7
ಮತದಾನ ಹಾಗೂ ವಿವಿಪ್ಯಾಟ್ ಜನಜಾಗೃತಿ ಕಾರ್ಯಕ್ರಮ

ಮತದಾನ ಅತ್ಯಂತ ಪವಿತ್ರ ಕಾರ್ಯ: ಬಸವರಾಜ ಮಹಾಮನಿ

Published:
Updated:

ಕಕ್ಕೇರಾ: ‘ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್ ಹೇಳಿದಂತೆ ಮತದಾನ ಶ್ರೇಷ್ಠದಾನ. ಅದನ್ನು ಹಣ ಅಥವಾ ಯಾವುದೇ ಆಮಿಷಕ್ಕೆ ಮಾರಿಕೊಳ್ಳಬೇಡಿ. ಮತದಾನ ದೇಶದ ಪ್ರತಿಯೊಬ್ಬ ನಾಗರಿಕ ಅತ್ಯಂತ ಮಹತ್ವದ್ದಾಗಿದೆ. ಯಾರ ಮಾತಿಗೆ ಕಿವಿಗೊಡದೆ, ಯೋಗ್ಯವಂತರನ್ನು ಆಯ್ಕೆ ಮಾಡಿ’ ಎಂದು ಹಾಸ್ಯಕಲಾವಿದ ಬಸವರಾಜ ಮಹಾಮನಿ ಹೇಳಿದರು.

ಪಟ್ಟಣದ ಸೋಮನಾಥ ದೇವಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಬುಧವಾರ ನಡೆದ ಮತದಾನ ಹಾಗೂ ವಿವಿಪ್ಯಾಟ್(ಮತ ಖಾತ್ರಿ) ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಂದು ಮತವು ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತದೆ. ಮೇ 12ರಂದು ನಡೆಯುವ 2018ರ ವಿಧಾನಸಭೆಗೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಯಾವುದೇ ಆಮಿಷಕ್ಕೆ ಒಳಗಾಗದೆ ಯೋಗ್ಯರಿಗೆ ಮತ ಚಲಾಯಿಸುವ ಮೂಲಕ ಸದೃಢ ದೇಶದ ನಿರ್ಮಾಣಕ್ಕೆ ಮುಂದಾಗಬೇಕು’   ಎಂದು ಸಲಹೆ ನೀಡಿದರು.

ಮತ ಕೇಂದ್ರಕ್ಕೆ ತೆರಳಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು.ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು ಮತದಾನ ಮಾಡಿದ ವ್ಯಕ್ತಿಯು ಯಾವ ಅಭ್ಯರ್ಥಿಗೆ ಮತ ಚಲಾಯಿಸಿದ್ದೇವೆ ಎಂಬುದನ್ನು ಖಾತ್ರಿ ಮಾಡಿಕೊಳ್ಳುವ ಹೊಸ ಯಂತ್ರವನ್ನು ಆವಿಷ್ಕರಿಸಲಾಗಿದೆ. ಇದರಿಂದ ಮತದಾರನಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

ಸಿಡಿಪಿಒ ಮೀನಾಕ್ಷಿ ಪಾಟೀಲ್ ಮಾತನಾಡಿ, ‘ಆಸೆ ಆಮಿಷಗಳಿಗೆ ಬಲಿಯಾಗದೆ ಉತ್ತಮ ಸರ್ಕಾರಕ್ಕೆ ಮತ ನೀಡಿ. ಮತ ಚಲಾಯಿಸದಿದ್ದಲ್ಲಿ ಸರ್ಕಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಮಗಿರುವುದಿಲ್ಲ.ಹಾಗಾಗಿ ಕಡ್ಡಾಯವಾಗಿ ಪ್ರತಿಯೊಬ್ಬರೂ ಮತ ಚಲಾಯಿಸಿ’ ಎಂದರು.

ತಾಲ್ಲೂಕು ಆರೋಗ್ಯಧಿಕಾರಿ ಡಾ.ರಾಜಾ ವೆಂಕಟಪ್ಪ ನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ ಓಲೇಕಾರ ಅವರು ಮತದಾನದ ಕುರಿತು ಮಾತನಾಡಿದರು.

ಡಾ. ವಿಠಲ್ ಪೂಜಾರಿ, ಅಂಗನವಾಡಿ ಮೇಲ್ವಿಚಾರಕಿಯರಾದ ಶೋಭಾ ಸಜ್ಜನ್, ಲಕ್ಷ್ಮೀಬಾಯಿ ಚವ್ಹಾಣ, ಅಮರಯ್ಯಸ್ವಾಮಿ ಜಾಲಿಬೆಂಚಿ ಸೇರಿದಂತೆ ಅಧಿಕಾರಿಗಳು ವೇದಿಕೆಯಲ್ಲಿದ್ದರು. ವಿವಿಧ ಗ್ರಾಮಗಳಿಂದ ಬಂದಿದ್ದ ಜನರು ಮತಖಾತ್ರಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಪ್ರಮುಖರಾದ ಹಣಮಂತ್ರಾಯ ಜಹಾಗೀರದಾರ, ಸೋಮಣ್ಣನಾಯಕ ಹವಾಲ್ದಾರ್, ಪರಮಣ್ಣ ಪೂಜಾರಿ, ಪುರಸಭೆ ಮುಖ್ಯಾಧಿಕಾರಿ ಆದಪ್ಪ ಸುರಪುರಕರ್, ನಿಂಗಯ್ಯ ಬೂದಗುಂಪಿ, ಲಕ್ಕಪ್ಪ ಮೇಲಾ, ಭೀಮನಗೌಡ ಹಳ್ಳಿ, ರಾಮಚಂದ್ರ ದಾಸ, ಅಂಗನವಾಡಿ ಶಿಕ್ಷಕಿಯರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry