ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಡಿ ತಿನ್ನಿ ಚಿಕನ್‌ ಸುಕ್ಕ!

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

–ಸುಮತಿ ಶಂಕರ್‌

ಮೀನುಸಾರು

ಬೇಕಾಗುವ ಸಾಮಗ್ರಿಗಳು: ತೆಂಗಿನತುರಿ – 1ಕಪ್‌, ಒಣಮೆಣಸು – 6ರಿಂದ7, ಮೆಂತ್ಯ – 1/4ಚಮಚ, ಮೀನು – 6ರಿಂದ7 ಹೋಳುಗಳು, ಬೆಳ್ಳುಳ್ಳಿ – 6ರಿಂದ 8ಎಸಳು, ದನಿಯಾ – 1ಚಮಚ, ಜೀರಿಗೆ – 1ಚಮಚ, ಅರಿಸಿನ – ಕಾಲು ಚಮಚ, ಕೆಂಪುಮೆಣಸು – 6, ಶುಂಠಿ – ಒಂದು ತುಂಡು,
ಹುಣಸೆಹಣ್ಣಿನ ರಸ – ಸ್ವಲ್ಲ, ಕರೀಬೇವು – ಆರು

ತಯಾರಿಸುವ ವಿಧಾನ: ಮೊದಲಿಗೆ ತೆಂಗಿನತುರಿ, ಅರಿಸಿನಪುಡಿ, ಶುಂಠಿ, ಮೆಂತ್ಯ, ದನಿಯಾ, ಜೀರಿಗೆ ಹಾಗೂ ಒಣಮೆಣಸನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿಟ್ಟುಕೊಳ್ಳಿ. ಹುಣಸೆಹಣ್ಣನ್ನು ನೀರಿನಲ್ಲಿ ಹಾಕಿಡಿ. ಈಗ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಕರೀಬೇವಿನ ಎಲೆ ಹಾಕಿ 2ರಿಂದ 3 ನಿಮಿಷ ಹುರಿಯಿರಿ. ಈಗ ಅದಕ್ಕೆ ರುಬ್ಬಿದ ಮಿಶ್ರಣ ಹಾಕಿ 2 ನಿಮಿಷಗಳ ಕಾಲ ಸೌಟಿನಿಂದ ಕೈಯಾಡಿಸಿ. ಅದಕ್ಕೆ ಒಂದು ಕಪ್ ನೀರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಿ. ಮಿಶ್ರಣ ಕುದಿಯುತ್ತಿದ್ದಾಗ ಹುಣಸೆಹಣ್ಣಿನ ರಸ ಹಾಕಿ ಮತ್ತೆ ಕುದಿಸಿ. ನಂತರ ಮೀನನ್ನು ಹಾಕಿ ಕುದಿಸಿದರೆ ರುಚಿಯಾದ ಮೀನು ಸಾರು ರೆಡಿ.

ಮೀನುಮಸಾಲಾ ಫ್ರೈ

ಬೇಕಾಗುವ ಸಾಮಗ್ರಿಗಳು: ಕಾಶ್ಮೀರಿ ಮೆಣಸು – 10, ಬೆಳ್ಳುಳ್ಳಿ – 6ರಿಂದ7 ಎಸಳು, ದನಿಯಾ – 1ಟೀ ಚಮಚ, ಜೀರಿಗೆ – 1/4ಟೀ ಚಮಚ, ಕಾಳುಮೆಣಸು – 4ರಿಂದ5, ಅಕ್ಕಿಹಿಟ್ಟು – 2ಟೀ ಚಮಚ, ಅರಿಸಿನಪುಡಿ – 2ಚಮಚ, ನಿಂಬೆಹಣ್ಣಿನ ರಸ – 2ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ತೆಂಗಿನಎಣ್ಣೆ – 2ಚಮಚ,
ಹುಣಸೆಹಣ್ಣು – ಸ್ವಲ್ಪ

ತಯಾರಿಸುವ ವಿಧಾನ: ಮೀನನ್ನು ಸ್ವಚ್ಛಗೊಳಿಸಿ ತೆಗೆದಿಡಿ. ಒಂದು ಪಾತ್ರೆಯಲ್ಲಿ ಉಪ್ಪು, ನಿಂಬೆರಸ,  ಅರಿಸಿನಪುಡಿಯನ್ನು ಸೇರಿಸಿ ಕಲಸಿ. ಅದನ್ನು ಸ್ವಚ್ಛಗೊಳಿಸಿಟ್ಟ ಮೀನಿನ ಮಾಂಸಕ್ಕೆ ಸವರಿ ಬದಿಗಿಡಿ. ಕಾಶ್ಮೀರಿಮೆಣಸು, ಬೆಳ್ಳುಳ್ಳಿ, ದನಿಯಾ, ಜೀರಿಗೆ, ಕಾಳುಮೆಣಸು, ಅರಿಶಿನ, ಹುಣಸೆಹಣನ್ನು ಮಿಕ್ಸಿಜಾರಿಗೆ ಹಾಕಿ, ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಗೆ ರುಬ್ಬಿದ ಮಸಾಲ, ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, 2ಚಮಚ ತೆಂಗಿನಎಣ್ಣೆ ಸೇರಿಸಿ ಚೆನ್ನಾಗಿ ಕಲಸಿ. ಮಸಾಲ ಹದವಾದ ಬಳಿಕ ಅದನ್ನು ಮೀನಿಗೆ ಸರಿಯಾಗಿ ಸವರಿ ಅರ್ಧ ಗಂಟೆವರೆಗೆ ನೆನೆಸಿಡಿ. ಒಂದು ಗಂಟೆಯ ಬಳಿಕ ತವಾ ಬಿಸಿ ಮಾಡಿ. ಅದಕ್ಕೆ ಬೇಕಾದಷ್ಟು ಎಣ್ಣೆ ಹಾಕಿ ಮೀನನ್ನು ಹಾಕಿ ಕರಿಯಿರಿ.

ಚಿಕನ್‌ ಪೆಪ್ಪರ್‌ ಫ್ರೈ

ಬೇಕಾಗುವ ಸಾಮಗ್ರಿಗಳು:  ಕೋಳಿಮಾಂಸ – 1/2 ಕೆಜಿ, ಕಾಳುಮೆಣಸಿನಪುಡಿ – 1ಚಮಚ, ದನಿಯಾಪುಡಿ – 2ಚಮಚ, ಈರುಳ್ಳಿ – 2, ಶುಂಠಿಬೆಳ್ಳುಳ್ಳಿ ಪೇಸ್ಟ್ – 1ಚಮಚ, ಹಸಿಮೆಣಸು – 3, ಕೊತ್ತಂಬರಿಸೊಪ್ಪು – ಸ್ವಲ್ಪ, ಕರೀಬೇವು – ಸ್ವಲ್ಪ, ಅರಿಸಿನಪುಡಿ – ಚಿಟಿಕೆ, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ.

ತಯಾರಿಸುವ ವಿಧಾನ: ಕೋಳಿಮಾಂಸವನ್ನು ಚೆನ್ನಾಗಿ ತೊಳೆದು ಅದಕ್ಕೆ ಕಾಳುಮೆಣಸಿನ ಪುಡಿ, ಅರಿಸಿನಪುಡಿ, ದನಿಯಾ, ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದು ಗಂಟೆ ಇಡಿ. ನಂತರ ಒಂದು ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ 2ಚಮಚ ಎಣ್ಣೆ ಹಾಕಿ, ಬಿಸಿಯಾದಾಗ ಕರಿಬೇವಿನ ಎಲೆ ಹಾಕಿ, ಈರುಳ್ಳಿ, ಹಸಿಮೆಣಸಿನ ಕಾಯಿ ಹಾಕಿ ಕಂದುಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಚಿಕನ್‌ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 5ನಿಮಿಷ ಫ್ರೈ ಮಾಡಿ, ನಂತರ ಕಡಿಮೆ ಉರಿಯಲ್ಲಿ ಅರ್ಧಗಂಟೆ ಬೇಯಿಸಿ. ಚಿಕನ್‌ ಬೆಂದ ಮೇಲೆ ಸ್ವಲ್ಪ ನಿಂಬೆರಸ ಹಿಂಡಿ ಮಿಕ್ಸ್‌ ಮಾಡಿ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿದರೆ ಪೆಪ್ಪರ್‌ ಚಿಕನ್ ರೆಡಿ.

ಚಿಕನ್‌ ಸುಕ್ಕ

ಬೇಕಾಗುವ ಸಾಮಗ್ರಿಗಳು: ಕೋಳಿ –1ಕೆ.ಜಿ., ಈರುಳ್ಳಿ– 3, ಟೊಮೊಟೊ – 2, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1ಟೀ ಚಮಚ, ಚಕ್ಕೆ, ಲವಂಗ – 4, ಏಲಕ್ಕಿ – 1, ದನಿಯಾ – 2ಟೀ ಚಮಚ, ಮೆಂತ್ಯ – 1/4ಟೀ ಚಮಚ, ಜೀರಿಗೆ – 1ಟೀ ಚಮಚ, ಅಚ್ಚಖಾರದ ಪುಡಿ – 4ಟೀ ಚಮಚ, ಕರೀಬೇವಿನ ಸೊಪ್ಪು, ತೆಂಗಿನಕಾಯಿ ತುರಿ –1ಬಟ್ಟಲು , ಎಣ್ಣೆ – 2 ಟೇಬಲ್ ಚಮಚ.

ತಯಾರಿಸುವ ವಿಧಾನ: ಒಂದು ಬಾಣಲೆ ಬಿಸಿಗಿಟ್ಟು ಮಂದವಾದ ಉರಿಯಲ್ಲಿ ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ಮೆಂತ್ಯ ಹಾಗೂ ದನಿಯಾವನ್ನು ಬೇರೆ ಬೇರೆಯಾಗಿ ಹುರಿದುಕೊಂಡು ಪುಡಿ ಮಾಡಿಕೊಳ್ಳಿ. ದಪ್ಪ ತಳದ ಅಗಲವಾದ ಪಾತ್ರೆ ಬಿಸಿಗಿಟ್ಟು, ಎಣ್ಣೆ ಹಾಕಿ ಕಾದ ನಂತರ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ, ಟೊಮೊಟೊ ಹಾಕಿ ಬೇಯಿಸಿಕೊಳ್ಳಿ. ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ಅದಕ್ಕೆ ತೊಳೆದಿಟ್ಟುಕೊಂಡ ಕೋಳಿಮಾಂಸವನ್ನು ಹಾಕಿ ಉಪ್ಪು, ಅರಿಸಿನಪುಡಿ ಸೇರಿಸಿ ಚೆನ್ನಾಗಿ ಕಲೆಸಿ, ನಂತರ ಖಾರದಪುಡಿ, ಪುಡಿ ಮಾಡಿಟ್ಟುಕೊಂಡ ಚಕ್ಕೆ, ಲವಂಗ, ದನಿಯಾ ಇವುಗಳ ಮಿಶ್ರಣ ಹಾಕಿದ ನಂತರ ಕರೀಬೇವಿನ ಎಸಳು ಹಾಕಿ ತಿರುಗಿಸಿ. ಎರಡು ಲೋಟ ನೀರನ್ನು ಹಾಕಿ ಮಂದವಾದ ಉರಿಯಲ್ಲಿ ಬೇಯಲು ಬಿಡಿ. ಬಾಣಲೆಯನ್ನು ಬಿಸಿಗಿಟ್ಟು ಸ್ಪಲ್ಪ ಎಣ್ಣೆ ಹಾಕಿ ತುರಿದ ತೆಂಗಿನಕಾಯಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಈಗ ಬೆಂದ ಕೋಳಿಗೆ ಕಾಯಿಯನ್ನು ಹಾಕಿ ತಿರುಗಿಸಿದರೆ ಕೋಳಿ ಸುಕ್ಕ ರೆಡಿ.

–ಸುಮತಿ ಶಂಕರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT