ಅಭಿವೃದ್ಧಿ ಮಾನದಂಡಕ್ಕೆ ಗೆಲುವು ನಿಶ್ಚಿತ

7
ನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮೊಹ್ಮದ್‌ ರಫೀಕ್‌ ಅಭಿಮತ

ಅಭಿವೃದ್ಧಿ ಮಾನದಂಡಕ್ಕೆ ಗೆಲುವು ನಿಶ್ಚಿತ

Published:
Updated:
ಅಭಿವೃದ್ಧಿ ಮಾನದಂಡಕ್ಕೆ ಗೆಲುವು ನಿಶ್ಚಿತ

ಬಳ್ಳಾರಿ: ಬಳ್ಳಾರಿ ನಗರ ಮತ್ತು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿಯು ಎರಡೂ ಕ್ಷೇತ್ರದಲ್ಲಿ ತಾನೇ ಗೆಲ್ಲುವ ವಿಶ್ವಾಸದಲ್ಲಿದೆ.

‘ಎದುರಾಳಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷವು ಕಾಂಗ್ರೆಸ್ ಅನ್ನೇ ಗುರಿಯಾಗಿರಿಸಿಕೊಂಡು ಒಟ್ಟಾಗಿದ್ದರೂ, ಪಕ್ಷಕ್ಕೆ ಯಾವುದೇ ಹಾನಿಯಾಗದು. ಜೆಡಿಎಸ್‌ ಅಭ್ಯರ್ಥಿ ಮೊಹ್ಮದ್‌ ಇಕ್ಬಾಲ್‌ ಹೊತುರ್‌ ಅವರನ್ನು ಹರಕೆಯ ಕುರಿಯನ್ನಾಗಿ ಮಾಡಿರುವ ಪಕ್ಷ, ಎಂದಿನಂತೆ ಬಿಜೆಪಿಯೊಂದಿಗೆ ಒಳ ಒಪ್ಪಂದದ ರಾಜಕಾರಣವನ್ನೂ ಮಾಡಿದೆ. ಅದು ಪಕ್ಷದ ಮೇಲೆ ಯಾವ ಪರಿಣಾಮವನ್ನೂ ಬೀರಲು ಸಾಧ್ಯವಿಲ್ಲ. ನಮ್ಮ ಎದುರು ಗೆಲ್ಲುವ ಗಂಡಸರೇ ಇಲ್ಲ’ ಎನ್ನುತ್ತಾರೆ ಸಮಿತಿ ಅಧ್ಯಕ್ಷ ಜಿ.ಎಸ್‌.ಮಹ್ಮದ್‌ ರಫೀಕ್‌. ‘ಪ್ರಜಾವಾಣಿ’ಗೆ ಅವರು ನೀಡಿರುವ ಸಂದರ್ಶನದ ವಿವರ ಇಲ್ಲಿದೆ.

* ಎರಡೂ ಕ್ಷೇತ್ರದಲ್ಲಿ ಪಕ್ಷದ ಪರಿಸ್ಥಿತಿ ಹೇಗಿದೆ?

ಪರಿಸ್ಥಿತಿ ಉತ್ತಮವಾಗಿದೆ. ಎರಡೂ ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ. ನಗರ ಕ್ಷೇತ್ರದಲ್ಲಿ ಅನಿಲ್‌ಲಾಡ್‌ ಹಾಲಿ ಶಾಸಕರು, ಅವರು ಇದುವರೆಗೆ ಯಾವುದೇ ವಿವಾದಗಳಲ್ಲಿ ಸಿಲುಕಿಲ್ಲ. ರಾಜಿ ಪಂಚಾಯ್ತಿಗಳನ್ನು ನಡೆಸಿಲ್ಲ. ಅಧಿಕಾರಿಗಳ ಮೇಲೆ ಯಾವುದೇ ಕಾರಣಕ್ಕೆ ಒತ್ತಡ ಹೇರಿಲ್ಲ.

* ಅನಿಲ್‌ಲಾಡ್‌ ಜನರ ನಡುವೆ ಕಾಣಿಸಿಕೊಳ್ಳಲಿಲ್ಲ ಎಂಬ ಆರೋಪವಿದೆಯಲ್ಲಾ?

ವಿರೋಧ ಪಕ್ಷಗಳವರಿಗೆ ಅದೊಂದು ದೂರು ಬಿಟ್ಟರೆ ಬೇರೆ ಮಾತುಗಳೇ ಇಲ್ಲ. ಇದಕ್ಕಿಂತ ಹಿಂದಿನ ಸರ್ಕಾರಗಳಲ್ಲಿದ್ದವರು ಏನು ಮಾಡಿದ್ದರು? ನಗರದ ನಾಲ್ಕು ರಸ್ತೆಗಳ ಅಭಿವೃದ್ಧಿ ಬಿಟ್ಟರೆ ಬೇರೆ ಏನಾದರೂ ಅಭಿವೃದ್ಧಿ ಆಯಿತೇ? ಈಗ ನಗರದಲ್ಲಿ ಮೂಲಸೌಕರ್ಯಗಳು ಹೆಚ್ಚಿವೆ.

* ನಗರದಲ್ಲಿ ನೀರಿನ ಸಮಸ್ಯೆ ಹಾಗೇ ಉಳಿದಿದೆಯಲ್ಲಾ?

ಜಿಲ್ಲೆಯಲ್ಲಿ ನಿರಂತರ ನಾಲ್ಕೈದು ವರ್ಷ ಬರಗಾಲವಿತ್ತು. ರೈತರಿಗೆ ಒಂದು ಬೆಳೆಗಷ್ಟೇ ನೀರು ಹರಿಸಲಾಗಿದೆ. ನೀರಿನ ಸಮಸ್ಯೆ ಇದ್ದಿದ್ದೇ. ಬಿಜೆಪಿಯವರು ಇದ್ದಾಗ ದಿನವೂ ನೀರು ಪೂರೈಸುತ್ತಿದ್ದರೇ? ಅವರು ಅಭಿವೃದ್ಧಿ ಕೆಲಸ ಮಾಡಿಲ್ಲ. ನಮ್ಮ ಸರ್ಕಾರದಲ್ಲಿ ಆದಷ್ಟು ಅಭಿವೃದ್ಧಿ ಕಾರ್ಯಗಳು ಬೇರೆ ಸರ್ಕಾರಗಳಲ್ಲಿ ನಡೆಯಲಿಲ್ಲ.

* ನಗರ ಕ್ಷೇತ್ರದಲ್ಲಿ ಪಕ್ಷದ ಶಕ್ತಿ ಮತ್ತು ದೌರ್ಬಲ್ಯ ಏನು?

ಇದುವರೆಗಿನ ಅಭಿವೃದ್ಧಿಯೇ ನಮ್ಮ ಶಕ್ತಿ. ದೌರ್ಬಲ್ಯ ಎಂಬುದು ಏನೂ ಇಲ್ಲ.* ಕ್ಷೇತ್ರದಲ್ಲಿ ಪಕ್ಷಕ್ಕೆ ಪ್ರಬಲ ಪ್ರತಿಸ್ಪರ್ಧಿ ಯಾರು?

ನಮ್ಮ ಅಭ್ಯರ್ಥಿಯೇ ಪ್ರಬಲ ಹುರಿಯಾಳು. ಅವರಿಗೆ ಬಿಜೆಪಿ ಎದುರಾಳಿಯಷ್ಟೇ. ಅವರೆಲ್ಲ ಜೈಲಿಗೆ ಹೋಗಿ ಬಂದವರು. ಎಲ್ಲರಿಗೂ ಗೊತ್ತಿದೆ. ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ಸರ್ಕಾರದಲ್ಲಿ ಹೆಚ್ಚು ಶಾಸಕರು ಜೈಲಿಗೆ ಹೋಗಿದ್ದರು.

* ಅನಿಲ್‌ಲಾಡ್‌ ಕೂಡ ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲು ವಾಸ ಕಂಡಿದ್ದರಲ್ಲ?

ಅವರ ಮೇಲೆ ಆರೋಪಗಳಿವೆ ಅಷ್ಟೆ. ಅವೆಲ್ಲ ಸಾಬೀತಾಗುವುದಿಲ್ಲ. ಎಸ್‌ಐಟಿ ಮೂಲಕ ಕೇಂದ್ರ ಸರ್ಕಾರ ಎಲ್ಲರ ಮೇಲೂ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಆದಾಯ ತೆರಿಗೆ ಇಲಾಖೆ ಮೂಲಕವೂ ಅದೇ ಕೆಲಸ ಮಾಡಿಸುತ್ತಿದೆ.

*ಬಿಸಿಲಹಳ್ಳಿಯಲ್ಲಿ ಪ್ರಚಾರದ ವೇಳೆ ಅನಿಲ್‌ಲಾಡ್‌ ವಿರುದ್ಧ ಜನ ಅಸಮಾಧಾನ ವ್ಯಕ್ತಪಡಿಸದ್ದರಲ್ಲ?

ಎಲ್ಲ ಕಡೆ ಎಲ್ಲವೂ ಸರಿಯಾಗಿರುವುದಿಲ್ಲ. ವಿರೋಧ ಪಕ್ಷದವರಲ್ಲಿ ಯಾರೋ ಒಬ್ಬರು ಅಸಮಾಧಾನಕ್ಕೆ ಕಾರಣರಾಗಿರುತ್ತಾರೆ. ಅಂಥವರನ್ನೆಲ್ಲ ನೋಡಿಕೊಂಡು ನಾವು ಮುಂದೆ ಹೋಗುತ್ತಿರುತ್ತೇವೆ.

* ಗ್ರಾಮೀಣ ಕ್ಷೇತ್ರದ ಪರಿಸ್ಥಿತಿ ಏನು?

ಅಲ್ಲಿ ಕಾಂಗ್ರೆಸ್‌ಗೆ ಎದುರಾಳಿಯೇ ಇಲ್ಲ. ಜೆಡಿಎಸ್‌ ಅಭ್ಯರ್ಥಿಯನ್ನೇ ಘೋಷಿಸಿಲ್ಲ. ಬಿಜೆಪಿ ಅಭ್ಯರ್ಥಿ ಎಸ್‌.ಫಕ್ಕಿರಪ್ಪ ಸೇರಿದಂತೆ ನಮ್ಮ ಎದುರು ಗೆಲ್ಲುವ ಗಂಡಸರು ಯಾರೂ ಇಲ್ಲ.

* ಇದು ಅತಿಯಾದ ಆತ್ಮವಿಶ್ವಾಸವೇ?

ಇದು ಸ್ಪಷ್ಟವಾಗಿ ಆತ್ಮವಿಶ್ವಾಸ. ನಾಗೇಂದ್ರ ಮೂಲತಃ ಗ್ರಾಮೀಣ ಕ್ಷೇತ್ರದವರು. ಅನಿವಾರ್ಯವಾಗಿ ಕೂಡ್ಲಿಗಿಗೆ ವಲಸೆ ಹೋಗಿದ್ದರು. ಈಗ ವಾಪಸ್‌ ಬಂದಿದ್ದಾರೆ. ಅವರ ಬಗ್ಗೆ ಜನರಿಗೆ ವಿಶೇಷ ಒಲವಿದೆ.

* ಬಿ.ನಾಗೇಂದ್ರ ಅವರ ಮೇಲೂ ಅಕ್ರಮ ಗಣಿಗಾರಿಕೆ ಆರೋಪವಿದೆಯಲ್ಲಾ?

ಹೌದು ಇದೆ. ಬಿಜೆಪಿ ನಗರ ಕ್ಷೇತ್ರದ ಅಭ್ಯರ್ಥಿ ಸೋಮಶೇಖರರೆಡ್ಡಿ ಅವರ ಮೇಲೂ ಆರೋಪವಿದೆ. ಅವರೂ ಜೈಲಿಗೆ ಹೋಗಿ ಬಂದವರು. ನಾಗೇಂದ್ರ ಅವರ ಮೇಲೆ ಆರೋಪ ಸಾಬೀತಾಗಿಲ್ಲ.

* ಶಾಸಕ ಎನ್‌.ವೈ.ಗೋಪಾಲಕೃಷ್ಣ ಅವರ ನಿರ್ಗಮನದಿಂದ ಪಕ್ಷಕ್ಕೆ ಅನನುಕೂಲವಾಗುತ್ತದೆಯೇ?

ಇಲ್ಲ. ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿ ಕೆಲಸಗಳು ನಡೆದಿವೆ. 2014ರ ಉಪಚುನಾವಣೆಯಲ್ಲಿ ಇಡೀ ಸರ್ಕಾರವೇ ಬೆಂಬಲ ನೀಡಿ ಅವರನ್ನು ಗೆಲ್ಲಿಸಿತ್ತು. ಆದರೆ ಅವರು ಮೊಳಕಾಲ್ಮೂರಿನಲ್ಲಿ ಟಿಕೆಟ್‌ ಬೇಕು ಎಂದು ಕೇಳಿದ್ದರಿಂದ ಟಿಕೆಟ್‌ ಸಿಗಲಿಲ್ಲ. ಶಾಸಕರಾಗಿದ್ದರಿಂದ ಅವರಿಗೇ ಗ್ರಾಮೀಣ ಕ್ಷೇತ್ರದಲ್ಲಿ ಟಿಕಟ್‌ ದೊರಕುತ್ತಿತ್ತು. ಬೇಡ ಎಂದಿದ್ದು ಅವರ ಸ್ವಯಂಕೃತ ಅಪರಾಧ.

* ಎರಡೂ ಕ್ಷೇತ್ರಗಳಲ್ಲಿ ಎದ್ದುಕಾಣುವಂಥ ಪ್ರಚಾರ ನಡೆದಿಲ್ಲವಲ್ಲ?

ಸದ್ದಿಲ್ಲದೆ ಪ್ರಚಾರ ನಡೆಸಿದ್ದೇವೆ. ಬಿಜೆಪಿಯವರು ಮತದಾರ ಪುಸ್ತಕದ ಪ್ರತಿ ಪುಟಕ್ಕೂ ಒಬ್ಬ ಕಾರ್ಯಕರ್ತನನ್ನು ನಿಯೋಜಿಸಿದ್ದಾರೆ. ನಾವು ತಲಾ ಐವತ್ತು ಮನೆಗೊಬ್ಬರಂತೆ ಕಾರ್ಯಕರ್ತರನ್ನು ನಿಯೋಜಿಸಿದ್ದೇವೆ.

'ಇಕ್ಬಾಲ್‌ ಹೊತುರು ಹರಕೆಯ ಕುರಿ'

"ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಕಾಂಗ್ರೆಸ್‌ ಸೋಲಿಸಬೇಕೆಂದು ಬಿಜೆಪಿ ಮತ್ತು ಜೆಡಿಎಸ್‌ ಒಗ್ಗೂಡಿದೆ. ಮೊಹ್ಮದ್‌ ಇಕ್ಬಾಲ್‌ ಹೊತುರು ಹರಕೆಯ ಕುರಿಯಾಗಲಿದ್ದಾರೆ. ಅವರ ಬಳಿ ಹಣವಿದೆ ಎಂದು ಅವರನ್ನು ಕರೆತಂದಿದ್ದಾರೆ ಹೊರತು, ಅವರ ಹಿಂದೆ ಯಾವ ಮುಸಲ್ಮಾನರಿದ್ದಾರೆ ಹೇಳಿ. ಅವರು ಇವತ್ತಿನವರೆಗೂ ಜನರ ನಡುವೆ ಕಾಣಿಸಿಕೊಂಡಿಲ್ಲ'.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry