‘ಟಿಕೆಟ್‌ ಕೊಡದಿದ್ದರೆ ಬಂಡವಾಳ ಬಯಲು’

7
ಮಾಜಿ ಶಾಸಕ ಬಸವರಾಜ್‌ ನಾಯ್ಕ ಬೆಂಬಲಿಗರಿಂದ ಚನ್ನಗಿರಿ–ದಾವಣಗೆರೆ ರಸ್ತೆ ಸಂಚಾರ ತಡೆದು ಪ್ರತಿಭಟನೆ

‘ಟಿಕೆಟ್‌ ಕೊಡದಿದ್ದರೆ ಬಂಡವಾಳ ಬಯಲು’

Published:
Updated:

ದಾವಣಗೆರೆ: ಬಿಜೆಪಿ ಟಿಕೆಟ್‌ ಕೈತಪ್ಪಲಿದೆ ಎಂದು ಆಕ್ರೋಶಗೊಂಡ ಮಾಜಿ ಶಾಸಕ ಎಂ. ಬಸವರಾಜ್‌ ಬೆಂಬಲಿಗರು ಗುರುವಾರ ತಾಲ್ಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಚನ್ನಗಿರಿ–ದಾವಣಗೆರೆ ರಸ್ತೆ ಸಂಚಾರ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಟಿಕೆಟ್‌ ಸಿಗುವ ಸಾಧ್ಯತೆ ಕಡಿಮೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಕರೆ ಮಾಡಿ ಹೇಳಿದ ಹಿನ್ನೆಲೆಯಲ್ಲಿ ಬೆಳಿಗ್ಗೆಯೇ ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ಮನೆ ಎದುರು ಜಮಾಯಿಸಿದ ಬೆಂಬಲಿಗರು ವರಿಷ್ಠರ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಹಲವು ಕಾರ್ಯಕರ್ತರು, ಬೆಂಬಲಿಗರು ಮಾತನಾಡಿ, ಬಸವರಾಜ್ ನಾಯ್ಕಗೆ ಅವರಿಗೆ ಟಿಕೆಟ್ ತಪ್ಪಿಸಲು ವ್ಯವಸ್ಥಿತ ಹುನ್ನಾರ ನಡೆದಿದೆ. ರವೀಂದ್ರನಾಥ ಅವರು ಶೀಘ್ರ ವರಿಷ್ಠ ಜತೆ ಮಾತನಾಡಿ, ಟಿಕೆಟ್ ಕೈತಪ್ಪದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಬಸವರಾಜ್‌ ನಾಯ್ಕ ಅವರಿಗೆ ಟಿಕೆಟ್ ತಪ್ಪಿಸಿದರೆ ಕ್ಷೇತ್ರದ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯರು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರು, ಸದಸ್ಯರು ತಮ್ಮ ಸ್ಥಾನಕ್ಕೆ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬಸವರಾಜ್ ನಾಯ್ಕ ಅವರು ಸಚಿವ ಎಸ್‌.ಎ. ರವೀಂದ್ರನಾಥ್‌ ಆಪ್ತರೆಂಬ ಕಾರಣ ಹಾಗೂ ಕೆಜೆಪಿಗೆ ಬರಲಿಲ್ಲ ಎಂಬ ಕಾರಣಕ್ಕೆ ಟಿಕೆಟ್‌ ತಪ್ಪಿಸುವ ಪ್ರಯತ್ನ ನಡೆದಿದೆ. ಕಷ್ಟಕಾಲದಲ್ಲೂ ಬಿಜೆಪಿ ಬಿಡದ, ಗೆಲ್ಲುವ ಸಾಮರ್ಥ್ಯವಿರುವ ಬಸವರಾಜ್‌ ನಾಯ್ಕ ಅವರಿಗೆ

ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಎಸ್.ಎ. ರವೀಂದ್ರನಾಥ್, ಮುಖಂಡ ಡಾ.ಎ.ಎಚ್. ಶಿವಯೋಗಿಸ್ವಾಮಿ ಹಾಗೂ ಎಂ.ಬಸವರಾಜ್‌ ನಾಯ್ಕ ಬೆಂಬಲಿಗರನ್ನು ಸಮಾಧಾನಪಡಿಸಲು ಯತ್ನಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಎ. ರವೀಂದ್ರನಾಥ್, ಟಿಕೆಟ್ ಕುರಿತು ಯಡಿಯೂರಪ್ಪ, ಅನಂತಕುಮಾರ್ ಹಾಗೂ ಮುರಳೀಧರ್ ರಾವ್ ಅವರೊಂದಿಗೆ ಚರ್ಚೆ ನಡೆಸಿ, ವಾಸ್ತವಾಂಶದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಆದ್ದರಿಂದ ಎಂ. ಬಸವರಾಜ್ ನಾಯ್ಕ ಅವರಿಗೆ ಟಿಕೆಟ್ ಸಿಗುವ ಭರವಸೆ ಇದೆ. ಆದ್ದರಿಂದ ಕಾರ್ಯಕರ್ತರು ತಾಳ್ಮೆ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಬಿಜೆಪಿ, ಕೆಜೆಪಿ ಇಲ್ಲ. ಉದ್ದೇಶಪೂರ್ವಕವಾಗಿ ಕೆಲವರು ಇಂತಹದ್ದನ್ನೆಲ್ಲಾ ಸೃಷ್ಟಿ ಮಾಡುತ್ತಿದ್ದಾರೆ. ಏಪ್ರಿಲ್‌ 24ರವರೆಗೆ ನಾಮಪತ್ರ ಸಲ್ಲಿಕೆಗೆ ಕಾಲಾವಕಾಶವಿದೆ. ಯಾರೂ ಆತಂಕಪಡಬೇಕಿಲ್ಲ ಎಂದರು.

ಮಾಜಿ ಶಾಸಕ ಎಂ. ಬಸವರಾಜ್‌ ನಾಯ್ಕ ಮಾತನಾಡಿ, ‘ಮಾಯಕೊಂಡ ಕ್ಷೇತ್ರದ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಕೆಜೆಪಿ ಹೋಗದೆ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದೇನೆ. ಕ್ಷೇತ್ರ ವ್ಯಾಪ್ತಿಯಲ್ಲಿ ಐವರು ಜಿಲ್ಲಾ ಪಂಚಾಯ್ತಿ ಸದಸ್ಯರು, 15 ತಾಲ್ಲೂಕು ಪಂಚಾಯ್ತಿ ಸದಸ್ಯರು, ಎಂಟು ಜನ ಎಪಿಎಂಸಿ ಸದಸ್ಯರು, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರನ್ನು ಗೆಲ್ಲಿಸುವಲ್ಲಿ ಶ್ರಮಿಸಿದ್ದೇನೆ’ ಎಂದು ಹೇಳಿದರು.

‘ನಾನು ರೆಸಾರ್ಟ್ ರಾಜಕಾರಣ ಮಾಡಿ ಅಧಿಕಾರ ಪಡೆದಿಲ್ಲ. ಕೆಜೆಪಿ ಹೆಸರಿನಲ್ಲಿ ಕೆಲವರು ಬಿಜೆಪಿಯನ್ನು ಒಡೆದಾಗ, ಬಿಜೆಪಿಗೆ ನಿಷ್ಠನಾಗಿ ಹೋರಾಟ ನಡೆಸಿದ್ದೇನೆ. ಆದರೆ, ಟಿಕೆಟ್ ಹಂಚಿಕೆಯಲ್ಲಿ ನನಗೇ ಮೋಸ ಮಾಡಲು ಹೊರಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವರಿಷ್ಠರು ತಪ್ಪು ನಿರ್ಧಾರ ಕೈಗೊಳ್ಳಬಾರದು’

‘ಟಿಕೆಟ್ ಹಂಚಿಕೆಯಲ್ಲಿ ನನಗೆ ಅನ್ಯಾಯ ಮಾಡಿದರೆ ಕೆಲವು ವ್ಯಕ್ತಿಗಳ ಬಂಡವಾಳ ಬಯಲು ಮಾಡುವೆ. ಬಿಜೆಪಿ ಟಿಕೆಟ್ ಸಿಗದಿದ್ದರೆ ಬೇರೆ ಪಕ್ಷಗಳ ಕದ ತಟ್ಟುವುದಿಲ್ಲ. ವರಿಷ್ಠರು ಯಾವುದೇ ಕಾರಣಕ್ಕೂ ತಪ್ಪು ನಿರ್ಧಾರ ಕೈಗೊಳ್ಳಬಾರದು’ ಎಂದು ಬಸವರಾಜ್‌ ನಾಯ್ಕ ಬೆಂಬಲಿಗರೊಂದಿಗೆ ಮಾತನಾಡಿದರು. ‘ನಾನು ಎಂದಿಗೂ ರೆಸಾರ್ಟ್ ರಾಜಕಾರಣ ಮಾಡಿಲ್ಲ. ಮೂಲ ವಲಸಿಗನಾಗಿದ್ದರೂ ಈಗ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ’ ಎಂದು ಹೇಳಿದರು.

**

ಟಿಕೆಟ್ ಸಿಗದಿದ್ದರೆ ಬೆಂಬಲಿಗರು, ಕಾರ್ಯಕರ್ತರ ಸಭೆ ನಡೆಸಿ, ಮುಂದಿನ ನಿರ್ಧಾರ ಕೈಗೊಳ್ಳುವೆ – ಎಂ. ಬಸವರಾಜ್‌ ನಾಯ್ಕ, ಮಾಜಿ ಶಾಸಕ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry