ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಬಿಎಸ್‌ 5ನೇ ಸ್ವರ ಸ್ಮರಣೆ ಇಂದು

ಉದ್ಯಮಿ ರವೀಂದ್ರ ದೇವಗಿರಿಕರ್ ಹಾಗೂ ಸ್ನೇಹರಂಗ ಸಹಯೋಗದಲ್ಲಿ ಕಾರ್ಯಕ್ರಮ
Last Updated 21 ಏಪ್ರಿಲ್ 2018, 5:19 IST
ಅಕ್ಷರ ಗಾತ್ರ

ಇಳಕಲ್: ಗಾಯಕ, ಮಾಧುರ್ಯ ಸಾರ್ವಭೌಮ ದಿ.ಡಾ.ಪಿ.ಬಿ.ಶ್ರೀನಿವಾಸ ಅವರ ‘5ನೇ ಸ್ವರ ಸ್ಮರಣೆ’ ಕಾರ್ಯಕ್ರಮ ಉದ್ಯಮಿ ರವೀಂದ್ರ ದೇವಗಿರಿಕರ್ ಹಾಗೂ ಸ್ನೇಹರಂಗ ಸಹಯೋಗದಲ್ಲಿ ಇಲ್ಲಿಯ ಅನುಭವ ಮಂಟಪದ ಆವರಣದಲ್ಲಿ ಏ.21ರಂದು ಸಂಜೆ 6 ಗಂಟೆಗೆ ನಡೆಯಲಿದೆ.

ಕಾರ್ಯಕ್ರಮದ ಸಾನ್ನಿಧ್ಯವನ್ನು ಡಾ.ಮಹಾಂತಶ್ರೀಗಳು ಹಾಗೂ ಗುರುಮಹಾಂತ ಶ್ರೀಗಳು ವಹಿಸಲಿದ್ದು, ಶಿರೂರಿನ ಡಾ.ಬಸವಲಿಂಗ ಶ್ರೀಗಳು ಅಧ್ಯಕ್ಷತೆ ವಹಿಸುವರು. ಸಾಹಿತಿ ದೊಡ್ಡರಂಗೇಗೌಡ, ಚಲನಚಿತ್ರ ಹಾಗೂ ಕಿರುತೆರೆ ನಟಿ ಜಯಲಕ್ಷ್ಮೀ ಮುಖ್ಯ ಅತಿಥಿಯಾಗಿ ಆಗಮಿಸುವರು. ನಗರದ ವೃತ್ತಿರಂಗಭೂಮಿ ಹಿರಿಯ ಕಲಾವಿದೆ ಗಂಗಮ್ಮ ಆರೇರ ಅವರಿಗೆ ₹ 10 ಸಾವಿರ ನಗದು ಪುರಸ್ಕಾರದೊಂದಿಗೆ ಗೌರವಿಸಲಾಗುತ್ತದೆ. ನಂತರ ನಗರದ 10ಕ್ಕೂ ಹೆಚ್ಚು ಹಿರಿಯ ಹಾಗೂ ಉದಯೋನ್ಮುಖ ಗಾಯಕರು ಪಿ.ಬಿ. ಅವರ 20ಕ್ಕೂ ಹೆಚ್ಚು ಹಾಡುಗಳನ್ನು ಹಾಡಲಿದ್ದಾರೆ. ಬೆಂಗಳೂರಿನ ಆರ್.ಶ್ರೀನಾಥ, ಔದ್ಯೋಗಿಕ ಸಲಹೆಗಾರ ರವೀಂದ್ರ ದೇವಗಿರಿಕರ್‌ ಹಾಗೂ ಸ್ನೇಹರಂಗದ ಅಧ್ಯಕ್ಷ ಪ್ರೊ.ಕೆ.ಎ.ಬನ್ನಟ್ಟಿ ಉಪಸ್ಥಿತರಿರುವರು.

ಪಿ.ಬಿ ಅಭಿಮಾನಿ ರವೀಂದ್ರ : ಮೂಲತಃ ಇಳಕಲ್‌ನ ರವೀಂದ್ರ ದೇವಗಿರಿಕರ್ ಈಗ ಪುಣೆಯಲ್ಲಿ ತಂತ್ರಜ್ಞ ಹಾಗೂ ಔದ್ಯೋಗಿಕ ಸಲಹೆಗಾರರಾಗಿದ್ದಾರೆ. ಪಿ.ಬಿ. ಶ್ರೀನಿವಾಸ ಅವರ ಹಾಡುಗಳೇ ತಮ್ಮ ಬದುಕಿಗೆ ಸ್ಫೂರ್ತಿ ಹಾಗೂ ರೋಮಾಂಚನ ಉಂಟು ಮಾಡಿವೆ. ಹಾಗಾಗಿ ಅವರ ಸ್ಮರಣೆ ನನ್ನ ಕರ್ತವ್ಯವೆಂದು ಭಾವಿಸಿಕೊಂಡು ವ್ರತದಂತೆ ಮಾಡುತ್ತಾ ಬಂದಿದ್ದಾರೆ.

ಪ್ರೌಢಶಾಲೆಯಲ್ಲಿ ಓದುವಾಗಲೇ ರೇಡಿಯೊದಲ್ಲಿ ಬರುವ ಅವರ ಹಾಡುಗಳನ್ನು ಕೇಳಲು ತರಗತಿಗಳನ್ನು ತಪ್ಪಿಸುತ್ತಿದ್ದೆ ಎಂದು ರವೀಂದ್ರ ಸ್ಮರಿಸಿಕೊಳ್ಳುವ ರವೀಂದ್ರ ಅವರು, ಪಿ.ಬಿ. ಅವರ ಅಸ್ತಿ ವಿಸರ್ಜನೆಗಾಗಿ ಕೇದಾರಕ್ಕೆ ತೆರಳಿದಾಗ ಪ್ರವಾಹದಲ್ಲಿ ಸಿಲುಕಿದ್ದರು.
‘ಅವರು ಹಾಡುಗಳು ನನ್ನ ಜೀವನದ ಅವಿಭಾಜ್ಯ ಅಂಗವಾಗಿವೆ. ನನ್ನ ಯಶಸ್ಸಿನಲ್ಲಿ ಅವರ ಹಾಡುಗಳ ಪಾತ್ರ ದೊಡ್ಡದಿದೆ. ಅವರ ಸ್ಮರಣೆಯು ನನಗೆ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡುತ್ತದೆ’ ಎನ್ನುತ್ತಾರೆ.

‘ಸದಭಿರುಚಿಯ ಸುಮಧುರ ಹಾಡುಗಳು ಕಣ್ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಉದಯೋ ನ್ಮುಖ ಗಾಯಕರ ಮೂಲಕ ಪಿ.ಬಿ. ಅವರ ಹಾಡುಗಳನ್ನು ಜನರಿಗೆ ಕೇಳಿಸುವ ಅಗತ್ಯವಿದೆ. ಜತೆಗೆ ಪಿಬಿಯವರ ಆಶಯದಂತೆ ಪ್ರತಿ ವರ್ಷ ಬಡ ಕಲಾವಿದರೊಬ್ಬರನ್ನು ಗೌರವಿಸಿ ಆರ್ಥಿಕ ನೆರವು ನೀಡಿದ್ದೇವೆ. 5 ವರ್ಷಗಳಿಂದ ಸ್ನೇಹರಂಗದ ಗೆಳೆಯರ ನೆರವಿನಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸಲು ಸಾಧ್ಯವಾಗಿದೆ’ ಎಂದು ವಿನೀತರಾಗಿ ಹೇಳುತ್ತಾರೆ.

ಹಿಂದೊಮ್ಮೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ₹ 25 ಲಕ್ಷ ವೆಚ್ಚ ಮಾಡಿ ಪಿ.ಬಿ. ಶ್ರೀನಿವಾಸ ಸ್ಮರಣೆ ಕಾರ್ಯಕ್ರಮ ಆಯೋಜಿಸಿದ್ದರು. ಜತೆಗೆ 5 ವರ್ಷಗಳಿಂದ ಇಳಕಲ್‌ನಲ್ಲಿ ಪಿ.ಬಿ. ಶ್ರೀನಿವಾಸ ಸ್ಮರಣೆಯ ಕಾರ್ಯಕ್ರಮಗಳಿಗಾಗಿ ಲಕ್ಷಗಟ್ಟಲೇ ವೆಚ್ಚ ಮಾಡಿದ್ದಾರೆ. ಪಿಬಿ ಅವರೊಂದಿಗೆ ನಿಕಟವಾಗಿದ್ದ ಹಿರಿಯ ಚಲನಚಿತ್ರ ಕಲಾವಿದರನ್ನು ಆಹ್ವಾನಿಸಿದ್ದಾರೆ. ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜಿಸುವುದಕ್ಕಾಗಿ ರವೀಂದ್ರ ಅವರು ಪ್ರತಿ ವರ್ಷ ಪುಣೆಯಿಂದ ಬಂದು 15 ದಿನಗಳ ಕಾಲ ಶ್ರಮಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT