‘ಬರ’ದ ಬೀಡಿನಲಿ ಸಿರಿವಂತರ ‘ಉಮೇದು’ವಾರಿಕೆ

7
ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದವರ ಪೈಕಿ ಕೋಟ್ಯಧೀಪತಿಗಳೇ ಅಧಿಕ, ‘ಜನಸೇವಕ’ರ ಆಸ್ತಿ ಕಂಡು ಬೆರಗಾಗುತ್ತಿರುವ ಮತದಾರರು

‘ಬರ’ದ ಬೀಡಿನಲಿ ಸಿರಿವಂತರ ‘ಉಮೇದು’ವಾರಿಕೆ

Published:
Updated:

ಚಿಕ್ಕಬಳ್ಳಾಪುರ: ಬಯಲು ಸೀಮೆಯ ಬರಪೀಡಿತ ಪ್ರದೇಶಗಳಲ್ಲಿ ಒಂದಾದ ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಈವರೆಗೆ ನಾಮಪತ್ರ ಸಲ್ಲಿಸಿದವರ ಪೈಕಿ ಬಹುತೇಕರು ಕೋಟ್ಯಧಿಪತಿಗಳೇ ಇದ್ದಾರೆ. ಅವರಿಗೆ ತೊಡೆ ತಟ್ಟಿ ಕೆಲವೆಡೆ ಕೂಲಿ ಮಾಡುವವರು ಕೂಡ ನಾವೇನೂ ಕಡಿಮೆ ಇಲ್ಲ ಎನ್ನುವಂತೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

‘ರಾಜಧಾನಿ’ ಬೆಂಗಳೂರಿನ ಸಾಮಿಪ್ಯದಿಂದಾಗಿ ಭೂಮಿಗೆ ಬಂಗಾರದ ಬೆಲೆ ಗಳಿಸಿರುವ ಜಿಲ್ಲೆ ಎಂದರೆ ಮಹಾನಗರದ ಕುಬೇರರಿಗೆ ಏನೋ ಮೋಹ. ಸಿಲಿಕಾನ್ ಸಿಟಿಯಲ್ಲಿ ನೆಲೆಸಿದರೂ ಗಡಿಭಾಗದ ಈ ಪ್ರದೇಶದತ್ತ ಹೇಳಿಕೊಳ್ಳಲಾಗದ ವಾಂಛೆ. ಹೀಗಾಗಿಯೇ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಗೆ ‘ಸಮಾಜಸೇವೆ’ ಮಾಡಲು ದಾಂಗುಡಿ ಇಡುವ ‘ಜನಸೇವಕ’ರಿಗೇನೂ ಕಡಿಮೆ ಇಲ್ಲ.

‘ರಿಯಲ್ ಎಸ್ಟೇಟ್’ ಕುಳಗಳಿಗಂತೂ ಈ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರಕ್ಕೆ ತಮ್ಮ ಅರ್ಪಿಸಿಕೊಳ್ಳುವ ‘ಬಯಕೆ’. ಈ ಹಿಂದಿನ ಅನೇಕ ಚುನಾವಣೆಗಳ ಅಭ್ಯರ್ಥಿಗಳನ್ನು ಅವಲೋಕಿಸಿದರೆ ಇದು ವೇದ್ಯವಾಗಿದೆ. ಇಲ್ಲಿನ ನೆಲಮೂಲದ ಬೇರಿನ ನಂಟು ಉಳ್ಳವರಿಗಂತೂ ಜಿಲ್ಲೆ ತವರು ಮನೆಯಂತಾಗಿದೆ. ಆ ಪೈಕಿ ಅನೇಕರು ತಮ್ಮದೇ ಆದ ವೃತ್ತಿ, ಪ್ರವೃತ್ತಿಯನ್ನೂ ತೊರೆದು ತಮ್ಮ ಜನರು ಉದ್ಧರಿಸಲು ಚುನಾವಣೆ ಕಣಕ್ಕೆ ಧುಮುಕಿ ಕಾದಾಡಲು ಉತ್ಸುಕರಾಗಿದ್ದಾರೆ.

ವಿಶೇಷವೆಂದರೆ ಬಯಲು ಸೀಮೆಯ ಈ ಜಿಲ್ಲೆಯ ಜನರು ನೀರಿಗಾಗಿ ಅನೇಕ ದಶಕಗಳಿಂದ ಚಾತಕ ಪಕ್ಷಿಗಳಂತಾಗಿ ಹೋರಾಡುತ್ತಲೇ ಇದ್ದಾರೆ. ನೀರಿಲ್ಲದೇ ರೈತರು ಕೃಷಿಯಿಂದ ವಿಮುಖರಾದರೆ, ಕೈಗಾರಿಕೆಗಳಿಲ್ಲದೆ ನಿರುದ್ಯೋಗಿಗಳೆಲ್ಲ ನಗರದ ಪಾಲಾಗುತ್ತಿದ್ದಾರೆ. ನೀರಾವರಿ ಯೋಜನೆಗಳಿಗಾಗಿ ಸರ್ಕಾರಗಳು ‘ಮಳೆ’ಯಂತೆ ಸಾವಿರಾರು ಕೋಟಿ ಸುರಿದರೂ ಹೊರಗಿನಿಂದ ಹನಿ ನೀರು ಮಾತ್ರ ಜಿಲ್ಲೆಗೆ ಧಕ್ಕಿಲ್ಲ ಎಂಬುದು ರೈತ ಸಂಘಟನೆಗಳ ಆರೋಪ.

ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲ್ಲೂಕುಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಜಿಲ್ಲೆಗೆ ಪರಸ್ಥಳಗಳ ಸಿರಿವಂತರು ಮಾತ್ರ ಹಣದ ಥೈಲಿಯೊಂದಿಗೆ ‘ವಲಸೆ’ ಬರುವುದು ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಲೇ ಇದೆ. ಹಾಗೇ ಬಂದವರೆಲ್ಲರೂ ಇಲ್ಲಿಯೇ ನೆಲೆ ಕಂಡುಕೊಳ್ಳಲು ಮಿಕ್ಸಿ, ಕುಕ್ಕರ್, ಸೀರೆ, ಲಡ್ಡು.. ಇನ್ನೂ ಏನೇನೋ ಹಿಡಿದು ಗಲ್ಲಿಗಲ್ಲಿ ಸುತ್ತಿ ಬೆವರು ಹರಿಸುತ್ತಿದ್ದಾರೆ ಎಂದು ಹೇಳುವರು.

ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಇವತ್ತು ಹೊರಗಿನವರ ‘ದರ್ಶನ’ವಾಗುತ್ತದೆ. ಒಂದು ಬಾರಿ ರಾಜಕೀಯದ ‘ರುಚಿ’ ನೋಡಿದವರು ಅದರಿಂದ ಹಿಂದೇ ಸರಿಯುವ ಮಾತೇ ಇಲ್ಲ ಎನ್ನುವುದು ಈ ಬಾರಿ ಜಿಲ್ಲೆಯಲ್ಲಿ ಚುನಾವಣೆಗೆ ಅಣಿಗೊಂಡಿರುವ ಅಭ್ಯರ್ಥಿಗಳನ್ನು ನೋಡಿದರೆ ಅರ್ಥವಾಗುತ್ತದೆ ಎಂದು ಸ್ಥಳೀಯ ನಿವಾಸಿ ವೆಂಕಟರೆಡ್ಡಿ ಹೇಳುವರು.

ಸದ್ಯ ಜಿಲ್ಲೆಯ ಅನೇಕ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳಾಗಿ ಕಣಕ್ಕಿಳಿದವರೇ ಪುನಃ ಅಖಾಡಕ್ಕೆ ಇಳಿದು ತೊಡೆ ತಟ್ಟುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್, ಕೆ.ಪಿ.ಬಚ್ಚೇಗೌಡ, ಗೌರಿಬಿದನೂರಿನಲ್ಲಿ ಎನ್.ಎಚ್.ಶಿವಶಂಕರರೆಡ್ಡಿ, ಜೈಪಾಲ್‌ರೆಡ್ಡಿ, ಚಿಂತಾಮಣಿಯಲ್ಲಿ ಜೆ.ಕೆ.ಕೃಷ್ಣಾರೆಡ್ಡಿ, ಡಾ.ಎಂ.ಸಿ.ಸುಧಾಕರ್, ವಾಣಿ ಕೃಷ್ಣಾರೆಡ್ಡಿ ಪುನಃ ತಮ್ಮ ರಾಜಕೀಯ ವೈರಿಗಳೊಂದಿಗೆ ಕಾದಾಡಲು ಈಗಾಗಲೇ ತಾಲೀಮು ಆರಂಭಿಸಿದ್ದಾರೆ.

ಬಾಗೇಪಲ್ಲಿಯಲ್ಲಿ ಎಸ್‌.ಎನ್.ಸುಬ್ಬಾರೆಡ್ಡಿ, ಜಿ.ವಿ.ಶ್ರೀರಾಮರೆಡ್ಡಿ, ಶಿಡ್ಲಘಟ್ಟ ಕ್ಷೇತ್ರದಲ್ಲಿ ಎಂ.ರಾಜಣ್ಣ, ವಿ.ಮುನಿಯಪ್ಪ ಅವರು ಮತ್ತೊಂದು ಸುತ್ತಿನ ರಾಜಕೀಯ ಚದುರಂಗದಾಟಕ್ಕೆ ಮಣಿ ಅಣಿಗೊಳಿಸುತ್ತಿದ್ದಾರೆ.

ಈ ಬಾರಿಯ ಚುನಾವಣೆಗೆ ನಾಮಪತ್ರ ಸಲ್ಲಿಸಿದವರ ಪೈಕಿ ಎಸ್ಸೆಸ್ಸೆಲ್ಸಿ ಪಾಸಾದವರಿಂದ ಹಿಡಿದು ಎಂ.ಎಸ್ಸಿ ವರೆಗೆ ಪದವೀಧರರು ಇದ್ದಾರೆ. ಉದ್ಯಮಿಗಳು, ಸಮಾಜಸೇವಕರು, ಕೃಷಿಕರು, ಕೂಲಿ ಕಾರ್ಮಿಕರು ಹೀಗೆ ಅನೇಕರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅಂತಹ ಕೆಲವರ ಪರಿಚಯ ಮತ್ತು ಆಸ್ತಿ ವಿವರ ಇಲ್ಲಿದೆ.

ಕಾರಿನ ಸಾಲ ಚುಕ್ತಾ, ಕೈಸಾಲ ಬಾಕಿ

ಗೌರಿಬಿದನೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೊನೆಯ ಕ್ಷಣದಲ್ಲಿ ಜೆಡಿಎಸ್ ಟಿಕೆಟ್ ಕೈತಪ್ಪಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಉದ್ಯಮಿ ಕೆ.ಜೈಪಾಲ್ ರೆಡ್ಡಿ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಇತ್ತೀಚೆಗೆ ನಾಮಪತ್ರ ಸಲ್ಲಿಸಿದರು. ಕಳೆದ ಐದು ವರ್ಷಗಳಲ್ಲಿ ಅವರ ಆಸ್ತಿಯಲ್ಲಿ ಚರಾಸ್ತಿಯಲ್ಲಿ ₹ 14.09 ಲಕ್ಷ ಏರಿಕೆಯಾಗಿದ್ದು ಬಿಟ್ಟರೆ ಅಂತಹ ಗಣನೀಯ ಬದಲಾವಣೆಗಳು ಆಗಿಲ್ಲ.

ಬೆಂಗಳೂರಿನ ದೊಡ್ಡ ಕನಹಳ್ಳಿ ನಿವಾಸಿಯಾಗಿರುವ ಜೈಪಾಲ್ ರೆಡ್ಡಿ ಓದಿದ್ದು ಬರೀ ಆರನೇ ತರಗತಿ. ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಇವರು ಅವಿವಾಹಿತರು. ಇವರಲ್ಲಿ ಸದ್ಯ ₹ 84.74 ಲಕ್ಷ ಚರಾಸ್ತಿ ಇದೆ. ಇದು ಕಳೆದ ಚುನಾವಣೆಯಲ್ಲಿ ₹70.65 ಲಕ್ಷದಷ್ಟಿತ್ತು.

ಕಳೆದ ಮತ್ತು ಈ ಚುನಾವಣೆಯಲ್ಲಿ ಜೈಪಾಲ್ ರೆಡ್ಡಿ ಅವರ ಸ್ಥಿರಾಸ್ತಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ₹ 9 ಕೋಟಿ ಸ್ಥಿರಾಸ್ತಿ ಲೆಕ್ಕ ನೀಡಿರುವ ಇವರು ಅದರಲ್ಲಿ ನನ್ನದು ಆರನೇ ಒಂದು ಪಾಲಿದೆ ಎಂದು ಘೋಷಿಸಿಕೊಂಡಿದ್ದಾರೆ.

₹ 50 ಲಕ್ಷ ಮೌಲ್ಯದ ಬೆಂಜ್ ಖರೀದಿಸಲು ರಿಲಯನ್ಸ್ ಕ್ಯಾಪಿಟಲ್‌ನಲ್ಲಿ ತೆಗೆದಿದ್ದ ₹ 32 ಲಕ್ಷ ಸಾಲವನ್ನು ಕಳೆದ ಐದು ವರ್ಷಗಳಲ್ಲಿ ತೀರಿಸಿರುವ ಇವರು ಸಹೋದರ ನಾಗೇಶ್ ರೆಡ್ಡಿ ಅವರ ಬಳಿ ತೆಗೆದುಕೊಂಡ ₹ 15.89 ಲಕ್ಷ ಕೈಸಾಲವನ್ನು ಇನ್ನೂ ತೀರಿಸಿಲ್ಲ. ಇವರ ಚರಾಸ್ತಿ ಪೈಕಿ ಅರ್ಧ ಕೆ.ಜಿ. ಬಂಗಾರ ಹಾಗೇ ಇದ್ದು, ₹ 6.50 ಲಕ್ಷದ ಸ್ವಿಫ್ಟ್ ಕಾರಿನ ಜಾಗದಲ್ಲಿ ₹ 17 ಲಕ್ಷ ಮೌಲ್ಯದ ಇನ್ನೊವಾ ಕಾರು ಬಂದು ನಿಂತಿದೆ.

‘ಸಿರಿವಂತ’ರ ಸಾಲಿನಲ್ಲಿ ನರಸಿಂಹಮೂರ್ತಿ

ಗೌರಿಬಿದನೂರು: ಇತ್ತೀಚೆಗಷ್ಟೇ ಬಿಜೆಪಿಯಲ್ಲಿ ಟಿಕೆಟ್ ಕೈತಪ್ಪುವುದು ಅರಿವಾಗುತ್ತಿದ್ದಂತೆ ಆ ಪಕ್ಷ ತೊರೆದು ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಿ.ಆರ್.ನರಸಿಂಹಮೂರ್ತಿ ಶ್ರೀಮಂತ ಅಭ್ಯರ್ಥಿಗಳ ಸಾಲಿನಲ್ಲಿ ನಿಲ್ಲುತ್ತಾರೆ.

ನಾಮಪತ್ರದೊಂದಿಗೆ ಅವರು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತನಗೆ ₹ 1.14 ಕೋಟಿ ಮತ್ತು ಪತ್ನಿ ಹೆಸರಿನಲ್ಲಿ ₹ 16 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.

₹ 15 ಲಕ್ಷ ಮೌಲ್ಯದ ಸಫಾರಿ ಮತ್ತು ₹ 28 ಲಕ್ಷ ಮೌಲ್ಯದ ಫಾರ್ಚೂನರ್ ಕಾರುಗಳು, 200 ಗ್ರಾಂ ಚಿನ್ನ ಸೇರಿದಂತೆ ನರಸಿಂಹಮೂರ್ತಿ ಅವರ ಬಳಿ ₹ 48.70 ಲಕ್ಷ ಚರಾಸ್ತಿ ಇದ್ದರೆ, 600 ಗ್ರಾಂ ಬಂಗಾರ, 2 ಕೆ.ಜಿ ಬೆಳ್ಳಿ ಹೊಂದಿರುವ ಅವರ ಹೆಂಡತಿ ಹತ್ತಿರ ₹ 16 ಲಕ್ಷದ ಚರಾಸ್ತಿ ಇದೆ. ನರಸಿಂಹಮೂರ್ತಿ ಅವರಿಗೆ ಗೌರಿಬಿದನೂರು ಕೆನರಾ ಬ್ಯಾಂಕಿನಲ್ಲಿ ₹ 8 ಲಕ್ಷ ಗೃಹ ಸಾಲ ಮತ್ತು ಕೆಎಂಕೆ ಬ್ಯಾಂಕ್‌ನಲ್ಲಿ ₹ 23 ಲಕ್ಷ ವಾಹನ ಸಾಲವಿದೆ.

ರಾಜಕಾರಣದಲ್ಲಿ ‘ಶ್ರೀಮಂತ’, ಹೆಂಡತಿ ಎದುರು ‘ಬಡವ’!

ಶಿಡ್ಲಘಟ್ಟ: ಈ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳ ತಮ್ಮ ರಾಜಕೀಯ ಜೀವನದಲ್ಲಿ ಎಂಟು ಸಾರ್ವತ್ರಿಕ ಚುನಾವಣೆ ಎದುರಿಸಿ, ಐದು ಬಾರಿ ಶಾಸಕರಾಗಿ, ಮೂರು ಅವಧಿಯಲ್ಲಿ ಸಚಿವ, ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ ಹಿರಿಯ ರಾಜಕೀಯ ಮುತ್ಸದಿ ವಿ.ಮುನಿಯಪ್ಪ ಅವರಿಗಿಂತಲೂ ಗೃಹಿಣಿಯಾಗಿರುವ ಅವರ ಪತ್ನಿಯೇ ಶ್ರೀಮಂತೆ!

ಕಾಂಗ್ರೆಸ್ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ ವಿ.ಮುನಿಯಪ್ಪ ಅವರ ಆಸ್ತಿ ಮೌಲ್ಯ ಕಳೆದ ವಿಧಾನಸಭೆ ಚುನಾವಣೆಗಿಂತ ಈ ಬಾರಿ ದುಪ್ಪಟ್ಟು ಹೆಚ್ಚಾಗಿದೆ. ಕಳೆದ ಬಾರಿ ಈ ದಂಪತಿ ಬಳಿ ಚರಾಸ್ತಿ ಮತ್ತು ಸ್ಥಿರಾಸ್ತಿ ಸೇರಿ ಒಟ್ಟು ₹ 4.80 ಕೋಟಿ ಮೌಲ್ಯದ ಸ್ವತ್ತು ಇದು. ಅದು ಇದೀಗ ₹ 8.31 ಕೋಟಿಗೆ ಏರಿಕೆಯಾಗಿದೆ.

ಇತ್ತೀಚೆಗೆ ಸಲ್ಲಿಸಿದ ಪ್ರಮಾಣ ಪತ್ರದ ಪ್ರಕಾರ ವಿ.ಮುನಿಯಪ್ಪ ಅವರ ಬಳಿ ₹ 2.94 ಕೋಟಿ, ಅವರ ಪತ್ನಿಯ ಬಳಿ ₹ 3.46 ಕೋಟಿ ಸ್ಥಿರಾಸ್ತಿ ಜತೆಗೆ 5 ಕೆ.ಜಿ 352 ಗ್ರಾಂ ಚಿನ್ನ, 23 ಕೆ.ಜಿ ಬೆಳ್ಳಿ ಒಳಗೊಂಡಂತೆ ₹ 1.91 ಕೋಟಿ (ಮುನಿಯಪ್ಪ ₹ 1.08 ಕೋಟಿ, ಅವರ ಪತ್ನಿ ಬಳಿ ₹ 83.14 ಲಕ್ಷ) ಚರಾಸ್ತಿ ಇದೆ.

ಈ ದಂಪತಿಗೆ ವ್ಯವಸಾಯ, ಬಾಡಿಗೆ, ಮಾಜಿ ಶಾಸಕರ ಪಿಂಚಣಿ ಆದಾಯದ ಮೂಲವಾಗಿದೆ. ಗಂಡನ ಹೆಸರಿನಲ್ಲಿ ಬ್ಯಾಂಕೊಂದರಲ್ಲಿ ₹ 36 ಲಕ್ಷ ಸಾಲವಿದ್ದರೆ, ಹಣಕಾಸು ಸಂಸ್ಥೆಯೊಂದಕ್ಕೆ ಹೆಂಡತಿ ₹ 15 ಲಕ್ಷ ಕಟ್ಟಬೇಕಿದೆ ಎಂದು ಲೆಕ್ಕ ತೋರಿಸಲಾಗಿದೆ. ಕಳೆದ ಬಾರಿ ಈ ದಂಪತಿ ಬಳಿ ಇದ್ದ ₹ 2.80 ಲಕ್ಷ ಮೌಲ್ಯದ ಮಾರುತಿ ಆಲ್ಟೊ ಕಾರು ಈಗ ಇಲ್ಲ. ಮುನಿಯಪ್ಪ ಅವರ ಒದಗಿಸಿರುವ ಮಾಹಿತಿ ಪ್ರಕಾರ ಸದ್ಯ ಅವರ ಬಳಿ ಯಾವುದೇ ವಾಹನ ಇಲ್ಲ.

ಶಾಸಕ ಕೃಷ್ಣಾರೆಡ್ಡಿ ಆಸ್ತಿ ದುಪ್ಪಟ್ಟು

ಚಿಂತಾಮಣಿ: ಜಿಲ್ಲೆಯ ಕೋಟ್ಯಧಿಪತಿ ಅಭ್ಯರ್ಥಿಗಳ ಸಾಲಿನಲ್ಲಿ ನಿಲ್ಲುವ ಚಿಂತಾಮಣಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರು ಗುರುವಾರ ಸಲ್ಲಿಸಿದ್ದು, ಅದರದಲ್ಲಿ ದಂಪತಿಯ ಒಟ್ಟು ಆಸ್ತಿ ₹ 86.05 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ.

ಕೃಷ್ಣಾರೆಡ್ಡಿ ಅವರು ಶಾಸಕರಾಗಿ ಕಳೆದ ಐದು ವರ್ಷಗಳಲ್ಲಿ ಅವರ ಆಸ್ತಿಯಲ್ಲಿ ₹ 46.79 ಕೋಟಿ ಏರಿಕೆ ಕಂಡುಬಂದಿದೆ. ಕಳೆದ ವಿಧಾನಸಭೆಯಲ್ಲಿ ಅವರು ದಂಪತಿಯ ಆಸ್ತಿ ₹ 39.26 ಕೋಟಿ ಎಂದು ಪ್ರಮಾಣಪತ್ರ ಸಲ್ಲಿಸಿದ್ದರು. ಈ ಬಾರಿ ಕೃಷ್ಣಾರೆಡ್ಡಿ ಅವರು ನಾಮಪತ್ರದಲ್ಲಿ ತಮ್ಮ ಹೆಸರಿನಲ್ಲಿ ₹ 60.91 ಕೋಟಿ ಮತ್ತು ಪತ್ನಿ ರೂಪಾ ರೆಡ್ಡಿ ಅವರ ಹೆಸರಿನಲ್ಲಿ ₹ 25.14 ಕೋಟಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ ಮಾಡಿರುವ ಕೃಷ್ಣಾರೆಡ್ಡಿ ಅವರು ರಿಯಲ್ ಎಸ್ಟೆಟ್ ಉದ್ಯಮದಲ್ಲಿ ನೆಲೆ ನಿಂತವರು. ಈ ದಂಪತಿ ವಿವಿಧ ಕಂಪೆನಿ, ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಕೃಷ್ಣಾರೆಡ್ಡಿ ಅವರ ಬಳಿ ₹ 42 ಲಕ್ಷ ಮೌಲ್ಯದ ಒಂದೂವರೆ ಕೆ.ಜಿ ಚಿನ್ನ, ₹ 3 ಲಕ್ಷ ಮೌಲ್ಯದ 6 ಕೆ.ಜಿ ಬೆಳ್ಳಿ ಆಭರಣ ಮತ್ತು ವಸ್ತುಗಳಿವೆ. ರೂಪಾ ಅವರ ಬಳಿ ₹ 28 ಲಕ್ಷ ಮೌಲ್ಯದ 1 ಕೆ.ಜಿ. ಬಂಗಾರ, ₹ 1.50 ಲಕ್ಷ ಮೌಲ್ಯದ 3 ಕೆ.ಜಿ ಬೆಳ್ಳಿ ಆಭರಣಗಳಿವೆ.

ಸದ್ಯ ಅವರ ಬಳಿ ₹ 24 ಲಕ್ಷ ಮೌಲ್ಯದ ಹೊಂಡಾ ಸಿವಿಆರ್, ₹ 12 ಲಕ್ಷ ಮೌಲ್ಯದ ಕರೋಲಾ ಕಾರುಗಳಿವೆ. ಅವರ ಪತ್ನಿ ಬಳಿ ₹ 18 ಲಕ್ಷ ಮೌಲ್ಯದ ಟೊಯೊಟಾ ಫಾರ್ಚೂನರ್ ಕಾರು ಇದೆ. ಇದೆಲ್ಲ ಸೇರಿ ಅವರ ಬಳಿ ₹ 2.71 ಕೋಟಿ ಮತ್ತು ಪತ್ನಿಯ ಬಳಿ ₹ 1.20ಕೋಟಿ ಮೌಲ್ಯದ ಚರಾಸ್ತಿ ಇದೆ. ಕೃಷ್ಣಾರೆಡ್ಡಿ ಅವರಿಗೆ ಡಿಸಿಬಿ ಬ್ಯಾಂಕ್‌ನಲ್ಲಿ ₹ 20 ಲಕ್ಷ ಸಾಲವಿದೆ.

ಬೆಂಗಳೂರಿನ ವರ್ತೂರು ಹೋಬಳಿಯ ಬಿಇಎಂಎಲ್ ಬಡಾವಣೆಯಲ್ಲಿರುವ ಮನೆ ಸೇರಿದಂತೆ ಕೆ.ಆರ್.ಪುರಂ ಹೋಬಳಿಯ ಕುಂದನಹಳ್ಳಿ, ಹೆಸರಘಟ್ಟ ಹೋಬಳಿಯ ಅರೆಕೆರೆ, ಚಿಂತಾಮಣಿ ತಾಲ್ಲೂಕಿನ ಮುಂಗಾನಹಳ್ಳಿ, ಬೆಂಗಳೂರಿನ ಕೆ.ಆರ್.ಪುರಂ ಹೋಬಳಿಯ ಸೊಣ್ಣೇನಹಳ್ಳಿ ಸೇರಿದಂತೆ ವಿವಿಧೆಡೆ ಜಮೀನು, ನಿವೇಶನಗಳು ಸೇರಿ ಈ ದಂಪತಿ ಬಳಿ ಸದ್ಯ ₹ 36.74 ಕೋಟಿ ಸ್ಥಿರಾಸ್ತಿ (ಕೃಷ್ಣಾರೆಡ್ಡಿ ₹ 24.17 ಕೋಟಿ, ಪತ್ನಿ ₹ 12.57 ಕೋಟಿ) ಇದೆ.

ಒಟ್ಟು ಆಸ್ತಿಯಲ್ಲಿ ಕೃಷ್ಣಾರೆಡ್ಡಿ ಅವರು ₹ 17.28 ಕೋಟಿ ಸ್ವಯಾರ್ಜಿತ ಆಸ್ತಿ, ₹ 6.89 ಕೋಟಿ ಪೀತ್ರಾರ್ಜಿತ ಆಸ್ತಿ ಎಂದು ಘೋಷಿಸಿಕೊಂಡಿದ್ದಾರೆ. ಜತೆಗೆ ಅವರ ಪತ್ನಿ ರೂಪಾ ಅವರು ಸಹ ₹ 12.57 ಕೋಟಿ ಆಸ್ತಿ ಗಳಿಸಿರುವುದಾಗಿ ಲೆಕ್ಕ ತೋರಿಸಿದ್ದಾರೆ. ಚುನಾವಣೆಗೆ ಬಿರುಸಿನ ಸಿದ್ಧತೆ ನಡೆಸಿರುವ ಕೃಷ್ಣಾರೆಡ್ಡಿ ಅವರ ಕೈಯಲ್ಲಿ ಸದ್ಯ ₹ 3.75 ಲಕ್ಷ ಮತ್ತು ಅವರ ಪತ್ನಿ ಬಳಿ ₹ 2.60 ಲಕ್ಷ ನಗದು ಇದೆ.

ಕಳೆದ ಚುನಾವಣೆಯಲ್ಲಿ ಕೃಷ್ಣಾರೆಡ್ಡಿ ತಮ್ಮ ಬಳಿ ₹ 1.59 ಕೋಟಿ ಮೌಲ್ಯದ ಚರಾಸ್ತಿ, ₹ 34 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ರೂಪಾ ಅವರ ಬಳಿ ₹ 46.70 ಲಕ್ಷ ಮೌಲ್ಯದ ಚರಾಸ್ತಿ ಮತ್ತು ₹ 4.64 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದರು.

**

ಹತ್ತಾರು ಚುನಾವಣೆ ನಡೆದರೂ ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ಬರಲೇ ಇಲ್ಲ. ಜನರ ಬೆವರಿನ ತೆರಿಗೆ ಹಣ ಕೊಳ್ಳೆ ಹೊಡೆದವರು ಮಾತ್ರ ಕೊಬ್ಬುತ್ತಲೇ ಇದ್ದಾರೆ – ವೇಣುಗೋಪಾಲ್ ರೆಡ್ಡಿ, ಸಿ.ಸಿ ಸರ್ಕಲ್ ನಿವಾಸಿ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry