ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಕಕ್ಕೇರಿದ ಟಿಕೆಟ್‌ ಹಂಚಿಕೆ ವಿವಾದ

ಹೆಬ್ರಿ: ಸಾಮಾಜಿಕ ಜಾಲತಾಣದಲ್ಲಿ ಭಂಡಾರಿ, ಮೊಯಿಲಿ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಕೆ
Last Updated 20 ಏಪ್ರಿಲ್ 2018, 10:22 IST
ಅಕ್ಷರ ಗಾತ್ರ

ಹೆಬ್ರಿ: ಕಾರ್ಕಳ ಕಾಂಗ್ರೆಸ್ಸಿನಲ್ಲಿ ಈ ಬಾರಿ ಟಿಕೆಟ್‌ ಪಡೆದು ಚುನಾವಣೆಗೆ ಸ್ಪರ್ಧೆ ಮಾಡಿ ಜನಸೇವೆ ಮಾಡುವ ಕನಸು ಕಂಡಿದ್ದ ಮುನಿಯಾಲು ಉದಯ ಶೆಟ್ಟಿ ಕ್ಷೇತ್ರದಾದ್ಯಂತ ಬಿರುಸಿನಿಂದ ಸುತ್ತಾಟ ನಡೆಸಿದ್ದರು.

ಆದರೆ, ರಾಷ್ಟ್ರೀಯ ನಾಯಕ ವೀರಪ್ಪ ಮೊಯಿಲಿ ತಮ್ಮ ಪಟ್ಟದ ಶಿಷ್ಯ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಅವರಿಗೆ ಟಿಕೆಟ್‌ ಸಿಗುವಂತೆ ನೋಡಿಕೊಂಡರು. ಪರಿಣಾಮ ಉದಯ ಶೆಟ್ಟಿ ಅವರಿಗೆ ಟಿಕೆಟ್‌ ಕೈತಪ್ಪಿತ್ತು. ಅವರ ಬೆಂಬಲಿಗರು ಟಿಕೆಟ್‌ ಕೈತಪ್ಪಿದ್ದರಿಂದ ನೊಂದು ಕಾರ್ಕಳ ಮತ್ತು ಹೆಬ್ರಿಯಲ್ಲಿ ವೀರಪ್ಪ ಮೊಯಿಲಿ ವಿರುದ್ಧ ತೊಡೆ ತಟ್ಟಿ ನಿಂತರು. ಸಾಮಾಜಿಕ ಜಾಲತಾಣ ಫೇಸ್‍ಬುಕ್ ಮತ್ತು ವಾಟ್ಸ್‌ಆ್ಯಪ್‌ಳಲ್ಲಿ ದೊಡ್ಡ ಮಟ್ಟದಲ್ಲಿ ಮೊಯಿಲಿ ವಿರುದ್ಧ ಧಿಕ್ಕಾರ ಹಾಕಿದರು. ಮೊಯಿಲಿ ಕಾಂಗ್ರೆಸ್ ಮುಕ್ತ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವೀರಪ್ಪ ಮೊಯಿಲಿ ಭಾವಚಿತ್ರಕ್ಕೆ ದೀಪ ಇಟ್ಟು ಹೂ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು.

ಇಂತಹದೆಲ್ಲ ರಾಜಕೀಯವಾಗಿ ಮೊದಲೇ ಕಂಡಿದ್ದ ಮೊಯಿಲಿ ಅಭಿಮಾನಿಗಳು ವಿರೋಧಕ್ಕೆ ಪ್ರತಿರೋಧ ಪೋಸ್ಟ್ ಹಾಕಿದ್ದರು. ಇನ್ನೂ ಕೆಲವರು ಇದಕ್ಕಿಂತ ಮುಂದೆ ಹೋಗಿ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಗೋಪಾಲ ಭಂಡಾರಿ ವಿರುದ್ಧವೂ ವಿರೋಧ ವ್ಯಕ್ತ ಪಡಿಸಿ ಶೃದ್ಧಾಂಜಲಿ ಚಿತ್ರ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. ಗೋಪಾಲ ಭಂಡಾರಿ ಅವರ ಮಕ್ಕಳು ಮತ್ತು ಕುಟುಂಬಸ್ಥರು ಇರುವ ಗ್ರೂಪ್‍ಗಳಿಗೂ ಈ ಸಂದೇಶ ಹೋಗಿವೆ. ಇದನ್ನೆಲ್ಲ ಗಮನಿತ್ತಲೇ ಗೋಪಾಲ ಭಂಡಾರಿ ಮೌನವಾಗಿದ್ದರು. ಬುಧವಾರ ಮನೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ನೊಂದು ಕಣ್ಣೀರು ಹಾಕಿದ್ದಾರೆ. ಪಕ್ಷದ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಕೂಡ ಕಣ್ಣೀರಾಗಿದ್ದಾರೆ. ಅಭ್ಯರ್ಥಿ ಗೋಪಾಲ ಭಂಡಾರಿ ಶಿವಪುರದಲ್ಲಿ ನೊಂದು ಮಾತನಾಡಿದ ವಿಡಿಯೊ ಕೂಡಾ ವೈರಲ್ ಆಗಿ ಬಾರಿ ಸುದ್ದಿ ಮಾಡಿದೆ.

‘ಮನೆಗೆ ಬಂದು ನಿಮಗೆ ಟಿಕೆಟ್‌ ನೀಡಿದ್ದಾರೆ, ನಮಗೆ ಬಿಟ್ಟು ಕೊಡಿ ಎಂದು ಕೇಳಿದರು. ನನಗೆ ಸ್ಪರ್ಧೆ ಮಾಡುವ ಅರ್ಹತೆ ಇಲ್ಲವೆ? ಸದ್ಯ ಕೈಕಾಲು ಸರಿಯಿದೆ, ನಡೆದಾಡಲು ಸಾಧ್ಯವಾಗುತ್ತಿದೆ. ಆರೋಗ್ಯ ಸರಿಯಿದೆ, ಪಾಪದ ಜನರೊಂದಿಗೆ ಇದ್ದೇನೆ, ಪಾಪದ ಜನರೂ ನನ್ನೊಂದಿಗೆ ಇದ್ದಾರೆ. ಮತ ಹಾಕುವ ಜನರು ಇದ್ದಾರೆ. ಇದೊಂದು ಬಾರಿ ಸ್ಪರ್ಧೆ ಮಾಡುವ ಆಸೆಯಿದೆ ಎಂದು ಕಣ್ಣೀರು ಹಾಕುತ್ತಲೆ ಹೇಳಿದರು.

30 ವರ್ಷದ ಹಿಂದಿನ ಸ್ಥಿತಿ ಮತ್ತೇ ಕಾರ್ಕಳ ಕ್ಷೇತ್ರದಲ್ಲಿ ಆರಂಭಗೊಳ್ಳುತ್ತಿದೆ ಎಂಬ ನೋವನ್ನು ಭಂಡಾರಿ ಅಭಿಮಾನಿಗಳು ವ್ಯಕ್ತಪಡಿದ್ದಾರೆ. ಒಂದು ಟಿಕೆಟ್‌ಗೆ ಜೀವಂತ ಇರುವವರಿಗೆ ಶ್ರದ್ಧಾಂಜಲಿ ಮಾಡಿ ಬಿಟ್ಟರು. ಇಷ್ಟು ಕೀಳು ಮಟ್ಟದಲ್ಲಿ ಅವಹೇಳನ ಮಾಡಬಾರದಿತ್ತು ಎಂದು ಆಪ್ತರಾದ ಪ್ರದೀಪ್‌ ಹೆಬ್ರಿ ವಾಟ್ಸ್‌ಆ್ಯಪ್‌ನಲ್ಲಿ ಹರಿಬಿಟಿದ್ದಾರೆ.

ಏನೂ ತಪ್ಪು ಮಾಡದ ತಂದೆ ಚಿತ್ರ ನೋಡುವ ಹಾಗಾಯಿತು ಎಂದು ಭಂಡಾರಿ ಅವರ ಮಕ್ಕಳೂ ಬೇಸರ ವ್ಯಕ್ತಪಡಿಸಿದರು. ನನ್ನನ್ನು ಅತ್ಯಂತ ಕೀಳು ಮಟ್ಟದಲ್ಲಿ ನೋಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ ಎಂದು ಗೋಪಾಲ ಭಂಡಾರಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ವಾಟ್ಸ್‌ಆ್ಯಪ್‌ ಗ್ರೂಫ್‍ ಸ್ಟೇಟಸ್‌ಅನ್ನು ಕೂಡಾ ‘ರೆಸ್ಟ್ ಇನ್ ಪೀಸ್‌ ಗೋಪಾಲ’ ಎಂದು ಹಾಕಿಕೊಳ್ಳುವ ಮೂಲಕ ವಿಕೃತ ಮನೋಭಾವ ಮೆರೆಯುತ್ತಿದ್ದಾರೆ ಎಂದು ನೊಂದು ಹೇಳಿದರು.

ಯಾರಿಗೂ ಅನ್ಯಾಯ ಮಾಡಿಲ್ಲ: ಭಂಡಾರಿ

ನನಗೆ ಅನ್ಯಾಯ ಮಾಡಿದರವರಿಗೂ ಅನ್ಯಾಯ ಮಾಡಿಲ್ಲ, ಬೈಯಲು ಕೂಡಾ ನನಗೆ ಬರಲ್ಲ, ರಾಜಕಾರಣದಲ್ಲಿ ಇಲ್ಲಿಯವರಿಗೂ ಭ್ರಷ್ಟಾಚಾರಿ ಆಗಿ ನಡೆದುಕೊಂಡಿಲ್ಲ. ಶ್ರದ್ದಾಂಜಲಿ ಸಲ್ಲಿಸಿದರೂ ಮೌನವಾಗಿರುವೆ. ಶ್ರದ್ದಾಂಜಲಿ ಭಾವಚಿತ್ರ ಹಾಕಿರುವುದನ್ನು ನೋಡಿ ಕುಟುಂಬ ಸದಸ್ಯರು ನೊಂದು ಕಣ್ಣೀರು ಹಾಕುತ್ತಿದ್ದಾರೆ ಎಂದು ಕಣ್ಣೀರು ಹಾಕಿದರು.

**

ನನ್ನನ್ನು ಹಾಗೂ ಕಾಂಗ್ರೆಸ್ ಮುಖಂಡರನ್ನು ಜೀವಂತವಾಗಿರುವಾಗಲೇ ಕೊಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ನಮ್ಮ ಮನೆಯವರಿಗೆ ನನಗೆ ಕ್ಷೇತ್ರದ ಜನರಿಗೆ ಈ ಘಟನೆ ನೋವು ತಂದಿದೆ – ಗೋಪಾಲ ಭಂಡಾರಿ, ಕಾಂಗ್ರೆಸ್ ಅಭ್ಯರ್ಥಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT