ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

7
ಪಾಟೀಲ ಬೆಂಬಲಿಗರಿಂದ ಶೆಟ್ಟರ್‌ ಮನೆ ಎದುರು ಪ್ರತಿಭಟನೆ

ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

Published:
Updated:
ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

ಹುಬ್ಬಳ್ಳಿ: ಕುಂದಗೋಳ ಕ್ಷೇತ್ರದ ಬಿಜೆಪಿ ಟಿಕೆಟ್‌ ಅನ್ನು ಮುಖಂಡ ಎಂ.ಆರ್. ಪಾಟೀಲ ಅವರಿಗೇ ನೀಡಬೇಕು ಎಂದು ಒತ್ತಾಯಿಸಿ ಪಾಟೀಲ ಕುಟುಂಬ ಸದಸ್ಯರು ಹಾಗೂ ಬೆಂಬಲಿಗರು ಶೆಟ್ಟರ್‌ ಮನೆ ಎದುರು ಗುರುವಾರ ಸಂಜೆ ಪ್ರತಿಭಟನೆ ಸಂದರ್ಭದಲ್ಲಿ ಬೆಂಬಲಿಗನೊಬ್ಬ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.

ಕುಂದಗೋಳ ತಾಲ್ಲೂಕು ಘಟಕದ ಯುವ ಮೋರ್ಚಾ ಉಪಾಧ್ಯಕ್ಷ ಕಲ್ಮೇಶ ಬೆಳವಟಗಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಉಳಿದವರು ಅವರನ್ನು ಸಮಾಧಾನಗೊಳಿಸಿದರು.

ಶೆಟ್ಟರ್‌ ಅವರನ್ನು ಭೇಟಿಯಾದ ಪಾಟೀಲ ಅವರ ತಾಯಿ ಶಾರದಾಬಾಯಿ ಪಾಟೀಲ ಅವರು ಮಗನಿಗೆ ಟಿಕೆಟ್‌ ನೀಡುವಂತೆ ಕೈ ಮುಗಿದು ಮನವಿ ಮಾಡಿದರು. ಆಗ ಪಾಟೀಲ ಕುಟುಂಬದ ಕೆಲ ಸದಸ್ಯರು ಕಣ್ಣೀರಿಟ್ಟರು.

ಇದಕ್ಕೂ ಮೊದಲು ಪ್ರತಿಭಟನೆ ಮಾಡುತ್ತಿದ್ದವರಲ್ಲಿ ಕೆಲವರನ್ನು ಕರೆದು ಮಾತುಕತೆ ನಡೆಸಿದ ಶೆಟ್ಟರ್‌, ‘ನಾನು, ಪಕ್ಷದ ಅಧ್ಯಕ್ಷನಲ್ಲ. ನನ್ನನ್ನು ಕೇಳಿ ಯಾರಿಗೆ ಟಿಕೆಟ್‌ ಕೊಡಬೇಕು ಎಂಬ ನಿರ್ಧಾರ ಆಗುವುದಿಲ್ಲ. ಆದಾಗ್ಯೂ, ಪಾಟೀಲ ಅವರಿಗೇ ಟಿಕೆಟ್‌ ಕೊಡಲು ಪರಿಶೀಲಿಸಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೂ ಮನವರಿಕೆ ಮಾಡಿಕೊಡಲಾಗಿದೆ’ ಎಂದರು.

ಪದೇ ಪದೇ ಸಮಸ್ಯೆ ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಬೆಂಬಲಿಗರು ಹಳೇ ವರಸೆ ಮುಂದುವರಿಸಿದಾಗ ತಾಳ್ಮೆ ಕಳೆದುಕೊಂಡ ಶೆಟ್ಟರ್‌, ‘ನನ್ನ ಮನೆ ಮುಂದೇಕೆ ಪ್ರತಿಭಟನೆ ಮಾಡುತ್ತಿದ್ದೀರಿ. ಪಕ್ಷದ ಕಚೇರಿ ಇದೆ. ಅಲ್ಲಿ ಮಾಡಿ’ ಎಂದು ಹೇಳಿದರು. ಟಿಕೆಟ್‌ ಖಚಿತವಾಗಿರುವವರೆಗೂ ನಾವು ಧರಣಿ ಕೈಬಿಡುವುದಿಲ್ಲ ಎಂದು ಬೆಂಬಲಿಗರು ಪಟ್ಟು ಹಿಡಿದರು.

ಮತ್ತೆ ಪ್ರಮುಖ ಮುಖಂಡರನ್ನು ಕರೆಸಿಕೊಂಡ ಶೆಟ್ಟರ್‌, ‘ಗುರುವಾರ ರಾತ್ರಿಯೂ ಪಕ್ಷದ ವರಿಷ್ಠರೊಂದಿಗೆ ಮಾತನಾಡುತ್ತೇನೆ’ ಎಂದು ಭರವಸೆ ನೀಡಿದರು. ಆ ಬಳಿಕವೂ ಪ್ರತಿಭಟನೆ ಮುಂದುವರಿದಿತ್ತು.

ಅಂತಿಮವಾಗಿ ಸಂಸದ ಪ್ರಹ್ಲಾದ ಜೋಶಿ ಅವರೂ ಶೆಟ್ಟರ್‌ ಮನೆಗೆ ಧಾವಿಸಿ ಪ್ರತಿಭಟನಾಕಾರರೊಂದಿಗೆ ಸಂಧಾನ ನಡೆಸಿದರು. ಟಿಕೆಟ್‌ ಕೊಡಿಸುವ ಭರವಸೆ ದೊರೆತ ಬಳಿಕ ಧರಣಿ ವಾಪಸ್‌ ಪಡೆದರು.

ಮುಂಜಾಗೃತಾ ಕ್ರಮವಾಗಿ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್‌)ಯನ್ನು ಶೆಟ್ಟರ್‌ ಮನೆಯ ಬಳಿ ನಿಯೋಜಿಸಲಾಗಿತ್ತು.

ಪಾಟೀಲ ಅವರ ತಂಗಿ ಪುಷ್ಪಾ, ಪತ್ನಿ ಶಶಿಕಲಾ, ಮಕ್ಕಳಾದ ಐಶ್ವರ್ಯಾ, ಶ್ರುತಿ, ಪ್ರತೀಕ್ಷಾ, ರಚನಾ ಹಾಗೂ ಕುಟುಂಬ ಸದಸ್ಯರಾದ ಜಯಶ್ರೀ ಪಾಟೀಲ, ಶೈಲಾ ಅಪ್ಪಾಸಾಹೇಬ ಪಾಟೀಲ, ಗೀತಾ, ರೇಖಾ, ತಾಲ್ಲೂಕು ಪಂಚಾಯ್ತಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

‘ಪಕ್ಷ ಒಡೆದರೆ ವಿರೋಧಿಗಳಿಗೆ ಅನುಕೂಲ’

ಎಂ.ಆರ್‌. ಪಾಟೀಲ ಅವರಿಗೆ ಟಿಕೆಟ್‌ ಕೊಟ್ಟರೆ ಎಸ್‌.ಐ. ಚಿಕ್ಕನಗೌಡ್ರ ಬೆಂಬಲಿಗರು ಧರಣಿ ಮಾಡುತ್ತಾರೆ. ಚಿಕ್ಕನಗೌಡ್ರ ಅವರಿಗೆ ಕೊಟ್ಟರೆ ಪಾಟೀಲ ಬೆಂಬಲಿಗರು ಚುನಾವಣೆಯಲ್ಲಿ ಪಕ್ಷದ ವಿರುದ್ಧವಾಗಿ ಕೆಲಸ ಮಾಡುತ್ತಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ–ಕೆಜೆಪಿ ಪಕ್ಷದ ಮಧ್ಯೆ ತಿಕ್ಕಾಟದಿಂದಾಗಿ ಕಾಂಗ್ರೆಸ್‌ನ ಸಿ.ಎಸ್‌. ಶಿವಳ್ಳಿ ಗೆದ್ದರು. ಈ ಬಾರಿಯೂ ಹೀಗೇ ಮುಂದುವರಿದರೆ ವಿರೋಧಿಗಳು ಗೆಲ್ಲುವ ಸಾಧ್ಯತೆ ಇದೆ ಎಂದು ಜಗದೀಶ ಶೆಟ್ಟರ್‌ ಆತಂಕ ವ್ಯಕ್ತಪಡಿಸಿದರು.

ಪ್ರತಿಭಟನೆ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಲ್ಲರಿಗೂ ಟಿಕೆಟ್‌ ನೀಡುವುದು ಸಾಧ್ಯವಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಎಲ್ಲರೂ ಒಂದಾಗಿ ಪಕ್ಷದ ಅಭ್ಯರ್ಥಿ ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದರು.

10ಕ್ಕೂ ಅಧಿಕ ಬಹಿರಂಗ ಸಭೆಯಲ್ಲಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯದಾದ್ಯಂತ 10ಕ್ಕೂ ಅಧಿಕ ಬಹಿರಂಗ ಸಭೆಗಳಲ್ಲಿ ಪಾಲ್ಗೊಂಡು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಹುಬ್ಬಳ್ಳಿಯಲ್ಲಿಯೂ ಬಹಿರಂಗ ಸಭೆ ನಡೆಯಲಿದೆ ಎಂದು ಶೆಟ್ಟರ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry