ಮಂಡ್ಯ: ಅಂಬರೀಷ್‌ ನಿರ್ಧಾರವೇ ಪ್ರಧಾನ

7
ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಮುಖಂಡರು

ಮಂಡ್ಯ: ಅಂಬರೀಷ್‌ ನಿರ್ಧಾರವೇ ಪ್ರಧಾನ

Published:
Updated:

ಮಂಡ್ಯ: ಶಾಸಕ ಅಂಬರೀಷ್‌ಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗಿ ನಾಲ್ಕು ದಿನ ಕಳೆದರೂ ಅವರು ಮಂಡ್ಯ ಕ್ಷೇತ್ರಕ್ಕೆ ಬಂದು ನಾಮಪತ್ರ ಸಲ್ಲಿಸುವ, ಪ್ರಚಾರ ಆರಂಭಿಸುವ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಕಾಂಗ್ರೆಸ್‌ ಮುಖಂಡರು ಮಾತ್ರವಲ್ಲದೆ ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರೂ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಹೊರತುಪಡಿಸಿ ಯಾವ ಅಭ್ಯರ್ಥಿ ಹೆಸರೂ ಅಂತಿಮಗೊಂಡಿಲ್ಲ. ಅಂಬರೀಷ್‌ ಸ್ಪರ್ಧೆ ಸ್ಪಷ್ಟವಾದರೆ ಬೇರೆ ಪಕ್ಷಗಳ ಮುಖಂಡರು ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತಾರೆ. ಜೆಡಿಎಸ್‌ನಲ್ಲಿ ಎಂ.ಶ್ರೀನಿವಾಸ್‌ ಹೆಸರು ಹರಿದಾಡುತ್ತಿದೆ. ಆದರೆ ಇನ್ನೊಂದೆಡೆ ಅವರು ಬಿಜೆಪಿಗೆ ಹಾರುವುದನ್ನು ತಪ್ಪಿಸುವ ಉದ್ದೇಶದಿಂದ ಅವರ ಹೆಸರು ಮುನ್ನೆಲೆಗೆ ತರಲಾಗಿದೆ, ಆದರೆ ಕಡೆ ಗಳಿಗೆಯಲ್ಲಿ ಅವರಿಗೆ ಟಿಕೆಟ್‌ ತಪ್ಪಿಸಿ ಬೇರೆಯವರಿಗೆ ನೀಡುತ್ತಾರೆ. ಎರಡು ಬಾರಿ ಶಾಸಕರಾಗಿರುವ ಎಂ.ಶ್ರೀನಿವಾಸ್‌ ಪಕ್ಷ ಬಿಟ್ಟರೆ ಜಿಲ್ಲೆಯಲ್ಲಿ ಕೆಟ್ಟ ಹೆಸರು ಬರುತ್ತದೆ ಎಂಬ ಉದ್ದೇಶದಿಂದ ಕಡೇ ಕ್ಷಣದವರೆಗೂ ಯಾವುದೇ ನಿರ್ಧಾರ ಪ್ರಕಟಿಸದಿರಲು ಜೆಡಿಎಸ್‌ ವರಿಷ್ಠರು ತಂತ್ರ ರೂಪಿಸಿದ್ದಾರೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಬಿಜೆಪಿಯಲ್ಲೂ ಯಾವುದೇ ಅಭ್ಯರ್ಥಿಯ ಹೆಸರು ಘೋಷಣೆಯಾಗಿಲ್ಲ. ಆದರೆ ಜಿಲ್ಲಾ ಪಂಚಾಯಿತಿ ಸದಸ್ಯ ಎನ್‌.ಶಿವಣ್ಣ ಜೆಡಿಎಸ್‌ ತ್ಯಜಿಸಿ ಬಿಜೆಪಿ ಸೇರಿದ್ದಾರೆ. ಕಳೆದ ಮೂರು ದಿನಗಳಿಂದ ಅವರು ಹಳ್ಳಿಹಳ್ಳಿ ತಿರುಗಿ ತಾನೇ ಅಭ್ಯರ್ಥಿ ಎಂದು ಹೇಳುತ್ತಾ ಪ್ರಚಾರ ನಡೆಸುತ್ತಿದ್ದಾರೆ. ಅವರಿಗೆ ಟಿಕೆಟ್‌ ನೀಡುವಂತೆ ಪಕ್ಷದ ಮುಖಂಡ ಎಸ್‌.ಎಂ.ಕೃಷ್ಣ ಪತ್ರ ಬರೆದಿರುವ ಕಾರಣ ಅವರಿಗೆ ಟಿಕೆಟ್‌ ದೊರೆಯುವ ಭರವಸೆ ಸಿಕ್ಕಿದೆ. ಇನ್ನೊಂದೆಡೆ ಐದು ರೂಪಾಯಿ ವೈದ್ಯ ಡಾ.ಎಸ್‌.ಸಿ.ಶಂಕರೇಗೌಡ ಅವರಿಗೂ ಜೆಡಿಎಸ್‌ ಟಿಕೆಟ್‌ ದೊರೆಯುವುದು ಅನುಮಾನ ಎಂದೇ ಬಿಂಬಿತವಾಗಿದೆ. ಹೀಗಾಗಿ ಅವರು ಬಿಜೆಪಿ ಬಾಗಿಲು ತಟ್ಟಿದ್ದಾರೆ. ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.‌

‘ಎಂ.ಶ್ರೀನಿವಾಸ್‌ ಅವರು ಜೆಡಿಎಸ್‌ನಲ್ಲಿ ಟಿಕೆಟ್‌ ವಂಚಿತವಾದರೆ ಅವರು ಬಿಜೆಪಿಯಿಂದ ಸ್ಪರ್ಧಿಸುವುದು ನಿಶ್ಚಿತ. ಈಗಾಗಲೇ ಎನ್‌.ಶಿವಣ್ಣ ಬಿಜೆಪಿಗೆ ಅಧಿಕೃತವಾಗಿ ಸೇರಿದ್ದಾರೆ. ಡಾ.ಶಂಕರೇಗೌಡ ಅವರು ಬಿಜೆಪಿಗೆ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಮುಂದೆ ಎಂ.ಶ್ರೀನಿವಾಸ್‌ ಅವರೂ ಬಿಜೆಪಿಗೆ ಬಂದರೆ ಮೂವರಲ್ಲಿ ಯಾರಿಗೆ ಟಿಕೆಟ್‌ ನೀಡಬೇಕು ಎಂಬ ಪ್ರಶ್ನೆ ಮೂಡುತ್ತದೆ. ಬಿಜೆಪಿ ವರಿಷ್ಠರು ಎಂ.ಶ್ರೀನಿವಾಸ್‌ಗೆ ಮಣೆ ಹಾಕುತ್ತಾರೆ. ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವ ಉದ್ದೇಶದಿಂದ ಮಾಜಿ ಶಾಸಕರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್‌ ನೀಡುವುದಿಲ್ಲ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಅಂಬರೀಷ್‌ ಷರತ್ತು: ಅಂಬರೀಷ್‌ ತಮ್ಮ ನಿರ್ಧಾರ ಪ್ರಕಟಿಸಿದ ನಂತರವಷ್ಟೇ ಕ್ಷೇತ್ರದಲ್ಲಿ ಚುನಾವಣೆ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ಅದಕ್ಕಾಗಿ ಅವರ ನಿರ್ಧಾರಕ್ಕಾಗಿ ಎಲ್ಲಾ ಪಕ್ಷಗಳ ಮುಖಂಡರು ಕಾಯುತ್ತಿದ್ದಾರೆ. ಆದರೆ ಅಂಬರೀಷ್‌ ಇನ್ನೂ ಬಿ.ಫಾರಂ ಪಡೆಯದ ಕಾರಣ ಕ್ಷೇತ್ರದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಮುಖಂಡರು ಅಂಬರೀಷ್ ಅವರನ್ನು ಮನವೊಲಿಸುತ್ತಿದ್ದರೂ ಈವರೆಗೆ ಯಾವ ನಿರ್ಧಾರವೂ ಹೊರಬಿದ್ದಿಲ್ಲ.

ಇನ್ನೊಂದೆಡೆ ಅಂಬರೀಷ್‌ ಪಕ್ಷದ ರಾಜ್ಯ ಮಟ್ಟದ ಮುಖಂಡರಿಗೆ ಕೆಲವು ಷರತ್ತು ಹಾಕಿದ್ದಾರೆ ಎಂಬ ಸುದ್ದಿ ಕ್ಷೇತ್ರದಾದ್ಯಂತ ಹರಿದಾಡುತ್ತಿದೆ. ಮುಂದೆ ಅವರಿಗೆ ನೀಡುವ ಸ್ಥಾನದ ಬಗ್ಗೆ ಈಗಲೇ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮಂತ್ರಿ ಸ್ಥಾನದಿಂದ ಕೈಬಿಡಲು ಸ್ಪಷ್ಟ ಕಾರಣ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಎನ್‌.ಚಲುವರಾಯಸ್ವಾಮಿ, ರಮೇಶ್‌ಬಾಬು ಬಂಡಿಸಿದ್ದೇಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೊದಲು ತಮ್ಮ ಜೊತೆ ಚರ್ಚೆ ನಡೆಸದಿರಲು ಕಾರಣ ತಿಳಿಸಬೇಕು ಎಂದು ಷರತ್ತು ಹಾಕಿದ್ದಾರೆ ಎಂಬ ಸುದ್ದಿ ಹರಡಿದೆ.

23 ಅಥವಾ 24ಕ್ಕೆ ನಾಮಪತ್ರ ಸಲ್ಲಿಕೆ?

‘ಅಂಬರೀಷ್‌ ಅವರು 23 ಅಥವಾ 24ರಂದು ನಾಮಪತ್ರ ಸಲ್ಲಿಸಲಿದ್ದಾರೆ. ನಮ್ಮ ಜೊತೆ ಎಲ್ಲಾ ವಿಷಯಗಳನ್ನು ಹಂಚಿಕೊಂಡಿದ್ದು ಯಾವುದೇ ಗೊಂದಲಗಳಿಲ್ಲ. ಅವರು ರಾಜ್ಯ ಮುಖಂಡರಲ್ಲಿ ಷರತ್ತು ವಿಧಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಕ್ಷೇತ್ರದಲ್ಲಿ ಅವರ ಹೆಸರು ಘೋಷಣೆ ಮಾಡಿದ್ದು ನಾಮಪತ್ರ ಸಲ್ಲಿಕೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಕ್ಷೇತ್ರದಾದ್ಯಂತ ಪ್ರಚಾರ ನಡೆಯುತ್ತಿದ್ದು ಅವರು ಪ್ರಚಾರ ಕಾರ್ಯಕ್ಕೆ ಸೇರ್ಪಡೆಗೊಳ್ಳುವರು’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry