4
ಉಮೇದುವಾರಿಕೆ ಸಲ್ಲಿಸಿದ ನಂಜುಂಡಸ್ವಾಮಿ, ವಾಟಾಳ್‌ ನಾಗರಾಜ್‌, ರಂಗಸ್ವಾಮಿ

ಮೂವರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

Published:
Updated:

ಚಾಮರಾಜನಗರ: ನಾಮಪತ್ರ ಸಲ್ಲಿಕೆಯ 2ನೇ ದಿನವಾದ ಗುರುವಾರ ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಇಬ್ಬರು ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರು ನಾಮಪತ್ರ ಸಲ್ಲಿಸಿದರು. ಹನೂರು ಹಾಗೂ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ವಕೀಲ ರಂಗಸ್ವಾಮಿ ಅವರು ಬೆಂಬಲಿಗರಾದ ರಂಗಸ್ವಾಮಿ, ಪ್ರವೀಣ್‌, ನಾರಾಯಣಸ್ವಾಮಿ, ನಾರಾಯಣ ಹಾಗೂ ಶಿವಣ್ಣ ಅವರೊಂದಿಗೆ ತಾಲ್ಲೂಕು ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು.

ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಅವರು ಮಗಳು ಅನುಪಮ, ಮೊಮ್ಮಗ ಚಂದನ್ ಹಾಗೂ ಬೆಂಬಲಿಗರೊಂದಿಗೆ ನಗರದ ಕೊಳದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುವ ಜತೆಗೆ, ಕ್ಷೇತ್ರದಲ್ಲಿ 2 ಉಪನಗರಗಳನ್ನು ಸ್ಥಾಪಿಸುತ್ತೇನೆ. 2ನೇ ಹಂತ ಕುಡಿಯುವ ನೀರು ಯೋಜನೆ ಜಾರಿಗೊಳಿಸುವ ಮೂಲಕ ಜಿಲ್ಲಾ ಕೇಂದ್ರಕ್ಕೆ ದಿನದ 24 ಗಂಟೆ ನೀರು ಪೂರೈಸುತ್ತೇನೆ ಎಂದು ಭರವಸೆ ನೀಡಿದರು.

ಕೊಳ್ಳೇಗಾಲ ವರದಿ: ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅವರು ಗುರುವಾರ 2 ನಾಮಪತ್ರಗಳನ್ನು ಸಲ್ಲಿಸಿದರು.

ನಗರದ ಬಸ್‍ನಿಲ್ದಾಣದ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಿಷ್ಣುವರ್ಧನ್ ರಸ್ತೆ, ಡಾ.ರಾಜ್‍ಕುಮಾರ್ ರಸ್ತೆ, ಮಸೀದಿ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಎಡಿಬಿ ವೃತ್ತದವರೆಗೆ ನೂರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದರು.

ನಂತರ ಉಪವಿಭಾಗಾಧಿಕಾರಿಗಳ ಕಚೇರಿಗೆ ಸಂಸದ ಪ್ರತಾಪ್‌ಸಿಂಹ, ಮುಖಂಡರಾದ ಪರಿಮಳಾ ನಾಗಪ್ಪ, ಎಂ.ರಾಮಚಂದ್ರ, ಟೌನ್ ಪ್ರಧಾನ ಕಾರ್ಯದರ್ಶಿ ಜಿ.ಪಿ.ಶಿವಕುಮಾರ್ ಅವರೊಂದಿಗೆ ತೆರಳಿ ಉಪವಿಭಾಗಾಧಿಕಾರಿ ಬಿ.ಫೌಜಿಯಾ ತರನ್ನಮ್‌ ಅವರಿಗೆ ನಾಮಪತ್ರ ಸಲ್ಲಿಸಿದರು.

ಸಂಸದ ಪ್ರತಾಪ್‍ಸಿಂಹ ಮಾತನಾಡಿ, ಕ್ಷೇತ್ರದಲ್ಲಿ ನವಶಕ್ತಿ ಸಮಾರಂಭಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ ಶಾ ಬಂದಿದ್ದಾರೆ. ಅವರ ಭೇಟಿಯ ಉದ್ದೇಶ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಬೇಕು ಎನ್ನುವುದು. ಹಾಗಾಗಿ, ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಮೂಲಕ ಅಮಿತ್‌ ಶಾ ಅವರ ಕನಸ್ಸನ್ನು ಈಡೇರಿಸಬೇಕು ಎಂದು ತಿಳಿಸಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಅವರ ಪಕ್ಕದಲ್ಲಿ ಶಾಸಕರಾಗಿ ನಂಜುಂಡಸ್ವಾಮಿ ಇರಬೇಕು. ಅದಕ್ಕಾಗಿ ಎಲ್ಲರೂ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಅಭ್ಯರ್ಥಿ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ಮತದಾರರು ಕ್ಷೇತ್ರದ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬಿಜೆಪಿಗೆ ಅಧಿಕಾರ ನೀಡಲು ನಿರ್ಧಾರ ಮಾಡಿದ್ದಾರೆ. ಆ ಮೂಲಕ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರನ್ನು ಮತ್ತೆ

ಅಧಿಕಾರಕ್ಕೆ ತರಲು ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ತಿಳಿಸಿದರು.

ಮೆರವಣಿಗೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಮಲ್, ತಾಲ್ಲೂಕು ಪಂಚಾಯಿತಿ ಸದಸ್ಯ ಕೃಷ್ಣಪ್ಪ, ಟೌನ್ ಅಧ್ಯಕ್ಷ ರಮೇಶ್ ಮುರಾರಿ, ಮುಖಂಡರಾದ ದತ್ತೇಶ್, ಬಸವರಾಜು, ಶಿವಮೂರ್ತಿ, ಕೆ.ಕೆ.ನಟರಾಜು, ನಾಗರಾಜು, ಪ್ರಜ್ವಲ್ ಹಾಜರಿದ್ದರು.

ಅಭ್ಯರ್ಥಿಗಳ ಆಸ್ತಿ ವಿವರ

ರಂಗಸ್ವಾಮಿ (ಪಕ್ಷೇತರ ಅಭ್ಯರ್ಥಿ)

ವಿದ್ಯಾರ್ಹತೆ ಎಲ್‌ಎಲ್‌ಬಿ,  ವೃತ್ತಿ: ವಕೀಲರು, ನಗದು ₹ 2.50 ಲಕ್ಷ ಬ್ಯಾಂಕಿನಲ್ಲಿ ₹ 2 ಸಾವಿರ, ಎಲ್‌ಐಸಿ  ₹ 1 ಲಕ್ಷ , ಒಂದು ಕಾರು ಮತ್ತು ಸ್ಕೂಟರ್, 15 ಗ್ರಾಂ ಚಿನ್ನ, ಪತ್ನಿ ಬಳಿ 139 ಗ್ರಾಂ ಚಿನ್ನ,ಚರಾಸ್ತಿ ಒಟ್ಟು ಮೌಲ್ಯ ₹ 3.03 ಲಕ್ಷ, ಪತ್ನಿ ಹೆಸರಿನಲ್ಲಿ ₹ 3 .90 ಲಕ್ಷ, ಚರಾಸ್ತಿ ಒಟ್ಟು ಮೌಲ್ಯ ₹ 3.52 ಲಕ್ಷ

ವಾಟಾಳ್ ನಾಗರಾಜ್

ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ. ನಗದು ₹ 60 ಸಾವಿರ, ಪತ್ನಿ ಬಳಿ ನಗದು ₹ 30 ಸಾವಿರ, ಬ್ಯಾಂಕಿನಲ್ಲಿರುವ ಹಣ ₹ 1 ಲಕ್ಷ, ಪತ್ನಿ ಹೆಸರಿನಲ್ಲಿ ₹ 8 ಸಾವಿರ, ಸ್ಕ್ರಾಪಿಯೊ ವಾಹನ, ₹ 23 ಸಾವಿರ ಮೌಲ್ಯದ ಚಿನ್ನ, ಪತ್ನಿ ಬಳಿ ₹ 93,600

ಮೌಲ್ಯದ ಚಿನ್ನ, ಒಟ್ಟು ಚರಾಸ್ತಿ ಮೌಲ್ಯ ₹ 5.95 ಲಕ್ಷ, ಪತ್ನಿ ಬಳಿ ಚರಾಸ್ತಿ ಮೌಲ್ಯ ₹ 1.41 ಲಕ್ಷ, ಸ್ಥಿರಾಸ್ತಿ ಒಟ್ಟು ಮೌಲ್ಯ ₹ 3.46ಕೋಟಿ, ಪತ್ನಿ ಬಳಿ ಸ್ಥಿರಾಸ್ತಿ ₹14.49 ಕೋಟಿ. ಪತ್ನಿ ಹೆಸರಿನಲ್ಲಿ ಬ್ಯಾಂಕಿನಲ್ಲಿ ₹16.81 ಲಕ್ಷ ಸಾಲ

ಜಿ.ಎನ್.ನಂಜುಂಡಸ್ವಾಮಿ

ವಿದ್ಯಾರ್ಹತೆ: ಎಂ.ಎ ಮತ್ತು ಎಲ್‌ಎಲ್‌ಬಿ ಪದವಿ. ನಗದು ಹಣ ₹ 67 ಲಕ್ಷ, ಬ್ಯಾಂಕಿನಲ್ಲಿ ₹ 1.66 ಕೋಟಿ, ಎಲ್.ಐ.ಸಿ. ಪಾಲಿಸಿ ₹ 12.50 ಕೋಟಿ, 2 ಕಾರು, ಇನೋವಾ ಕಾರು, ಸ್ಕೊಡಾ ಕಾರು, 1ಲಾರಿ. 1ಆಟೊ, 4 ಬೈಕ್, ಚಿನ್ನ 25 ಗ್ರಾಂ, 19 ಎಕರೆ ಗದ್ದೆ, ವ್ಯಾಣಿಜ್ಯ ಮಳಿಗೆ 1 ಕೋಳಿ ಫಾರಂ, 1 ಗ್ಯಾಸ್ ಏಜೆನ್ಸಿ, ₹ 2.49 ಕೋಟಿ ವೆಚ್ಚ್ಚ ಮೊತ್ತ.

ಮನೆಗಳು: ಕೊಳ್ಳೇಗಾಲದಲ್ಲಿ 1 ಮನೆ, ಬೆಂಗಳೂರಿನಲ್ಲಿ 2 ಮನೆ, 16 ಕೋಟಿ ಮನೆ ವೆಚ್ಚ, ಅವರ ಪತ್ನಿಯ ನಗದುಹಣ ₹ 12.7 ಲಕ್ಷ, ಹಾಗೂ ಅವರ ತಂದೆಯ ನಗದು ₹ 25 ಲಕ್ಷ, ಮಗನ ನಗದು ಹಣ, 35 ಸಾವಿರ ಇದೆ. ಒಟ್ಟು ಎಲ್ಲ ಆಸ್ತಿ ವಿವರದ ಮೊತ್ತ ₹ 19.50 ಕೋಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry