ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ, ಪುತ್ರ ಇಬ್ಬರೂ ಗೆಲ್ಲುವುದಿಲ್ಲ

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ವಿ.ಶ್ರೀನಿವಾಸಪ್ರಸಾದ್ ಭವಿಷ್ಯ
Last Updated 20 ಏಪ್ರಿಲ್ 2018, 9:34 IST
ಅಕ್ಷರ ಗಾತ್ರ

ನಂಜನಗೂಡು: ‘ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿ ಬದಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೆದರಿ ಓಡಿ ಹೋಗಿ ಬಾದಾಮಿಯಲ್ಲಿ ಸ್ಪರ್ಧಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಇಬ್ಬರೂ ಗೆಲ್ಲುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಹೇಳಿದರು.

ನಗರದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬೆವರು ಹರಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಹ ಪ್ರಮುಖರು ಎರಡೆರಡು ಕ್ಷೇತ್ರಗಳಲ್ಲಿ ಟಿಕೆಟ್ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

‘ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಅವರ ಪರ ಕೆಲಸ ಮಾಡುವುದಾಗಿ ಪಕ್ಷದ ವರಿಷ್ಠರಿಗೆ ತಿಳಿಸಿದ್ದೆ. ಯಾರ ಪರವಾಗಿಯೂ ಲಾಬಿ ನಡೆಸಿಲ್ಲ. ಅಳಿಯನಿಗೆ ಟಿಕೆಟ್ ಕೊಡಿ ಅಂತ ಕೇಳಿಲ್ಲ. ಸಮೀಕ್ಷೆಯಲ್ಲಿ ಮತದಾರರ ಒಲವು ನೋಡಿಕೊಂಡು ಹರ್ಷವರ್ಧನ್ ಅವರಿಗೆ ಟಿಕೆಟ್ ನೀಡಿದ್ದಾರೆ. ಕೆಲವರು ತಪ್ಪುಗ್ರಹಿಕೆಯಿಂದ ಮಾತನಾಡುತ್ತಾರೆ. ಅವರ ಬಗ್ಗೆ ಬೇಸರವಿಲ್ಲ. ಟಿಕೆಟ್ ವಿಷಯವಾಗಿ ಎಲ್ಲ ಕ್ಷೇತ್ರದಲ್ಲೂ ಈ ರೀತಿ ಸಹಜವಾಗಿ ಗೊಂದಲ ಉಂಟಾಗಿದೆ’ ಎಂದು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಎಸ್.ಮಹದೇವಯ್ಯ ಕುರಿತು ಪರೋಕ್ಷವಾಗಿ ಮಾತನಾಡಿದರು.

‘ಏ.21ರಂದು ಹರ್ಷವರ್ಧನ್ ನಾಮಪತ್ರ ಸಲ್ಲಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು. ಹೆಚ್ಚಿನ ಮತ ನೀಡಿ ಆಶೀರ್ವಾದ ಮಾಡಬೇಕು’ ಎಂದು ಮನವಿ ಮಾಡಿದರು.

ಅಭ್ಯರ್ಥಿ ಬಿ.ಹರ್ಷವರ್ಧನ್ ಮಾತನಾಡಿ, ‘ಉಪಚುನಾವಣೆ ನಂತರ ಕ್ಷೇತ್ರದ ಪರಿಸ್ಥಿತಿ ಬಗ್ಗೆ ಮತದಾರರು ಯೋಚಿಸಬೇಕು. ಕ್ಷೇತ್ರದಲ್ಲಿ ಮೂವರು ಶಾಸಕರಾಗಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಗೆಲ್ಲುವಂತೆ ಮಾಡಿ ಇತಿಹಾಸ ಸೃಷ್ಠಿಸಲು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಗಳಾ ಸೋಮಶೇಖರ್, ಮುಖಂಡ ರಾದ ಚಿಕ್ಕರಂಗನಾಯ್ಕ, ಕುಂಬರಳ್ಳಿ ಸುಬ್ಬಣ್ಣ, ಡಾ.ಶೈಲಾ ಬಾಲರಾಜು, ಸಿಂಧೂವಳ್ಳಿ ಕೆಂಪಣ್ಣ, ಕೆಂಡಗಣ್ಣಪ್ಪ, ಸಿದ್ದರಾಜು, ಸುಧಾ ಮಹೇಶ್, ಪ್ರೇಮಾ ಶಂಬಯ್ಯ, ಹೆಮ್ಮರಗಾಲ ಸೋಮಣ್ಣ, ದೊರೆಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT