ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ ಲಡಾಯಿಗೆ ತಂತ್ರ

ಒಂದೇ ಕ್ಷೇತ್ರದ ಮೇಲೆ ಕೈ–ಕಮಲ ಕಣ್ಣು
Last Updated 20 ಏಪ್ರಿಲ್ 2018, 20:33 IST
ಅಕ್ಷರ ಗಾತ್ರ

ಬೆಂಗಳೂರು: ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿದರೆ, ಅಲ್ಲಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರನ್ನು ಕಣಕ್ಕಿಳಿಸಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಶಾ ನೇತೃತ್ವದಲ್ಲಿ ಗುರುವಾರ ತಡರಾತ್ರಿವರೆಗೆ ನಡೆದ ಪಕ್ಷದ ಪ್ರಮುಖ ನಾಯಕರ ಸಭೆಯಲ್ಲಿ, ಬಾದಾಮಿಯಲ್ಲಿ ಮುಖ್ಯಮಂತ್ರಿಗೆ ಸವಾಲೊಡ್ಡುವ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಚರ್ಚೆ ನಡೆದಿದೆ. ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಜೆಪಿ ಶುಕ್ರವಾರ ಪ್ರಕಟಿಸಿದೆ. ಆದರೆ, ಈ ಪಟ್ಟಿಯಲ್ಲಿ ಬಾದಾಮಿ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ.

ಕುರುಬ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಮುಖ್ಯಮಂತ್ರಿ ಈ ಹಿಂದೆಯೇ ಒಲವು ವ್ಯಕ್ತಪಡಿಸಿದ್ದರು. ಇದೀಗ, ಇಲ್ಲಿನ ‘ಜಾತಿ’ ಮತಗಳನ್ನು ಲೆಕ್ಕ ಹಾಕಿರುವ ಶಾ, ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತಂತೆ ಪಕ್ಷದ ರಾಜ್ಯ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ.

ಯಡಿಯೂರಪ್ಪ ಹೆಸರಿನ ಜೊತೆಗೆ ಬಾಗಲಕೋಟೆ ಸಂಸದ ಗದ್ದಿ ಗೌಡರ, ಉದ್ಯಮಿ ವಿಜಯ ಸಂಕೇಶ್ವರ ಹೆಸರನ್ನೂ ಬಿಜೆಪಿ ಪರಿಗಣಿಸುತ್ತಿದೆ. ವಾಲ್ಮೀಕಿ ಸಮುದಾಯದ ನಾಯಕ, ಸಂಸದ ಶ್ರೀರಾಮುಲು ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆದಿದೆ.

ಸಂಕೇಶ್ವರ ಅವರನ್ನು ಕಣಕ್ಕಿಳಿದರೆ ಗೆಲುವು ನಿಶ್ಚಿತ ಎಂಬ ಲೆಕ್ಕಾಚಾರದಲ್ಲಿರುವ ಶಾ, ಸಂಕೇಶ್ವರ ಅವರನ್ನು ಒಪ್ಪಿಸುವ ಹೊಣೆಯನ್ನು ಸಚಿವ ಅನಂತಕುಮಾರ್ ಮತ್ತು ಸಂಸದ ಪ್ರಹ್ಲಾದ ಜೋಶಿ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿಜಯ ಸಂಕೇಶ್ವರ, ‘ನಾನು ಆಕಾಂಕ್ಷಿಯಲ್ಲ. ವರಿಷ್ಠರು ಈ ಕುರಿತು ಚಿಂತನೆ ಹೊಂದಿರುವ ಬಗ್ಗೆ ನನಗೆ ಗೊತ್ತಿಲ್ಲ’ ಎಂದರು. ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, ‘ಈ ಬಗ್ಗೆ ಈಗಲೇ ಪ್ರತಿಕ್ರಿಯಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರದಿಂದ ಶುಕ್ರವಾರ ನಾಮಪತ್ರ ಸಲ್ಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರದಲ್ಲಿ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಬಾದಾಮಿ ಕ್ಷೇತ್ರದಲ್ಲಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಕೈ ಬಿಟ್ಟು ದೇವರಾಜ ಪಾಟೀಲ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಿಸಿತ್ತು. ಆದರೆ, ಅವರಿಗೆ ಇನ್ನೂ ಬಿ ಫಾರಂ ನೀಡಿಲ್ಲ. ಈ ಮಧ್ಯೆ, ಟಿಕೆಟ್‌ ಕೈ ತಪ್ಪಿದ್ದಕ್ಕೆ ಚಿಮ್ಮನಕಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಮುಖ್ಯಮಂತ್ರಿ ಕಣಕ್ಕಿಳಿಯುವುದಾದರೆ ಕ್ಷೇತ್ರ ಬಿಟ್ಟುಕೊಡುವುದಾಗಿ ಚಿಮ್ಮನಕಟ್ಟಿ ಮತ್ತು ದೇವರಾಜ ಪಾಟೀಲ ಈಗಾಗಲೇ ಘೋಷಿಸಿದ್ದಾರೆ. ಮುಖ್ಯಮಂತ್ರಿ ಸ್ಪರ್ಧಿಸದಿದ್ದರೆ ಬಾದಾಮಿ ಟಿಕೆಟ್‌ ತಮಗೇ ನೀಡಬೇಕೆಂದು ಚಿಮ್ಮನಕಟ್ಟಿ ಪಟ್ಟು ಹಿಡಿದಿದ್ದಾರೆ.

‘ಒತ್ತಡ ಹೆಚ್ಚುತ್ತಿದೆ’
ಮೈಸೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಬಾದಾಮಿಯಿಂದಲೂ ಸ್ಪರ್ಧೆಗೆ ಒತ್ತಡ ಹೆಚ್ಚುತ್ತಿದೆ. ಆ ಭಾಗದ ಮುಖಂಡರು ಪದೇಪದೇ ಭೇಟಿಯಾಗಿ ಮನವಿ ಮಾಡುತ್ತಿದ್ದಾರೆ. ಈ ವಿಚಾರ ಹೈಕಮಾಂಡ್‌ ನಿರ್ಧಾರಕ್ಕೆ ಬಿಟ್ಟಿದ್ದು, ಅವರು ಹೇಳಿದಂತೆ ನಡೆದುಕೊಳ್ಳುತ್ತೇನೆ’ ಎಂದರು.

‘ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ ಸ್ಪರ್ಧಿಸಿ ಗೆದ್ದರೆ ಯಾವ ಕ್ಷೇತ್ರಕ್ಕೆ ರಾಜೀನಾಮೆ ಕೊಡುತ್ತೀರಿ’ ಎಂಬ ಪ್ರಶ್ನೆಗೆ ‘ಎರಡೂ ಕಡೆ ಗೆಲ್ಲುತ್ತೇನೆ. ಆಮೇಲೆ ರಾಜೀನಾಮೆ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT