ಮಹಿಳೆ ಕೊಂದ ಬಾಣಸಿಗ ಸೆರೆ

7

ಮಹಿಳೆ ಕೊಂದ ಬಾಣಸಿಗ ಸೆರೆ

Published:
Updated:

ಬೆಂಗಳೂರು: ಪರಿಚಿತ ಮಹಿಳೆಯನ್ನು ಕೊಲೆಗೈದು ಚಿನ್ನದ ಸರದೊಂದಿಗೆ ಪರಾರಿಯಾಗಿದ್ದ ರಮೇಶ್ (32) ಎಂಬ ಬಾಣಸಿಗ, ಕೃತ್ಯ ಬೆಳಕಿಗೆ ಬಂದ 12 ತಾಸುಗಳಲ್ಲೇ ಚಿಕ್ಕಜಾಲ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಹುಣಸಮಾರನಹಳ್ಳಿ ಸಮೀಪದ ಭಾರತಿನಗರ ನಿವಾಸಿ ಚಂದ್ರಕಲಾ (35) ಕೊಲೆಯಾದವರು. ಅವರು ಪತಿ ಶ್ರೀನಿವಾಸ್ ಹಾಗೂ ಏಳು ವರ್ಷದ ಇಬ್ಬರು ಅವಳಿ ಮಕ್ಕಳ ಜತೆ ವಾಸವಿದ್ದರು.

ದೇವನಹಳ್ಳಿ ಸಮೀಪದ ಕುರುಬರಹಳ್ಳಿಯಲ್ಲಿ ಕ್ಷೌರದ ಅಂಗಡಿ ಇಟ್ಟುಕೊಂಡಿರುವ ಶ್ರೀನಿವಾಸ್, ಎಂದಿನಂತೆ ಗುರುವಾರ ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದರು. ಮಕ್ಕಳು ಸಹ ಅಜ್ಜಿ (ಶ್ರೀನಿವಾಸ್ ತಾಯಿ) ಮನೆಗೆ ಹೋಗಿದ್ದರಿಂದ ಚಂದ್ರಕಲಾ ಒಬ್ಬರೇ ಮನೆಯಲ್ಲಿದ್ದರು.

ಚಂದ್ರಕಲಾ ತಾಯಿ ಲಲಿತಮ್ಮ ಹಾಗೂ ಅಣ್ಣಂದಿರು ಕೂಡ ಪಕ್ಕದ ರಸ್ತೆಯಲ್ಲೇ ನೆಲೆಸಿದ್ದಾರೆ. ಮಧ್ಯಾಹ್ನ 1.30ಕ್ಕೆ ಮನೆಗೆ ಬಂದಿದ್ದ ತಾಯಿ, 3.30ರ ಸುಮಾರಿಗೆ ತಮ್ಮ ಮನೆಗೆ ವಾಪಸ್ ಹೋಗಿದ್ದರು.

ಆ ನಂತರ ಮನೆಗೆ ನುಗ್ಗಿದ್ದ ರಮೇಶ್, ಕೋಣೆಯಲ್ಲಿ ಮಲಗಿದ್ದ ಚಂದ್ರಕಲಾ ಅವರ ಮೇಲೆರಗಿ ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದ್ದ. ಅವರು ಸರ ಬಿಡದೆ ಪ್ರತಿರೋಧ ತೋರಿದ್ದರು. ಆಗ ದಿಂಬಿನಿಂದ ಉಸಿರುಗಟ್ಟಿಸಿ ಕೊಂದ ಆತ, ಬಳಿಕ ಸರ ಕಿತ್ತುಕೊಂಡು ಹೊರಗಿನಿಂದ ಚಿಲಕ ಹಾಕಿ ಹೊರಟು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಬೇಸರವಾಗುತ್ತಿದ್ದ ಕಾರಣ ತಾಯಿ, 4.30ರ ಸುಮಾರಿಗೆ ಪುನಃ ಮಗಳ ಬಳಿ ಬಂದಿದ್ದರು. ಹೊರಗಿನಿಂದ ಚಿಲಕ ಹಾಕಿದ್ದರಿಂದ ಚಂದ್ರಕಲಾಗೆ ಕರೆ ಮಾಡಿದ್ದರು. ಆದರೆ, ಮೊಬೈಲ್ ಮನೆಯೊಳಗೇ ರಿಂಗ್ ಆಗುತ್ತಿತ್ತು.

ಇದರಿಂದ ಅನುಮಾನಗೊಂಡ ಅವರು, ಒಳಗೆ ಹೋಗಿ ನೋಡಿ

ದಾಗ ಮಗಳು ಕೋಣೆಯಲ್ಲಿ ಸತ್ತು ಬಿದ್ದಿದ್ದರು. ಲಲಿತಮ್ಮ ಅವರ ಚೀರಾಟ ಕೇಳಿ ಅಲ್ಲಿಗೆ ಬಂದ ನೆರೆಹೊರೆಯವರು, ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದರು.

‘ವೃತ್ತಿಪರ ಸರಗಳ್ಳರ‍್ಯಾರು ಮನೆಗೆ ನುಗ್ಗಿ ಸರ ದೋಚುವುದಿಲ್ಲ. ಹೀಗಾಗಿ, ಪರಿಚಿತರೇ ಹಣಕ್ಕಾಗಿ ಕೃತ್ಯ ಎಸಗಿರಬಹುದು ಎಂಬ ಸಂಶಯ ವ್ಯಕ್ತವಾಯಿತು. ಅನುಮಾನದ ಮೇಲೆ ರಮೇಶ್ ಸೇರಿದಂತೆ ಕೆಲ ಸ್ಥಳೀಯ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆವು. ಆಗ ಹಣದಾಸೆಗೆ ತಾನೇ ಸರ ದೋಚಿದ್ದಾಗಿ ಆತ ತಪ್ಪೊಪ್ಪಿಕೊಂಡ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಯಾರು ರಮೇಶ್?

ದೊಡ್ಡಬಳ್ಳಾಪುರದ ರಮೇಶ್, ಅಡುಗೆ ಕೆಲಸ ಮಾಡಿಕೊಂಡು ಏಳೆಂಟು ವರ್ಷಗಳಿಂದ ಹುಣಸಮಾರನಹಳ್ಳಿಯಲ್ಲಿ ನೆಲೆಸಿದ್ದ. ಚಂದ್ರಕಲಾ ಅವರ ದೂರದ ಸಂಬಂಧಿಯಾದ ಈತ, ಆಗಾಗ್ಗೆ ಅವರ ಮನೆಗೆ ಬಂದು ಹೋಗುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry