ಖಮರುಲ್‌ ಇದ್ದಿದ್ದರೆ ಚುನಾವಣೆಗೆ ‘ಜೋಶ್‌’

7
ಪ್ರಚಾರ ಸಭೆಯಲ್ಲಿ ಖಮರುಲ್, ಧರ್ಮ ಸಿಂಗ್ ನೆನೆದ ಖರ್ಗೆ

ಖಮರುಲ್‌ ಇದ್ದಿದ್ದರೆ ಚುನಾವಣೆಗೆ ‘ಜೋಶ್‌’

Published:
Updated:

ಕಲಬುರ್ಗಿ: ‘ಖಮರುಲ್‌ ಇಸ್ಲಾಂ ಬದುಕಿದ್ದರೆ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತ್ತಷ್ಟು ‘ಜೋಶ್‌’ ಇರುತ್ತಿತ್ತು’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

‘ಎನ್‌.ಧರ್ಮಸಿಂಗ್‌, ಖಮರುಲ್‌ ಇಸ್ಲಾಂ ಕಲಬುರ್ಗಿಗೆ ಸಾಕಷ್ಟು ಕೊಡುಗೆಳನ್ನು ನೀಡಿದ್ದಾರೆ. ಅವರ ಜತೆಗೆ ನಾನೂ ಕೆಲಸ ಮಾಡಿದ್ದೇನೆ. ಒಟ್ಟಾಗಿಯೇ ಹೋರಾಟ ನಡೆಸಿದ್ದೇವೆ. ಆದರೆ, ಈಗ ಇಬ್ಬರೂ ನಮ್ಮೊಂದಿಗಿಲ್ಲ’ ಎಂದು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಸ್ಲಿಂ ಚೌಕ್‌ನಲ್ಲಿ ಗುರುವಾರ ರಾತ್ರಿ ನಡೆದ ಪ್ರಚಾರ ಸಭೆಯಲ್ಲಿ ಅವರು ಸ್ಮರಿಸಿದರು.

‘ಅವರ ಹೋರಾಟ ವ್ಯರ್ಥ ಆಗಬಾರದು. ಅದನ್ನು ನಾವು ಮುಂದುವರಿಸಬೇಕು. ಕಾಂಗ್ರೆಸ್‌ಗೆ ಶಕ್ತಿ ತುಂಬುವ ಕೆಲಸ ಮಾಡಬೇಕು’ ಎಂದು ಕಾರ್ಯಕರ್ತರಿಗೆ ತಿಳಿಸಿದರು.

‘ಪಕ್ಷದಲ್ಲೂ ಸಣ್ಣಪುಟ್ಟ ತಪ್ಪುಗಳಾಗಿವೆ. ಅವುಗಳನ್ನು ದೊಡ್ಡದು ಮಾಡಬೇಡಿ. ಸಂಘಟಿತರಾಗಿ ದುಡಿಯೋಣ. ನಮ್ಮ ಅಭಿವೃದ್ಧಿ ಕೆಲಸಗಳನ್ನು ಮತದಾರರಿಗೆ ತಿಳಿಸೋಣ’ ಎಂದರು.

‘ಪ್ರಣಾಳಿಕೆಯಲ್ಲಿ ನೀಡಿದ್ದ 160 ಪೈಕಿ 155 ಭರವಸೆಗಳನ್ನು ಈಡೇರಿಸಿದ್ದೇವೆ. ಮಾಡಿದ ಕೆಲಸಕ್ಕೆ ಕೂಲಿ ಕೇಳಲು ಬಂದಿದ್ದೇವೆ. ಕೂಲಿ ಕೊಡಿ ಎಂದು ಮನವಿ ಮಾಡಿದ ಅವರು,ಬಿಜೆಪಿಯವರು ಏನು ಕೊಟ್ಟಿದ್ದಾರೆ. ಯಾವ ಮುಖ ಇಟ್ಟುಕೊಂಡು ಮತ ಕೇಳಲು ಬರುತ್ತಾರೆ’ ಎಂದು ಟೀಕಿಸಿದರು.

‘ಕರ್ನಾಟಕ ವಿಧಾನಸಭಾ ಚುನಾವಣೆ ವ್ಯಕ್ತಿಗಳ ಸೋಲು–ಗೆಲುವಿಗಾಗಿ ನಡೆಯುತ್ತಿಲ್ಲ. ಎರಡು ಸಿದ್ಧಾಂತಗಳ ನಡುವಿನ ಸಂಘರ್ಷ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಲ್ಪಸಂಖ್ಯಾತರು, ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ಗೋರಕ್ಷಣೆ ಹೆಸರಲ್ಲಿ ಹಲ್ಲೆಗಳು ನಡೆಯುತ್ತಿವೆ. ಸಂವಿಧಾನ ಬದಲಾಯಿಸುವ ಮಾತು ಮುಂಚೂಣಿಗೆ ಬಂದಿದೆ. ಇದಕ್ಕೆ ಮತದಾರರು ಉತ್ತರ ಕೊಡದಿದ್ದರೆ ದೇಶ ದಿವಾಳಿಯಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕನ್ನೀಜ್ ಫಾತಿಮಾ ಮಾತನಾಡಿದರು. ಸಚಿವ ಡಾ.ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್‌ ಸದಸ್ಯ ಇಕ್ಬಾಲ್ ಅಹ್ಮದ್ ಸರಡಗಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಎನ್‌ಇಕೆಆರ್‌ಟಿಸಿ ಅಧ್ಯಕ್ಷ ಇಲಿಯಾಸ್‌ ಸೇಠ್‌ ಭಾಗವಾನ್, ಕುಡಾ ಅಧ್ಯಕ್ಷ ಅಸಗರ್ ಚುಲಬುಲ್‌, ಮುಖಂಡರಾದ ಡಾ.ಮುಸ್ತಾಕ್‌ ಬಾಬಾ,ಆಲಂ ಖಾನ್ ಇದ್ದರು.

ಪದೇಪದೇ ಗಡಿಯಾರ ನೋಡಿದ ಖರ್ಗೆ

ನಗರದ ಮುಸ್ಲಿಂ ಚೌಕ್‌ನಲ್ಲಿ ಸಂಜೆ 7ಕ್ಕೆ ಪ್ರಚಾರ ಸಭೆ ನಿಗದಿಯಾಗಿತ್ತು. ಮುಖಂಡರು ತಡವಾಗಿ ಬಂದ ಕಾರಣ ಕಾರ್ಯಕ್ರಮ 9ಕ್ಕೆ ಶುರುವಾಯಿತು. ಹಾರ–ತುರಾಯಿಗಳನ್ನೆಲ್ಲ ಬದಿಗೊತ್ತಿದ ಸಂಸದ ಖರ್ಗೆ ಭಾಷಣ ಮಾಡಲು ಮೈಕ್‌ನತ್ತ ತೆರಳಿದರು. ಮಾತು ಆರಂಭಕ್ಕೂ ಮೊದಲೇ ಗಡಿಯಾರ ನೋಡಿದ ಅವರು ‘ಇನ್ನೂ 30 ನಿಮಿಷ ಇದೆ’ ಎಂದರು. ಭಾಷಣದ ನಡುವೆಯೇ ಸಚಿವ ಡಾ.ಶರಣಪ್ರಕಾಶ ಚೀಟಿಯೊಂದನ್ನು ಕೊಟ್ಟು ‘ಚುನಾವಣಾ ಸಮಯ’ ಎಂದು ನೆನಪಿಸಿದರು. ಆಗ ‘ಇನ್ನೂ 10 ನಿಮಿಷ ಇದೆ’ ಎಂದ ಖರ್ಗೆ ಮಾತು ಮುಂದುವರಿಸಿದರು. ಆಯೋಗ ನಿಗಪಡಿಸಿದ ಸಮಯಕ್ಕೂ ಮೊದಲೇ ಅವರು ಪೂರ್ಣ ವಿರಾಮ ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry