ನೈಜ ಘಟನೆ ಆಧರಿಸಿದ ಕಟ್ಟು ಕಥೆ

7

ನೈಜ ಘಟನೆ ಆಧರಿಸಿದ ಕಟ್ಟು ಕಥೆ

Published:
Updated:
ನೈಜ ಘಟನೆ ಆಧರಿಸಿದ ಕಟ್ಟು ಕಥೆ

ಹಾಗೆ ನೋಡಿದರೆ ಕಥೆ ಎಂದರೆ ಕಟ್ಟುವುದು ಅಥವಾ ಯಾರೋ ಕಟ್ಟಿರುವುದೇ ಆಗಿರುತ್ತದೆ. ಕೆಲವೊಂದು ಕಥೆಗಳು ಕೇವಲ ಕಲ್ಪನೆಯ– ಮಾಹಿತಿಯ ಆಧಾರದ ಮೇಲೆ ಕಟ್ಟಿದ್ದರೆ ಇನ್ನು ಕೆಲವು ಅನುಭವದ ಆಧಾರದ ಮೇಲೆ ಕಟ್ಟಲ್ಪಟ್ಟಿರುತ್ತವೆ. ಮಾಹಿತಿ ಮತ್ತು ಕಲ್ಪನೆ ಎರಡನ್ನೂ ಸೇರಿಸಿ ಒಂದು ಸಿನಿಮಾ ಕಟ್ಟಿದ್ದಾರೆ ನಿರ್ದೇಶಕ ರಾಜ್‍ಪ್ರವೀಣ್. ಈ ಸಿನಿಮಾದ ಹೆಸರೂ ‘ಕಟ್ಟು ಕಥೆ’.

‘ಎ ರಿಯಲ್ ಸ್ಟೋರಿ’ ಎಂಬ ಅಡಿಟಿಪ್ಪಣಿಯನ್ನೂ ಇಟ್ಟುಕೊಂಡಿರುವ ಈ ಚಿತ್ರ ಸದ್ದಿಲ್ಲದೇ ಪೂರ್ಣಗೊಂಡು ಇದೀಗ ಬಿಡುಗಡೆಯ ಹಂತ ತಲುಪಿದೆ. ಚಿತ್ರದ ಕುರಿತು ವಿವರ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್‌ ಪ್ರವೀಣ್‌, ‘ನಿಜ ಜೀವನದ ಒಂದು ಘಟನೆಯನ್ನು ಇಟ್ಟುಕೊಂಡು ಅದಕ್ಕೆ ಪೂರಕವಾಗಿ ಹಲವು ಸಂಗತಿಗಳನ್ನು ಸೇರಿಸಿ ಸಿನಿಮಾ ಆಗಿಸಿದ್ದೇನೆ. ಈ ಚಿತ್ರದ ನಾಯಕ ಕಿವುಡ. ಒಂದು ಹೇಳಿದರೆ ಇನ್ನೇನೋ ತಿಳಿದುಕೊಳ್ಳುತ್ತಾನೆ. ಇದರಿಂದ ಹಲವು ಅವಾಂತರಗಳು ಸೃಷ್ಟಿಯಾಗುತ್ತದೆ. ಇದನ್ನು ಹಾಸ್ಯಾತ್ಮಕವಾಗಿ ಹೇಳಿಕೊಂಡು ಹೋಗುವ ಪ್ರಯತ್ನ ಮಾಡಿದ್ದೇನೆ’ ಎಂದು ಕಥೆಯ ಎಳೆಯ ಬಗ್ಗೆ ವಿವರಿಸಿದರು.

ಮಿತ್ರ ಈ ಚಿತ್ರದಲ್ಲಿ ಮೂರು ಬೇರೆ ಬೇರೆ ಛಾಯೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ಸೂರ್ಯ ಮತ್ತು ನಾಯಕಿ ಸ್ವಾತಿ ಕೊಂಡೆ ಇಬ್ಬರಿಗೂ ಇದು ಎರಡನೇ ಸಿನಿಮಾ. ರಾಜೇಶ್‌ ನಟರಂಗ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

‘ಕೆಂಡಸಂಪಿಗೆ ಚಿತ್ರದ ನಂತರ ನನಗೆ ಪೊಲೀಸ್ ಅಧಿಕಾರಿಯ ಪಾತ್ರಗಳೇ ಹೆಚ್ಚಾಗಿ ಬರುತ್ತಿವೆ. ಈ ಚಿತ್ರದಲ್ಲಿಯೂ ಪೊಲೀಸ್ ಅಧಿಕಾರಿಯೇ ಆಗಿದ್ದರೂ ಭಿನ್ನವಾದ ಪಾತ್ರ. ಚಿತ್ರದ ಟ್ರೇಲರ್ ನೋಡಿದರೆ ಒಂದು ಕೊಲೆಯ ಸುತ್ತ ಹೆಣೆದಿರುವ ಸಿನಿಮಾ ಇದು ಎಂಬುದು ತಿಳಿಯುತ್ತದೆ. ನಾವು ಯಾವಾಗಲೂ ವ್ಯವಸ್ಥೆ ಸರಿ ಇಲ್ಲ ಎಂದು ದೂಷಿಸುತ್ತ ಇರುತ್ತೇವೆ. ಆದರೆ ಅದರಲ್ಲಿ ನಮ್ಮ ಪಾಲು ಎಷ್ಟಿದೆ ಎಂದು ಯೋಚಿಸುವುದಿಲ್ಲ. ಇಂಥ ಯೋಚನೆಗಳನ್ನು ಪ್ರಚೋದಿಸುವಂಥ ಸಿನಿಮಾ ಇದು‍’ ಎಂದು ವಿವರಿಸಿದರು ರಾಜೇಶ್‌.

ಈ ಚಿತ್ರಕ್ಕೆ ಮಾಸ್ತಿ ಅವರು ಸಂಭಾಷಣೆ ಬರೆದಿದ್ದಾರೆ. ‘ಸಂಭಾಷಣೆ ಸರಳವಾಗಿರಬೇಕು. ಆದರೆ ಅಷ್ಟೇ ಚುರುಕಾರಿಗಬೇಕು ಎಂದು ನಿರ್ದೇಶಕರು ತಾಕೀತು ಮಾಡಿದ್ದರು. ಅದನ್ನು ಮನಸ್ಸಿನಲ್ಲಿಟ್ಟುಕೊಂಡೇ ಸಂಭಾಷಣೆ ಬರೆದಿದ್ದೇನೆ’ ಎಂದರು ಮಾಸ್ತಿ. ಮೈಸೂರಿನ ಮಹಾದೇವ ಎನ್ನುವವರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಎನ್‌. ಸವಿತಾ ಕೂಡ ಅವರಿಗೆ ಕೈ ಜೋಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry