ಬಿಜೆಪಿಯಲ್ಲಿ ಹೆಚ್ಚಿದ ಬಂಡಾಯದ ಭೀತಿ!

7
ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ ನೇತೃತ್ವದಲ್ಲಿ ಬೆಂಬಲಿಗರ ಸಭೆ ಇಂದು

ಬಿಜೆಪಿಯಲ್ಲಿ ಹೆಚ್ಚಿದ ಬಂಡಾಯದ ಭೀತಿ!

Published:
Updated:

ಹಾವೇರಿ: ಹಾವೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆಯ ಜೊತೆಗೆ ಜಿಲ್ಲೆಯಲ್ಲಿ ಬಂಡಾಯವು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಿದೆ. ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ ಏ.20ರಂದು 3 ಗಂಟೆಗೆ ಬೆಂಬಲಿಗರ ಸಭೆ ಕರೆದಿದ್ದು, ಕುತೂಹಲ ಮೂಡಿಸಿದೆ.

ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಹಾನಗಲ್ ಮತ್ತು ಹಿರೇಕೆರೂರ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ಬಂಡಾಯ ಎದುರಾಗಲಿಲ್ಲ. ಹಲವು ನಾಯಕರು ಟಿಕೆಟ್‌ಗಾಗಿ ಪ್ರಯತ್ನ ಪಟ್ಟಿದ್ದರೂ ಮಾಜಿ ಸಚಿವ ಸಿ.ಎಂ. ಉದಾಸಿ ಮತ್ತು ಯು.ಬಿ. ಬಣಕಾರ ವಿರುದ್ಧ ದೊಡ್ಡದಾಗಿ ಸೊಲ್ಲೆತ್ತಲಿಲ್ಲ.

ಆದರೆ, ಶಿಗ್ಗಾವಿಯಲ್ಲಿ ಶಾಸಕ ಬಸವರಾಜ ಬೊಮ್ಮಾಯಿಗೆ ಪಕ್ಷ ಮಣೆ ಹಾಕಿದೆ. ಹೀಗಾಗಿ ಆಕಾಂಕ್ಷಿಗಳಾಗಿದ್ದ ಸೋಮಣ್ಣ ಬೇವಿನಮರದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ, ಬಂಡಾಯದ ಬಾವುಟ ಹಾರಿಸಿದ್ದಾರೆ.

ಬ್ಯಾಡಗಿ ಕ್ಷೇತ್ರದಲ್ಲಿ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಟಿಕೆಟ್ ಕೈ ತಪ್ಪಿದ ಕಾರಣ ಕಾಂಗ್ರೆಸ್‌ನಲ್ಲಿ ಬಂಡಾಯದ ಭೀತಿ ಎದುರಾಗಿತ್ತು. ಆದರೆ, ಶಿವಣ್ಣನವರ ಪಕ್ಷೇತರರಾಗಿ ಸ್ಪರ್ಧಿಸುವ ಕುರಿತು ಇನ್ನೂ ನಿರ್ಧಾರ ಪ್ರಕಟಿಸಿಲ್ಲ. ಅದಕ್ಕೂ ಮೊದಲೇ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಸುರೇಶ ಗೌಡ್ರ ಪಾಟೀಲ್‌, ಗುಡ್‌ಬೈ ಹೇಳಿದ್ದು ಕಾಂಗ್ರೆಸಿಗೆ ಸೇರ್ಪಡೆಗೊಂಡಿದ್ದಾರೆ.

ಹಾವೇರಿ ಮತ್ತು ರಾಣೆಬೆನ್ನೂರಿನಲ್ಲಿ ಬಿಜೆಪಿಯಿಂದ ತಲಾ 13 ಮತ್ತು 16 ಟಿಕೆಟ್ ಆಕಾಂಕ್ಷಿಗಳು ಇದ್ದರು. ಹೀಗಾಗಿ ಟಿಕೆಟ್ ಘೋಷಣೆಯು ಕಗ್ಗಂಟಾಗಿತ್ತು. ರಾಣೆಬೆನ್ನೂರಿನಲ್ಲಿ ಸ್ಥಳೀಯರಾದ ಹಿಂದುಳಿದ ವರ್ಗದ ಬಸವರಾಜ ಕೇಲಗಾರ ಅವರಿಗೆ ಟಿಕೆಟ್ ನೀಡಲು ಪಕ್ಷ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಆದರೆ, ಇತ್ತ ಹಾವೇರಿಯಲ್ಲಿ ಮಾಜಿ ಶಾಸಕ ನೆಹರು ಓಲೇಕಾರ ಹಾಗೂ ಇತರ 12 ಆಕಾಂಕ್ಷಿಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಬಲ್ಲ ಮೂಲಗಳ ಪ್ರಕಾರ ಮೀಸಲು ಕ್ಷೇತ್ರದಲ್ಲಿ ನೆಹರು ಓಲೇಕಾರ ಅವರ ಹೆಸರನ್ನು ಪಕ್ಷವು ಅಂತಿಮಗೊಳಿಸಿದೆ. ಹೀಗಾಗಿ, ಎಡಗೈ ಪಂಗಡಕ್ಕೆ ಸೇರಿದ ಟಿಕೆಟ್ ಆಕಾಂಕ್ಷಿಗಳು ಗುರುವಾರ ಸಂಜೆ ನಗರದಲ್ಲಿ ಪಕ್ಷದ ನಾಯಕರ ವಿರುದ್ಧ ಘೋಷಣೆ ಕೂಗಿದ್ದಾರೆ.

ಇನ್ನೊಂದೆಡೆ, ನೆಹರು ಓಲೇಕಾರ ಹೊರತು ಪಡಿಸಿ ಇತರ ಆಕಾಂಕ್ಷಿಗಳ ಸಭೆಯನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ ಶುಕ್ರವಾರ ಕರೆದಿದ್ದು, ಮುಂದಿನ ನಡೆಯು ಕುತೂಹಲ ಮೂಡಿಸಿದೆ.

ಕಾಂಗ್ರೆಸ್, ಜೆಡಿಎಸ್‌ನಲ್ಲೂ ಬಂಡಾಯ

ಬಂಡಾಯದ ಬಿಸಿ ಕೇವಲ ಬಿಜೆಪಿಗೆ ಮಾತ್ರವಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೂ ತಟ್ಟಿದೆ. ಈಗಾಗಲೇ ಬ್ಯಾಡಗಿ, ಹಿರೇಕೆರೂರ, ಹಾನಗಲ್‌ ಕ್ಷೇತ್ರದಲ್ಲಿ ಜೆಡಿಎಸ್ ಆಕಾಂಕ್ಷಿಗಳು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಘೋಷಣೆ ಮಾಡಿದ್ದರೆ, ಉಳಿದೆಡೆ ಕಾದು ನೋಡಬೇಕಾಗಿದೆ. ಕಾಂಗ್ರೆಸ್‌ನಲ್ಲಿ ಟಿಕೆಟ್ ವಂಚಿತ ಕೆಲವು ನಾಯಕರು ಬಿಜೆಪಿ ಸೇರುವ ಸಾಧ್ಯತೆ ಹೆಚ್ಚಾಗಿದೆ. ನಾಮಪತ್ರ ಸಲ್ಲಿಕೆಯ ಕೊನೆ ತನಕ ಕುತೂಹಲ ಮುಂದುವರಿಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry