ವರ್ತೂರು ಗೆಲ್ಲಿಸಿಕೊಳ್ಳಲು ಸಂಸದರ ಕುತಂತ್ರ

5
ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಸಭೆಯಲ್ಲಿ ಮುನಿಯಪ್ಪ ವಿರುದ್ಧ ಮುಖಂಡರ ಗಂಭೀರ ಆರೋಪ

ವರ್ತೂರು ಗೆಲ್ಲಿಸಿಕೊಳ್ಳಲು ಸಂಸದರ ಕುತಂತ್ರ

Published:
Updated:
ವರ್ತೂರು ಗೆಲ್ಲಿಸಿಕೊಳ್ಳಲು ಸಂಸದರ ಕುತಂತ್ರ

ಕೋಲಾರ: ‘ಶಾಸಕ ವರ್ತೂರು ಪ್ರಕಾಶ್‌ ಅವರನ್ನು ಮತ್ತೊಮ್ಮೆ ಗೆಲ್ಲಿಸಿಕೊಳ್ಳಲು ಸಂಸದ ಕೆ.ಎಚ್.ಮುನಿಯಪ್ಪ ಹೊರಗಿನ ಅಲ್ಪಸಖ್ಯಾತ ಜಮೀರ್‌ ಪಾಷಗೆ ಕಾಂಗ್ರೆಸ್ ಟಿಕೆಟ್ ಕೋಡಿಸಿದ್ದಾರೆ’ ಎಂದು ಕೆಯುಡಿಎ ಮಾಜಿ ಅಧ್ಯಕ್ಷ ಖಯ್ಯೂಂ ಆರೋಪಿಸಿದರು.

ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತರ ಸಭೆಯಲ್ಲಿ ಮಾತನಾಡಿ, ‘ಸ್ಥಳೀಯ ಅಲ್ಪ ಸಂಖ್ಯಾತರನ್ನು ಸಂಸದ ಕೆ.ಎಚ್.ಮುನಿಯಪ್ಪ ಕಡೆಗಣಿಸಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದರು.

‘ಕಾಂಗ್ರೆಸ್ ಪಕ್ಷ 25 ವರ್ಷಗಳಿಂದ ಕ್ಷೇತ್ರದಲ್ಲಿ ಜೀವ ಕಳೆದು ಕೊಂಡಿದೆ. ಇಲ್ಲಿರುವ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ದಲಿತ ವರ್ಗಗಳು ಹಾಗು ಒಕ್ಕಲಿಗ ಸಮುದಾಯದವರಿಗೆ ಬೆಲೆ ಇಲ್ಲದಂತಾಗಿದೆ. ಕಾಂಗ್ರೆಸ್ ಪಕ್ಷವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಎಲ್ಲ ವರ್ಗದ ಹಿತಾಸಕ್ತಿಯನ್ನು ಹಾಳು ಮಾಡುತ್ತಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ಮತ್ತಷ್ಟು ಹಾಳಾಗುವ ನಿರೀಕ್ಷೆ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಲ್ಪಸಂಖ್ಯಾತರ ಹೆಸರಿನಲ್ಲಿ ಕಳೆದ ಬಾರಿ ನಸೀರ್ ಅಹಮದ್ ಅವರನ್ನು ನಂಬಿಸಿ ಕಾಂಗ್ರೆಸ್ ಟಿಕೆಟ್ ಕೊಡಿಸಿ ಬೆಂಬಲ ನೀಡದೆ ಮೋಸ ಮಾಡಿದರು. ಇತರೆ ಸಮುದಾಯಗಳ ಮತಗಳನ್ನು ಚದುರಿಸಿ ವರ್ತೂರು ಪ್ರಕಾಶ್‌ನನ್ನು ಗೆಲ್ಲಿಸಿಕೊಂಡರು. ಈಗ ಜಮೀರ್ ಪಾಷಾ ಅವರಿಗೆ ಕೊಡಿಸಿ ಬೀದಿಪಾಲು ಮಾಡಲು ಮುಂದಾಗಿದ್ದಾರೆ’ ಎಂದು ಆಕ್ರೋಶವ್ಯಕ್ತಪಡಿಸಿದರು.

‘ನಾವು ಮುನಿಯಪ್ಪ ಅವರ ಹರಕೆ ಕುರಿಗಳಾಗುವುದು ಬೇಡ. ಅವರ ಕುತಂತ್ರಕ್ಕೆ ಪ್ರತಿತಂತ್ರ ಮಾಡುವ ಮೂಲಕ ಪಾಠ ಕಲಿಸಬೇಕು’ ಎಂದು ನಗರಸಭೆ ಮಾಜಿ ಅಧ್ಯಕ್ಷ ಖದೀರ್ ಅಹಮದ್ ಸಲಹೆ ನೀಡಿದರು.

‘ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವರು ಸಾಕಷ್ಟು ಮಂದಿ ಇದ್ದಾರೆ. ಹಿಂದುಳಿದ ವರ್ಗದಿಂದ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಅಲ್ಪಸಂಖ್ಯಾತ ವರ್ಗದಿಂದ ಮಾಜಿ ಶಾಸಕ ನಿಸಾರ್ ಅಹಮದ್, ಒಕ್ಕಲಿಗ ಸಮುದಾಯದಿಂದ ಎಂ.ಎಲ್.ಅನಿಲ್ ಕುಮಾರ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಅದರಂತೆ ಸ್ಥಳೀಯರು ಅವರು ಕಾಂಗ್ರೆಸ್‌ಗೆ ಸಲ್ಲಿಸಿರುವ ಸೇವೆಯನ್ನು ಬೆಂಬಲಿಸಿ ಟಿಕೆಟ್ ಕೊಡುವಂತೆ ಪಕ್ಷದ ನಾಯಕರಲ್ಲಿ ವಿನಂತಿಸಿಕೊಂಡಿದ್ದರು ಯಾವುದೇ ಪ್ರಯೋಜನೆಯಾಗಿಲ್ಲ’ ಎಂದರು.

‘ಜಮೀರ್ ಪಾಷಾ ನಿವೃತ್ತ ಐಎಎಸ್ ಅಧಿಕಾರಿ ಮತ್ತು ಅವರಲ್ಲಿ ಹಣ ಇದೆ ಎನ್ನುವುದು ಬಿಟ್ಟರೆ ಅವರಿಗೆ ಬೇರೇನೂ ಮಾನದಂಡ ಇಲ್ಲ. ಒಂದು ದಿನವೂ ಪಕ್ಷದಲ್ಲಿ ನಿಂತು ಕೆಲಸ ಮಾಡಿಲ್ಲ. ಇಂತಹ ವ್ಯಕ್ತಿಗೆ ಟಿಕೆಟ್ ಕೊಡಿಸಿ ಪರೋಕ್ಷವಾಗಿ ಶಾಸಕ ವರ್ತೂರು ಪ್ರಕಾಶ್ ಅವರನ್ನು ಗೆಲ್ಲಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಹತ್ತು ವರ್ಷಗಳಿಂದ ವರ್ತೂರು ಪ್ರಕಾಶ್ ಅಲ್ಪ ಸಂಖ್ಯಾತರ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಮೊದಲ ಬಾರಿಗೆ ಅವರು ನಮ್ಮ ಮತಗಳಿಂದ ಗೆದ್ದು ಬಿಜೆಪಿಗೆ ಬೆಂಬಲ ನೀಡಿದರು. ನಮ್ಮ ಜನ ಏನಾಗಿದ್ದಾರೆ ಎನ್ನುವುದರ ಬಗ್ಗೆ ಅವರಿಗೆ ಅರಿವೇ ಇರಲಿಲ್ಲ. 2013 ರಲ್ಲಿ ಗೆದ್ದವರು ಇತ್ತ ತಿರುಗಿಯೂ ನೋಡಲಿಲ್ಲ. ಈ ಸಲ ವರ್ತೂರು ಪ್ರಕಾಶ್ ಸೋಲಿಗೆ ಸಂಘಟಿತರಾಗಿ ಶ್ರಮಿಸಬೇಕು’ ಎಂದು ಹೇಳಿದರು.

ನಗರಸಭೆ ಸದಸ್ಯರಾದ ನವಾಜ್, ಶಫಿ, ವಕ್ಫ್ ಬೋರ್ಡ್ ಉಪಾಧ್ಯಕ್ಷ ಶಂಷೀದ್, ಮುಖಂಡರಾದ ಇಮ್ರಾನ್, ಜಿಯಾ ಹಾಜರಿದ್ದರು.

**

ಸಂಸದ ಕೆ.ಎಚ್.ಮುನಿಯಪ್ಪ ಸ್ಥಳೀಯ ಅಲ್ಪಸಂಖ್ಯಾತರನ್ನು ಕಡೆಗಣಿಸಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲು ಈಗಿನಿಂದಲ್ಲೇ ಸಂಘಟಿತರಾಗಬೇಕು –  ಖಯ್ಯೂಂ, ಕೆಯುಡಿಎ ಮಾಜಿ ಅಧ್ಯಕ್ಷ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry