ಶಾಸಕ ಎಚ್.ವೈ.ಮೇಟಿ ನಾಮಪತ್ರ ಸಲ್ಲಿಕೆ

7
ದಂಪತಿ ಹೆಸರಲ್ಲಿ ₹ 8.31 ಕೋಟಿ ಮೌಲ್ಯದ ಆಸ್ತಿ

ಶಾಸಕ ಎಚ್.ವೈ.ಮೇಟಿ ನಾಮಪತ್ರ ಸಲ್ಲಿಕೆ

Published:
Updated:
ಶಾಸಕ ಎಚ್.ವೈ.ಮೇಟಿ ನಾಮಪತ್ರ ಸಲ್ಲಿಕೆ

ಬಾಗಲಕೋಟೆ: ಶಾಸಕ ಎಚ್.ವೈ.ಮೇಟಿ ಗುರುವಾರ ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಪಾರ ಬೆಂಬಲಿಗರೊಂದಿಗೆ ನವನಗರದ ಉಪವಿಭಾಗಾಧಿಕಾರಿ ಕಚೇರಿಗೆ ಬಂದ ಮೇಟಿ, ಚುನಾವಣಾಧಿಕಾರಿ ಎಚ್.ಜಯಾ ಅವರಿಗೆ ನಾಮಪತ್ರ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ‘ಪಕ್ಷ ಸ್ಪರ್ಧಿಸುವಂತೆ ನನಗೆ ಬಿ–ಫಾರಂ ನೀಡಿದೆ. ಚುನಾವಣಾ ನೀತಿ ನಿಯಮದಂತೆ ನಾಮಪತ್ರ ಸಲ್ಲಿಸಿದ್ದೇನೆ. ಮತ್ತೊಮ್ಮೆ ಕ್ಷೇತ್ರದ ಜನತೆ ಬೆಂಬಲಿಸಿ, ಆಶೀರ್ವದಿಸುವಂತೆ’ ಮನವಿ ಮಾಡುವೆ ಎಂದರು.

ಆಸ್ತಿ ವಿವರ: ಮೇಟಿ ಹಾಗೂ ಪತ್ನಿ ಲಕ್ಷ್ಮೀದೇವಿ ಹೆಸರಿನಲ್ಲಿ ಒಟ್ಟು ₹ 8.31 ಕೋಟಿ ಮೌಲ್ಯದ ಆಸ್ತಿ ಇರುವ ಬಗ್ಗೆ ನಾಮಪತ್ರ ಸಲ್ಲಿಕೆ ವೇಳೆ ಚುನಾವಣೆ ಆಯೋಗಕ್ಕೆ ಅಫಿಡವಿಟ್‌ ಸಲ್ಲಿಸಲಾಗಿದೆ. ಮೇಟಿ ಹೆಸರಲ್ಲಿ ಒಟ್ಟು ₹ 95.30 ಲಕ್ಷ ಮೌಲ್ಯದ ಚರಾಸ್ತಿ ಇದೆ. ಅದರಲ್ಲಿ ತಲಾ ₹ 8 ಲಕ್ಷದ ಹುಂಡೈ ಹಾಗೂ ರೆನಾಲ್ಟ್‌ ಸ್ಕಾಲಾ, ₹ 16 ಲಕ್ಷ ವೆಚ್ಚದ ಇನ್ನೋವಾ ಕಾರು, ಪಿತ್ರಾರ್ಜಿತವಾಗಿ ಬಂದ 800 ಗ್ರಾಂ ಚಿನ್ನಾಭರಣ, ಠೇವಣಿಗಳ ಹೊರತಾಗಿ ₹ 9.10 ಲಕ್ಷ ನಗದು ಇದೆ. ಮೇಟಿ ಹೆಸರಿನಲ್ಲಿ ಒಟ್ಟು ₹ 4.77 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಅದರಲ್ಲಿ ₹ 4.10 ಕೋಟಿ ಮೌಲ್ಯದ ಆಸ್ತಿ ಪಿತ್ರಾರ್ಜಿತವಾಗಿ ಬಂದಿದೆ.

ಮೇಟಿ ಪತ್ನಿ ಲಕ್ಷ್ಮೀದೇವಿ ಒಟ್ಟು ₹ 15.24 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅದರಲ್ಲಿ 500 ಗ್ರಾಂ ಚಿನ್ನಾಭರಣ, ₹ 1 ಲಕ್ಷ ನಗದು ಸೇರಿದೆ. ₹ 2.5 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅದು ಪಿತ್ರಾರ್ಜಿತವಾಗಿ ಬಂದಿದೆ. ಶಾಸಕ ಮೇಟಿ ₹ 43.19 ಲಕ್ಷ ಹಾಗೂ ಲಕ್ಷ್ಮೀದೇವಿ ಹೆಸರಿನಲ್ಲಿ ₹ 19.50 ಲಕ್ಷ ಸಾಲ ಇದೆ.

8ನೇ ತರಗತಿವರೆಗೆ ವ್ಯಾಸಂಗ: ಒಕ್ಕಲುತನ ಆದಾಯದ ಮೂಲ ಎಂದು ಹೇಳಿದ್ದಾರೆ. ಯಾವುದೇ ಕ್ರಿಮಿನಲ್‌ ಪ್ರಕರಣ ಇಲ್ಲ. ವಿಜಯಪುರ ಜಿಲ್ಲೆ ಆಲಮಟ್ಟಿಯ ಆರ್‌.ಬಿ.ಪಿ.ಜಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿವರೆಗೆ ಓದಿರುವುದಾಗಿ ಶಾಸಕ ಮೇಟಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ, ಶಾಸಕ ಜೆ.ಟಿ.ಪಾಟೀಲ, ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಸೌದಾಗರ, ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಈಟಿ, ನಗರಸಭೆ ಸದಸ್ಯ ಹನುಮಂತ ರಾಕುಂಪಿ, ನಾಗರಾಜ ಹದ್ಲಿ, ಎ.ಡಿ.ಮೊಕಾಶಿ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry