ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಮನ್‌ವೆಲ್ತ್‌ನಿಂದ ಶೂಟಿಂಗ್‌ ತೆಗೆದು ಹಾಕಿದರೆ ಭಾರತದ ಶೂಟರ್‌ಗಳಿಗೆ ಹಿನ್ನಡೆ’

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: 2022ರ ಕಾಮನ್‌ವೆಲ್ತ್‌ ಕ್ರೀಡಾಕೂಟದಿಂದ ಶೂಟಿಂಗ್‌ ಸ್ಪರ್ಧೆಯನ್ನು ತೆಗೆದು ಹಾಕಿದರೆ ಭಾರತದ ಯುವ ಶೂಟರ್‌ಗಳಿಗೆ ತೀವ್ರ ಹಿನ್ನಡೆಯಾಗುವುದು ಖಚಿತ ಎಂದು ಭಾರತದ ಹಿರಿಯ ಶೂಟರ್‌ ಅಭಿನವ್‌ ಬಿಂದ್ರಾ ಅಭಿಪ್ರಾಯಪಟ್ಟಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದ ಭಾರತೀಯ ಕ್ರೀಡಾಪಟುಗಳನ್ನು ಸನ್ಮಾನಿಸಲು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತೀಯ ಒಲಿಂಪಿಕ್‌ ಸಂಸ್ಥೆಯು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಎರಡು ದಿನದ ಪ್ರವಾಸಕ್ಕಾಗಿ ಭಾರತಕ್ಕೆ ಬಂದಿರುವ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ (ಐಒಸಿ) ಅಧ್ಯಕ್ಷ ಥಾಮಸ್‌ ಬಾಕ್‌ ಅವರು ಕ್ರೀಡಾಪಟುಗಳನ್ನು ಸನ್ಮಾನಿಸಿದರು.

‘ಒಂದು ವೇಳೆ ಶೂಟಿಂಗ್‌ ಕೈಬಿಡುವ ನಿರ್ಧಾರ ಕೈಗೊಂಡರೆ ಅದರಿಂದ ಅನೇಕ ಕನಸುಗಳನ್ನು ಹೊತ್ತ ಯುವ ಆಟಗಾರರ ಭವಿಷ್ಯ ಡೋಲಾಯಮಾನ ವಾಗಲಿದೆ ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಶೂಟಿಂಗ್‌ ಸ್ಪರ್ಧೆ ನಡೆಸಲು ಅಗತ್ಯವಿರುವ ಸೌಲಭ್ಯಗಳು ಇಲ್ಲದ ಕಾರಣದಿಂದ ಅದನ್ನು ಕೂಟದಿಂದಲೇ ತೆಗೆದು ಹಾಕಬೇಕೆನ್ನುವ ಚರ್ಚೆ ನಡೆಯುತ್ತಿದೆ. ಆದರೆ, ಮುಂದಿನ ಕಾಮನ್‌ವೆಲ್ತ್‌ ಕ್ರೀಡಾಕೂಟದ ಆತಿಥ್ಯವನ್ನು ದಕ್ಷಿಣ ಆಫ್ರಿಕಾದ ಡರ್ಬನ್‌ ವಹಿಸಿಕೊಂಡಿದ್ದರೆ ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ. ಆರ್ಥಿಕ ಸಮಸ್ಯೆಯಿಂದಾಗಿ ಡರ್ಬನ್‌ ಆತಿಥ್ಯ ವಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದಿನ ಕಾಮನ್‌ವೆಲ್ತ್ ಕೂಟ ಬರ್ಮಿಂಗ್‌ಹ್ಯಾಂನಲ್ಲಿ ನಡೆಯಲಿದೆ. ಆ ಕೂಟದಲ್ಲಿ ಶೂಟಿಂಗ್ ಬೇಕೇ ಬೇಡವೇ ಎಂಬುದನ್ನು ಆತಿಥೇಯರು ನಿರ್ಧರಿಸಬೇಕು ಎಂದು ಕಾಮನ್‌ವೆಲ್ತ್ ಕೂಟದ ಫೆಡರೇಷನ್‌ ಸೂಚಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ರಾಷ್ಟ್ರೀಯ ರೈಫಲ್‌ ಸಂಸ್ಥೆಯ ಅಧ್ಯಕ್ಷ ರಣಿಂದರ್‌ ಸಿಂಗ್‌ ಅವರು, ಒಂದು ವೇಳೆ ಶೂಟಿಂಗ್‌ ಕೈಬಿಟ್ಟರೆ ಭಾರತ ಕೂಟವನ್ನೇ ಬಹಿಷ್ಕರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದರು.

ಅಭಿನವ್‌ ಬಿಂದ್ರಾ ಅವರು ಬೀಜಿಂಗ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನ ಶೂಟಿಂಗ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT