ಒಳಪೆಟ್ಟಿನ ರಾಜಕೀಯ; ಎಲ್ಲರಲ್ಲೂ ಭಯ

5
ತಿಪಟೂರು ಕ್ಷೇತ್ರದ ಮೇಲೆ ಎಲ್ಲರ ಕಣ್ಣು, ಜೆಡಿಎಸ್‌ನಲ್ಲೂ ಬಂಡಾಯ, ಬಿಜೆಪಿಗೂ ಇಲ್ಲ ನೆಮ್ಮದಿ

ಒಳಪೆಟ್ಟಿನ ರಾಜಕೀಯ; ಎಲ್ಲರಲ್ಲೂ ಭಯ

Published:
Updated:

ತುಮಕೂರು: ಬಂಡಾಯ, ಹೆಚ್ಚಿದ ಸ್ಪರ್ಧಾಂಕ್ಷಿಗಳು,‌ ಪಕ್ಷೇತರರು, ಒಳ ಒಪ್ಪಂದದ ವಿಷಯಗಳು ಈ ಸಲ ಚುನಾವಣೆಯಲ್ಲಿ ಹೆಚ್ಚು ಗಮನ ಸೆಳೆಯುತ್ತಿವೆ.

ಸಾಮಾನ್ಯವಾಗಿ ಮತದಾನ ನಾಲ್ಕೈದು ದಿನಗಳಿರುವಾಗ ಒಳ ಒಪ್ಪಂದ, ಒಳಪೆಟ್ಟಿನ ರಾಜಕಾರಣ ಗೌಪ್ಯವಾಗಿ ಕಂಡುಬರುತ್ತಿತ್ತು. ಆದರೆ ಈ ಸಲ ಬಹಿರಂಗವಾಗಿಯೇ ಕಾಣುತ್ತಿದೆ.

ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಮೂರು ಪಕ್ಷಗಳಲ್ಲೂ ಬಂಡಾಯ ಈಗಾಗಲೇ ಬಹಿರಂಗವಾಗಿದೆ. ಕಾಂಗ್ರೆಸ್‌ನಲ್ಲಿ ತುಮಕೂರು ಗ್ರಾಮಾಂತರ, ಗುಬ್ಬಿ, ಕುಣಿಗಲ್‌, ಚಿಕ್ಕನಾಯಕನಹಳ್ಳಿಯಲ್ಲಿ ಆ ಪಕ್ಷ ಒಗ್ಗಟ್ಟು ಪ್ರದರ್ಶಿಸಲು ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿಗೆ ಬಂದು ತಲುಪಿದೆ.

ತುರುವೇಕೆರೆಯಲ್ಲಿ ಜೆಡಿಎಸ್‌ನ ಎಂ.ಡಿ.ರಮೇಶ್‌ಗೌಡ ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಶಿರಾದಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಚಿದಾನಂದಗೌಡ ಪಕ್ಷೇರರರಾಗಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಕೊರಟಗೆರೆ ಹಾಗೂ ತುಮಕೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜತೆಗಿನ ಒಳ ಒಪ್ಪಂದ ‍ಆ ಪಕ್ಷಕ್ಕೆ ತಲೆನೋವಾಗಿದೆ.

ಪಕ್ಷದ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ ಈಚೆಗೆ ಕೊರಟಗೆರೆಯಲ್ಲಿ ನಡೆದ ಬಹಿರಂಗ ಸಮಾವೇಶದಲ್ಲೇ ಪಕ್ಷದ ’ಒಳ ಒಪ್ಪಂದದ ನಾಯಕರ’ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹೋಗಿದ್ದಾರೆ. ಇಂಥವರಿಗೆ ಮತದಾರರು ಬುದ್ಧಿ ಕಲಿಸಬೇಕು ಎಂದೂ ಹೇಳಿದ್ದಾರೆ. ’ನನ್ನ ಮುಖ, ಸುಧಾಕರ್‌ಲಾಲ್‌ ಮುಖ ನೋಡಿ ಮತಹಾಕಿ’ ಎಂದು ಅವರು ಯಾರನ್ನು ಉದ್ದೇಶಿಸಿ ಹೇಳಿದ್ದಾರೆ ಎಂಬುದು ಗೌಪ್ಯವಾಗೇನು ಉಳಿದಿಲ್ಲ.

ಶಿಸ್ತಿನ ಪಕ್ಷ ಎಂದೇ ಕರೆಯುವ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲವಾಗಿದೆ. ಆ ಪಕ್ಷ ನೆಲೆ ವಿಸ್ತರಿಸಿಕೊಳ್ಳಬಹುದು ಎಂದು ಕನಸು ಕಾಣುತ್ತಿತ್ತು. ಟಿಕೆಟ್‌ ಘೋಷಣೆಯಾದ ಬಳಿಕ ಬಂಡಾಯ ತೀವ್ರವಾಗಿದೆ. ಇದನ್ನು ಸರಿಪಡಿಸಲೇ ಸಾಧ್ಯವಾಗುತ್ತಿಲ್ಲ.

ತುಮಕೂರಿನಲ್ಲಿ ಸೊಗಡು ಶಿವಣ್ಣ ಬೆಂಬಲಿಗರ ಸಭೆ ನಡೆಸಿದ್ದಾರೆ. ಪಕ್ಷದ ಅಭ್ಯರ್ಥಿ ಜ್ಯೋತಿ  ಗಣೇಶ್‌ ಅವರನ್ನು ಬೆಂಬಲಿಸುವ ಮಾತೇ ಇಲ್ಲ  ಎಂದು ತಮ್ಮ ಬೆಂಬಲಿಗರ ಸಭೆಯಲ್ಲಿ ಹೇಳಿದ್ದಾರೆ. ಬಹಿರಂಗವಾಗಿ ಅವರು ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ಪಾವಗಡದಲ್ಲಿ  ಮೊದಲಿನಿಂದ ಪಕ್ಷದಲ್ಲಿ ದುಡಿದವರಿಗೆ ಟಿಕೆಟ್‌ ನೀಡಿಲ್ಲ ಎಂದು ಕೋಪಗೊಂಡ ಕಾರ್ಯಕರ್ತರು ಪಕ್ಷದ ಕಚೇರಿಯ ಪೀಠೋಪಕರಣಗಳನ್ನೇ ಧ್ವಂಸ ಮಾಡಿದ್ದಾರೆ. ಇಲ್ಲಿ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಪ್ರಯತ್ನಿಸಿ ಸೋತ ನಿವೃತ್ತ ಸರ್ಕಾರಿ ಅಧಿಕಾರಿ ಬಲರಾಂ ಬಿಜೆಪಿ ಟಿಕೆಟ್ ಪಡೆದಿದ್ದಾರೆ.

ಶಿರಾದಲ್ಲಿ ಬಿ.ಕೆ.ಮಂಜುನಾಥ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಇದು ಎಸ್‌.ಆರ್‌.ಗೌಡ, ಸಿ.ಎಂ.ನಾಗರಾಜ್‌ ಸಿಟ್ಟಿಗೆ ಕಾರಣವಾಗಿದೆ. ಮಂಜುನಾಥ್ ತಪ್ಪಿಸಿ ನಾಗರಾಜ್ ಅವರಿಗೆ ಟಿಕೆಟ್‌ ಕೊಡುವ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಯುತ್ತಿದೆ ಎಂದು ಆ ಪಕ್ಷದ ಮೂಲಗಳು ತಿಳಿಸಿವೆ. ನಾಗರಾಜ್‌ಗೆ ಟಿಕೆಟ್ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸುತ್ತೇವೆ ಎಂದು ಎಸ್‌.ಆರ್‌.ಗೌಡ ಈಗಾಗಲೇ ಹೇಳಿಕೊಂಡಿದ್ದಾರೆ.

ಇನ್ನೂ ಗುಬ್ಬಿಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗದ ಹೊನ್ನಗಿರಿಗೌಡ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತಿರುವ ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣಪ್ಪ ಅವರಿಗೆ ಬೆಂಬಲ ಸೂಚಿಸುವ ಮಾತನಾಡಿದ್ದಾರೆ. ಗ್ರಾಮಾಂತರದಲ್ಲಿ ಮಾಜಿ ಶಾಸಕ ಎಚ್‌.ನಿಂಗಪ್ಪ, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕಲ್ಲಹಳ್ಳಿ ದೇವರಾಜ್‌, ಕುರುಬ ಮುಖಂಡ ಶಿವಮೂರ್ತಿ ಚುನಾವಣೆ ಪ್ರಚಾರದಿಂದಲೇ ದೂರ ಸರಿಯುವುದಾಗಿ ತಿಳಿಸಿದ್ದಾರೆ. ’ಒಳ ಒಪ್ಪಂದ ಕಾರಣದಿಂದ ನಮಗೆ ಟಿಕೆಟ್‌ ತಪ್ಪಿದೆ ಎಂಬುದು ಈ ಮುಖಂಡರ ವಾದ. ಜೆಡಿಎಸ್‌, ಕಾಂಗ್ರೆಸ್‌ ಅಭ್ಯರ್ಥಿಗಳ ವಿರುದ್ಧವೂ ಸಿಟ್ಟು ಹೊರಹಾಕಿದ್ದಾರೆ.

ಕುಣಿಗಲ್‌ನಲ್ಲಿ ಕಾಂಗ್ರೆಸ್‌ನ ಬಿ.ಬಿ.ರಾಮಸ್ವಾಮಿಗೌಡ ಬಂಡಾಯ ಸ್ಪರ್ಧೆ ಖಚಿತವಾಗಿದೆ.  ಅಭ್ಯರ್ಥಿ ಡಾ.ರಂಗನಾಥ್ ವಿರುದ್ಧ ತೊಡೆ ತಟ್ಟಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್‌ ಮಾತಿಗೂ ಅವರ ಮನ್ನಣೆ ನೀಡಿಲ್ಲ.

ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ವಂಚಿತ ಸಾಸಲು ಸತೀಶ್‌, ಬಿಜೆಪಿ ಟಿಕೆಟ್‌ ವಂಚಿತ ಕಿರಣ್‌ಕುಮಾರ್‌ ಇಬ್ಬರೂ ಒಬ್ಬರೊಬ್ಬರನ್ನು ಬೆಂಬಲಿಸಿಕೊಂಡು ಇಬ್ಬರಲ್ಲಿ ಒಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಸಂಬಂಧ ಚರ್ಚೆ ನಡೆದಿರುವುದು ಸಹ ಸಾಕಷ್ಟು ಕುತೂಹಲ ಕೆರಳಿಸಿದೆ.

ಕೊರಟಗೆರೆ: ತುಮಕೂರು ಗ್ರಾಮಾಂತರ ಹಾಗೂ ಕೊರಟಗೆರೆ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಚನ್ನಿಗಪ್ಪ, ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಅವರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕಾಗಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನಗೊಂಡಿದ್ದಾರೆ. ಪಕ್ಷದ ಇಬ್ಬರು ಅಭ್ಯರ್ಥಿಗಳು ಈ ಬಗ್ಗೆ ದೂರು ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೊರಟಗೆರೆಯಲ್ಲಿ ಪರಮೇಶ್ವರ್‌ ಗೆಲ್ಲಲು ಚೆನ್ನಿಗಪ್ಪ ಸಹಕರಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸುರೇಶ್‌ ಗೌಡ ಅವರಿಗೆ ಬರಲಿರುವ ಲಿಂಗಾಯತ ಮತಗಳನ್ನು ಕಾಂಗ್ರೆಸ್‌ ಸೆಳೆಯಬೇಕು ಎಂಬುದೇ ಈ ಒಪ್ಪಂದ. ಇದಕ್ಕಾಗಿ ಗ್ರಾಮಾಂತರದಲ್ಲಿ ಲಿಂಗಾಯತ ಸಮುದಾಯದ ರಾಯಸಂದ್ರ ರವಿಕುಮಾರ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್ ನೀಡಿದೆ ಎಂಬುದು ಆರೋಪವಾಗಿದೆ.

ಈ ಒಳ ಒಪ್ಪಂದದ ಬಗ್ಗೆ ಕಾಂಗ್ರೆಸ್‌ನ ಎಚ್‌.ನಿಂಗಪ್ಪ, ಕಲ್ಲಹಳ್ಳಿ ದೇವರಾಜ್‌ ಬಹಿರಂಗವಾಗಿಯೇ ಹೇಳಿಕೆ ನೀಡಿ ಪಕ್ಷದ ನಾಯಕರ ವಿರುದ್ಧವೇ ಸಿಡಿದಿದ್ದಾರೆ.

ಜಿಲ್ಲೆಯಲ್ಲಿ ಕುಮಾರಸ್ವಾಮಿ ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ ಹೋಗಿದ್ದಾರೆ. ಆದರೆ ಗ್ರಾಮಾಂತರ ಕ್ಷೇತ್ರಕ್ಕೆ ಮಾತ್ರ ಕಾಲಿಟ್ಟಿಲ್ಲ. ಇಲ್ಲಿ ಗ್ರಾಮವಾಸ್ತವ್ಯ ಮಾಡುತ್ತಾರೆ ಎಂದು ಚುನಾವಣೆಗೆ ಮುನ್ನವೇ ಆ ಪಕ್ಷ ಹೇಳಿತ್ತು. ಕುಮಾರಸ್ವಾಮಿ ಈ ನಡೆ ಆ ಪಕ್ಷದ ಕಾರ್ಯಕರ್ತರಲ್ಲಿ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

’ಕೊರಟಗೆರೆಯಲ್ಲಿ ಚನ್ನಿಗಪ್ಪ ಅವರ ಆಪ್ತರು, ಜೆಡಿಎಸ್‌ ಮುಖಂಡರಾದ ಮಾವತ್ತೂರು ವೆಂಕಟಪ್ಪ, ಎಲ್‌ಐಸಿ ರಾಜಣ್ಣ, ದಾಡಿ ಸಿದ್ದಲಿಂಗಪ್ಪ, ಕ್ಯಾಶವಾರ ಹನುಮಂತರಾಯಪ್ಪ, ನಾಗರಾಜ್ ಮತ್ತಿರರರು ಪಕ್ಷದ ಪರ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇವರು ಏನು ಮಾಡುತ್ತಿದ್ದಾರೆ ಎಂಬುದನ್ನು ಪಕ್ಷದ ಗಮನಕ್ಕೂ ತರಲಾಗಿದೆ’ ಎಂದು ಹಿರಿಯ ಮುಖಂಡರೊಬ್ಬರು ತಿಳಿಸಿದರು.

‘ಕೊರಟಗೆರೆಯಲ್ಲಿ ಚನ್ನಿಗಪ್ಪ ಆಪ್ತರು ಪರೋಕ್ಷವಾಗಿ ಕಾಂಗ್ರೆಸ್‌ ಪರ ಕೆಲಸ ಮಾಡುತ್ತಿದ್ದಾರೆ ಎಂಬ ದೂರು ಬಂದಿರುವುದು ನಿಜ. ಆದರೆ ಅವರಲ್ಲಿ ಯಾರೂ ಕಾಂಗ್ರೆಸ್‌ ಪಕ್ಷ ಸೇರಿಲ್ಲ. ಇದಕ್ಕೂ ಎಚ್‌.ಡಿ.ಕುಮಾರಸ್ವಾಮಿ ಗ್ರಾಮಾಂತರ ಕ್ಷೇತ್ರಕ್ಕೆ ಬಾರದಿರುವುದಕ್ಕೂ ಸಂಬಂಧ ಇಲ್ಲ.  ಏ.29ರಂದು ಗ್ರಾಮಾಂತರ ಕ್ಷೇತ್ರಕ್ಕೆ ಬರಲಿದ್ದಾರೆ’ ಎಂದು ಜಿಲ್ಲಾ ವಕ್ತಾರ ಎಂ.ಪಿ.ಮಧುಸೂದನ್‌ ‘‍ಪ್ರಜಾವಾಣಿ’ಗೆ ತಿಳಿಸಿದರು.

ಮುಂದುವರೆದ ಷಡಕ್ಷರಿ ಯತ್ನ

ಟಿಕೆಟ್‌ ಘೋಷಣೆಯಾಗದಿದ್ದರೂ ಬಿ–ಫಾರ್ಮ್‌ ಪಡೆಯುವ ಯತ್ನವನ್ನು ತಿಪಟೂರು ಕಾಂಗ್ರೆಸ್‌ ಶಾಸಕ ಕೆ.ಷಡಕ್ಷರಿ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿ.ನಂಜಾಮರಿ ಅವರಿಗೆ ಟಿಕೆಟ್‌ ಘೋಷಣೆಯಾಗಿದೆ. ಆದರೆ ಅವರಿಗೆ ಇನ್ನೂ ಪಕ್ಷ ಬಿ– ಫಾರ್ಮ್‌ ವಿತರಿಸಿಲ್ಲ. ಬೇರೆ ಅಭ್ಯರ್ಥಿಗಳಿಗೆ ನೀಡಿ ಇವರಿಗೆ ನೀಡಿಲ್ಲ. ನಂಜಾಮರಿ ಮತ್ತು ಷಡಕ್ಷರಿ ಇಬ್ಬರನ್ನೂ ಕರೆಯಿಸಿ ಮುಖ್ಯಮಂತ್ರಿ ಮಾತನಾಡಿದ್ದಾರೆ. ಅಂತಿಮವಾಗಿ ರಾಹುಲ್‌ ಗಾಂಧಿ ಅವರ ನಿರ್ಧಾರಕ್ಕೆ ಬಿಡಲಾಗಿದೆ ಎಂದು ತಿಳಿದುಬಂದಿದೆ.

‘ನಂಜಾಮರಿ ಅವರಿಗೆ ಕಾಂಗ್ರೆಸ್‌ ಬಿ–ಪಾರ್ಮ್‌ ನೀಡದಿದ್ದರೆ ಬೇರೆ ಪಕ್ಷದಿಂದ ಅಥವಾ ಸ್ವತಂತ್ರವಾಗಿ ಸ್ಪರ್ಧಿಸುವುದು ಖಚಿತ’  ಎಂದು ನಂಜಾಮರಿ ಆಪ್ತರೊಬ್ಬರು ತಿಳಿಸಿದರು. ’ಬೇರೆ ಪಕ್ಷವೊಂದರ ಜತೆ ನಿಕಟ ಸಂಪರ್ಕದಲ್ಲಿದ್ದೇವೆ. ಆ ಪಕ್ಷ ಟಿಕೆಟ್‌ ನೀಡಿದರೆ ಆ ಪಕ್ಷದಿಂದಲೇ ಸ್ಪರ್ಧಿಸುತ್ತಾರೆ’ ಎಂದರು.

ಟಿಕೆಟ್‌ ಬೇಡವೆಂದು ಕೈ ಮುಗಿದ ಅಭ್ಯರ್ಥಿ

ಮಧುಗಿರಿ ಕ್ಷೇತ್ರದ  ಬಿಜೆಪಿ ಅಭ್ಯರ್ಥಿ ಡಾ.ಎಂ.ಆರ್‌.ಹುಲಿನಾಯ್ಕರ್‌ ಅವರು ಟಿಕೆಟ್‌ ವಾಪಸ್‌ ಪಡೆಯುವಂತೆ ವರಿಷ್ಠರ ಮುಂದೆ ಕೈ ಮುಗಿದು ಬಂದಿದ್ದಾರೆ. ಟಿಕೆಟ್‌ ತಪ್ಪಿದರೆ ಸಾಕಪ್ಪ ಎಂದು ಅವರು ತಮ್ಮ ಆಪ್ತರ ಬಳಿ ದುಃಖ ತೋಡಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry