ಕರುಣಾಕರ ರೆಡ್ಡಿ, ಹರೀಶ್‌, ಎಸ್‌ವಿಆರ್‌ಗೆ ಬಿಜೆಪಿ ಟಿಕೆಟ್‌

5
ಬಿಜೆಪಿ, ಜೆಡಿಎಸ್ ಪಟ್ಟಿ ಬಿಡುಗಡೆ

ಕರುಣಾಕರ ರೆಡ್ಡಿ, ಹರೀಶ್‌, ಎಸ್‌ವಿಆರ್‌ಗೆ ಬಿಜೆಪಿ ಟಿಕೆಟ್‌

Published:
Updated:

ದಾವಣಗೆರೆ: ಬಿಜೆಪಿ, ಜೆಡಿಎಸ್ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಜಿಲ್ಲೆಯಿಂದ ಮಾಜಿ ಸಚಿವ ಕರುಣಾಕರ ರೆಡ್ಡಿ, ಮಾಜಿ ಶಾಸಕರಾದ ಬಿ.ಪಿ. ಹರೀಶ್, ಎಸ್‌.ವಿ. ರಾಮಚಂದ್ರ ಅವರು ಬಿಜೆಪಿಯಿಂದ ಸ್ಥಾನ ಪಡೆದಿದ್ದಾರೆ. ಜೆಡಿಎಸ್‌ ಪಟ್ಟಿಯಲ್ಲಿ ಅಮಾನುಲ್ಲಾ ಖಾನ್‌ ಸ್ಥಾನ ಪಡೆದ ಪ್ರಮುಖರು.

ತೀವ್ರ ಕುತೂಹಲ ಕೆರಳಿಸಿದ್ದ ಹರಪನಹಳ್ಳಿ ಕ್ಷೇತ್ರದಿಂದ ಕರುಣಾಕರ ರೆಡ್ಡಿ ಕೊನೆಗೂ ಟಿಕೆಟ್‌ ಪಡೆಯುವಲ್ಲಿ ಸಫಲರಾಗಿದ್ದಾರೆ. ಕೊಟ್ರೇಶ್ ಅವರಿಗೇ ಪಕ್ಷ ‘ಬಿ’ ಫಾರಂ ನೀಡಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೇ, ರೆಡ್ಡಿ ಜೆಡಿಎಸ್‌ನತ್ತ ಮುಖ ಮಾಡಿದ್ದಾರೆಂಬ ವದಂತಿಗಳೂ ಹರಡಿದ್ದವು. ಈ ಊಹಾಪೋಹಗಳಿಗೆ ತೆರೆಬಿದ್ದಿದೆ.

ಮಾಯಕೊಂಡ ಕಗ್ಗಂಟು ಕೊನೆಗೂ ಬಿಚ್ಚಿಕೊಂಡಿದೆ. ಪ್ರೊ.ಲಿಂಗಣ್ಣ ಅವರಿಗೆ ಟಿಕೆಟ್‌ ನೀಡಲಾಗಿದೆ. ಇಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿತ್ತು. ಜಗಳೂರು ಕ್ಷೇತ್ರದಿಂದ ಎಸ್‌.ವಿ. ರಾಮಚಂದ್ರ, ಹರಿಹರದಿಂದ ಬಿ.ಪಿ. ಹರೀಶ್‌ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.

ಟೈರ್ ಸುಟ್ಟು ಪ್ರತಿಭಟನೆ: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಅವರಿಗೆ ದಾವಣಗೆರೆ ದಕ್ಷಿಣದಿಂದ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಚ್‌.ಎಸ್. ನಾಗರಾಜ್‌ ಅವರಿಗೆ ತೀವ್ರ ನಿರಾಸೆಯಾಗಿದೆ.ನಾಗರಾಜ್‌ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿ ನಗರದ ಜಯದೇವ ವೃತ್ತದಲ್ಲಿ ಶುಕ್ರವಾರ ರಾತ್ರಿ ಟೈರ್‌ ಸುಟ್ಟು ಪ್ರತಿಭಟನೆ ನಡೆಸಿದರು.

ಜೆಡಿಎಸ್‌ ಮೂರು ಕ್ಷೇತ್ರಗಳದ್ದು ಘೋಷಣೆ: ಜೆಡಿಎಸ್‌ನಿಂದ ದಾವಣಗೆರೆ ದಕ್ಷಿಣದ ಟಿಕೆಟ್‌ ಮುಖಂಡ ಅಮಾನುಲ್ಲಾ ಖಾನ್‌ಗೆ ಸಿಕ್ಕಿದೆ. ದಾವಣಗೆರೆ ಉತ್ತರದಿಂದ ವಡ್ನಳ್ಳಿ ಶಿವಶಂಕರ್‌ಗೆ ನೀಡಲಾಗಿದೆ. ಜಗಳೂರಿನಿಂದ ದೇವೇಂದ್ರಪ್ಪ ಅವರಿಗೆ ಸಿಕ್ಕಿದೆ. ಈ ಹಿಂದೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮಾಯಕೊಂಡ, ಹರಿಹರ ಹಾಗೂ ಹೊನ್ನಾಳಿ ಕ್ಷೇತ್ರಗಳ ಟಿಕೆಟ್‌ ಘೋಷಿಸಲಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry