3

ಬೆಂಗಳೂರಿಗೆ ಹಣ ಪೂರೈಸಲು ‘ಎಸ್‌ಬಿಐ’ನ ತುರ್ತು ಕ್ರಮ

Published:
Updated:
ಬೆಂಗಳೂರಿಗೆ ಹಣ ಪೂರೈಸಲು ‘ಎಸ್‌ಬಿಐ’ನ ತುರ್ತು ಕ್ರಮ

ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ನಗದು ಕೊರತೆ ಸಮಸ್ಯೆ ನಿವಾರಿಸಲು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ತುರ್ತಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಇತರ ರಾಜ್ಯಗಳಿಂದ ನಗದು ತರಿಸಿ ಬೆಂಗಳೂರಿನ ಎಟಿಎಂಗಳಿಗೆ ಭರ್ತಿ ಮಾಡಲು ನಿರ್ಧರಿಸಿದೆ.

‘ಬ್ಯಾಂಕ್‌ಗಳಲ್ಲಿ ಗ್ರಾಹಕರು ಉಳಿತಾಯ, ಚಾಲ್ತಿ ಖಾತೆಗಳೂ ಸೇರಿದಂತೆ ಹಣ ಜಮೆ ಮಾಡುವುದರ ಮೇಲಿನ ಶೇ 0.75 ನಗದು ನಿರ್ವಹಣೆ ಶುಲ್ಕ ರದ್ದು ಮಾಡಿದೆ. ಇದರಿಂದ ಬ್ಯಾಂಕ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ಹರಿದು ಬರಲಿದೆ. ಆ ಮೊತ್ತವನ್ನು ಎಟಿಎಂಗಳಿಗೆ ಭರ್ತಿ ಮಾಡುವುದರಿಂದ ಅವುಗಳ ಮೇಲಿನ ಒತ್ತಡ ದೂರವಾಗಲಿದೆ. ಹಣ ಠೇವಣಿ ಇಡುವುದರ ಮೇಲಿನ ಶುಲ್ಕ ಮನ್ನಾ ಮಾಡುವು ದರಿಂದ ಬ್ಯಾಂಕ್‌ಗೆ ಪ್ರತಿ ದಿನ ₹48.75 ಕೋಟಿ ನಷ್ಟವಾಗಲಿದೆ’ ಎಂದು ಎಸ್‌ಬಿಐ ಡೆಪ್ಯುಟಿ ಮ್ಯಾನೇಜಿಂಗ್‌ ಡೈರೆಕ್ಟರ್‌ ನೀರಜ್‌ ವ್ಯಾಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಎಸ್‌ಬಿಐನಿಂದ ಪ್ರತಿ ದಿನ ಸರಾಸರಿ ₹ 9,000 ಕೋಟಿಗಳಷ್ಟು ಮೊತ್ತವನ್ನು ವಾಪಸ್‌ ಪಡೆಯಲಾಗುತ್ತಿದೆ. ಪ್ರತಿ ದಿನ ಬ್ಯಾಂಕ್‌ಗೆ ಜಮೆಯಾಗುವ ಮೊತ್ತ ₹ 6,500 ಕೋಟಿಗಳಷ್ಟಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ನಗದು ಅಭಾವ ಸಮಸ್ಯೆ ತೀವ್ರಗೊಂಡಿದೆ. ಬ್ಯಾಂಕ್‌ನ ಇತರ ವೃತ್ತಗಳಿಂದ ನಗದು ತರಿಸಲಾಗುವುದು. ಇದರಿಂದ ನಗದು ಬೇಡಿಕೆ ಮೇಲಿನ ಒತ್ತಡ ಕಡಿಮೆಯಾಗಲಿದೆ’ ಎಂದು ವ್ಯಾಸ್‌ ಹೇಳಿದ್ದಾರೆ.

ಸುಧಾರಿಸದ ಪರಿಸ್ಥಿತಿ: ನಾಲ್ಕೈದು ದಿನಗಳಿಂದ ಎದುರಾಗಿರುವ ನಗದು ಕೊರತೆ ಸಮಸ್ಯೆ ಈಗಲೂ ದೂರವಾಗಿಲ್ಲ. ‘ಶುಕ್ರವಾರ ಬೆಳಿಗ್ಗೆ ಏಳು ಎಟಿಎಂಗಳಿಗೆ ಭೇಟಿ ನೀಡಿದರೂ ನನಗೆ ಹಣ ಸಿಗಲಿಲ್ಲ’ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಗ್ರಾಹಕರೊಬ್ಬರು ದೂರಿದ್ದಾರೆ.

ಈಡೇರದ ಭರವಸೆ

ನಗದು ಕೊರತೆ ತಗ್ಗಿಸಲು ಕ್ರಮ ಕೈಗೊಳ್ಳಲಾಗಿದೆ. ಮೂರು ದಿನಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ ಎನ್ನುವ ಕೇಂದ್ರ ಸರ್ಕಾರದ ಭರವಸೆ ಇದುವರೆಗೂ ಈಡೇರಿಲ್ಲ. ಬ್ಯಾಂಕಿಂಗ್‌ ವ್ಯವಸ್ಥೆಗೆ ಹೆಚ್ಚುವರಿ ಹಣ ಪೂರೈಕೆಯಾಗಿಲ್ಲ.

‘ರಾತ್ರಿ ಬೆಳಗಾಗುವುದ ರೊಳಗೆ ಹೆಚ್ಚುವರಿ ಹಣ ಪೂರೈಸಲು ಸಾಧ್ಯವಾಗಲಾರದು. ನಗದು ಪೂರೈಸಲು ಹಲವಾರು ಅಡಚಣೆಗಳೂ ಇವೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ವಕ್ತಾರ ತಿಳಿಸಿದ್ದಾರೆ.  ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಬ್ಯಾಂಕ್‌ ಶಾಖೆಗಳಿಗೆ ಭೇಟಿ ನೀಡಿ

ಪರಿಶೀಲಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry