು.

– ಮನೋಜ್‌ ಪಾಟೀಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry