ಮತದಾನದ ಮಹತ್ವ ಸಾರುವ ವರದಿ ಬಿಡುಗಡೆ

7

ಮತದಾನದ ಮಹತ್ವ ಸಾರುವ ವರದಿ ಬಿಡುಗಡೆ

Published:
Updated:
ಮತದಾನದ ಮಹತ್ವ ಸಾರುವ ವರದಿ ಬಿಡುಗಡೆ

ಬೆಂಗಳೂರು: ಮತದಾನದ ಪ್ರಮಾಣ ಹೆಚ್ಚಿಸಲು ವಿನೂತನ ಪ್ರಯೋಗಗಳನ್ನು ನಡೆಸುತ್ತಿರುವ ಚುನಾವಣಾ ಆಯೋಗ, ಜನಾಭಿಪ್ರಾಯ ಸಂಗ್ರಹಿಸಿ ಸಂಶೋಧನಾ ವರದಿಯೊಂದನ್ನು ಸಿದ್ಧಪಡಿಸಿದೆ.

ವಿಕಾಸಸೌಧದಲ್ಲಿ ಶುಕ್ರವಾರ ಆ ವರದಿ ಬಿಡುಗಡೆ ಮಾಡಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್, ‘70 ಸಾವಿರ ಜನರ ಅಭಿಪ್ರಾಯಗಳ ಜತೆಗೆ, 119 ಸಭೆಗಳಲ್ಲಿ ಚರ್ಚೆಗೆ ಬಂದ ವಿಷಯಗಳನ್ನು ಆಧರಿಸಿ  ವರದಿ ಸಿದ್ಧಪಡಿಸಿದ್ದೇವೆ. ಜನರನ್ನು ಮತ ಕೇಂದ್ರಗಳತ್ತ ಸೆಳೆಯುವ ಪ್ರಯತ್ನ ಇದಾಗಿದೆ’ ಎಂದು ಹೇಳಿದರು.

‘ಈ ಹಿಂದೆ 40 ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಮತದಾನ ನಡೆದಿದ್ದು, ಆ ಭಾಗಗಳಲ್ಲಿ ಯಾವ ರೀತಿ ಜಾಗೃತಿ ಮೂಡಿಸಬಹುದು ಎಂಬ ಮಾರ್ಗಸೂಚಿಗಳು ವರದಿಯಲ್ಲಿವೆ. ಚುನಾವಣೆಗೂ ಮುನ್ನ ಮನೆ ಮನೆಗೂ ತೆರಳಿ ಮಾರ್ಗಸೂಚಿ ಕರಪತ್ರ ಹಂಚಿ ಅರಿವು ಮೂಡಿಸುತ್ತೇವೆ’ ಎಂದರು.

‘ಆನ್‌ಲೈನ್ ಮತನದಾನಕ್ಕೆ ಪ್ರಾತಿನಿಧ್ಯ ನೀಡಬೇಕು, ಯುವ ಮತದಾರರನ್ನು ನೋಂದಾಯಿಸುವ ಜವಾಬ್ದಾರಿಯನ್ನು ಶೈಕ್ಷಣಿಕ ಸಂಸ್ಥೆಗಳಿಗೆ ವಹಿಸಬೇಕು.. ಸೇರಿದಂತೆ ಹಲವು ಸಲಹೆಗಳು ಜನರಿಂದ ವ್ಯಕ್ತವಾಗಿವೆ’ ಎಂದು ವಿವರಿಸಿದರು.

ವಿಚಾರಣೆ ನಡೆಸಿ ಕ್ರಮ: ‘ಕೆಲ ಅಭ್ಯರ್ಥಿಗಳು ಹೆಚ್ಚು ಬೆಂಬಲಿಗರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ ಎಂಬ ದೂರುಗಳು ಬಂದಿವೆ. ಆ ಬಗ್ಗೆ ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಆರ್.ಅಶೋಕ, ರಾಮಲಿಂಗಾರೆಡ್ಡಿ ನಾಮಪತ್ರ ಸಲ್ಲಿಸುವಾಗಲೂ ಹೆಚ್ಚು ಬೆಂಬಲಿಗರಿದ್ದರಲ್ಲವೇ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ‘ಆ ವಿಚಾರ ನಮ್ಮ ಅರಿವಿಗೆ ಬಂದಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry