ಚುನಾವಣಾ ಅಕ್ರಮ:ತೀವ್ರ ನಿಗಾ ವಹಿಸಿ

7
ಪಾರದರ್ಶಕ ಚುನಾವಣೆಗೆ ಮುಂದಾಗಿ ; ವಿಧಾನಸಭಾ ಕ್ಷೇತ್ರಗಳ ವೆಚ್ಚ ವೀಕ್ಷಕರ ಸೂಚನೆ

ಚುನಾವಣಾ ಅಕ್ರಮ:ತೀವ್ರ ನಿಗಾ ವಹಿಸಿ

Published:
Updated:
ಚುನಾವಣಾ ಅಕ್ರಮ:ತೀವ್ರ ನಿಗಾ ವಹಿಸಿ

ಹಾವೇರಿ: ‘ಪಾರದರ್ಶಕ ಮತ್ತು ಮುಕ್ತ ಚುನಾವಣೆಗಾಗಿ ಅಕ್ರಮಗಳ ಬಗ್ಗೆ ತೀವ್ರ ನಿಗಾವಹಿಸಬೇಕು’ ಎಂದು ಚುನಾವಣಾ ಆಯೋಗದಿಂದ ನೇಮಕಗೊಂಡ ಕೇಂದ್ರ ವೆಚ್ಚ ವೀಕ್ಷಕರು ಜಿಲ್ಲೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.

ಇಲ್ಲಿನ ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಗುರುವಾರ ನಡೆದ ‘ಆದಾಯ ತೆರಿಗೆ, ಅಬಕಾರಿ, ಎಂ.ಸಿ.ಸಿ., ಎಂ.ಸಿ.ಎಂ.ಸಿ., ಚುನಾವಣಾ ವೆಚ್ಚದ ನೋಡಲ್ ಅಧಿಕಾರಿಗಳು, ಸಹಾಯಕ ವೆಚ್ಚ ವೀಕ್ಷಕರ ಸಭೆ’ಯಲ್ಲಿ ಅವರು ಮಾತನಾಡಿದರು.

ಪಾರದರ್ಶಕ ಚುನಾವಣೆ ನಡೆಸಲು ಜಿಲ್ಲಾಡಳಿತ ಕೈಗೊಂಡ ವ್ಯವಸ್ಥೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಪ್ರತಿ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಬೇಕು. ಯಾವುದೇ ಅಕ್ರಮಗಳಿಗೆ ಅವಕಾಶ ನೀಡಬಾರದು ಎಂದರು.

ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಅವರು ಜಿಲ್ಲೆಯ ಸಾಮಾಜಿಕ, ಆರ್ಥಿಕ, ಭೌಗೋಳಿಕ ಹಾಗೂ ಐತಿಹಾಸಿಕ ಚಿತ್ರಣವನ್ನು ವಿವರಿಸಿದರು.

ಚುನಾವಣೆ ಸಿದ್ಧತೆಗಳು, ಅಕ್ರಮಗಳ ತಡೆಗೆ ವಿವಿಧ ಸಮಿತಿಗಳ ರಚನೆ ಹಾಗೂ ಮುಕ್ತ ಹಾಗೂ ಪಾರದರ್ಶಕ ಚುನಾವಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಕೇಂದ್ರ ವೆಚ್ಚ ವೀಕ್ಷಕರಿಗೆ ವಿವರಣೆ ನೀಡಿದರು.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಮೆರವಣಿಗೆ, ವಾಹನ ಓಡಾಟಗಳು ಹೆಚ್ಚಾಗುತ್ತವೆ. ಪ್ರತಿ ಚಲನವಲನಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಬೇಕು. ವಿಶೇಷವಾಗಿ ವಿಡಿಯೋ ತಂಡ, ಫ್ಲೈಯಿಂಗ್ ಸ್ಕ್ವಾಡ್‌ಗಳು ಆಯೋಗದ ಮಾರ್ಗ ಸೂಚಿಯಂತೆ ಕಾರ್ಯನಿರ್ವಹಿಸಬೇಕು. ಯಾವುದೇ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹಾನಗಲ್ ಮತ್ತು ಶಿಗ್ಗಾವಿ ಕ್ಷೇತ್ರದ ವೆಚ್ಚ ವೀಕ್ಷಕ ತಾರೀಕ್ ಮೆಹಬೂಬ್ ಮಾತನಾಡಿ, ಚುನಾವಣೆ ಅಕ್ರಮಗಳ ರಹಸ್ಯಗಳನ್ನು ಭೇದಿಸಬೇಕು. ಚೆಕ್‌ ಪೋಸ್ಟ್‌ಗಳ ಜೊತೆಗೆ ರೈಲ್ವೆ ಮಾರ್ಗದಲ್ಲಿಯೂ ತೀವ್ರ ನಿಗಾ ವಹಿಸಬೇಕು. ಈ ಕುರಿತು ಸ್ಥಿರ ಕಣ್ಗಾವಲು ಸಮಿತಿ ಹಾಗೂ ಫ್ಲೈಯಿಂಗ್ ಸ್ಕ್ವಾಡ್‌ಗಳು ವರದಿ ಮಾಡಬೇಕು ಎಂದರು.

ಹಾವೇರಿ ಮತ್ತು ಬ್ಯಾಡಗಿ ಕ್ಷೇತ್ರದ ವೆಚ್ಚ ವೀಕ್ಷಕ ಸುಧೀರ್‌ ಕುಮಾರ್ ಹಾಗೂ ಹಿರೇಕೆರೂರ ಮತ್ತು ರಾಣೆಬೆನ್ನೂರು ಕ್ಷೇತ್ರದ ವೆಚ್ಚ ವೀಕ್ಷಕ ಕುಮಾರ್ ಅಸೀಮ್ ವೈಭವ ಮಾತನಾಡಿ, ಒಬ್ಬ ಅಭ್ಯರ್ಥಿಗೆ ವೆಚ್ಚ ಮಿತಿಯನ್ನು ₹ 28 ಲಕ್ಷಕ್ಕೆ ನಿಗದಿ ಪಡಿಸಲಾಗಿದ್ದು, ಸೂಕ್ಷ್ಮವಾಗಿ ವಿವರ ಸಂಗ್ರಹಿಸಬೇಕು ಎಂದರು.

ಐಟಿ ನಿಗಾ: ಆದಾಯ ತೆರಿಗೆ ಇಲಾಖೆಯು ಹಣಕಾಸಿನ ವಹಿವಾಟನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಆಯೋಗವು ಪ್ರತಿದಿನ ಎಲ್ಲ ಬ್ಯಾಂಕ್‌ಗಳ ವಹಿವಾಟುಗಳ ವಿವರಗಳನ್ನು ಪಡೆಯುತ್ತಿವೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿ ನಿತಿನ್ ದಿವಾಕರ್ ಹೇಳಿದರು. ಯಾವುದೇ ಸಂಶಯಾಸ್ಪದ ವಹಿವಾಟು ಅಥವಾ ದೂರು ಬಂದಲ್ಲಿ ಮನೆ ಅಥವಾ ಸಂಸ್ಥೆಗಳ ಮೇಲೆ ನೇರವಾಗಿ ದಾಳಿ ಮಾಡುವ ಅಧಿಕಾರ ಇದೆ ಎಂದರು.

ವಿಶೇಷ ಪೊಲೀಸ್ ಪಡೆ ನಿಯೋಜನೆ ಹಾಗೂ ಅಬಕಾರಿ ಅಕ್ರಮಗಳ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ಹಾಗೂ ಅಬಕಾರಿ ಅಧೀಕ್ಷಕ ಗೋಪಾಲಕೃಷ್ಣ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಟಿ. ಶಿಲ್ಪಾ ನಾಗ್, ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ ಹಾಗೂ ವಿವಿಧ ನೋಡಲ್ ಅಧಿಕಾರಿಗಳು ಇದ್ದರು.

**

ಚುನಾವಣೆ ಅಕ್ರಮಗಳನ್ನು ಭೇದಿಸಲು ಪ್ರತಿ ಜಿಲ್ಲೆಗೆ ಪ್ರತ್ಯೇಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡವನ್ನು ಆಯೋಗ ನೇಮಕ ಮಾಡಿದೆ – ನಿತಿನ್ ದಿವಾಕರ್, ಆದಾಯ ತೆರಿಗೆ ಇಲಾಖೆ ಅಧಿಕಾರಿ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry