ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರದಾನಕ್ಕೆ ರಾಜ್‌ ಪ್ರೇರಣೆ

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನೇತ್ರದಾನ ಮಹಾದಾನ. ಹಣ, ಆಸ್ತಿಯನ್ನು ದಾನ ಮಾಡಿದರೆ ಅವು ಕಳವಾಗಬಹುದು. ಆದರೆ ನೇತ್ರದಾನ ಕಳವಾಗುವುದಿಲ್ಲ. ಸತ್ತಾಗ ದೇಹದೊಂದಿಗೆ ಕಣ್ಣುಗಳನ್ನು ಮಣ್ಣುಪಾಲು ಮಾಡಬೇಡಿ. ಆ ಕಣ್ಣುಗಳಿಂದ ಅಂಧರ ಬಾಳಿಗೆ ಬೆಳಕಾಗಿ' ಎಂದು ಸಾರಿದವರು ನಟ ಸಾರ್ವಭೌಮ ಡಾ. ರಾಜ್‌ಕುಮಾರ್‌.

ನೇತ್ರದಾನಕ್ಕೆ ಸಂಬಂಧಿಸಿದಂತೆ ಅವರು ಕೊಟ್ಟ ಈ ಕರೆಯಿಂದ ರಾಜ್‌ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೇತ್ರದಾನಕ್ಕೆ ಪ್ರತಿಜ್ಞೆ ಮಾಡಿದರು. ಅವರ ನಂತರವೂ ಈ ಪ್ರಕ್ರಿಯೆ ನಿರಂತರವಾಗಿ ಮುಂದುವರೆದಿದೆ.

‘ರಾಜ್‌ಕುಮಾರ್ ಅವರು ರಾಜ್ಯದಲ್ಲಿ ನೇತ್ರದಾನ ಅಭಿಯಾನಕ್ಕೆ ರಾಯಭಾರಿಯಂತೆ ಕೆಲಸ ಮಾಡಿದವರು. ಆಗ ಅವರು ಕೊಟ್ಟ ಕರೆಯ ಕಾವು ಇನ್ನೂ ಕಡಿಮೆಯಾಗಿಲ್ಲ. ನೇತ್ರದಾನ ಪ್ರತಿಜ್ಞೆಯ ಜತೆಜತೆಗೆ ನೇತ್ರದಾನ ಮಾಡುವವರ ಸಂಖ್ಯೆಯೂ ಏರಿಕೆ ಆಗಿದೆ. ಬೇಡಿಕೆಗೆ ತಕ್ಕಂತೆ ನೇತ್ರಗಳ ಸಂಗ್ರಹ ಆದಾಗ ಮಾತ್ರವೇ ರಾಜ್‌ ಅವರ ಆಶಯ ಈಡೇರುತ್ತದೆ’ ಎಂಬುದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಕೆ. ಭುಜಂಗ ಶೆಟ್ಟಿ ಅವರ ವಿಶ್ವಾಸದ ಮಾತು.

ನೇತ್ರದಾನ, ಅದರ ಜಾಗೃತಿ, ಅಭಿಯಾನಕ್ಕೆ ರಾಜ್‌ ನೀಡಿರುವ ಮಹತ್ವದ ಕೊಡುಗೆ ಕುರಿತು ಅವರು ಮೆಟ್ರೊ ಜತೆ ಹಂಚಿಕೊಂಡಿದ್ದಾರೆ.

‘ನಾನು ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ, ಅಂಧರಿಗೆ ಶ್ರೀಲಂಕಾದಿಂದ ಕಣ್ಣುಗಳನ್ನು ತರಿಸಲಾಗುತ್ತಿತ್ತು. ಶ್ರೀಲಂಕಾದಲ್ಲಿ ಬೌದ್ಧ ಧರ್ಮೀಯರೇ ಹೆಚ್ಚಿದ್ದಾರೆ. ಸತ್ತ ನಂತರ ಅಂಗಾಂಗ ದಾನ ಮಾಡಿದರೆ ಮೋಕ್ಷ ಸಿಗುತ್ತದೆ ಎಂಬುದು ಅಲ್ಲಿನವರ ನಂಬಿಕೆ. ಹಾಗಾಗಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನ ಮಾಡುತ್ತಾರೆ. ಜಗತ್ತಿನ ಹಲವಾರು ದೇಶಗಳಿಗೆ ಶ್ರೀಲಂಕಾದಿಂದಲೇ ನೇತ್ರಗಳು ರವಾನೆಯಾಗುತ್ತವೆ. ಆದರೆ ನಮ್ಮಲ್ಲಿ ಇದಕ್ಕೆ ತದ್ವಿರುದ್ಧವಾದ ವಾತಾವರಣವಿತ್ತು. ಹಾಗಾಗಿ ನೇತ್ರದಾನದ ಕುರಿತು ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ ಎಂದು ಆಗಲೇ ಪಣತೊಟ್ಟೆ.

’ಆದರೆ ಈ ಕಾರ್ಯಕ್ಕೆ ಜನರನ್ನು ಪ್ರೇರೇಪಿಸಲು ಶಕ್ತಿ ಇರುವ ವ್ಯಕ್ತಿಯೇ ಆಗಬೇಕು ಎಂದು ಬಯಸಿದ್ದೆ. ದೇವಯ್ಯ ಪಾರ್ಕ್‌ನಲ್ಲಿದ್ದ ನನ್ನ ಕ್ಲಿನಿಕ್‌ಗೆ ಕಣ್ಣುಗಳ ಪರೀಕ್ಷೆಗೆಂದು ಆಗಾಗ ಕನ್ನಡದ ವರನಟ ಡಾ. ರಾಜ್‌ ಅವರು ಬರುತ್ತಿದ್ದರು. ಜನರಲ್ಲಿ ಜಾಗೃತಿ ಮೂಡಿಸಲು ಅವರೇ ಸೂಕ್ತ ವ್ಯಕ್ತಿ ಎಂದು ಭಾವಿಸಿದೆ. ಒಂದು ದಿನ ಈ ಕುರಿತು ರಾಜ್‌ ಅವರಲ್ಲಿ ಪ್ರಸ್ತಾಪಿಸಿದೆ. ಅವರು ಸಂತೋಷವಾಗಿಯೇ ಒಪ್ಪಿಕೊಂಡರು. ‘ತೀರಿಕೊಂಡ ಮೇಲೆ ಕಣ್ಣುಗಳು ಬೇರೆಯವರ ಬಾಳಿಗೆ ಬೆಳಕಾಗುತ್ತವೆ ಎಂಬುದಾದರೆ ಜಾಗೃತಿ ಕಾರ್ಯಕ್ರಮಗಳಿಗೆ ಎಲ್ಲ ರೀತಿಯ ಸಹಕಾರ ಕೊಡುತ್ತೇನೆ’ ಎಂದು ಭರವಸೆ ನೀಡಿದರು.

1994ರಲ್ಲಿ ಡಾ. ರಾಜ್‌ಕುಮಾರ್ ಹೆಸರಿನಲ್ಲಿ ನೇತ್ರ ಬ್ಯಾಂಕ್ ಉದ್ಘಾಟಿಸಲಾಯಿತು. ಆ ಕಾರ್ಯಕ್ರಮದಲ್ಲಿ ರಾಜ್‌ ಅವರು, ‘ನಾನು, ನನ್ನ ಪತ್ನಿ, ಮಕ್ಕಳು ಮತ್ತು ಮೊಮ್ಮಕ್ಕಳು ನೇತ್ರದಾನ ಮಾಡುತ್ತೇವೆ’ ಎಂದು ಘೋಷಿಸಿದರು. ಅದರ ನಂತರ ಸಹಸ್ರಾರು ಸಂಖ್ಯೆಯಲ್ಲಿ ಜನರು ನೇತ್ರದಾನದ ಪ್ರತಿಜ್ಞೆ ಮಾಡಿದರು. ಇಲ್ಲಿಯವರೆಗೆ 50 ಸಾವಿರಕ್ಕೂ ಹೆಚ್ಚು ಜನ ನಮ್ಮ ಸಂಸ್ಥೆಯಲ್ಲಿಯೇ ಪ್ರತಿಜ್ಞಾ ಪತ್ರಕ್ಕೆ ಸಹಿ ಮಾಡಿ ನೀಡಿದ್ದಾರೆ.

’ನೇತ್ರದಾನ ಕುರಿತ ಜಾಗೃತಿಯನ್ನು ಅಭಿಯಾನದ ರೀತಿ ಮಾಡುವಂತೆ ರಾಜ್‌ ಸಲಹೆ ನೀಡಿದರು. ಅದಕ್ಕೆ ಎಲ್ಲ ರೀತಿಯ ಸಹಕಾರವೂ ಅವರಿಂದ ದೊರೆಯಿತು. ಹೋದೆಡೆಯಲ್ಲೆಲ್ಲ ನೇತ್ರದಾನದ ಅಗತ್ಯ, ಮಹತ್ವದ ಬಗ್ಗೆ ಅವರು ಸಾರಿ ಹೇಳಿದರು. ಸಾಮಾನ್ಯವಾಗಿ ಸೆಲೆಬ್ರೆಟಿಗಳು, ರಾಜಕಾರಣಿಗಳು ಹೇಳಿದಂತೆ ಮಾಡುವುದು ಕಡಿಮೆ. ಆದರೆ ರಾಜ್‌ಕುಮಾರ್‌ ಮತ್ತು ಅವರ ಕುಟುಂಬದವರು ಈ ಮಾತಿಗೆ ಅಪವಾದ. ಡಾ. ರಾಜ್‌ ಮತ್ತು ಪಾರ್ವತಮ್ಮ ಅವರು ನಿಧನವಾದಾಗ ನನಗೆ ಮಾಹಿತಿ ನೀಡಿದ ಅವರ ಕುಟುಂಬದವರು ಕಣ್ಣುಗಳನ್ನು ಪಡೆದುಕೊಳ್ಳಲು ಅವಕಾಶ ಕೊಟ್ಟರು. ಇವರಿಬ್ಬರ ಕಣ್ಣುಗಳು ಅಂಧರ ಕತ್ತಲಿನ ಬಾಳಿನಲ್ಲಿ ಬೆಳಕು ನೀಡಿವೆ.

‘ರಾಜ್ಯ ಮತ್ತು ದೇಶದಲ್ಲಿ ಕಣ್ಣುಗಳ ಬೇಡಿಕೆಗಿಂತ ಸಂಗ್ರಹದ ಪ್ರಮಾಣ ಕಡಿಮೆ ಇದೆ. ನಾರಾಯಣ ನೇತ್ರಾಲಯದಲ್ಲಿಯೇ 100ಕ್ಕೂ ಹೆಚ್ಚು ಜನರು ಕಾರ್ನಿಯಾ ಬದಲಾವಣೆಗಾಗಿ ಸರದಿಯಲ್ಲಿ ಕಾಯುತ್ತಿದ್ದಾರೆ. ಕಳೆದ ವರ್ಷ ರಾಜ್ಯದಲ್ಲಿ 3,500 ನೇತ್ರಗಳನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 1,800 ನೇತ್ರಗಳನ್ನು ನಾರಾಯಣ ನೇತ್ರಾಲಯದ ರಾಜ್‌ಕುಮಾರ್‌ ನೇತ್ರ ಬ್ಯಾಂಕ್‌ನಿಂದಲೇ ಸಂಗ್ರಹಿಸಲಾಗಿದೆ.

ಗ್ರಾಮೀಣ ಭಾಗದಲ್ಲಿ ನೇತ್ರ ಸಂಗ್ರಹ

ಮೈಸೂರು ರಸ್ತೆಯ ಬಿಡದಿಯಲ್ಲಿ ರಾಜ್‌ಕುಮಾರ್‌ ಹೆಸರಿನಲ್ಲಿಯೇ ನೇತ್ರ ಸಂಗ್ರಹ ಕಾರ್ಯ ನಡೆಯುತ್ತಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಯಾರಾದರೂ ಮರಣ ಹೊಂದಿದ್ದಾರೆ ಎಂಬ ಸುದ್ದಿ ಗೊತ್ತಾದ ಕೂಡಲೇ ಅವರ ಸಂಬಂಧಿಕರು, ಗ್ರಾಮದ ನಾಯಕರ ನೆರವಿನಿಂದ ನೇತ್ರ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ.

ರಾಜ್‌ಕುಮಾರ್‌ ಅವರ ನೇತ್ರದಾನದಿಂದ ಪ್ರೇರಣೆ ಪಡೆದ ಬಿಡದಿ ಹೋಬಳಿಯ ಕೆಮಿಸ್ಟ್‌ ಅಂಡ್‌ ಡ್ರಗಿಸ್ಟ್ ಫೌಂಡೇಷನ್‌ ಟ್ರಸ್ಟ್‌ 2009ರಲ್ಲಿ ಡಾ. ರಾಜ್‌ಕುಮಾರ್‌ ನೇತ್ರ ಸಂಗ್ರಹಣಾ ಕೇಂದ್ರ ಸ್ಥಾಪಿಸಿತು.

‘ನಮಗೆ ಮೊದಮೊದಲು ಸತ್ತವರ ಮನೆಗೆ ಹೋಗಿ ಕಣ್ಣುಗಳನ್ನು ಸಂಗ್ರಹಿಸುವುದು ಕಷ್ಟವಾಗುತ್ತಿತ್ತು. ಕೆಲಬಾರಿ ಸ್ಥಳೀಯ ನಾಯಕರು, ಮೃತರ ಸಂಬಂಧಿಕರು ನಮಗೆ ನೆರವಾಗುತ್ತಿದ್ದರು. ಆದರೆ ಕೆಲವರ ಅಪಪ್ರಚಾರದಿಂದ ನಮಗೆ ‘ಕಣ್ಣುಕಳ್ಳರು’ ಎಂಬ ಹೆಸರೂ ಬಂದು ಬಿಟ್ಟಿತು. ಆಗ ನಮ್ಮ ನೆರವಿಗೆ ಬಂದದ್ದು ಡಾ.ರಾಜ್‌ ಕುಟುಂಬ. ಪಾರ್ವತಮ್ಮ ರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಶಿವರಾಜ್‌ ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಬೆನ್ನೆಲುಬಾಗಿ ನಿಂತರು. ನಾವು ನಡೆಸುತ್ತಿದ್ದ ಕಾರ್ಯಕ್ರಮಗಳಿಗೆ ಬಂದು ಜಾಗೃತಿ ಮೂಡಿಸಿದರು. ಡಾ. ರಾಜ್‌ಕುಮಾರ್‌ ಟ್ರಸ್ಟ್‌ ನಮ್ಮೊಂದಿಗೆ ಕೈಜೋಡಿಸಿದೆ. ಇದರಿಂದ ಜನರಿಗೆ ನಮ್ಮ ಬಗ್ಗೆ ಒಳ್ಳೆಯ ಭಾವನೆ ಬಂದಿದೆ’ ಎನ್ನುತ್ತಾರೆ ಡಾ. ರಾಜ್‌ಕುಮಾರ್‌ ನೇತ್ರ ಸಂಗ್ರಹಣಾ ಕೇಂದ್ರದ ಕಾರ್ಯದರ್ಶಿ ಮಂಜುನಾಥ್‌.

‘ಒಂಬತ್ತು ವರ್ಷದಲ್ಲಿ ಒಟ್ಟು 818 ಕಣ್ಣುಗಳನ್ನು ಸಂಗ್ರಹಿಸಿದ್ದೇವೆ. ರಸ್ತೆ ಅಪಘಾತಗಳಲ್ಲಿ ಮರಣ ಹೊಂದಿದವರ ನೇತ್ರಗಳನ್ನು ಪಡೆಯಲು ಪೊಲೀಸರ ಸಹಕಾರವೂ ಸಿಗುತ್ತಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT