ಭಾರಿ ಗಾಳಿ ಮಳೆ; ಮನೆ ಮೇಲೆ ಬಿದ್ದ ಮರ

7

ಭಾರಿ ಗಾಳಿ ಮಳೆ; ಮನೆ ಮೇಲೆ ಬಿದ್ದ ಮರ

Published:
Updated:
ಭಾರಿ ಗಾಳಿ ಮಳೆ; ಮನೆ ಮೇಲೆ ಬಿದ್ದ ಮರ

ನಾಪೋಕ್ಲು (ಕೊಡಗು): ಇಲ್ಲಿಗೆ ಸಮೀಪದ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಂದೋಡ ಗ್ರಾಮದಲ್ಲಿ ಶುಕ್ರವಾರ ಗುಡುಗು ಸಹಿತ ಮಳೆಯಾಗಿದೆ.

ರಭಸದ ಮಳೆಯೊಂದಿಗೆ ಗಾಳಿ ಬೀಸಿದ ಪರಿಣಾಮ ಕಾಫಿ ತೋಟಗಳ ಗಿಡಗಳು ಮುರಿದುಬಿದ್ದಿವೆ. ಮನೆಯೊಂದರ ಮೇಲೆ ಮರ ಬಿದ್ದಿದೆ. ಎರಡು ಮನೆಗಳ ಶೀಟುಗಳು ಹಾರಿಹೋಗಿವೆ.

ಅಪಾರ ಬೆಳೆ ನಷ್ಟ (ಹುಳಿಯಾರು ವರದಿ): ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಗಾಳಿ ಸಹಿತ ಆಲಿಕಲ್ಲು ಮಳೆಗೆ ಬೆಳೆ, ಮರಗಳು ನೆಲಕ್ಕುರುಳಿ ಅಪಾರ ನಷ್ಟ ಸಂಭವಿಸಿದೆ.

ಬದಕೆಗುಡ್ಲು ಗ್ರಾಮದಲ್ಲಿ ಬೀಸಿದ ಗಾಳಿ ಮಳೆಗೆ ಮಮತಾ ಅವರಿಗೆ ಸೇರಿದ ಬಾಳೆ ತೋಟ ನಾಶವಾಗಿದೆ. ಇದೇ ಗ್ರಾಮದ ಪುಟ್ಟಮ್ಮ ಅವರಿಗೆ ಸೇರಿದ 1.20 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಪಪ್ಪಾಯಿ ನೆಲಕ್ಕುಳಿವೆ. ಬೆಳ್ಳಾರ ಗ್ರಾಮದ ಕೆಳಗಲ ಗೊಲ್ಲರಹಟ್ಟಿಯಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ 15 ಮನೆಗಳಿಗೆ ಹಾನಿಯಾಗಿದೆ. ಕೆಲವು ಮನೆಗಳ ಚಾವಣಿ ಸಂಪೂರ್ಣ ಹಾರಿ ಹೋಗಿದ್ದು, ಅಪಾರ ಆಸ್ತಿಪಾಸ್ತಿ ನಷ್ಟವಾಗಿದೆ.

ಗಾಣಧಾಳು ಯಗಚಿಹಳ್ಳಿ ರಸ್ತೆಯಲ್ಲಿ ತೆಂಗಿನಮರವೊಂದು ಉರುಳಿ 3 ವಿದ್ಯುತ್ ಕಂಬಗಳು ಧರೆಗುಳಿದಿವೆ. ಕೆಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತವಾಗಿ ಶುಕ್ರವಾರ ಮಧ್ಯಾಹ್ನದವರೆಗೂ ವಿದ್ಯುತ್ ಸಂಪರ್ಕ ಸರಿಪಡಿಸುವ ಕೆಲಸ ನಡೆಯಿತು.

ಬಾಳೆಹೊನ್ನೂರಿನಲ್ಲಿ 6 ಸೆಂ.ಮೀ ಮಳೆ

ಬೆಂಗಳೂರು: ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿಯ ಕೆಲವೆಡೆ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ದಾಖಲಾಗಿದೆ.

ಬಾಳೆಹೊನ್ನೂರಿನಲ್ಲಿ 6ಸೆಂ.ಮೀ, ಎನ್‌.ಆರ್‌.ಪುರ, ಚಿತ್ರದುರ್ಗದಲ್ಲಿ 4, ಕೆ.ಆರ್‌.ಪೇಟೆಯಲ್ಲಿ 3, ಕುಶಾಲನಗರ, ಆಗುಂಬೆ, ಹುಂಚದಕಟ್ಟೆ, ಶೃಂಗೇರಿ, ಕೊಪ್ಪ, ಅಜ್ಜಂಪುರ, ಬಳ್ಳಾರಿ, ಮಂಗಳೂರು, ಧರ್ಮಸ್ಥಳ, ಪುತ್ತೂರು, ಸುಬ್ರಹ್ಮಣ್ಯ, ಹೊನ್ನಾವರ, ಗೋಕರ್ಣ, ಬನವಾಸಿ, ಲಿಂಗನಮಕ್ಕಿ, ಕಡೂರು, ಹಿರಿಯೂರಿನಲ್ಲಿ ತಲಾ 1 ಸೆಂ.ಮೀ ಮಳೆ ದಾಖಲಾಗಿದೆ.

ಕಲಬುರ್ಗಿಯಲ್ಲಿ 41.8 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಹವಾಮಾನ ಮುನ್ಸೂಚನೆ: ರಾಜ್ಯದ ಕೆಲವು ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಸಂಜೆಯ ನಂತರ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry