ಪಕ್ಷ ನಿಷ್ಠೆಗೆ ಸಿಗದ ಗೌರವ: ಅಸಮಾಧಾನ

7
ಕಾಂಗ್ರೆಸ್ ಕಚೇರಿಯಲ್ಲಿ ಅಲ್ಪಸಂಖ್ಯಾತರ ಭಿನ್ನಾಭಿಪ್ರಾಯದ ಹೊಗೆ

ಪಕ್ಷ ನಿಷ್ಠೆಗೆ ಸಿಗದ ಗೌರವ: ಅಸಮಾಧಾನ

Published:
Updated:

ಚಿತ್ರದುರ್ಗ: ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಮತಗಳು ಚುನಾವಣೆಯಲ್ಲಿ ನಿರ್ಣಾಯಕವಾಗಿವೆ. ಹೀಗಿದ್ದರು ಕೂಡ ಆರೂ ವಿಧಾನಸಭಾ ಕ್ಷೇತ್ರಗಳ ಪೈಕಿ ಸಮುದಾಯದ ಒಬ್ಬರಿಗೂ ಟಿಕೆಟ್ ದೊರೆತಿಲ್ಲ. ಪಕ್ಷ ನಿಷ್ಠೆಗೆ ಸಿಕ್ಕ ಬಹುಮಾನ ಇದೇನಾ...

ಹೀಗೆಂದು ಗುರುವಾರ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅತೃಪ್ತ ಮುಸ್ಲಿಂ ಆಕಾಂಕ್ಷಿಗಳ ಬೆಂಬಲಿಗರು ತಮ್ಮ ಅಸಮಾಧಾನ ಹೊರಹಾಕಿದರು.

ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುವವರಿಗೆ ಬೆಲೆ ಇಲ್ಲದಂತಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್‌.ಕೆ.ಸರ್ದಾರ್ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅಲ್ಲದೆ, ಇನ್ನು ಕೆಲ ಮುಸ್ಲಿಂ ಸಮುದಾಯದ ಮುಖಂಡರು ಚುನಾವಣೆಗೆ ನಿಲ್ಲುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಒಂದು ವರ್ಷದಿಂದಲೂ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿದ್ದರೂ ಸಮುದಾಯದವರಿಗೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬರ್ ಮಾತನಾಡಿ, ‘ಟಿಕೆಟ್ ನೀಡುವ ಮುನ್ನ ನಮ್ಮ ಸಮುದಾಯದವರನ್ನು ಹೈಕಮಾಂಡ್ ಪರಿಗಣಿಸಿಲ್ಲ. ಟಿಕೆಟ್ ಪಡೆದವರು ‘ಬಿ’ ಫಾರಂ ಪಡೆಯುವ ಮೊದಲು ಹಾಗೂ ನಂತರ ನಮ್ಮನ್ಯಾರೂ ನೀವು ಸಂಪರ್ಕಿಸಿಲ್ಲ. ಈಗ ಬೆಂಬಲಿಸಿ ಎಂಬುದಾಗಿ ಸಭೆ ಕರೆದಿದ್ದೀರಿ. ಇದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

‘ಚಿತ್ರದುರ್ಗ ವಿಧಾನಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗುಡ್ಡದರಂಗವ್ವನ ಹಳ್ಳಿಗೆ ಏಕಾಏಕಿ ಪ್ರಚಾರಕ್ಕಾಗಿ ಹೋಗಿದ್ದಾರೆ ಎಂಬ ಮಾಹಿತಿ ಇದೆ. ನಾನೂ ಈಹಿಂದೆ ಇದೇ ಕ್ಷೇತ್ರದಿಂದ ಜಿಲ್ಲಾ ಪಂಚಾಯ್ತಿಗೆ ಟಿಕೆಟ್ ಕೇಳಿದ್ದೆ. ಆದರೆ, ಟಿಕೆಟ್‌ ನೀಡದೆ ಅವಮಾನಿಸಲಾಯಿತು. ಈಗ ಪ್ರಚಾರದ ವೇಳೆಯೂ ನನ್ನನ್ನು ಸಂಪರ್ಕಿಸದೆ ಇರುವುದು ನೋವನ್ನುಂಟು ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮಗೆ ಮಾತನಾಡಲು ಅವಕಾಶ ಕೊಡಿ ಎಂಬುದಾಗಿ ಅಲ್ಲಿದ್ದ ಕೆಲ ಮುಸ್ಲಿಂ ಯುವಕರು ಕೇಳಿದರು. ದೊರಕದಿದ್ದಾಗ ಬೇಸರಗೊಂಡು ಹೊರ ನಡೆದರು. ಇದೇ ಸಂದರ್ಭದಲ್ಲಿ ಕೆಲವರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಸಮಾಧಾನ ಪಡಿಸಲಾಯಿತು.

ಸಂಸದ ಚಂದ್ರಪ್ಪ ಮಾತನಾಡಿ, ‘ಅಧಿಕಾರ ಎಂಬುದು ಯಾರಿಗೂ ಶಾಶ್ವತವಲ್ಲ. ಜತೆಗೆ ಏಕಾಏಕಿ ಸಿಗುವಂಥದ್ದು ಅಲ್ಲ. ಅದಕ್ಕಾಗಿ ಸಾಕಷ್ಟು ಶ್ರಮ ಪಡಬೇಕು. ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿ ಜಿಲ್ಲೆಯ ಎಲ್ಲ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ಭಿನ್ನಾಭಿಪ್ರಾಯ ಬದಿಗಿಟ್ಟು ಶ್ರಮಿಸಬೇಕು’ ಎಂದು ಮನವಿ ಮಾಡಿದರು.

ಏ. 23ರಂದು ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ ಅವರು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದ್ದು, ಎಲ್ಲವನ್ನೂ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರುವ ಮೂಲಕ ಬೆಂಬಲ ವ್ಯಕ್ತಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಫಾತ್ಯರಾಜನ್, ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಜಿ.ಎಸ್.ಮಂಜುನಾಥ್, ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ, ಮುಖಂಡರಾದ ಬಿ.ಟಿ.ಜಗದೀಶ್, ತಾಜ್‌ಪೀರ್, ಮಹಮ್ಮದ್ ಅಹಮ್ಮದ್ ಪಾಷಾ ಅವರೂ ಮುಖಂಡರೂ ಇದ್ದರು.

ಕೊನೆಗೆ ಸಮಾಧಾನ

ಸಭೆ ಆರಂಭದಿಂದ ಮುಗಿಯುವವರೆಗೂ ಅಸಮಾಧಾನ ಹೊರಹಾಕಿದ ಕೆಲವರು ಪಕ್ಷದ ಕಚೇರಿಯಿಂದ ಹೊರ ನಡೆದರು. ನಂತರ ಕೆಲ ಮುಸ್ಲಿಂ ಯುವಕರು, ಕಾರ್ಯಕರ್ತರು ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ ಹೊರಗಡೆ ಬಂದಾಗ ಹೊತ್ತುಕೊಂಡು ಜಯಘೋಷ ಕೂಗಿದರು. ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಅಲ್ಲಿದ್ದವರ ಮಾತಿನಿಂದ ಅಭ್ಯರ್ಥಿ ಷಣ್ಮುಖಪ್ಪ ಸ್ವಲ್ಪ ಸಮಾಧಾನಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry