ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಯಲ್ಲಿಯೇ ಉತ್ತರವಿದೆ...

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನಿರೂಪಣೆ:

ನನ್ನದು ಸಾರ್ವಜನಿಕ ಬದುಕು. ಪ್ರತಿದಿನ ಹತ್ತಾರು ಜನರ ಜೊತೆಗೆ ಒಡನಾಟ. ಭಿಕ್ಷೆ ಬೇಡಿಯಾದರೂ ನಮ್ಮ ಸಂಸ್ಥೆಯನ್ನು ನಂಬಿರುವ ಕುಟುಂಬಗಳನ್ನು ಕಾಪಾಡಬೇಕಾದ ಜವಾಬ್ದಾರಿ. ಸಾರ್ವಜನಿಕ ಬದುಕಿನಲ್ಲಿ ಇರುವ ನಮ್ಮಂಥವರು ಅನೇಕ ಸಂದರ್ಭಗಳಲ್ಲಿ ಪರಿಸ್ಥಿತಿಯ ಅಡಿಯಾಳುಗಳು. ನನ್ನ ಇಚ್ಛಾಶಕ್ತಿ, ಸಂಕಲ್ಪಶಕ್ತಿ, ಚಾರಿತ್ರ್ಯವೇ ನನ್ನನ್ನು ಅನುಸರಿಸುವವರ ಉತ್ಸಾಹದ ಕಾರಣವೂ ಆಗಿರುತ್ತದೆ. ಕಾರಣ ಯಾವುದೇ ಇರಲಿ, ನಾನು ಸಂಕಲ್ಪದಿಂದ ವಿಮುಖನಾದರೆ ಜೊತೆಯಲ್ಲಿರುವವರ ಇಚ್ಛಾಶಕ್ತಿಯ ಮೇಲೆಯೂ ಅದು ಪರಿಣಾಮ ಬೀರುತ್ತದೆ.

ನನ್ನ ಮಾತನ್ನು ಸೂಕ್ಷ್ಮವಾಗಿ ಗಮನಿಸಿ. ‘ನಾನು’ ಎನ್ನುವುದು ಎಷ್ಟು ಸಲ ಬಂದಿದೆ ಅಲ್ವಾ? ಮನುಷ್ಯನಿಗೆ ಈ ‘ನಾನು’ ಎನ್ನುವುದು ವರವೂ ಹೌದು, ಶಾಪವೂ ಹೌದು. ‘ನಾನು’ ಎಂಬುದು ‘ನಾವು’ ಎನ್ನುವುದರಲ್ಲಿ ಕರಗಬೇಕು. ಹೀಗೆ ಕರಗದಿದ್ದರೆ ಜಗತ್ತೇ ನಮ್ಮ ತಲೆಯ ಮೇಲೆ ಬಿದ್ದಂತೆ ಭಾಸವಾಗುತ್ತದೆ. ನನ್ನ ಪ್ರಕಾರ ಅದೇ ಒತ್ತಡ. ನಾವು ಕರಗಲು ಸಾಧ್ಯವಾಗದ ಪರಿಸ್ಥಿತಿಯೇ ನಮ್ಮಲ್ಲಿ ಒತ್ತಡಕ್ಕೆ ಕಾರಣವಾಗುತ್ತದೆ.

ನಾನು ಹಳ್ಳಿಗರ ಜೊತೆಗೆ, ಮಕ್ಕಳ ಜೊತೆಗೆ ಸುಲಭ ವಾಗಿ ಕರಗಿ ಹೋಗ್ತೀನಿ. ಎಂಥದ್ದೇ ಸವಾಲು, ಎಷ್ಟೇ ಕೆಲಸವಿದ್ದರೂ ನಿಭಾಯಿಸಬಲ್ಲೆ ಎನ್ನುವ ಆತ್ಮವಿಶ್ವಾಸ ಇರುತ್ತದೆ. ಆದರೆ ಪಟ್ಟಣದ ನಾಜೂಕು ಜನರು ಹಾಗೂ ಗಿಲೀಟು ಮಾತಿನವರೊಡನೆ ಸಲೀಸಾಗಿ ವ್ಯವಹರಿಸಲು ಸಾಧ್ಯವಾಗುವುದಿಲ್ಲ.

ಸಮಾನಮನಸ್ಕ ಯುವ ಗೆಳೆಯರ ಸಹಾಯದಿಂದ ‘ನಮ್ಮ ಮಕ್ಕಳು’ ಸಂಸ್ಥೆ ನಡೆಸುತ್ತಿದ್ದೇನೆ. ನಮ್ಮ ಸಂಸ್ಥೆಯ ಸಹಕಾರದಿಂದ ಓದಿದ ಮಕ್ಕಳು ದಾರಿ ತಪ್ಪಿದ ವಿಷಯ ತಿಳಿದಾಗಲೂ ಮನಸ್ಸಿಗೆ ಬೇಸರವಾಗುತ್ತದೆ. ನಮ್ಮ ಸಂಸ್ಥೆಯಿಂದ ಓದಿದ ಹುಡುಗನೊಬ್ಬ ಬೆಂಗಳೂರಿನಲ್ಲಿ ದೊಡ್ಡ ಅಧಿಕಾರಿಯಾಗಿದ್ದಾನೆ. ಅಧಿಕಾರದ ಮದ ತಲೆಗೆ ಏರಿ, ನಡತೆ ಕೆಡಿಸಿಕೊಂಡಿದ್ದಾನೆ. ಅವನಿಗೆ ಬುದ್ಧಿ ಹೇಳಲು ಪ್ರಯತ್ನಿಸಿದೆ. ಪ್ರಯೋಜನವಾಗಲಿಲ್ಲ. ‘ನಾನು ಬೆಳೆಸಿದ ಮಗು ಹೀಗೆ ದಾರಿ ತಪ್ಪಿತಲ್ಲ’ ಅನಿಸಿ ಟೆನ್ಷನ್ ಮಾಡಿಕೊಂಡಿದ್ದೆ. ಒಂದೆರೆಡು ದಿನ ಯಾರ ಜೊತೆಗೂ ಸರಿಯಾಗಿ ಮಾತನಾಡಿರಲಿಲ್ಲ.

ನನಗೆ ತುಂಬಾ ಸಲ ಹೀಗೆ ಅನಿಸುತ್ತೆ. ನಾವು ಯಾರನ್ನಾದರೂ, ಯಾವುದನ್ನಾದರೂ ನಿಯಂತ್ರಿಸಲು ಯತ್ನಿಸಿದಾಗ, ಅದು ನಮ್ಮ ನಿಯಂತ್ರಣಕ್ಕೆ ನಿಲುಕದೆ ತನ್ನ ಸ್ವಾತಂತ್ರ್ಯ ರಕ್ಷಿಸಿಕೊಂಡಾಗ ಖುಷಿ ಪಡಬೇಕು. ನೀವು ಪ್ರಕೃತಿಯನ್ನು ಗಮನಿಸಿ, ಎಲ್ಲವೂ ತನ್ನ ಸ್ವಾತಂತ್ರ್ಯವನ್ನು ತಾವು ರಕ್ಷಿಸಿಕೊಂಡಿವೆ. ಯಾವುದೂ, ಯಾವುದರ ನಿಯಂತ್ರಣದಲ್ಲಿಯೂ ಇಲ್ಲ. ಆದರೂ ಒಂದು ಬ್ಯಾಲೆನ್ಸ್ ಇದೆ. ಇದನ್ನು ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಳ್ಳುವುದೇ ಒತ್ತಡಕ್ಕೆ ಮದ್ದು.

ಮನಸ್ಸಿಗೆ ವಿಪರೀತ ಒತ್ತಡ ಅನಿಸಿದಾಗ, ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದೆ ಎನಿಸಿದಾಗ ಒಂಟಿಯಾಗಿ ಸ್ಕೂಟಿ ಏರಿ ಅಡವಿ ದಾರಿ ಹಿಡಿಯುತ್ತೇನೆ. ಮರವನ್ನು ತಬ್ಬಿಕೊಂಡು ಮನಸೋ ಇಚ್ಛೆ ಅತ್ತು ಬಿಡುತ್ತೇನೆ. ಅತ್ತು ಹಗುರಾದ ಮೇಲೆ ಗಿಡ, ಮರ, ಎಲೆ, ಬಳ್ಳಿ, ಎತ್ತು, ಎಮ್ಮೆ, ಓತಿಕ್ಯಾತ – ಹೀಗೆ ಕಣ್ಣಿಗೆ ಕಂಡ ಎಲ್ಲದರ ಜೊತೆಗೂ ಮಾತಾಡ್ತೀನಿ. ನೋಡಿದ ಜನರು ‘ಈ ಮೇಷ್ಟ್ರಿಗೆ ಏನಾಯ್ತು?’ ಅಂದುಕೊಳ್ಳುತ್ತಾರೆ. ಆದರೆ, ಪ್ರಕೃತಿಯೊಡನೆ ನಡೆಸುವ ಸಂವಾದವೇ ನನ್ನ ಒತ್ತಡವನ್ನು ಕಡಿಮೆ ಮಾಡುತ್ತದೆ. ಸವಾಲುಗಳನ್ನು ಎದುರಿಸಲು ಹೊಸ ದಾರಿಗಳನ್ನು ತೋರಿಸುತ್ತದೆ.

ತನ್ನನ್ನು ಅರ್ಥಮಾಡಿಕೊಳ್ಳಲು ಯತ್ನಿಸುೈವವರ ಜೊತೆಗೆ ಪ್ರಕೃತಿಯೂ ಮುಕ್ತವಾಗಿ ಮಾತನಾಡುತ್ತೆ. ನಾನು ಏನಾದರೂ ಒಗಟು ಹೇಳಿದರೆ ತಲೆಯಾಡಿಸುವ ಮೂಲಕ ಓತಿಕ್ಯಾತ ಉತ್ತರ ಹೇಳುತ್ತೆ, ನನಗೆ ಎದುರಾದ ಎಷ್ಟೋ ಸಂದಿಗ್ಧ ಪರಿಸ್ಥಿತಿಗಳಿಗೆ ಗುಬ್ಬಿಗಳು ಪರಿಹಾರ ಒದಗಿಸಿವೆ, ಗಿಡವನ್ನು ಅಪ್ಪಿಕೊಂಡಿರುವ ಬಳ್ಳಿ ನನಗೆ ಸಾಂತ್ವನ ಹೇಳುತ್ತೆ. ಎಂಥದ್ದೇ ಒತ್ತಡಕ್ಕೂ ಪ್ರಕೃತಿಯಲ್ಲಿ ಉತ್ತರವಿದೆ.

ಒಂದು ದೊಡ್ಡ ಕೆಲಸದ ಸಂಕಲ್ಪ ಮಾಡಿರುತ್ತೇನೆ. ಅವು ಒಬ್ಬಿಬ್ಬರಿಂದ ಆಗುವಂಥದ್ದಲ್ಲ. ಅನೇಕರು ನೆರವು ನೀಡುವ ಭರವಸೆ ನೀಡಿರುತ್ತಾರೆ. ಆದರೆ ಕೆಲವರು ಮಾತು ತಪ್ಪುತ್ತಾರೆ. ಅವರು ಹೀಗೆ ಉದ್ದೇಶಪೂರ್ವಕವಾಗಿ ನಡೆದುಕೊಳ್ಳುತ್ತಾರೆ ಎಂದು ನಾನು ಹೇಳಲಾರೆ. ಪರಿಸ್ಥಿತಿಯ ಅನಿವಾರ್ಯತೆಯಿಂದ ಅವರಿಗೆ ಮಾತಿನ ಮೇಲೆ ನಿಲ್ಲಲು ಸಾಧ್ಯವಾಗುವುದಿಲ್ಲ. ಅವರಿಂದ ಸಕಾಲದಲ್ಲಿ ನೆರವು ದೊರೆಯದಿದ್ದರೆ ಕೆಲಸ ನಿಂತು ಹೋಗುತ್ತದೆ. ಇಂಥ ಸಂದರ್ಭ ವಿಪರೀತ ಒತ್ತಡ ಆಗುತ್ತದೆ. ಆಗ ದೇವರ ಮೇಲೆ ಭಾರಹಾಕಿ ಸುಮ್ಮನಾಗಿಬಿಡುತ್ತೇನೆ. ಎಷ್ಟೋ ಸಂದರ್ಭ ನಾನು ನಿರೀಕ್ಷಿಸದೇ ಇದ್ದ ಮೂಲಗಳಿಂದ ನೆರವು ಒದಗಿ ಬಂದು ಕೆಲಸ ಸಕಾಲಕ್ಕೆ ಆಗಿಬಿಡುತ್ತೆ. ಆಗ ಒತ್ತಡ ಕೂಡ ಸೂರ್ಯನೆದುರಿನ ಮಂಜಿನಂತೆ ಕರಗಿಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT