ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಕ್ಷೇತ್ರದಲ್ಲಿ 301 ಜನ ಸ್ಪರ್ಧೆ!

1985ರಲ್ಲಿ ಬೆಳಗಾವಿ ಉತ್ತರ ಕ್ಷೇತ್ರ ವಿಧಾನಸಭಾ ಚುನಾವಣೆಯ ವಿಶೇಷ
Last Updated 20 ಏಪ್ರಿಲ್ 2018, 5:20 IST
ಅಕ್ಷರ ಗಾತ್ರ

ಬೆಳಗಾವಿ: 1985ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್‌, ಜನತಾ ಪಕ್ಷದ ಅಭ್ಯರ್ಥಿಗಳು ಸೇರಿದಂತೆ 301 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಂದೇ ಕ್ಷೇತ್ರದಲ್ಲಿ ಇಷ್ಟೊಂದು ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದು ರಾಷ್ಟ್ರಮಟ್ಟದ ಸುದ್ದಿಯಾಗಿತ್ತು.
ಗಿನ್ನೆಸ್‌ ದಾಖಲೆಗೂ ಸೇರ್ಪಡೆ ಆಯಿತು.

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಬೆಂಬಲಿತ ಅಭ್ಯರ್ಥಿಗಳು ಬೋಗಸ್‌ ಮತದಾನ ನಡೆಸುತ್ತಾರೆ. ಇದನ್ನು ತಡೆಯಬೇಕು ಹಾಗೂ ಮತದಾರರಿಗೆ ಗುರುತಿನ ಚೀಟಿ ನೀಡಬೇಕು ಎಂದು ಒತ್ತಾಯಿಸಿ ಅಂದಿನ ಕನ್ನಡ ಪತ್ರಿಕೆಗಳ ಸಂಪಾದಕರು, ಪತ್ರಕರ್ತರು ಸುಮಾರು 300 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಕೆಲವು ಜನರು ನಾಮಪತ್ರ ವಾಪಸ್‌ ಪಡೆದರು. ಅಂತಿಮವಾಗಿ 298 ಅಭ್ಯರ್ಥಿಗಳು ಕಣದಲ್ಲಿ ಉಳಿದರು. ಕಾಂಗ್ರೆಸ್‌, ಜನತಾ ಪಕ್ಷ ಹಾಗೂ ಎಂಇಎಸ್‌ನ ತಲಾ ಒಬ್ಬೊಬ್ಬರು ಸೇರಿದಂತೆ ಒಟ್ಟು 301 ಅಭ್ಯರ್ಥಿಗಳು ಚುನಾವಣೆ ಎದುರಿಸಿದರು.

ತಲೆಬಿಸಿ ಆಗಿದ್ದ ಮತಪತ್ರ ಮುದ್ರಣ: ಇಷ್ಟೊಂದು ಅಭ್ಯರ್ಥಿಗಳ ಚುನಾವಣೆ ಮಾಡುವುದನ್ನು ಆಯೋಗವು ಸವಾಲಾಗಿ ಸ್ವೀಕರಿಸಿತು.

ಅಭ್ಯರ್ಥಿಗಳ ಹೆಸರು, ಕ್ರಮ ಸಂಖ್ಯೆ, ಚಿಹ್ನೆಯನ್ನು ಮುದ್ರಿಸಿತು. ಮತಪತ್ರವು ಅಂದಾಜು 3x4 ಅಡಿ ಅಳತೆಯಾಗಿತ್ತು. ಎರಡೂ ಬದಿ ಮುದ್ರಿಸಲಾಗಿತ್ತು. ಪ್ರತಿಯೊಂದು ವಾರ್ಡ್‌ಗಳಲ್ಲಿ ಮತಪತ್ರದ ನಕಲುಪ್ರತಿಯನ್ನು ಅಂಟಿಸಿ, ಮತದಾರರಿಗೆ ಅರಿವು ಮೂಡಿಸಿತು.

ಸುಸ್ತಾಗಿದ್ದ ಮತದಾರರು: ಮತ ಚಲಾಯಿಸುವ ವೇಳೆ ತಮ್ಮ ಅಭ್ಯರ್ಥಿಗಳ ಹೆಸರನ್ನು ಹುಡುಕಿ ಹುಡುಕಿ ಮತದಾರರು ಸುಸ್ತಾಗಿ
ದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶಿವಾಜಿರಾವ್‌ ಕಾಕತಕರ ಅವರ ಹೆಸರು 48ರ ಕ್ರಮಸಂಖ್ಯೆಯಲ್ಲಿತ್ತು. ಜನತಾ ಪಕ್ಷದ ಅಭ್ಯರ್ಥಿ ರಾಜೇಂದ್ರ ಗೋವರ್ಧನ ಚಿಂಡಕ ಅವರ ಹೆಸರು 86ರ ಕ್ರಮ ಸಂಖ್ಯೆಯಲ್ಲಿತ್ತು.

ಎಂಇಎಸ್‌ ಬೆಂಬಲಿತ ರಾಜಾಬಾವು ಶಂಕರರಾವ ಮಾನೆ ಅವರ ಹೆಸರು 193 ಕ್ರಮಸಂಖ್ಯೆಯಲ್ಲಿತ್ತು. ಅಷ್ಟಾಗಿಯೂ ಅವರು 32,401 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿ, ಎಂಇಎಸ್ವಿ ಜಯದ ನಗೆ ಬೀರಿತ್ತು.

ನಿಯಮ ಬದಲಾವಣೆಗೆ ಕಾರಣವಾದ ಚುನಾವಣೆ

‘ಈ ಚುನಾವಣೆಯ ನಂತರ ಚುನಾವಣಾ ಆಯೋಗ ತನ್ನ ಕೆಲವು ನಿಯಮಗಳಲ್ಲಿ ಬದಲಾವಣೆ ತಂದಿತು. ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳಿಗೆ ಇದ್ದ ₹ 200 ಶುಲ್ಕವನ್ನು ₹ 10,000ಕ್ಕೆ ಹೆಚ್ಚಿಸಿತು. ರಾಷ್ಟ್ರೀಯ ಪಕ್ಷಗಳ ಹಾಗೂ ಪ್ರಬಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಇತರ ಅಭ್ಯರ್ಥಿಗಳು ಮೃತರಾದರೆ ಚುನಾವಣೆಯನ್ನು ಮುಂದೂಡದಿರಲು ನಿರ್ಣಯ ಕೈಗೊಂಡಿತು. ಮತದಾರರಿಗೆ ಗುರುತಿನ ಚೀಟಿ ನೀಡಬೇಕೆನ್ನುವ ನಮ್ಮ ಬೇಡಿಕೆ ರಾಷ್ಟ್ರಮಟ್ಟಕ್ಕೆ ತಲುಪಿತು’ ’ ಎಂದು ಅಂದು ಸ್ಪರ್ಧಿಸಿದ್ದ ಅಶೋಕ ಚಂದರಗಿ ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT