ಇಳೆಗೆ ತಂಪೆರೆದ ವರ್ಷಧಾರೆ

7

ಇಳೆಗೆ ತಂಪೆರೆದ ವರ್ಷಧಾರೆ

Published:
Updated:
ಇಳೆಗೆ ತಂಪೆರೆದ ವರ್ಷಧಾರೆ

ಬೆಂಗಳೂರು: ನಗರದ ವಿವಿಧೆಡೆ ಶುಕ್ರವಾರ ಸಂಜೆ ಸತತ ಎರಡು ಗಂಟೆ ಸುರಿದ ಮಳೆ, ಬಿಸಿಲಿನಿಂದ ಕಾದ ಇಳೆಗೆ ತಂಪನ್ನೆರೆಯಿತು. ಬಿಸಿಲಿನ ಝಳದಿಂದ ಕಂಗೆಟ್ಟವರಿಗೆ ಸಂಜೆಯ ವಾತಾವರಣ ಹಿತಾನುಭವ ನೀಡಿತು.

ಮಲ್ಲೇಶ್ವರ, ಆರ್‌.ಟಿ. ನಗರ, ವಿಜಯ ನಗರ, ಮತ್ತೀಕೆರೆ, ಹಲಸೂರು, ಇಂದಿರಾ ನಗರ, ಮಹಾತ್ಮಗಾಂಧಿ ರಸ್ತೆ, ಬನ್ನೇರುಘಟ್ಟ ರಸ್ತೆ, ಅನೇಪಾಳ್ಯ, ಮೈಕೊಬಂಡೆ ಜಂಕ್ಷನ್‌, ಆನೇಪಾಳ್ಯ, ಸರ್ಜಾಪುರ ರಸ್ತೆಯಲ್ಲಿ ಮಳೆಯಾಗಿದೆ.

ಮಳೆ ಆರಂಭಕ್ಕೂ ಮುನ್ನ ಬಲವಾದ ಗಾಳಿ ಬೀಸಿದ್ದರಿಂದ ಗಾಂಧಿ ನಗರದ ಕೆಂಪೇಗೌಡ ರಸ್ತೆ,  ಮಹಾಲಕ್ಷ್ಮಿ ಬಡಾವಣೆ, ಆರ್‌.ಟಿ. ನಗರ, ರಾಜಾಜಿನಗರದಲ್ಲಿ ಮರಗಳು ಬಿದ್ದಿವೆ. ಬಾಷ್ಯಂ ವೃತ್ತದಲ್ಲಿ ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ.

ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಕೆಲಸ ಮುಗಿಸಿ ಇನ್ನೇನು ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಮಳೆ ಆರಂಭವಾಗಿದ್ದರಿಂದ ನೌಕರರು, ಉದ್ಯೋಗಿಗಳು ತೊಂದರೆ ಅನುಭವಿಸಿದರು. ಮಳೆ ನಿಂತ ಬಳಿಕವೇ ಮನೆಯತ್ತ ಮುಖ ಮಾಡಿದರು.

ಕೆಲ ದ್ವಿಚಕ್ರ ವಾಹನ ಸವಾರರು ಮಳೆಯಿಂದಾಗಿ ರಸ್ತೆಯಲ್ಲಿ ಬೈಕ್‌ ನಿಲ್ಲಿಸಿ ಪಕ್ಕದ ಅಂಗಡಿ, ಮಳಿಗೆಗಳಲ್ಲಿ ಆಶ್ರಯ ಪಡೆದರೆ, ಇನ್ನೂ ಕೆಲವರು ಮಳೆಯಲ್ಲೇ ನೆನೆಯುತ್ತ, ಖುಷಿಯಿಂದ ಮುಂದೆ ಸಾಗುವ ದೃಶ್ಯಗಳು ಅಲ್ಲಲ್ಲಿ ಕಂಡುಬಂತು.

ನಗರದ ಕೆಲವೆಡೆಗಳಲ್ಲಿ ಕೆಳಸೇತುವೆಯಲ್ಲಿ ನೀರು ನಿಂತಿದ್ದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಯಿತು. ಬಿಟಿಎಂ ಬಡಾವಣೆ, ಸಿಲ್ಕ್‌ಬೋರ್ಡ್‌ ಜಂಕ್ಷನ್‌, ಜಯಮಹಲ್‌ ರಸ್ತೆ, ಕಾವೇರಿ ಜಂಕ್ಷನ್‌ ಬಳಿ, ಶಿವಾನಂದ ವೃತ್ತದಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿದ್ದವು. ಮಳೆ ನಿಂತ ಕೆಲ ಹೊತ್ತಿನ ಬಳಿಕ ಸಂಚಾರ ಸುಗಮವಾಯಿತು.

ಐಪಿಎಲ್‌ ಪಂದ್ಯಕ್ಕೆ ಅಡ್ಡಿ?

ನಗರದಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆರ್‌ಸಿಬಿ ಮತ್ತು ದೆಹಲಿ ತಂಡಗಳ ಮಧ್ಯೆ ಶನಿವಾರ ಪಂದ್ಯಕ್ಕೆ ವರುಣ ಅಡ್ಡಿಯನ್ನುಂಟು ಮಾಡುವ ಸಾಧ್ಯತೆ ಇದೆ.

ಮಧ್ಯಾಹ್ನ 3 ಗಂಟೆಯ ಬಳಿಕವೇ ನಗರದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry