4

ಅಗ್ನಿಯ ಸ್ತುತಿ

Published:
Updated:

ಋಗ್ವೇದ ಆರಂಭವಾಗುವುದೇ ಅಗ್ನಿಯ ಸ್ತುತಿಯಿಂದ; ಋಗ್ವೇದದ ಮೊದಲ ಮಂತ್ರ ಹೀಗಿದೆ. ಈ ಮಂತ್ರದ ಋಷಿ: ಮಧುಚ್ಛಂದಾ; ಛಂದಸ್ಸು: ಗಾಯತ್ರೀ; ದೇವತೆ: ಅಗ್ನಿ –

ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಂ |

ಹೋತಾರಂ ರತ್ನಧಾತಮಂ ||

ಈ ಮಂತ್ರದ ಪದಶಃ ಅರ್ಥವನ್ನು ಹೀಗೆ ಮಾಡಬಹುದು:

(ಪುರಃ ಹಿತಂ) ಎಲ್ಲರ ಮುಂದೆ ಸ್ಥಿತವಾಗಿರುವ, ಅನಾದಿಕಾಲದಿಂದ ಸರ್ವರ ಹಿತೈಷಿಯಾಗಿರುವ (ಯಜ್ಞಸ್ಯ) ಯಜ್ಞದ, ಸತ್ಕರ್ಮದ, ದೇವಪೂಜಾ, ಸಂಗತಿಕರಣ, ದಾನ – ಈ ಮೂರು ಕ್ರಿಯೆಗಳಿಂದ ಕೂಡಿದ ಸಕಲ ಉತ್ತಮ ಕರ್ಮಗಳ, (ದೇವಂ) ಪ್ರಕಾಶಕನಾಗಿರುವ, ದಾತೃವಾಗಿರುವ (ಋತ್ವಿಜಂ) ಋತುಗಳನ್ನು ಸಂಗತಗೊಳಿಸುವ, ತಂದೆತಾಯಿಗಳಿಗೆ, ವಿದ್ವಜ್ಜನರಿಗೆ ಮತ್ತು ಸರ್ವಭೂತಗಳಿಗೆ ಪ್ರೇರಣೆ ನೀಡುವ, (ಹೋತಾರಂ) ದಾತೃವಾದ, ಸರ್ವಗ್ರಾಹಿಯಾದ, (ರತ್ನಧಾತಮಂ) ರಮಣೀಯವಾದುದನ್ನು ಧಾರಣ ಮಾಡಿಸುವಲ್ಲಿ ಶ್ರೇಷ್ಠನಾದ (ಅಗ್ನಿಂ) ಅಗ್ರಣಿಯಾದ, ನಾಯಕನಾದ ಪರಮಾತ್ಮನನ್ನು, (ಈಳೇ) ಸ್ತುತಿಸುತ್ತೇನೆ, ಯಾಚಿಸುತ್ತೇನೆ.

ಈ ಮಂತ್ರದ ತಾತ್ಪರ್ಯ: ‘ಪರಮಾತ್ಮನು ಸರ್ವವ್ಯಾಪಕನಾದ ಕಾರಣ, ಯಾರು ಯಾವ ಕಡೆ ತಿರುಗಿದರೂ ಅವರ ಮುಂದೆ ವಿರಾಜಿಸುತ್ತಲೇ ಇರುತ್ತಾನೆ. ಅನಾದಿಕಾಲದಿಂದಲೂ ಜೀವಮಾತ್ರರ ಹಿತಕಾರಿಯಾಗಿದ್ದಾನೆ. ದಿವ್ಯವಾದ ಶಕ್ತಿಗಳನ್ನುಳ್ಳ ಜಡ–ಚೇತನ ವಸ್ತುಗಳ ಸದುಪಯೋಗ, ಬೇರೆ ಬೇರೆ ದ್ರವ್ಯಗಳ ಸಂಯೋಜನೆ ಮತ್ತು ಒಂದಾಗಿ ಮುಂದೆ ಸಾಗುವಿಕೆ, ತನ್ನಲ್ಲಿರುವುದನ್ನು ಸರ್ವಹಿತಕ್ಕಾಗಿ ವಿನಿಯೋಗಿಸುವುದು – ಈ ಮೂರು ಸದ್ವೃತ್ತಿಗಳಿಂದ ಕೂಡಿದ ಸಮಸ್ತ ಪುಣ್ಯಕರ್ಮಗಳನ್ನೂ ಅವನು ವೇದಗಳ ಮೂಲಕ ಪ್ರಕಾಶಪಡಿಸಿದ್ದಾನೆ. ಜಡಭೂತಗಳ ಮತ್ತು ಚೇತನರ ಸಮಯೋಚಿತವಾದ ಸಂಯೋಜನೆಯಿಂದ ಸೃಷ್ಟಿಯೆಂಬ ಯಜ್ಞವನ್ನು ಅವನೇ ಮಾಡುತ್ತಿದ್ದಾನೆ. ಅವನು ಜೀವರ ಉತ್ಕರ್ಷಕ್ಕಾಗಿ ಸಕಲವನ್ನೂ ಕೊಡುವವನೂ, ಪ್ರಳಯಕಾಲದಲ್ಲಿ ಸರ್ವವನ್ನೂ ತನ್ನೊಳಕ್ಕೇ ತೆಗೆದುಕೊಳ್ಳುವವನೂ ಆಗಿದ್ದಾನೆ. ರಮಣೀಯವಾದ ಸೂರ್ಯ, ಚಂದ್ರ, ನಕ್ಷತ್ರಾದಿ ದಿವ್ಯಪ್ರಕಾಶ ಪುಂಜಗಳ, ದಿವ್ಯಧನಗಳ – ಸರ್ವಶ್ರೇಷ್ಠ ಧಾರಕನು ಅವನೇ ಆಗಿದ್ದಾನೆ. ಅವನು ಸರ್ವಾಗ್ರಣಿ, ಎಂದರೆ ಎಲ್ಲದರ ನಾಯಕ–ಸಂಚಾಲಕನಾಗಿದ್ದಾನೆ. ಅವನನ್ನೇ ನಾನು ಸ್ತುತಿಸುತ್ತೇನೆ; ಅವನಲ್ಲೇ ಕೇಳಿಕೊಳ್ಳುತ್ತೇನೆ.

ಮಂತ್ರದ  ಶಬ್ದಾರ್ಥವನ್ನೂ ತಾತ್ಪರ್ಯವನ್ನೂ ಸುಧಾಕರ ಚತುರ್ವೇದಿ ಅವರ ‘ಋಗ್ವೇದದರ್ಶನ’ ಎಂಬ ಕೃತಿಯಿಂದ ಎತ್ತಿಕೊಳ್ಳಲಾಗಿದೆ.

ಮಂತ್ರದಲ್ಲಿರುವ ಒಂದು ಶಬ್ದಕ್ಕೆ ಶಬ್ದಾರ್ಥವನ್ನು ಮಾತ್ರವೇ ನೀಡದೆ, ಅದನ್ನು ವಿಸ್ತರಿಸಿ ಅರ್ಥೈಸಿರುವುದನ್ನು ನಾವಿಲ್ಲಿ ನೋಡಬಹುದು. ವೇದಮಂತ್ರಗಳಿಗೆ ಅರ್ಥ ಹೇಳುವಾಗ ಇಂಥ ಕ್ರಮ ಅನಿವಾರ್ಯ. ಏಕೆಂದರೆ ಪದಗಳ ಅರ್ಥವನ್ನು ಮಾತ್ರವೇ ಹೇಳಿದರೆ ಅರ್ಥದ ತಿಳಿವಳಿಕೆ ಉಂಟಾಗದು. ಮಾತ್ರವಲ್ಲ, ಎಷ್ಟೋ ಶಬ್ದಗಳಿಗೆ ಅರ್ಥ ಹೇಳುವುದು ಕೂಡ ಕಷ್ಟವೇ ಆಗಿರುತ್ತದೆ. ವಾಕ್ಯರಚನೆಯ ಕ್ರಮ, ಪದಗಳ ವ್ಯುತ್ಪತ್ತಿ – ಮುಂತಾದ ವಿವರಗಳು ಸಹ ಇಂದಿನ ಲೌಕಿಕ ವ್ಯಾಕರಣವನ್ನು ಅನುಸರಿಸುತ್ತಿರುತ್ತದೆ ಎನ್ನುವಂತಿಲ್ಲ. ಹೀಗಾಗಿ ವೇದಮಂತ್ರಗಳಿಗೆ ಅರ್ಥವನ್ನು ಹೇಳುವುದು ಸುಲಭವಲ್ಲ. ವೇದಾಂಗಗಳ ನೆರವು ಮೊದಲ ಸಾಧನವಾದರೆ ವೇದಮಂತ್ರಗಳಿಗೆ ಬರೆದಿರುವ ಭಾಷ್ಯಗಳು ಅನಂತರದಲ್ಲಿ ನಮ್ಮ ನೆರವಿಗೆ ಬರುತ್ತವೆ. ಹೀಗಿದ್ದರೂ ಎಲ್ಲ ಮಂತ್ರಗಳಿಗೂ ಅರ್ಥವನ್ನು ಮಾಡಬಹುದು ಎನ್ನಲಾಗದು; ಇಲ್ಲಿ ಮನನವಷ್ಟೇ ನೆರವಾದೀತು.

ಈ ಮಂತ್ರದ ಮತ್ತಷ್ಟು ಸ್ವಾರಸ್ಯಗಳನ್ನು ಮುಂದೆ ನೋಡೋಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry