ವರಿಷ್ಠರ ತೀರ್ಮಾನಕ್ಕೆ ತೀವ್ರ ಆಕ್ಷೇಪ

7
ಪಕ್ಷ ಬದಲಾವಣೆ ಖಂಡಿಸಿ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ

ವರಿಷ್ಠರ ತೀರ್ಮಾನಕ್ಕೆ ತೀವ್ರ ಆಕ್ಷೇಪ

Published:
Updated:
ವರಿಷ್ಠರ ತೀರ್ಮಾನಕ್ಕೆ ತೀವ್ರ ಆಕ್ಷೇಪ

ಯಾದಗಿರಿ: ಗುರುಮಠಕಲ್‌ ಮತಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದವರನ್ನು ಬಿಟ್ಟು ಹೊಸಬರಿಗೆ ಟಿಕೆಟ್ ನೀಡಿರುವ ಬಿಜೆಪಿ ವರಿಷ್ಠರ ತೀರ್ಮಾನದ ವಿರುದ್ಧ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಕಾರ್ಯಕರ್ತರಿಂದ ತೀವ್ರ ಆಕ್ಷೇಪಣೆ ಕೇಳಿಬಂತು.

‘ವೆಂಕಟರೆಡ್ಡಿ ಮುದ್ನಾಳ ಹತ್ತು ವರ್ಷಗಳಿಂದ ಗುರುಮಠಕಲ್‌ ಕ್ಷೇತ್ರದಲ್ಲಿ ಪಕ್ಷ ಬಲಪಡಿಸಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ವೆಂಕಟರೆಡ್ಡಿ ಮುದ್ನಾಳ ಅವರನ್ನು ಬಯಸಿಯೇ ಹಲವು ಮುಖಂಡರು ಅನ್ಯ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆದರೆ, ಏಕಾಏಕಿ ವೆಂಕಟರಡ್ಡಿ ಮುದ್ನಾಳ ಅವರಿಗೆ ಯಾದಗಿರಿ ಮತಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ. ಇದರಿಂದ ಕಾರ್ಯಕರ್ತರಿಗೆ ನೋವಾಗಿದೆ’ ಎಂದು ಮುಖಂಡರಾದ ಭೀಮನಗೌಡ ಕ್ಯಾತನಾಳ, ಶರಣಗೌಡ ಬಾಡಿಯಾಳ, ವಿಜಯಕುಮಾರ್ ಮಗದಂಪುರ ತೀವ್ರ ಅಸಮಾಧಾನ ಹೊರಹಾಕಿದರು.

ಟಿಕೆಟ್ ಪಡೆದಿರುವ ಸಾಯಿಬಣ್ಣ ಬೋರಬಂಡಾ ಅವರು ಪ್ರಮುಖ ಮುಖಂಡರನ್ನು ಸಂಪರ್ಕಿಸಿಲ್ಲ. ನಾಲ್ಕಾರು ಮಂದಿ ಯುವಕರ ಗುಂಪುಕಟ್ಟಿಕೊಂಡು ಮತಕ್ಷೇತ್ರದಲ್ಲಿ ಸುತ್ತು ಹಾಕಿರುವ ಅವರಿಗೆ ಯಾವ ಮಾನದಂಡದ ಮೇಲೆ ವರಿಷ್ಠರು ಟಿಕೆಟ್ ನೀಡಿದ್ದಾರೆ ಎಂಬುದನ್ನು ತಿಳಿಸಬೇಕಿದೆ. ವರಿಷ್ಠರ ವಾಮ ನಿರ್ಣಯದಿಂದಾಗಿ ಗುರುಮಠಕಲ್‌ ಮತಕ್ಷೇತ್ರದಲ್ಲಿ ಬಿಜೆಪಿ ನೆಲಕಚ್ಚಲಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ಯಾದಗಿರಿ ಮತಕ್ಷೇತ್ರದ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ,‘ಗುರುಮಠಕಲ್‌ ನಲ್ಲಿ ಟಿಕೆಟ್‌ ಪಡೆದಿರುವ ಸಾಯಿಬಣ್ಣ ಬೋರಬಂಡಾ ಅವರಿಗೆ ಕಾರ್ಯಕರ್ತರು ಬೆಂಬಲ ನೀಡುತ್ತಿಲ್ಲ. ಕಾರಣ, ಅವರು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ವಿಶ್ವಾಸಕ್ಕೆ ತೆಗೆದುಕೊಂಡು ಮತಪ್ರಚಾರ ನಡೆಸಬೇಕಾದ ಕರ್ತವ್ಯ ಅಭ್ಯರ್ಥಿ ಮಾಡಬೇಕಾಗಿರುತ್ತದೆ. ಅದನ್ನು ಬಿಟ್ಟು ನಾನು ಸಾಯಿಬಣ್ಣ ಅವರಿಗೆ ಬೆಂಬಲಿಸದಂತೆ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂಬುದಾಗಿ ಅಪಪ್ರಚಾರ ನಡೆಸಲಾಗಿದೆ. ಇಂಥ ಅಪಪ್ರಚಾರ ನಡೆಸಿದರೆ ಪಕ್ಷಕ್ಕೆ ಹಾನಿಯಾಗುತ್ತದೆ’ ಎಂದು ಸಲಹೆ ನೀಡಿದರು.

‘ಪಕ್ಷ ಬದಲಾವಣೆಯಿಂದಾಗಿ ನನಗೂ ಬೇಸರವಾಗಿದೆ. ಆದರೆ, ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿ ಕೆಲಸ ಮಾಡಬೇಕಾಗುತ್ತದೆ. ನಾವು ವ್ಯಕ್ತಿಗಿಂತ ಪಕ್ಷ ನೋಡಬೇಕಾಗಿದೆ. ಪಕ್ಷವನ್ನು ಅಧಿಕಾರಕ್ಕೆತರುವ ಉದ್ದೇಶದಿಂದ ಜಿಲ್ಲೆಯ ನಾಲ್ಕು ಮತಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಪಟ್ಟ ಪರಿಶ್ರಮವನ್ನು ವ್ಯರ್ಥ ಮಾಡದೇ ಪಕ್ಷದ ಗೆಲುವಿಗೆ ಶ್ರಮಿಸಬೇಕು’ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.

ಗುರುಮಠಕಲ್‌ ಮತಕ್ಷೇತ್ರದ ನೂರಾರು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

**

ಪಕ್ಷದ ಜಿಲ್ಲಾ ಅಧ್ಯಕ್ಷನಾಗಿ ವರಿಷ್ಠರ ತೀರ್ಮಾನದಿಂದ ಗೊಂದಲಕ್ಕೆ ಸಿಲುಕಿದ್ದೇನೆ. ಆದರೆ, ವರಿಷ್ಠರ ತೀರ್ಮಾನದಲ್ಲಿ ಲೆಕ್ಕಾಚಾರ ಇರುತ್ತದೆ. ಗೊಂದಲ ಬಿಟ್ಟು ಪಕ್ಷ ಸಂಘಟಿಸೋಣ – ಚಂದ್ರಶೇಖರಗೌಡ ಮಾಗನೂರ, ಅಧ್ಯಕ್ಷ, ಜಿಲ್ಲಾ ಬಿಜೆಪಿ ಘಟಕ.

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry