ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ನ್ಯಾಯ ಆಧರಿಸಿ ಟಿಕೆಟ್

ಆಂಜನೇಯಸ್ವಾಮಿ, ಸಾಯಿಬಾಬಾಗೆ ಪೂಜೆ ಸಲ್ಲಿಸಿದ ಸಂಸದ ಮುನಿಯಪ್ಪ
Last Updated 20 ಏಪ್ರಿಲ್ 2018, 8:53 IST
ಅಕ್ಷರ ಗಾತ್ರ

ಕೋಲಾರ: ‘ಚುನಾವಣೆ ಸಂದರ್ಭದಲ್ಲಿ ಟಿಕೆಟ್‌ಗಾಗಿ ಅರ್ಜಿ ಹಾಕಿಕೊಂಡವರಿಗೆಲ್ಲಾ ಕೊಡಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದಿಂದ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಟಿಕೆಟ್‌ ನೀಡಲಾಗಿದೆ’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಎಂದು ಹೇಳಿದರು.

ಜಿಲ್ಲೆಯ ಕೆಜಿಎಫ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರೂಪಾಶಶಿಧರ್ ಗುರುವಾರ ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಕೊಂಡರಾಜನಹಳ್ಳಿ, ಸಾಯಿಬಾಬಾ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಎಲ್ಲ ಸಮುದಾಯಗಳನ್ನು ಸಮನಾಗಿ ನೋಡಬೇಕು ಎನ್ನುವ ದೃಷ್ಟಿಯಿಂದ ತಾಲ್ಲೂಕು, ಜಿಲ್ಲಾ, ರಾಜ್ಯ ಮಟ್ಟದ ವರದಿಗಳನ್ನು ಪಡೆದ ಬಳಿಕ
ವೇ ಹೈಕಮಾಂಡ್ ತೀರ್ಮಾನ ಕೈಗೊಂಡಿದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಲಿದ್ದಾರೆ. ನ್ಯಾಯಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಚುನಾವಣೆ ಸಂದರ್ಭದಲ್ಲಿ ಟಿಕೆಟ್‌ಗಾಗಿ ಎಲ್ಲ ಪಕ್ಷಗಳಿಂದಲೂ 5ರಿಂದ 10 ಮಂದಿ ಆಕಾಂಕ್ಷಿಗಳು ಇರುತ್ತಾರೆ. ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯ ಮುಖ್ಯವಾಗಿದೆ. ಆ ನಿಟ್ಟಿನಲ್ಲಿಯೇ ಟಿಕೆಟ್‌ ನೀಡಲಾಗಿದೆ’ ಎಂದು ತಿಳಿಸಿದರು.

‘ಸಾಮಾಜಿಕ ನ್ಯಾಯ ಎನ್ನುವುದು ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖವಾಗಿದೆ. ಯಾವ ವರ್ಗಕ್ಕೂ ಅನ್ಯಾಯವಾಗದಿರಲಿ ಎನ್ನುವ ನಿಟ್ಟಿನಲ್ಲಿ  ಕ್ರಮಕೈಗೊಂಡಿದ್ದೇವೆ. ಯಾವುದಾದರೂ ವರ್ಗ ಬಿಟ್ಟು ಹೋಗಿದ್ದರೆ ಅದಕ್ಕೆ ಇನ್ನೊಂದು ರೂಪದಲ್ಲಿ ವ್ಯವಸ್ಥೆ ಮಾಡಲು ಈಗಾಗಲೇ ಮುಖ್ಯಮಂತ್ರಿ ಜತೆ ಮಾತನಾಡಿದ್ದೇವೆ’ ಎಂದು ಹೇಳಿದರು.

‘ಕೋಲಾರ ಜಿಲ್ಲೆಯಲ್ಲಿ 6 ಕ್ಷೇತ್ರಗಳಲ್ಲಿಯೂ ಗೆಲ್ಲುವ ವಿಶ್ವಾಸವಿದೆ. ಗಾಂಧೀಜಿ ನಾಯಕತ್ವದ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿತು. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದ ರಕ್ಷಣೆ ಮಾಡುವ ಸಲುವಾಗಿ ಸಾಮಾಜಿಕ ನ್ಯಾಯ ಗಮನದಲ್ಲಿಟ್ಟುಕೊಂಡು ಪಕ್ಷಕ್ಕೆ ಆಶೀರ್ವಾದ ಮಾಡಬೇಕು’ ಎಂದು ಕೋರಿದರು.

ಕ್ಷೇತ್ರದಲ್ಲಿ ಎದ್ದಿರುವ ಬಂಡಾಯಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಸರಿಯಾಗಿ ಪ್ರತಿಕ್ರಿಯಿಸದ ಸಂಸದ ಮುನಿಯಪ್ಪ, ‘ಇಲ್ಲಿನ ಬಂಡಾಯಗಳೆಲ್ಲವೂ ಎರಡು ಮೂರು ದಿನಗಳಲ್ಲಿ ಉಪಶಮನಗೊಳ್ಳುತ್ತವೆ’ ಎಂದು ಉತ್ತರಿಸಿದರು.

ಕೆಜಿಎಫ್ ಕಾಂಗ್ರೆಸ್ ಅಭ್ಯರ್ಥಿ ರೂಪಾ ಶಶಿಧರ್, ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ, ನಗರ ಘಟಕದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಪ್ರಸಾದ್‍ಬಾಬು, ಜಿಲ್ಲಾ ಕಾಂಗ್ರೆಸ್ ಎಸ್‍ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಜಿಲ್ಲಾ ಕಾಂಗ್ರೆಸ್ ಖಜಾಂಚಿ ರಾಮ್‌ಪ್ರಸಾದ್, ಕೋಲಾರ ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಊರುಬಾಗಲು ಶ್ರೀನಿವಾಸ್ ಹಾಜರಿದ್ದರು.

ಕೆಜಿಎಫ್: ನಾಮಪತ್ರದಲ್ಲಿ ಸಲ್ಲಿಸಿರುವಂತೆ ರೂಪಾಶಶಿಧರ್ ರವರ ಒಟ್ಟು ಆಸ್ತಿ ₹ 7.73 ಕೋಟಿ. ₹ 5.41 ಕೋಟಿ ಸಾಲ ಸಹ ಮಾಡಿದ್ದಾರೆ. ಆದಾಯ ತೆರಿಗೆ ಇಲಾಖೆಗೆ 2016–17 ರಲ್ಲಿ ₹ 43,08,007 ಆದಾಯ ತೋರಿಸಲಾಗಿದೆ.

₹ 1.50 ಕೋಟಿಯನ್ನು ಭುವನ್‌ ಎಂಟರ್‌ ಪ್ರೈಸಸ್‌ನಲ್ಲಿ ಹೂಡಿಕೆ ಮಾಡಲಾಗಿದೆ. ಅನ್ನಪೂರ್ಣೇಶ್ವರಿ ಬಿವಿರೇಜ್‌ನಲ್ಲಿ ₹ 22 ಲಕ್ಷ, ಎಸ್‌ಬಿಐ ವಿಮೆಗೆ ವಾರ್ಷಿಕ ₹ 17 ಲಕ್ಷ ಹೂಡಿಕೆ ಮಾಡಿದ್ದಾರೆ. ಸಿಬ್ಬಂದಿಗೆ ₹ 45 ಲಕ್ಷ ಮುಂಗಡ ಹಣ ನೀಡಿದ್ದಾರೆ. 2014–15 ರಲ್ಲಿ ಎರಡು ಟೊಯೋಟೊ ಕಾರು ಖರೀದಿ ಮಾಡಿದ್ದಾರೆ. ‌500 ಗ್ರಾಂ ಚಿನ್ನ ಇದ್ದು, ಅದರ ಮೌಲ್ಯ 15 ಲಕ್ಷ. ಐಟಿಸಿಯಲ್ಲಿ ಚರಾಸ್ತಿ ₹ 50 ಲಕ್ಷ ರೂಪಾಯಿ ಇದೆ. ಎಚ್.ಡಿ.ಕೋಟೆಯ ಹಿರೇನಂದಿ ಗ್ರಾಮದಲ್ಲಿ ಮತ್ತು ಮಧುಗಿರಿ ಕಸಬಾ ಹೋಬಳಿಯ ಗಿಡ್ಡೇನಹಳ್ಳಿಯಲ್ಲಿ ಒಟ್ಟು ಆರು ಎಕರೆ ಜಮೀನು ಇದೆ. ಚಿಂತಾಮಣಿ ಬಳಿಯ ಕನ್ನಂಪಲ್ಲಿಯಲ್ಲಿ ಮೂರು ನಿವೇಶನ ಮತ್ತು ಕೆಂಗೇರಿ ಬಳಿ ಒಂದು ನಿವೇಶನ ಇದೆ. ನಗದು ₹ 12,10,500 ಇದೆ. ಚಿಂತಾಮಣಿಯ ಡಿಸಿಸಿ ಬ್ಯಾಂಕ್‌ನಲ್ಲಿ ₹ 5 ಕೋಟಿ, ಖಾಸಗಿ ವ್ಯಕ್ತಿಯೊಬ್ಬರಿಂದ ₹ 15 ಲಕ್ಷ ಹಾಗೂ ಬೆಂಗಳೂರು ಎಸ್‌ಬಿಐ ನಿಂದ ₹ 26 ಲಕ್ಷ   ಸಾಲ ಪಡೆದಿದ್ದಾರೆ. ರೂಪಾ ಅವರ ವಿರುದ್ಧ ಬಂಗಾರಪೇಟೆ ಮತ್ತು ಬೇತಮಂಗಲ ಪೊಲೀಸ್ ಠಾಣೆಗಳಲ್ಲಿ ಎರಡು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ.

ಮೆರವಣಿಗೆ: ರೂಪಾ ಶಶಿಧರ್‌ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಎಂ.ಜಿ.ವೃತ್ತದಿಂದ ನಗರಸಭೆ ಕಚೇರಿಯ ವರೆಗೆ ಮೆರವಣಿಗೆಯಲ್ಲಿ ಬಂದ ಮಧ್ಯಾಹ್ನ 12.30ಕ್ಕೆ ನಾಮಪತ್ರ ಸಲ್ಲಿಸಿದರು.

ಅರ್ಜಿಯಲ್ಲಿ ಕೆಲವು ಗೊಂದಲಗಳು ಇದ್ದ ಕಾರಣ ಒಂದು ಗಂಟೆ ನಾಮಪತ್ರವನ್ನು ನೀಡುವ ಪ್ರಕ್ರಿಯೆ ಜರುಗಿತು. ಎರಡು ಪ್ರತಿ ನಾಮಪತ್ರವನ್ನು ಸಲ್ಲಿಸಲಾಯಿತು. ಚುನಾವಣಾಧಿಕಾರಿ ಎನ್‌.ಸುರೇಶ್‌ ನಾಮಪತ್ರ ಸ್ವೀಕರಿಸಿದರು. ಇದಕ್ಕೂ ಮುನಿಯಪ್ಪ ಕುಟುಂಬದ ಸದಸ್ಯರು ನಗರಸಭೆ ಆವರಣದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಹೂವಿನಹಾರ ಹಾಕಿದರು. ಕಚೇರಿ ಒಳಗೆ ಪ್ರವೇಶಿಸುತ್ತಿದ್ದ ಮುನಿಯಪ್ಪ ಮತ್ತು ನಾಮಪತ್ರ ಅರ್ಜಿ ಪಡೆಯಲು ಬಂದಿದ್ದ ಆರ್‌ಪಿಐ ನ ಮಾಜಿ ಶಾಸಕ ಎಸ್‌.ರಾಜೇಂದ್ರನ್‌ ಮುಖಾಮುಖಿಯಾದರು. ಇಬ್ಬರೂ ಹಸ್ತಲಾಘವ ಮಾಡಿದರು.

ರೂಪಾ ಶಶಿಧರ್ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ಮುಟ್ಟಿಸುವ ಕೆಲಸ ಎಂಟು ವರ್ಷಗಳಿಂದ ಮಾಡುತ್ತ ಬಂದಿರುವೆ. ‌ಜನ ನಿರೀಕ್ಷೆಗೂ ಮೀರಿ ಉತ್ಸಾಹದಿಂದ ಇದ್ದಾರೆ ಎಂದರು.

**

ಚುನಾವಣೆ ಸಂದರ್ಭದಲ್ಲಿ ಆಕಾಂಕ್ಷಿಗಳು ಹುಟ್ಟಿಕೊಳ್ಳುತ್ತಾರೆ. ಹೈಕಮಾಂಡ್‌ಗೆ ಅರ್ಜಿ ಹಾಕಿಕೊಳ್ಳುತ್ತಾರೆ. ಆದರೆ ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಾಗುವುದಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಪ್ರತಿಯೊಬ್ಬರು ಗೌರವ ನೀಡಬೇಕು – ಕೆ.ಎಚ್.ಮುನಿಯಪ್ಪ, ಸಂಸದ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT