ಸೂಪರ್ ಕಪ್ ಗೆದ್ದ ಬಿಎಫ್‌ಸಿ

5

ಸೂಪರ್ ಕಪ್ ಗೆದ್ದ ಬಿಎಫ್‌ಸಿ

Published:
Updated:
ಸೂಪರ್ ಕಪ್ ಗೆದ್ದ ಬಿಎಫ್‌ಸಿ

ಭುವನೇಶ್ವರ: ತಂಡದ ಸಂಘಟಿತ ಶ್ರಮಕ್ಕೆ ನಾಯಕ ಸುನಿಲ್ ಚೆಟ್ರಿ ಎರಡು ಗೋಲುಗಳ ಬಲ ತುಂಬಿದರು. ಮಿಕು ಮತ್ತು ರಾಹುಲ್ ಭೆಕೆ ಕೂಡ ಮಿಂಚಿದರು. ಇದರ ಪರಿಣಾಮ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಸೂಪರ್ ಕಪ್‌ ಫುಟ್‌ಬಾಲ್ ಟೂರ್ನಿಯ ಪ್ರಶಸ್ತಿ ಗೆದ್ದಿತು.

ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಫೈನಲ್‌ ಪಂದ್ಯದಲ್ಲಿ ಬಿಎಫ್‌ಸಿ ತಂಡ ಈಸ್ಟ್ ಬೆಂಗಾಲ್‌ ವಿರುದ್ಧ 4–1 ಗೋಲುಗಳಿಂದ ಗೆದ್ದಿತು. ಇದು ಈ ಋತುನಿನಲ್ಲಿ ತಂಡ ಗಳಿಸಿದ ಮೊದಲ ಪ್ರಶಸ್ತಿಯಾಗಿದ್ದು ಒಟ್ಟಾರೆ ಪ್ರಮುಖ ಟೂರ್ನಿಯಲ್ಲಿ ಗಳಿಸಿದ ಐದನೇ ಪ್ರಶಸ್ತಿಯಾಗಿದೆ.

ಪ್ರಥಮಾರ್ಧದಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದವು. 28ನೇ ನಿಮಿಷದಲ್ಲಿ ಈಸ್ಟ್‌ ಬೆಂಗಾಲ್‌ನ ಕ್ರೊಮಾಹ್‌ ಪಂದ್ಯದ ಮೊದಲ ಗೋಲು ಗಳಿಸಿದರು. 39ನೇ ನಿಮಿಷದಲ್ಲಿ ತಿರುಗೇಟು ನೀಡಿದ ಬಿಎಫ್‌ಸಿಯ ರಾಹುಲ್‌ ಭೆಕೆ ಸಮಬಲ ಗಳಿಸಿಕೊಟ್ಟರು.

ದ್ವಿತೀಯಾರ್ಧದಲ್ಲಿ ಬಿಎಫ್‌ಸಿ ಆಟಗಾರರು ಅಬ್ಬರಿಸಿದರು. 69ನೇ ನಿಮಿಷದಲ್ಲಿ ಗೋಲು ಗಳಿಸಿದ ಚೆಟ್ರಿ ತಂಡಕ್ಕೆ ಮಹತ್ವದ ಮುನ್ನಡೆ ತಂದುಕೊಟ್ಟರು. ನಂತರ ಎರಡೇ ನಿಮಿಷಗಳಲ್ಲಿ ಮಿಕು ಗೋಲು ಗಳಿಸಿ ಮುನ್ನಡೆ ಹೆಚ್ಚಿಸಿದರು. ಕೊನೆಯ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದ ಚೆಟ್ರಿ ತಂಡಕ್ಕೆ  ಜಯ ಗಳಿಸಿಕೊಟ್ಟರು.

ಮಿಂಚಿದ ಉದಾಂತ್ ಸಿಂಗ್‌

ಒಂದು ತಿಂಗಳ ಹಿಂದೆ ಐಎಸ್‍ಎಲ್ ಫೈನಲ್‍ನಲ್ಲಿ ನಿರಾಸೆ ಕಂಡಿದ್ದ ಬಿಎಫ್‌ಸಿ ನೋವು ಮರೆತು ಗೆಲುವಿನ ಉತ್ಸಾಹದೊಂದಿಗೆ ಇಲ್ಲಿ ಕಣಕ್ಕೆ ಇಳಿದಿತ್ತು. ಪಂದ್ಯ ಆರಂಭಗೊಂಡ ಮೂರನೇ ನಿಮಿಷದಲ್ಲಿ ಪೆರೆಜ್ ಮಾಡಿದ ತಪ್ಪಿನಿಂದಾಗಿ ಬಿಎಫ್‌ಸಿಗೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತ್ತು. ಆದರೆ ಅದನ್ನು ಸದುಪಯೋಗ‍ಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.

16ನೇ ನಿಮಿಷದಲ್ಲಿ ಉದಾಂತ ಸಿಂಗ್ ಮತ್ತು ರಾಹುಲ್ ಭೆಕೆ ಚೆಂಡನ್ನು ಪರಸ್ಪರ ಪಾಸ್ ಮಾಡುತ್ತ ಎದುರಾಳಿ ಪಾಳಯಕ್ಕೆ ನುಗ್ಗಿದರು. ಗೋಲು ಗಳಿಸಲು ಸಾಧ್ಯವಾಗದಿದ್ದರೂ ಈಸ್ಟ್ ಬೆಂಗಾಲ್ ತಂಡದ ಮೇಲೆ ಒತ್ತಡ ಹಾಕುವಲ್ಲಿ ಇವರಿಬ್ಬರು ಯಶಸ್ವಿಯಾದರು. 17ನೇ ನಿಮಿಷದಲ್ಲಿ ಫ್ರೀ ಕಿಕ್‌ ಅವಕಾಶ ಪಡೆದ ಈಸ್ಟ್ ಬೆಂಗಾಲ್‌ ಆಟಗಾರರು ಸಂಭ್ರಮಿಸಿದರು. ಆದರೆ ಅವರ ಪ್ರಯತ್ನವನ್ನು ಉದಾಂತ ಸಿಂಗ್ ವಿಫಲಗೊಳಿಸಿದರು. ಬೆಂಗಾಲ್‌ನ ಮತ್ತೊಂದು ಫ್ರೀ ಕಿಕ್ ಅನ್ನು ಗುರುಪ್ರೀತ್ ಸಿಂಗ್‌ ವಿಫಲಗೊಳಿಸಿದರು. ನಂತರ ಬೆಂಗಳೂರು ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry