ಹಾವೇರಿ ಜಿಲ್ಲೆ: ಆರು ಕ್ಷೇತ್ರಗಳಿಂದ 7 ನಾಮಪತ್ರ

7

ಹಾವೇರಿ ಜಿಲ್ಲೆ: ಆರು ಕ್ಷೇತ್ರಗಳಿಂದ 7 ನಾಮಪತ್ರ

Published:
Updated:

 

ಹಾವೇರಿ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಒಟ್ಟು ಏಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.ಹಾನಗಲ್‌ ಕ್ಷೇತ್ರದಿಂದ ಹನುಮಂತಪ್ಪ ಚನ್ನಬಸಪ್ಪ ತಳವಾರ (ಪಕ್ಷೇತರ), ಶಿಗ್ಗಾವಿ ಕ್ಷೇತ್ರ–ಸೋಮಣ್ಣ ಮಲ್ಲಪ್ಪ ಬೇವಿನಮರದ (ಪಕ್ಷೇತರ), ಹಾವೇರಿ–ದುರಗಪ್ಪ ಗಾಳೆಪ್ಪ ಮಾದರ (ಪಕ್ಷೇತರ), ಬ್ಯಾಡಗಿ ಕ್ಷೇತ್ರ–ಶಿವನಗೌಡ ರಾಜಶೇಖರಗೌಡ ಪಾಟೀಲ (ಕಾಂಗ್ರೆಸ್), ಹಿರೇಕೆರೂರು ಕ್ಷೇತ್ರ–ಯು.ಬಿ.ಬಣಕಾರ (ಬಿಜೆಪಿ), ಅನ್ನಪೂರ್ಣದೇವಿ ಉಜಣೇಶ್ವರ ಬಣಕಾರ (ಬಿಜೆಪಿ), ಸಿದ್ದಪ್ಪ ಲಕ್ಷ್ಮಪ್ಪ ಗುಡದಪ್ಪನವರ (ಜೆಡಿಎಸ್‌) ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಏ.17 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಮೊದಲ ದಿನ ಒಂದು ಸಲ್ಲಿಕೆಯಾಗಿತ್ತು. ಗುರುವಾರದವರೆಗೆ ಜಿಲ್ಲೆಯಲ್ಲಿ ಒಟ್ಟು ಎಂಟು ನಾಮಪತ್ರಗಳು ಸಲ್ಲಿಕೆಯಾಗಿವೆ.

ಬಣಕಾರ ನಾಮಪತ್ರ ಸಲ್ಲಿಕೆ

ಹಿರೇಕೆರೂರ: ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಯು.ಬಿ.ಬಣಕಾರ ಅವರು ಗುರುವಾರ ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿ ವಿನೋದಕುಮಾರ ಹೆಗ್ಗಳಗಿ ಅವರಿಗೆ ಸಲ್ಲಿಸಿದರು.

ಬೆಳಿಗ್ಗೆ ಇಲ್ಲಿನ ವಿದ್ಯಾ ನಗರದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಾವಿರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿದರು. ಶಾಸಕ ಯು.ಬಿ.ಬಣಕಾರ ಹಾಗೂ ಮುಖಂಡರು ತೆರೆದ ಜೀಪಿನಲ್ಲಿ ಸಾಗಿದರೆ, ನೂರಾರು ಕಾರ್ಯಕರ್ತರು ಬಿಜೆಪಿ ಧ್ವಜದೊಂದಿಗೆ ಜೈಕಾರ ಹಾಕುತ್ತಾ, ಕುಣಿಯುತ್ತಾ ತಹಶೀಲ್ದಾರ್ ಕಚೇರಿಯವರೆಗೆ ಅವರೊಂದಿಗೆ ಸಾಗಿದರು.

ಮಾಜಿ ಶಾಸಕ ಡಿ.ಎಂ.ಸಾಲಿ, ಸಹಕಾರಿ ಧುರೀಣ ಎಸ್.ಎಸ್.ಪಾಟೀಲ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಆರ್.ಅಂಗಡಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹೇಮಣ್ಣ ಮುದಿರೆಡ್ಡೇರ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎನ್.ಎಂ.ಈಟೇರ, ಸುಮಿತ್ರಾ ಬಸನಗೌಡ ಪಾಟೀಲ, ಶಿವರಾಜ ಹರಿಜನ, ಕೆಸಿಸಿ ಬ್ಯಾಂಕ್‌ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ರಾಜಶೇಖರ ಹಂಪಾಳಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿಹಾಜರಿದ್ದರು.

ಬಣಕಾರ ಆಸ್ತಿ ವಿವರ: ತಮ್ಮ ಬಳಿ ₹1.28 ಕೋಟಿ ಮೌಲ್ಯದ ಚರಾಸ್ತಿ ಹಾಗೂ ₹55.61 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ. ಯೂನಿಯನ್ ಬ್ಯಾಂಕ್‌ನಲ್ಲಿ ₹3 ಲಕ್ಷ ಸಾಲವಿದೆ. ಪತ್ನಿ ಅನ್ನಪೂರ್ಣ ಬಣಕಾರ ಹೆಸರಿನಲ್ಲಿ ₹42.94 ಲಕ್ಷ ಮೌಲ್ಯದ ಚರಾಸ್ತಿ, ಪುತ್ರ ಶರತ್‌ಚಂದ ಹೆಸರಿನಲ್ಲಿ ₹37.41ಲಕ್ಷ ಚರಾಸ್ತಿ ಹಾಗೂ ₹3.36 ಲಕ್ಷ ಸ್ಥಿರಾಸ್ತಿ ಇದೆ ಎಂದು ಶಾಸಕ ಯು.ಬಿ.ಬಣಕಾರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ.

ತಮ್ಮ ಹೆಸರಿನಲ್ಲಿ ಸ್ವಗ್ರಾಮ ಚಿಕ್ಕೋಣತಿಯಲ್ಲಿ ಪಿತ್ರಾರ್ಜಿತ 22 ಎಕರೆ ಕೃಷಿ ಭೂಮಿ ಇದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾದ 360 ಚ.ಮೀ. ನಿವೇಶನ, ಹಿರೇಕೆರೂರಿನಲ್ಲಿ 2,382 ಚ.ಅ. ಹಾಗೂ ರಾಣೇಬೆನ್ನೂರಿನ ಹುಣಸಿಕಟ್ಟಿ ರಸ್ತೆಯಲ್ಲಿ 2,400 ಚ.ಅ. ನಿವೇಶನಿದೆ. ಪುತ್ರನ ಹೆಸರಿನಲ್ಲಿ ಹಿರೇಕೆರೂರಿನಲ್ಲಿ ಎರಡು 108 ಚ.ಮೀ. ನಿವೇಶನ ಇವೆ. ತಮ್ಮ ಹೆಸರಿನಲ್ಲಿ ₹6,63,076 ಮೌಲ್ಯದ ಬೊಲೆರೊ ವಾಹನ ಹಾಗೂ ₹18 ಲಕ್ಷ ಮೌಲ್ಯದ ಇನ್ನೊವಾ ಕಾರ್, 3 ಕೆ.ಜಿ. ಬೆಳ್ಳಿ ಹಾಗೂ 1,100 ಗ್ರಾಂ ಬಂಗಾರ ಇದೆ. ತಾವು ಬಿ.ಎ., ಎಲ್ಎಲ್‌ಬಿ ಪದವೀಧರರಾಗಿದ್ದು, ಪತ್ನಿ ಅನ್ನಪೂರ್ಣ ಬಿ.ಎ. ಪದವಿ ಪಡೆದಿದ್ದಾರೆ. ಪುತ್ರ ಶರತ್‌ಚಂದ ಎಂ.ಟೆಕ್ ಮುಗಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬೇವಿನಮರದ ₹2.78ಕೋಟಿ ಆಸ್ತಿಯ ಒಡೆಯ

ಹಾವೇರಿ: ಶಿಗ್ಗಾವಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಅವರು ಸುಮಾರು ₹2.78 ಕೋಟಿ ಮೌಲ್ಯದ ವಿವಿಧ ಆಸ್ತಿಗಳ ಮಾಲೀಕರು.

ಅವರ ಹೆಸರಿನಲ್ಲಿ 2.25 ಕೋಟಿ ಸ್ಥಿರಾಸ್ತಿ ಹಾಗೂ ₹53.40 ಲಕ್ಷ ಚರಾಸ್ತಿಗಳಿವೆ. ಪತ್ನಿ ವಿಜಯಲಕ್ಷ್ಮಿ ಹೆಸರಿನಲ್ಲಿ ₹68 ಲಕ್ಷ ಸ್ಥಿರಾಸ್ತಿ ಹಾಗೂ ₹25.83 ಲಕ್ಷ ಚರಾಸ್ತಿಗಳಿವೆ. ನಾಲ್ಕು ಮಕ್ಕಳ ಹೆಸರಲ್ಲಿ ಸುಮಾರು ₹20 ಲಕ್ಷ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಇದೆ.

ಈ ಪೈಕಿ ಶಿಗ್ಗಾವಿ ವಿವಿಧೆಡೆ ಕೃಷಿ ಹಾಗೂ ವಿವಿಧ ಜಮೀನುಗಳು ಇವೆ. ಎರ್ಟಿಗಾ, ಇನ್ನೋವಾ ಮತ್ತು ಟ್ರ್ಯಾಕ್ಟರ್ ಇವೆ. ಅಲ್ಲದೇ, ಸುಮಾರು ₹50 ಲಕ್ಷ ಸಾಲ ಇದೆ ಎಂದು ನಾಮಪತ್ರದಲ್ಲಿ ಸಲ್ಲಿಸಿದ ಆಸ್ತಿ ವಿವರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಪ್ರಥಮ ನಾಮಪತ್ರ ಸಲ್ಲಿಕೆ

ಹಾನಗಲ್: ಹಾನಗಲ್‌ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಪ್ರಥಮ ನಾಮಪತ್ರ ಸಲ್ಲಿಕೆಯಾಗಿದ್ದು, ತಾಲ್ಲೂಕಿನ ತುಮರಿಕೊಪ್ಪ ಗ್ರಾಮದ ಹನುಮಂತಪ್ಪ ಚನ್ನಬಸಪ್ಪ ತಳವಾರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. 50 ವರ್ಷದ ಇವರು ಕೃಷಿಕರಾಗಿದ್ದು, ಪತ್ನಿ ಮತ್ತು ಇಬ್ಬರು ಅವಲಂಬಿತರು, 6 ನೇ ತರಗತಿ ಓದಿದ್ದಾರೆ. ₹2.50 ಲಕ್ಷ ಬ್ಯಾಂಕ್‌ ಖಾತೆಯಲ್ಲಿ, 50 ಗ್ರಾಮ ಬಂಗಾರ ಹಾಗೂ 1 ಎಕರೆ 35 ಗುಂಟೆ ಜಮೀನಿನಲ್ಲಿ ವ್ಯವಸ್ಥಾಯ ಮಾಡಿಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry