ಶಾಸಕರ ಪತ್ನಿ ₹ 10 ಕೋಟಿ ಸಾಲಗಾರ್ತಿ!

7

ಶಾಸಕರ ಪತ್ನಿ ₹ 10 ಕೋಟಿ ಸಾಲಗಾರ್ತಿ!

Published:
Updated:

ಚಿಕ್ಕಬಳ್ಳಾಪುರ: ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಶಾಸಕನಾಗಿ ಅಧಿಕಾರ ನಡೆಸಿ ಎರಡನೇ ಬಾರಿಗೆ ‘ಅದೃಷ್ಟ’ ಪರೀಕ್ಷೆಗೆ ಮುಂದಾಗಿರುವ ಡಾ.ಕೆ.ಸುಧಾಕರ್ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಇದೇ ವೇಳೆ ಅವರು ದಂಪತಿಗೆ ₹ 15.38 ಕೋಟಿ ಆಸ್ತಿ, ₹ 10.85 ಸಾಲವಿದೆ ಎಂದು ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.

2013ರ ಚುನಾವಣೆ ಸಂದರ್ಭದಲ್ಲಿ ಸುಧಾಕರ್ ಅವರು ತಮ್ಮ ಕುಟುಂಬದ ಒಟ್ಟು ಆಸ್ತಿ ₹ 2.29 ಕೋಟಿ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದರು. ಐದು ವರ್ಷಗಳ ಹಿಂದೆ ಸುಧಾಕರ್ ಮತ್ತು ಅವರ ಪತ್ನಿ ಡಾ.ಪ್ರೀತಿ ಅವರ ಒಟ್ಟು ಚರಾಸ್ತಿ ₹ 16.93 ಲಕ್ಷವಿತ್ತು. ಅದೀಗ ₹ 11.87 ಕೋಟಿಗೆ ಏರಿಕೆಯಾಗಿದೆ. ಇನ್ನು ₹ 60 ಲಕ್ಷದಷ್ಟಿದ್ದ ಸ್ಥಿರಾಸ್ತಿ ₹3.51 ಕೋಟಿಗೆ ಹೆಚ್ಚಳವಾಗಿದೆ.

ಐದು ವರ್ಷಗಳ ಹಿಂದೆ ₹ 3.04 ಲಕ್ಷ ಸಾಲ ಮಾಡಿದ್ದ ಸುಧಾಕರ್ ಅವರ ಕುಟುಂಬದ ಮೇಲೆ ಸದ್ಯ ದೊಡ್ಡ ಸಾಲದ ಹೊರೆ ಇದೆ. ಪ್ರಸ್ತುತ ಸುಧಾಕರ್ ಅವರು ಪಿಸಿಎಆರ್‌ಡಿ ಬ್ಯಾಂಕಿಗೆ ₹ 2.61 ಲಕ್ಷ ಸಾಲ, ತಮ್ಮ ಸಾಯಿಕೃಷ್ಣ ಚಾರಿಟಬಲ್‌ ಟ್ರಸ್ಟ್ ಮತ್ತು ಪತ್ನಿಗೆ (₹ 12.33 ಲಕ್ಷ) ಸೇರಿದಂತೆ ಒಟ್ಟು ₹ 15.94 ಲಕ್ಷ ಮರುಪಾವತಿಸಬೇಕಿದೆ.

ಎರಡು ವರ್ಷಗಳ ಹಿಂದೆ ಸುಧಾಕರ್ ಅವರ ಪತ್ನಿ ಪ್ರೀತಿ ಅವರು ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್‌ಗೆ ₹ 1.14 ಕೋಟಿ ನೀಡಿ, ಜತೆಗೆ ಪತಿ ಸುಧಾಕರ್‌ಗೆ ₹ 12.33 ಲಕ್ಷ, ಮಾವ ಪಿ.ಎನ್.ಕೇಶವರೆಡ್ಡಿ ಅವರಿಗೆ ₹ 45.57 ಲಕ್ಷ ಮತ್ತು ಅನಿಲ್ ಬೋಸ್ ಎಂಬುವರಿಗೆ ₹ 26 ಲಕ್ಷ ಸಾಲ ಕೊಟ್ಟಿದ್ದರು.

ಕುಟುಂಬದ ಆಸ್ತಿಯಲ್ಲಿ ‘ಅಗ್ರ’ ಪಾಲು ಹೊಂದಿರುವ ಪ್ರೀತಿ ಅವರ ಮೇಲೆ ಇದೀಗ ದೊಡ್ಡ ಸಾಲದ ಹೊರೆ ಇದೆ. ಶಿವನ್ ಎಂಬುವರಿಗೆ ₹ 10 ಕೋಟಿ ಸೇರಿದಂತೆ 6 ಜನರು, ಒಂದು ಸಂಸ್ಥೆಗೆ ಸೇರಿ ₹ 10.70 ಕೋಟಿ ಅವರು ಮರುಪಾವತಿಸಬೇಕಿದೆ.

ಸ್ಥಿರಾಸ್ತಿ ಪೈಕಿ ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಸೇರಿ ಸುಧಾಕರ್ ಅವರ ಬಳಿ ₹ 2.34 ಕೋಟಿ ಮೌಲ್ಯದ 3 ಎಕರೆ 37 ಗುಂಟೆ, ಅವರ ಪತ್ನಿಯ ಬಳಿ ₹ 1.17 ಕೋಟಿ ಮೌಲ್ಯದ 10.29 ಎಕರೆ ಜಮೀನು ಇದೆ.

ಇನ್ನು ಚರಾಸ್ತಿಯಲ್ಲಿ ವಿವಿಧ ಬ್ಯಾಂಕ್‌ ಖಾತೆಗಳಲ್ಲಿರುವ ಠೇವಣಿ, ಉದ್ಯಮಗಳಲ್ಲಿ ಮಾಡಿರುವ ಹೂಡಿಕೆಗಳು ಸೇರಿವೆ. ಸುಧಾಕರ್ ಬಳಿ 150 ಗ್ರಾಂ ಚಿನ್ನ, ಪ್ರೀತಿ ಅವರ ಬಳಿ ₹ 30 ಲಕ್ಷ ಮೌಲ್ಯದ 1 ಕೆ.ಜಿ. ಬಂಗಾರದ ಆಭರಣಗಳು, 5 ಕೆ.ಜಿ.ಬೆಳ್ಳಿ ವಸ್ತುಗಳು ಮತ್ತು ₹ 15 ಲಕ್ಷ ಮೌಲ್ಯದ 4 ವಜ್ರದ ಹಾರಗಳಿವೆ. ಈ ದಂಪತಿಯ ಬಳಿ ನಾಲ್ಕು ಕಾರುಗಳು, ಒಂದು ಟ್ರ್ಯಾಕ್ಟರ್ ಇದೆ.

ಕ್ಷೇತ್ರದಾದ್ಯಂತ ಈಗಾಗಲೇ ಜೋರು ಪ್ರಚಾರ ಕೈಗೊಂಡಿರುವ ಸುಧಾಕರ್ ಅವರ ಬಳಿ ಸದ್ಯ ₹ 3.60 ಲಕ್ಷ ಮತ್ತು ಅವರ ಪತ್ನಿ ಬಳಿ ₹ 2.70 ಲಕ್ಷ ನಗದು ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry