ಬುದ್ಧ, ಬಸವಣ್ಣ, ಅಂಬೇಡ್ಕರ್ ವಿಚಾರ ಅನುಕರಣೀಯ

7
ಬಸವ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕ ಹುರುಳಿ ಬಸವರಾಜ್

ಬುದ್ಧ, ಬಸವಣ್ಣ, ಅಂಬೇಡ್ಕರ್ ವಿಚಾರ ಅನುಕರಣೀಯ

Published:
Updated:

ಹಿರಿಯೂರು: ದಾರ್ಶನಿಕರಾದ ಬುದ್ಧ, ಬಸವಣ್ಣ, ಡಾ.ಅಂಬೇಡ್ಕರ್ ಅವರ ವಿಚಾರಧಾರೆಗಳು ಎಲ್ಲ ಕಾಲಕ್ಕೂ ಅನುಕರಣೀಯ ಎಂದು ಉಪನ್ಯಾಸಕ ಹುರುಳಿ ಬಸವರಾಜ್ ಹೇಳಿದರು.

ನಗರದ ಸಿದ್ದನಾಯಕ ವೃತ್ತದಲ್ಲಿರುವ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ರಾತ್ರಿ ತಾಲ್ಲೂಕಿನ ಎಲ್ಲ ವೀರಶೈವ–ಲಿಂಗಾಯತ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ಆಲೋಚನೆಗಳು ಬಹಳಷ್ಟು ಸಂದರ್ಭದಲ್ಲಿ ಬಾಹ್ಯ ನೋಟಕ್ಕೆ ಸುಂದರವಾಗಿ ಕಾಣುತ್ತವೆ. ಆದರೆ ಆಚರಣೆ ವಿಚಾರ ಬಂದಾಗ

ಫಲಿತಾಂಶ ಶೂನ್ಯ. ಅದಕ್ಕೆ ಅಂತರಂಗ ಶುದ್ಧಿ ಬಹಳ ಮುಖ್ಯವೆಂದು ಬಸವಣ್ಣನವರು ಹೇಳಿದ್ದು. 12 ನೇ ಶತಮಾನ ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದ ಸುವರ್ಣಯುಗ ಎನಿಸಿಕೊಂಡಿದೆ. ಜಾತ್ಯತೀತ ಸಮಾಜದ ಕಲ್ಪನೆಗೆ ಇಂಬು ಕೊಟ್ಟಿದ್ದೇ ಶರಣರು. ಮೇಲು–ಕೀಳು, ಬಡವ–ಬಲ್ಲಿದ, ಸ್ತ್ರೀ–ಪುರುಷ ಎಂಬ ಅಸಮಾನತೆಯನ್ನು ತೊಡೆದು ಹಾಕಿ ಹೊಸ ರೀತಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಸಿಕ್ಕಿತು. ಕಾಯಕ ಸಿದ್ಧಾಂತ, ನಡೆ–ನುಡಿ ಶುದ್ಧತೆಗೆ ಬಸವಣ್ಣನವರ ಕೊಡುಗೆ ತುಂಬ ದೊಡ್ಡದು’ ಎಂದು ಅವರು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಜಗದೀಶ್ ದರೇದಾರ್ ಅಧ್ಯಕ್ಷತೆ ವಹಿಸಿದ್ದರು. ಎ.ಎಮ್. ಅಮೃತೇಶ್ವರಸ್ವಾಮಿ, ವೈ.ಎಸ್. ಉಮಾಶಂಕರ್, ಶಶಿಕಲಾ ರವಿಶಂಕರ್, ಸೌಭಾಗ್ಯವತಿ ದೇವರು, ಗೀತಾ ಹಿಮಾಚಲೇಶ್, ಯಮುನಾ ಉಮಾಕಾಂತ್, ನಳಿನಾ ತ್ರಿಯಂಭಕೇಶ್ವರ್, ನೇತ್ರಾ, ಮಮತಾ ಭುವನೇಶ್, ಸರ್ವಮಂಗಳಾ ರಮೇಶ್, ವಿಮಲಾ ಕಾಂತರಾಜ್, ರೇಖಾ, ನಾಗರತ್ನಮ್ಮ, ರಮ್ಯಾ, ಸಂತೃಪ್ತಿ, ಸಮೃದ್ಧಿ ಉಪಸ್ಥಿತರಿದ್ದರು.

ಸನ್ಮಾನ: ‘ಜೀವಮಾನದ ಸಾಧನೆ ಪ್ರಶಸ್ತಿ’ ಪುರಸ್ಕೃತ ಕೃಷಿ ವಿಜ್ಞಾನಿ ಡಾ. ಮಹಂತೇಶ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry