4
ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳು; ಚುರುಕು ಪಡೆದ ಚುನಾವಣಾ ಪ್ರಚಾರ

ನಾಲ್ಕು ಅಭ್ಯರ್ಥಿಗಳಿಂದ ನಾಮಪತ್ರ

Published:
Updated:

ಗದಗ: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಗುರುವಾರ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ರೋಣ ವಿಧಾನಸಭಾ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ, ಇದೇ ಕ್ಷೇತ್ರದಿಂದ ಸಿಪಿಐ(ಎಂ) ಅಭ್ಯರ್ಥಿಯಾಗಿ ಎಂ.ಎಸ್. ಹಡಪದ, ನರಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಸಿ ಪಾಟೀಲ, ಗದಗ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮಂಜುನಾಥ ಬಸಪ್ಪ ಅಬ್ಬಿಗೇರಿ ಸೇರಿ ಒಟ್ಟು ನಾಲ್ವರು ನಾಮಪತ್ರ ಸಲ್ಲಿಸಿದರು.

ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಇದುವರೆಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ನಾಲ್ಕೂ ವಿಧಾನಸಭಾ ಕ್ಷೇತ್ರಗಳಿಂದ ಯಾವುದೇ ಕಾಂಗ್ರೆಸ್‌ ಅಭ್ಯರ್ಥಿಗಳು ಇದುವರೆಗೆ ನಾಮಪತ್ರ ಸಲ್ಲಿಸಿಲ್ಲ.

ರೋಣ ಮತಕ್ಷೇತ್ರ: ರೋಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಗುರುವಾರ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ ಎಚ್.ಸಿ.ಮಹೇಶ ನಾಮಪತ್ರ ಸ್ವೀಕರಿಸಿದರು.

ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಂಡಿ, ‘ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಆಡಳಿತಕ್ಕೆ ಬೇಸತ್ತಿರುವ ಜನರು ಚುನಾವಣೆ ಯಾವಾಗ ಬರುತ್ತದೆಯೋ ಎಂದು ಕಾತರದಿಂದ ಕಾದು ಕುಳಿತಿದ್ದರು. ಆ ಸಮಯ ಈಗ ಬಂದಿದ್ದು, ರಾಜ್ಯವನ್ನು ಸಂಪೂರ್ಣ ಕಾಂಗ್ರೆಸ್ ಮುಕ್ತ ಮಾಡುವ ಮೂಲಕ ರಾಜ್ಯದಲ್ಲಿ ಮತ್ತೆ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರಲಿದ್ದಾರೆ’ ಎಂದರು.

‘ರೋಣ ಮತಕ್ಷೇತ್ರದ ಪ್ರಮುಖ ಸಮುದಾಯಗಳಾದ ಹಾಲುಮತ, ಗಾಣಿಗ, ಬಣಜಿಗ, ಲಿಂಗಾಯತ ಸಮುದಾಯಗಳ ಮುಖಂಡರು ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರಿದ್ದಾರೆ.

ಹಾಲುಮತ ಸಮಾಜದ ತಾಲ್ಲೂಕು ಅಧ್ಯಕ್ಷ ನಿಂಗಪ್ಪ ಬೇವಿನಮರದ, ರವಿ ದಂಡಿನ, ಗಾಣಿಗ ಸಮುದಾಯದ ಶಿವಣ್ಣ ನವಲಗುಂದ, ವಿಜಯ ನವಲಗುಂದ, ಅಶೋಕ ದೇಶಣ್ಣವರ, ಬಣಜಿಗ ಸಮಾಜದ ತಾಲ್ಲೂಕು ಅಧ್ಯಕ್ಷ ರಾಜಣ್ಣ ಹೂಲಿ,ರೋಣ ಪುರಸಭೆಯ ಮಾಜಿ ಅಧ್ಯಕ್ಷ ಮುತ್ತಣ್ಣ ಸಂಗಳದ ಸೇರಿ ಹಲವು ನಾಯಕರು ಬಿಜೆಪಿಗೆ ಬಂದಿದ್ದು, ಕ್ಷೇತ್ರದಲ್ಲಿ ಪಕ್ಷಕ್ಕೆ ದೊಡ್ಡ ಮಟ್ಟದ ಬಲ ಬಂದಿದೆ. ಈ ಬಾರಿ ಪಕ್ಷವು 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ’ ಎಂದರು.

ಮುತ್ತಣ್ಣ ಲಿಂಗನಗೌಡ್ರ, ಅಂಬರೇಶ ಅರಳಿ, ಚಂದಪ್ಪ ಗುಡದೂರ, ಶಿಬಬಸಪ್ಪ ಬೆಲ್ಲದ, ಎಂ.ಎಸ್.ಸಜ್ಜನ್, ಹೆಚ್.ಕೆ.ಹಟ್ಟಿಮನಿ, ಶರಣಪ್ಪ ಕಂಬಳಿ, ಮುತ್ತು ಕಡಗದ, ಅನಿಲಕುಮಾರ ಪಲ್ಲೇದ ಇದ್ದರು.

ಎಂ.ಸಿ.ಹಡಪದ ನಾಮಪತ್ರ ಸಲ್ಲಿಕೆ: ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ರೋಣ ವಿಧಾನಸಭಾ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿ ಮಲ್ಲಿಕಾರ್ಜುನ. ಎಸ್. ಹಡಪದ ಗುರುವಾರ ನಾಮಪತ್ರ ಸಲ್ಲಿಸಿದರು. ಬಾಲು ರಾಠೋಡ, ಮಹೇಶ ಪತ್ತಾರ, ಎಮ್.ಬಿ. ನಾಡಗೌಡ, ಪಯಾಜ್ ಅಹ್ಮದ ತೋಟದ ಇದ್ದರು.

ಗದಗ ಮತಕ್ಷೇತ್ರ: ಗದಗ ವಿಧಾನಸಭಾ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಮಂಜುನಾಥ ಬಸಪ್ಪ ಅಬ್ಬಿಗೇರಿ ಗುರುವಾರ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಚುನಾವಣಾಧಿಕಾರಿ ಗೀತಾ ಕೌಲಗಿ ನಾಮಪತ್ರ ಸ್ವೀಕರಿಸಿದರು. ಡಿ. ವಿ. ಬಡಿಗೇರ, ವೀರುಪಾಕ್ಷಪ್ಪ ಬೇಲೇರಿ, ಪಿ.ಎಸ್.ಜೀವಣಗಿ, ಶಿವಕುಮಾರ ಬೇವಿನಮರದ ಇದ್ದರು.

ನಗರದ ರಾಯಚೋಟಿ ವೀರಭದ್ರೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ಒಕ್ಕಲಿಗೇರಿ ಓಣಿ, ಕೆಇಬಿ ರಸ್ತೆ ಮುಳಗುಂದ ನಾಕಾ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಾರ್ಯಲಯ ತಲುಪಿ ನಾಮಪತ್ರ ಸಲ್ಲಿಸಿದರು.

ಸಿ.ಸಿ.ಪಾಟೀಲ ನಾಮಪತ್ರ ಸಲ್ಲಿಕೆ

ನರಗುಂದ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಸಿ.ಪಾಟೀಲ ಅವರು ಗುರುವಾರ ಇಲ್ಲಿನ ಮಿನಿ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಿದರು. ಪಾಟೀಲ ಅವರು ಪತ್ನಿ ಅವರೊಂದಿಗೆ, ಬೆಂಬಲಿಗರ ಜತೆಗೆ ಬಂದು ನಾಮಪತ್ರ ಸಲ್ಲಿಸಿದರು. ಕೇವಲ ನಾಲ್ಕು ಜನರಿಗೆ ಮಾತ್ರ ಪ್ರವೇಶ ಅವಕಾಶ ಇತ್ತು. ಚಂದ್ರು ದಂಡಿನ ಇದ್ದರು.ಬಿಜೆಪಿ ಕಾರ್ಯಕರ್ತರು ಹೆಚ್ಚಾಗಿ ಬಂದಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

**

ಹಾಲುಮತ, ಗಾಣಿಗ, ಬಣಜಿಗ, ಲಿಂಗಾಯತ ಸಮುದಾಯಗಳ ಮುಖಂಡರು ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರಿದ್ದು, ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಬಲ ಬಂದಿದೆ –  ಕಳಕಪ್ಪ ಬಂಡಿ, ರೋಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry