ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕನೇ ದಿನ 16 ನಾಮಪತ್ರ

ಈವರೆಗೆ 29 ಉಮೇದುವಾರಿಕೆ; ಸ್ಪರ್ಧೆಗೆ ಪಕ್ಷೇತರರದೇ ‘ಸಿಂಹಪಾಲು’ ಒಲವು
Last Updated 21 ಏಪ್ರಿಲ್ 2018, 6:36 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆಯ ನಾಲ್ಕನೇ ದಿನವಾದ ಶುಕ್ರವಾರ ಜಿಲ್ಲೆ ಐದು ಕ್ಷೇತ್ರಗಳ ಪೈಕಿ 16 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಈ ಪೈಕಿ ಐದು ಜನರು ಮಾತ್ರ ಪ್ರಮುಖ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುತ್ತಿದ್ದು, 11 ಅಭ್ಯರ್ಥಿಗಳು ಪಕ್ಷೇತರರಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಾ.ಕೆ.ಸುಧಾಕರ್‌, ಬಿಜೆಪಿ ಅಭ್ಯರ್ಥಿ ಡಾ.ಜಿ.ವಿ.ಮಂಜುನಾಥ್‌, ಪಕ್ಷೇತರರಾಗಿ ಕೆ.ವಿ.ನವೀನ್‌ ಕಿರಣ್‌, ನವೀನ್‌ ಕುಮಾರ್‌, ಮತ್ತು ಜಿ.ನವೀನ್ ಕುಮಾರ್ ಎಂಬುವರು ನಾಮಪತ್ರ ಸಲ್ಲಿಸಿದರು. ಚಿಂತಾಮಣಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಾಣಿ ಕೃಷ್ಣಾರೆಡ್ಡಿ, ಪಕ್ಷೇತರ ಅಭ್ಯರ್ಥಿಗಳಾಗಿ ಡಾ.ಎಂ.ಸಿ.ಸುಧಾಕರ್‌, ಎನ್.ಆರ್, ಸುಧಾಕರ್‌ರೆಡ್ಡಿ, ರಚನಾ, ಈಶ್ವರಗೌಡ ಉಮೇದುವಾರಿಕೆ ಗುಜರಾಯಿಸಿದರು.

ಬಾಗೇಪಲ್ಲಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎನ್‌. ಸುಬ್ಬಾರೆಡ್ಡಿ ಮತ್ತು ಪಕ್ಷೇತರ ಅಭ್ಯರ್ಥಿ ಜಿ.ಆರ್‌.ಶ್ರೀನಿವಾಸ್‌ರೆಡ್ಡಿ ಅರ್ಜಿ ಸಲ್ಲಿಸಿದರು. ಗೌರಿಬಿದನೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎನ್‌.ಎಚ್‌.ಶಿವಶಂಕರ್‌ರೆಡ್ಡಿ ಹಾಗೂ ಪಕ್ಷೇತರ ಅಭ್ಯರ್ಥಿ ಜಿ.ಆರ್.ಮೋಹನ್‌ಕುಮಾರ್‌್ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಶಿಡ್ಲಘಟ್ಟದಲ್ಲಿ ಪಕ್ಷೇತರ ಅಭ್ಯರ್ಥಿ ಮೇಲೂರು ಬಿ.ಎನ್‌.ರವಿಕುಮಾರ್‌ ಜತೆಗೆ ಎರಡನೇ ಬಾರಿಗೆ ಆಂಜಿನಪ್ಪ ಅವರು ಸ್ವತಂತ್ರ ಹುರಿಯಾಳು ಆಗಿ ನಾಮಪತ್ರ ಸಲ್ಲಿಸಿದರು. ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಒಟ್ಟು 29 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಶಾಸಕ ಸುಬ್ಬಾರೆಡ್ಡಿ ನಾಮಪತ್ರ

ಬಾಗೇಪಲ್ಲಿ: ವಿಧಾನಸಭೆಗೆ ಮರು ಆಯ್ಕೆ ಬಯಸಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಶುಕ್ರವಾರ ಸಲ್ಲಿಸಿದರು.

ಸಾವಿರಾರು ಬೆಂಬಲಿಗರೊಂದಿಗ ಮೆರವಣಿಗೆ ನಡೆಸಿದ ಸುಬ್ಬಾರೆಡ್ಡಿ, ಕಾಂಗ್ರೆಸ್‌ ಬಿ ಫಾರಂನೊಂದಿಗೆ ಚುನಾವಣಾಧಿಕಾರಿ ಜಗದೀಶ್ ಗಂಗಣ್ಣನವರ್ ಹಾಗೂ ಮಹಮದ್ ಅಸ್ಲಂ ಅವರಿಗೆ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನ ಪಟ್ಟಣದ ಭೈರವೇಶ್ವರನಗರದ ಗಣಪತಿ, ಜಡಲ ಭೈರವೇಶ್ವರ ದೇವಾಲಯ, ಸುಂಕಲಮ್ಮ ದೇವಾಲಯ, ಗಂಗಮ್ಮ ದೇವಾಲಯ, ಲಕ್ಷ್ಮೀನರಸಿಂಹ ದೇವಾಲಯ, ಗಡಿದಂ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಸಂತ ಹುಸೇನ್‍ಷಾವಲಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ‘ಜನರ ಪ್ರೀತಿ ವಿಶ್ವಾಸ ಮತ್ತು ಅಭಿಮಾನಗಳೊಂದಿಗೆ ಕ್ಷೇತ್ರದ ಜನರು ಆಯ್ಕೆ ಮಾಡಿದ್ದರು. ಈ ಬಾರಿ ಇನ್ನೊಂದು ಅವಕಾಶ ಕೋರಿ ನಾಮಪತ್ರ ಸಲ್ಲಿಸಿದ್ದೇನೆ. ನಾನು ಇದುವರೆಗೆ ಮಾಡಿದ ಕೆಲಸಗಳೇ ನನಗೆ ಶ್ರೀರಕ್ಷೆ ಆಗಲಿವೆ’ ಎಂದು ತಿಳಿಸಿದರು.

ಸಂಚಾರ ಅಸ್ತವ್ಯಸ್ತ: ಶಾಸಕ ಸುಬ್ಬಾರೆಡ್ಡಿ ನಾಮಪತ್ರ ಸಲ್ಲಿಸುವುದಕ್ಕೆ ಮುನ್ನ ನಡೆದ ಮೆರವಣಿಗೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಸಂಚಾರದ ದಟ್ಟಣೆ ನಿಯಂತ್ರಿಸಲು ಪೊಲೀಸರು ಪರದಾಡಿದರು. ಸಂಚಾರ ಅಸ್ತವ್ಯಸ್ತವಾಗಿ, ಆಂಬುಲೆನ್ಸ್‌ ಓಡಾಟಕ್ಕೂ ಜಾಗ ಇಲ್ಲದಂತಾಗಿತ್ತು.

ಪ್ರಕರಣದ ದಾಖಲು: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಎನ್.ಸುಬ್ಬಾರೆಡ್ಡಿ ನಾಮಪತ್ರ ಸಲ್ಲಿಕೆಗೆ ರ‍್ಯಾಲಿಗೆ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಸ್. ನರೇಂದ್ರ ಷರತ್ತು ಬದ್ಧ ಅನುಮತಿ ಪಡೆದಿದ್ದರು. ಆದರೆ ಕಾರ್ಯಕರ್ತರು ನಿಯಮ ಉಲ್ಲಂಘಿಸಿ, ಬ್ಯಾರಿಕೇಡ್‌ಗಳನ್ನು ಕಿತ್ತು ಕಚೇರಿ ಆವರಣದೊಳಗೆ ನುಗ್ಗಲು ಯತ್ನಿಸಿದರು. ಇದನ್ನು ತಡೆಯಲು ಪೊಲೀಸರು ಹರ ಸಾಹಸ ಮಾಡಿದರು. ನಂತರ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಅಧಿಕಾರಿಗಳು ಪ್ರಕರಣ ದಾಖಲು ಮಾಡಿಕೊಂಡರು.

ಪುರಸಭೆ ಅಧ್ಯಕ್ಷೆ ಮಮತಾ ನಾಗರಾಜರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಆರ್. ನರೇಂದ್ರಬಾಬು, ಮಾಜಿ ಅಧ್ಯಕ್ಷ ಕೆ.ಎಂ.ರಾಮರೆಡ್ಡಿ, ಜಿ.ಪಂ.ಸದಸ್ಯರಾದ ಅರುಣಾ ಅಮರನಾಥರೆಡ್ಡಿ, ಲಕ್ಷ್ಮೀನರಸಿಂಹಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ವಿ. ನಾಗರಾಜ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಮದ್ಯಪಾನ ಸಂಯಮ ಮಂಡಳಿ ರಾಜ್ಯ ನಿರ್ದೇಶಕ ಟಿ.ಎನ್.ರವಿಚಂದ್ರಾರೆಡ್ಡಿ, ದಲಿತ ಮುಖಂಡ ಬಿ.ವಿ.ವೆಂಕಟರವಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಎಸ್.ನರೇಂದ್ರ, ಅಶ್ವತ್ಥಪ್ಪ, ಕೆಡಿಪಿ ಸದಸ್ಯ ಅಮರನಾಥರೆಡ್ಡಿ ಇದ್ದರು.

ಗುಂಜೂರು ಶ್ರೀನಿವಾಸರೆಡ್ಡಿ ನಾಮಪತ್ರ

ಬಾಗೇಪಲ್ಲಿ: ಬಾಗೇಪಲ್ಲಿ ಪಕ್ಷೇತರ ಅಭ್ಯರ್ಥಿ ಗುಂಜೂರು ಶ್ರೀನಿವಾಸರೆಡ್ಡಿ ತನ್ನ ಬೆಂಬಲಿಗರೊಂದಿಗೆ ಮೆರವಣಿಗೆಯ ತಾಲ್ಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಮುಖಂಡರಾದ ಮಾದವರೆಡ್ಡಿ, ಸತ್ಯನಾರಾಯಣರೆಡ್ಡಿ, ನರಸಿಂಹರೆಡ್ಡಿ ಇದ್ದರು.

ಚುನಾವಣೆಗೆ ಪ್ರಮುಖರು

ಚಿಂತಾಮಣಿ: ವಿಧಾನಸಭೆ ಚುನಾವಣೆಗೆ ಚಿಂತಾಮಣಿ ಕ್ಷೇತ್ರದಿಂದ ಸ್ಪರ್ಧಿಸಲು ಶುಕ್ರವಾರ 5 ಮಂದಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ವಾಣಿಕೃಷ್ಣಾರೆಡ್ಡಿ (ಕಾಂಗ್ರೆಸ್‌), ಡಾ.ಎಂ.ಸಿ.ಸುಧಾಕರ್‌ (ಸ್ವತಂತ್ರ), ಸುಧಾಕರರೆಡ್ಡಿ (ಸ್ವತಂತ್ರ), ವಕೀಲ ಈಶ್ವರಗೌಡ (ಸ್ವತಂತ್ರ), ರಚನಾಗೌಡ (ಸ್ವತಂತ್ರ) ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಚುನಾವಣಾಧಿಕಾರಿ ಪಿ.ಸವಿತಾ ಹಾಗೂ ಸಹಾಯಕ ಚುನಾವಣಾಧಿಕಾರಿ ವಿಶ್ವನಾಥ್‌ ನಾಮಪತ್ರಗಳನ್ನು ಸ್ವೀಕರಿಸಿದರು. ಇದುವರೆಗೆ ಚಿಂತಾಮಣಿ ಕ್ಷೇತ್ರದಿಂದ ಒಟ್ಟು 8 ಮಂದಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT